ಬೀದರ್, ಕಲಬುರಗಿಯಲ್ಲಿ ಪೋಳಾ ಹಬ್ಬದ ಸಂಭ್ರಮ, ಎತ್ತುಗಳಿಗೆ ಪೂಜೆ

ಕಲಬುರಗಿ, ಆ.21 : ನಮ್ಮ ದೇಶದಲ್ಲಿ ಪ್ರಾಣಿಗಳನ್ನು ಗೌರವಿಸುವ ಮತ್ತು ಸತ್ಕರಿಸುವ ಹಲವಾರು ವಿಶೇಷ ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ. ಎತ್ತುಗಳು ಕೃಷಿಯ ಅವಿಭಾಜ್ಯ ಅಂಗ. ಮಳೆ, ಗಾಳಿ, ಬಿಸಿಲನ್ನು ಲೆಕ್ಕಿಸದೆ ಕೃಷಿ ಚಟುವಟಿಕೆಗೆ ಹಗಲಿರುಳು ಶ್ರಮಿಸುವ ಈ ಮೂಕ ಪ್ರಾಣಿಗಳಿಗೆ ಕೃತಜ್ಞತೆ ಸಲ್ಲಿಸಲು ರೈತರು 'ಕಾರಹುಣ್ಣಿಮೆ' ಹಾಗೂ 'ಹೋಳಾ' ಹಬ್ಬಗಳನ್ನು ಆಚರಿಸುತ್ತಾರೆ.

ಮಹಾರಾಷ್ಟ್ರ ರಾಜ್ಯದಲ್ಲಿ 'ಪೋಳಾ' ಹಬ್ಬಕ್ಕೆ 'ಬೈಲ ಪೋಳಾ' ಹಬ್ಬವೆಂದು ಹಾಗೂ ಜಾರ್ಖಂಡ್ ಮತ್ತಿತರ ಪ್ರದೇಶಗಳಲ್ಲಿ ಲೋಕಪರ್ವದ ರೂಪದಲ್ಲಿ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ರೈತರು ಕಾರಹುಣ್ಣಿಮೆಯನ್ನು ಮತ್ತು ಮಹಾರಾಷ್ಟ್ರದ ಗಡಿಭಾಗಕ್ಕೆ ಹೊಂದಿಕೊಂಡ ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ 'ಹೋಳಾ' ಹಬ್ಬವನ್ನು ವಿಭಿನ್ನ ದಿನಗಳಂದು ಆಚರಿಸುವರು.

Bidar, Vijayapura and Klaburagi celebrating Pola habba

ಮರಾಠಿ ಭಾಷೆಯ 'ಪೋಳಿ' ಮೂಲ ಶಬ್ದದಿಂದ 'ಪೋಳಾ' ಶಬ್ದ ಉಗಮವಾಗಿದೆ. ಮರಾಠಿಯ 'ಪೋಳಾ' ಕನ್ನಡದಲ್ಲಿ 'ಹೋಳಾ' ಎಂಬ ರೂಪ ತಾಳಿರಬಹುದು. ಕನ್ನಡ ಆಡು ಭಾಷೆಯಲ್ಲಿ ಪೋಳ್ ಎಂದರೆ ಬೀಜದ ಹೋರಿ ಎಂಬುದು ರೂಢಿಯಲ್ಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಆಗಸ್ಟ್ 21ರ ಸೋಮವಾರ 'ಹೋಳಾ' ಹಬ್ಬ ಆಚರಿಸಲಾಗುತ್ತದೆ.

ರೈತರು ಹಬ್ಬದ ಹಿಂದಿನ ದಿನ ಅರಿಶಿಣ ಮತ್ತು ಎಣ್ಣೆಯಿಂದ ಎತ್ತುಗಳ ಹೆಗಲಿಗೆ ಮಾಲೀಶ್ ಮಾಡಿ ಶಾಖ ನೀಡಿ ಸ್ನಾನ ಮಾಡಿಸುವರು. ಹಬ್ಬದಂದು ಬೆಳಗ್ಗೆ ಎತ್ತುಗಳಿಗೆ ಪುನಃ ಸ್ನಾನ, ಅಭ್ಯಂಜನ ಮಾಡಿಸಿ ಕೊಂಬುಗಳಿಗೆ ವಿವಿಧ ಬಣ್ಣ ಹಚ್ಚುವರು. ಕೊರಳಲ್ಲಿ ಕವಡೆ ಮತ್ತು ಗೆಜ್ಜೆನಾದದ ಸರಮಾಲೆ, ಬೆನ್ನಲ್ಲಿ ಬಣ್ಣಬಣ್ಣದ ಬೆಲೆಬಾಳುವ ಶಾಲು, ಹಣೆಗೆ ರಂಗುರಂಗಿನ ಹಗ್ಗಗಳಿಂದ ತಯಾರಿಸಿದ ಬಾಸಿಂಗ್ ತೊಡಿಸುವರು.

ಮಧ್ಯಾಹ್ನದವರೆಗೆ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ಮತ್ತು ಹನುಮಂತನ ದರ್ಶನ ಮಾಡಿಸುವರು. ಬಳಿಕ ಮನೆಯಲ್ಲಿ ಮುತ್ತೈದೆಯರು ವಿಧಿವತ್ತಾಗಿ ಪೂಜಿಸುವರಲ್ಲದೆ ಎತ್ತುಗಳಿಗೆ ಬೆಲ್ಲ ಮತ್ತು ತುಪ್ಪದೊಂದಿಗೆ ಹೂರಣ ಹೋಳಿಗೆ, ಕರ್ಚಿಕಾಯಿ ಮುಂತಾದ ಮೃಷ್ಠಾನ್ನದ ಭೋಜನ ಮಾಡಿಸುವರು. ಎತ್ತುಗಳ ಪೂಜೆ ಮಾಡುವ ರೈತರು ಅಂದು ಉಪವಾಸವಿದ್ದು, ಎತ್ತುಗಳಿಗೆ ಉಣಬಡಿಸಿದ ಬಳಿಕವೇ ಊಟ ಮಾಡುವರು.

Bidar, Vijayapura and Klaburagi celebrating Pola habba

ಈ ಹಬ್ಬದಂದು ಸಂಜೆ ಆಯಾ ಗ್ರಾಮದ 40-50 ಜೋಡಿ ಎತ್ತುಗಳನ್ನು ಸಣ್ಣಬಂಡಿಗೆ ಜೋಡಿಸಿ ಊರಲ್ಲಿ ವಾದ್ಯಮೇಳದೊಂದಿಗೆ ಜರುಗುವ ಆಕರ್ಷಕ ಮೆರವಣಿಗೆಯಲ್ಲಿ ಹಲವರು ಹರ್ಷೋಲ್ಲಾಸದಿಂದ ಕುಣಿದು ಕುಪ್ಪಳಿಸುವರು. ಗ್ರಾಮದ ಮುಖಂಡರು ಊರಿನ ಅಗಸಿ ಬಾಗಿಲಿನಲ್ಲಿ ಕರಿ ಕಡಿದ ನಂತರ ಎತ್ತುಗಳ ಓಟ ಪ್ರಾರಂಭವಾಗುತ್ತದೆ.

ಕರಾವಳಿಯ ಕಂಬಳದಲ್ಲಿ ಬಲಿಷ್ಠ ಕೋಣಗಳನ್ನು ಓಡಿಸುವಂತೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಸಣ್ಣ ಚಕ್ಕಡಿಯ ಮೇಲೆ ನಿಂತು ಎತ್ತುಗಳನ್ನು ಓಡಿಸುವವರ ಎದೆಗಾರಿಕೆ ಸಾಹಸ ಮೆಚ್ಚುವಂಥದ್ದು. ಈ ಸಾಹಸಮಯ ದೃಶ್ಯಾವಳಿಗಳನ್ನು ರಸ್ತೆಯ ಇಕ್ಕೆಲಗಳಲ್ಲಿ, ಮಾಳಿಗೆ ಮೇಲೆ, ಅಂಗಡಿ-ಮುಂಗಟ್ಟು ಕಟ್ಟೆಗಳ ಮೇಲೆ ನಿಂತು ಮಕ್ಕಳು, ಹೆಂಗಳೆಯರು, ಯುವಕರು, ಹಿರಿಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಕಣ್ತುಂಬ ನೋಡಿ ಆನಂದಿಸುವರು.

ಸ್ಪರ್ಧೆಯ ಬಳಿಕ ಒಂದೂ ಹೊಡೆತವಿಲ್ಲದೆ ಜೋರಾಗಿ ಓಡುವ ಎತ್ತುಗಳಿಗೆ ಹಾಗೂ ಉತ್ತಮ ಜೋಡೆತ್ತುಗಳಿಗೆ ಗ್ರಾಮದ ಗಣ್ಯರು ಬಹುಮಾನ ವಿತರಿಸುವರು. ಈ ಹಬ್ಬದ ಆಚರಣೆಯಲ್ಲಿ ಎಲ್ಲ ಧರ್ಮೀಯರು ಹರ್ಷೋಲ್ಲಾಸದಿಂದ ಪಾಲ್ಗೊಳ್ಳುವುದರಿಂದ ಎಲ್ಲರೂ ಪ್ರಾಣಿಗಳನ್ನು ಗೌರವಿಸಬೇಕೆಂಬ ಸಂದೇಶ ಸಾರುವ ಹಬ್ಬ ಇದಾಗಿದೆ.

ನಮ್ಮ ಜನಪದ ಸಂಸ್ಕೃತಿ, ಪರಂಪರೆ ಮತ್ತು ಹಳೆಯ ಪಳೆಯುಳಿಕೆಗಳು ಇಂದಿಗೂ ಜೀವಂತವಾಗಿರುವುದಕ್ಕೆ ಹೋಳಾ ಹಬ್ಬವು ಜನಪದ ಮತ್ತು ಕೃಷಿ ಸಂಸ್ಕೃತಿಯ ಜೀವಾಳವಾಗಿದೆ. ಈ ಹಬ್ಬವನ್ನು ಬೀದರ್ ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ಇಂದಿಗೂ ಸಂಭ್ರಮ ಸಡಗರದಿಂದ ಆಚರಿಸುತ್ತಿರುವುದು ವಿಶೇಷ.

(ಚಿತ್ರ, ಲೇಖನ : ಕಲಬುರಗಿ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+