ಬೆಳಗಾವಿ ರೈತರ ವಿರುದ್ಧ ಬಂಧನ ವಾರೆಂಟ್, ಸಿಎಂ ಅಭಯ
ಬೆಳಗಾವಿ, ನವೆಂಬರ್ 04 : ಬೆಳಗಾವಿ ಜಿಲ್ಲೆಯ 180ಕ್ಕೂ ಹೆಚ್ಚು ರೈತರ ವಿರುದ್ಧ ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಧನ ವಾರೆಂಟ್ ಜಾರಿಯಾಗಿದೆ. ರೈತರು ಭಯಪಡುವ ಅಗತ್ಯವಿಲ್ಲ ಸರ್ಕಾರ ನಿಮ್ಮ ಬೆಂಬಲಕ್ಕಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ.
ಬೆಳಗಾವಿಯ ರೈತರ ವಿರುದ್ಧ ಎಕ್ಸಿಸ್ ಬ್ಯಾಂಕ್ ಕೋಲ್ಕತ್ತಾದ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲು ಮಾಡಿದೆ. ಪ್ರಕರಣದ ವಿಚಾರಣೆಗೆ ನಿರಂತರವಾಗಿ ಗೈರು ಹಾಜರಾದ ಕಾರಣ 180ಕ್ಕೂ ಹೆಚ್ಚು ರೈತರ ವಿರುದ್ಧ ಬಂಧನದ ವಾರೆಂಟ್ ಜಾರಿಯಾಗಿದೆ.
ಕೃಷಿ ಸಾಲ, ಕೃಷಿ ಸಲಕರಣೆ ಸಾಲ, ಪೈಪ್ ಲೈನ್ ಸಾಲ ಪಡೆಯಲು ರೈತರು ಖಾಲಿ ಚೆಕ್‌ಗೆ ಸಹಿ ಮಾಡಿಕೊಟ್ಟಿದ್ದರು. ಇದನ್ನೇ ಪ್ರಮುಖ ಅಸ್ತ್ರವಾಗಿ ಮಾಡಿಕೊಂಡಿರುವ ಬ್ಯಾಂಕ್ ರೈತರ ವಿರುದ್ಧ ಕೇಸು ದಾಖಲು ಮಾಡಿದೆ.

ಸವದತ್ತಿ, ಬೈಲಹೊಂಗಲ, ರಾಮದುರ್ಗ ತಾಲೂಕಿನ 180ಕ್ಕೂ ಹೆಚ್ಚು ರೈತರ ವಿರುದ್ಧ ಬಂಧನದ ವಾರೆಂಟ್ ಜಾರಿಯಾಗಿದೆ. ರೈತರು ಈಗ ಆತಂಕದಲ್ಲಿದ್ದು, ಸರ್ಕಾರದ ಮೊರೆ ಹೋಗಿದ್ದಾರೆ.
ಕುಮಾರಸ್ವಾಮಿ ಅಭಯ : ಬೆಳಗಾವಿಯ ರೈತರ ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿರುವ ವಿಚಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ತಲುಪಿದೆ. ರೈತರ ಹಿತ ಕಾಯಲು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರು ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿದ್ದು, ರೈತರ ಹಿತ ಕಾಯುವಂತೆ ನಿರ್ದೇಶಿಸಿದರು. ಈ ಪ್ರಕರಣಗಳ ಕುರಿತು ಸಂಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಿದರು.
ಸಾಲ ಮನ್ನಾ ಯೋಜನೆ ವ್ಯಾಪ್ತಿಗೆ ಬರುವ ರೈತರು ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ಬೆಂಬಲಕ್ಕಿದೆ ಎಂದು ಕುಮಾರಸ್ವಾಮಿ ಅವರು ಭರವಸೆ ನೀಡಿದರು.












Click it and Unblock the Notifications