ಜ. 15ರಿಂದ ಭದ್ರಾ ಡ್ಯಾಂ ಬಲದಂಡೆ ನಾಲೆಗೆ ನೀರು ಬಿಡುಗಡೆ
ಶಿವಮೊಗ್ಗ, ಜನವರಿ 14: ಈ ಬಾರಿಯ ಮುಂಗಾರು ಮಳೆ ಕೈ ಕೊಟ್ಟ ಪರಿಣಾಮ ಡ್ಯಾಂಗಳು ಭರ್ತಿಯಾಗಿಲ್ಲ. ಆದ್ದರಿಂದ ಬೇಸಿಗೆಯಲ್ಲಿ ಸಂಗ್ರಹವಾಗಿರುವ ನೀರನ್ನು ಉಪಯೋಗಿಸುವ ಕುರಿತು ಸರಣಿ ಸಭೆಗಳನ್ನು ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತಿದೆ.
2023-24ನೇ ಸಾಲಿನ ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭತ್ತ, ಕಬ್ಬು, ಅರೆ ನೀರಾವರಿ ಬೆಳೆ ಮುಂತಾದ ಯಾವುದೇ ರೀತಿಯ ಬೆಳೆಗಳಿಗೆ ನೀರನ್ನು ಹರಿಸದಿರಲು ಹಾಗೂ ಬೆಳೆದು ನಿಂತಿರುವ ಬೆಳೆ, ಜನ-ಜಾನುವಾರು, ಕುಡಿಯುವ ನೀರು ಮತ್ತು ಪರಿಸರ ಸಮತೋಲನ ಕಾಪಾಡಿಕೊಳ್ಳಲು ಆನ್ ಅಂಡ್ ಆಫ್ ಪದ್ದತಿಯಲ್ಲಿ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಭದ್ರಾ ಜಲಾಶಯದ ಬಲದಂಡೆ ನಾಲೆಗೆ ದಿನಾಂಕ 15/01/2024ರಿಂದ ಒಟ್ಟು 53 ದಿನಗಳಿಗೆ ಹಾಗೂ ಎಡದಂಡೆ ನಾಲೆಗೆ ದಿನಾಂಕ 10/01/2024ರಿಂದ ಒಟ್ಟು 70 ದಿನಗಳಿಗೆ ನೀರು ಹರಿಸಲು ತೀರ್ಮಾನಿಸಲಾಯಿತು.
ನೀರು ಹರಿಸುವ ದಿನಾಂಕಗಳ ವಿವರ; ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಭದ್ರಾ ಎಡದಂಡೆ ನಾಲೆಯಲ್ಲಿ ಜ.10 ರಿಂದ 25 ರವರೆಗೆ 16 ದಿನ ನೀರು ಹರಿಸುವುದು. ಜ.26 ರಿಂದ ಫೆ.9 ರವರೆಗೆ 15 ದಿನ ನೀರು ನಿಲ್ಲಿಸುವುದು.
ಫೆಬ್ರವರಿ 10 ರಿಂದ 26 ರವರೆಗೆ 17 ದಿನ ನೀರು ಹರಿಸುವುದು. ಫೆ.27 ರಿಂದ ಮಾ.12 ರವರೆಗೆ 15 ದಿನ ನೀರು ನಿಲ್ಲಿಸುವುದು. ಮಾರ್ಚ್ 3 ರಿಂದ 30 ರವರೆಗೆ 18 ನೀರು ಹರಿಸುವುದು ಮಾ.31 ರಿಂದ ಏ.14 ರವರೆಗೆ 15 ದಿನ ನೀರು ನಿಲ್ಲಿಸುವುದು. ಏ.15 ರಿಂದ ಮೇ.3 ರವರೆಗೆ 19 ದಿನಗಳ ನೀರು ಹರಿಸಲಾಗುವುದು.
ಭದ್ರಾ ಬಲದಂಡೆ ನಾಲೆಯಲ್ಲಿ ಜ.15 ರಿಂದ 26 ರವರೆಗೆ 12 ದಿನ ನೀರು ಹರಿಸಲಾಗುತ್ತದೆ. ಜನವರಿ 27 ರಿಂದ ಫೆ.15 ರವರೆಗೆ 20 ದಿನ ನೀರು ನಿಲ್ಲಿಸುವುದು. ಫೆಬ್ರವರಿ 16 ರಿಂದ 28 ರವರೆಗೆ 13 ದಿನ ನೀರು ಹರಿಸುವುದು. ಫೆ.29 ರಿಂದ ಮಾ.19 ರವರೆಗೆ 20 ದಿನ ನೀರು ನಿಲ್ಲಿಸುವುದು.
ಮಾರ್ಚ್ 20 ರಿಂದ ಏಪ್ರಿಲ್ 2 ರವರೆಗೆ 14 ದಿನ ನೀರು ಹರಿಸುವುದು. ಏಪ್ರಿಲ್ 3 ರಿಂದ 22 ರವರೆಗೆ 20 ದಿನಗಳಿಗೆ ನೀರು ನಿಲ್ಲಿಸುವುದು. ಏಪ್ರಿಲ್ 23 ರಿಂದ ಮೇ 5 ರವರೆಗೆ 14 ದಿನಗಳ ನೀರು ಹರಿಸಲಾಗುವುದು ಎಂದು ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ಜನವರಿ 6ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಅಭಿವೃದ್ದಿ ಪ್ರಾಧಿಕಾರ ಕಚೇರಿಯಲ್ಲಿ 2023-24 ನೇ ಸಾಲಿನ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆ ನಡೆದಿತ್ತು.
ಸಭೆಯಲ್ಲಿ ದಾವಣಗೆರೆ, ಶಿವಮೊಗ್ಗ ಜಿಲ್ಲಾಧಿಕಾರಿಗಳು, ಶಾಸಕರಾದ ಎಸ್. ಎನ್. ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ, ಲತಾ ಮಲ್ಲಿಕಾರ್ಜುನ್, ಬಿ. ಕೆ. ಸಂಗಮೇಶ್, ಡಿ. ಜೆ. ಶಾಂತನ ಗೌಡ, ಬಸವರಾಜಪ್ಪ, ಶ್ರೀನಿವಾಸ್, ಬಸವರಾಜು ಶಿವಗಂಗ, ಕಾಡಾ ಮುಖ್ಯ ಇಂಜಿನಿಯರ್ ಶಿವಾನಂದ ಬಣಕಾರ್, ಆಡಳಿತಾಧಿಕಾರಿ ಮುರಳೀಧರ್, ಅಭಿಯಂತರರು, ಅಧಿಕಾರಿಗಳು, ರೈತ ಮುಖಂಡರು ಪಾಲ್ಗೊಂಡಿದ್ದರು.
ಸಭೆಯಲ್ಲಿ ದಾವಣಗೆರೆ ಜಿಲ್ಲಾಧಿಕಾರಿ ವೆಂಕಟೇಶ್ ಮಾತನಾಡಿ, "ಪ್ರಸ್ತುತ ಜಲಾಶಯದಲ್ಲಿರುವ ನೀರನ್ನು ಕುಡಿಯುವ ನೀರು ಮತ್ತು ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು ಸಂರಕ್ಷಣೆ ಮಾಡಿಕೊಳ್ಳಬಹುದಾಗಿದ್ದು, ಜಿಲ್ಲೆಯಲ್ಲಿ ಭತ್ತ ಬೆಳೆಯದಿರುವಂತೆ ರೈತರಿಗೆ ಸೂಚನೆ ನೀಡಲಾಗಿದೆ" ಎಂದು ಹೇಳಿದ್ದರು.
ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್. ಮಾತನಾಡಿ, "ಮುಂಬರುವ ಮಾನ್ಸೂನ್ ಮಳೆಗಾಲ ಸ್ವಲ್ಪ ವಿಳಂಬವಾದರೂ ಅಲ್ಲಿಯವರೆಗೆ ನೀರು ನೀಡಲು ಅನುಕೂಲವಾಗುವಂತೆ ನೀರು ವಿತರಣೆಯ ಯೋಜನೆ ಹಾಕಿಕೊಳ್ಳಬೇಕು. ಬೇಸಿಗೆಗೆ ನೀರು ಪೂರೈಕೆಯಾಗುವಂತೆ ನಿರ್ವಹಣೆ ಮಾಡುವ ಅಗತ್ಯವಿದೆ" ಎಂದು ತಿಳಿಸಿದರು.
ರೈತ ಮುಖಂಡ ಕೆ. ಟಿ. ಗಂಗಾಧರ್ ಮಾತನಾಡಿ, "ಕಟ್ಟಕಡೆಯ ಅಚ್ಚುಕಟ್ಟುದಾರರವರೆಗೆ ನೀರು ನೀಡುವ ವ್ಯವಸ್ಥೆ ಸಮರ್ಪಕವಾಗಿ ಆಗಬೇಕು. ಅಚ್ಚುಕಟ್ಟು ಪ್ರದೇಶದಲ್ಲಿ ಒಟ್ಟು 31739 ಹೆಕ್ಟೇರ್ ತೋಟಗಾರಿಕೆ ಬೆಳೆಯಿದ್ದು, ಇದನ್ನು ಉಳಿಸಿಕೊಳ್ಳಬೇಕಾಗಿದೆ. ಡಿಸ್ಚಾರ್ಜ್ ನೀರನ್ನು ನಿರ್ವಹಿಸಲು, ಅಕ್ರಮವಾಗಿ ನೀರೆತ್ತುವುದನ್ನು ನಿಲ್ಲಿಸಲು ವಾಹನ ನಿಯೋಜಿಸಬೇಕು" ಎಂದು ಒತ್ತಾಯಿಸಿದರು.
"ತುಂಗಾ ಜಲಾಶಯದಿಂದ ನೀರನ್ನು ಲಿಫ್ಟ್ ಮಾಡಿದಲ್ಲಿ ಭದ್ರಾ ಜಲಾಶಯಕ್ಕೆ ನೀರು ಉಳಿಯುತ್ತದೆ. ಆದ್ದರಿಂದ ಸಚಿವರು, ಶಾಸಕರು ಸೇರಿ ಮುಖ್ಯಮಂತ್ರಿಗಳು ಮತ್ತು ನೀರಾವರಿ ಸಚಿವರ ಬಳಿ ಈ ಬಗ್ಗೆ ಮಾತನಾಡಿ ತುಂಗಾ ನದಿಯಿಂದ ಮೇಲ್ದಂಡೆ ಯೋಜನೆಗೆ ನೀರು ನೀಡಲು ಕ್ರಮ ವಹಿಸಬೇಕು" ಎಂದು ಒತ್ತಾಯಿಸಿದ್ದರು.











Click it and Unblock the Notifications