ರೈತ ವಿರೋಧಿ ಹೇಳಿಕೆ ಆರೋಪ: ಚಾಮರಾಜನಗರದಲ್ಲಿ DCM ಡಿ.ಕೆ.ಶಿವಕುಮಾರ್ ವಿರುದ್ಧ ಪ್ರತಿಭಟನೆ
ಚಾಮರಾಜನಗರ, ಜುಲೈ, 14: ಸದನದಲ್ಲಿ ಉತ್ತರ ಕೊಡುವ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ರೈತ ವಿರೋಧಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಚಾಮರಾಜನಗರದಲ್ಲಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ನಗರದ ಸಂತೇಮರಹಳ್ಳಿ ರಸ್ತೆಯಲ್ಲಿ ರೈತ ಮುಖಂಡ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ರಸ್ತೆ ತಡೆದು 1 ತಾಸಿಗೂ ಅಧಿಕ ಕಾಲ ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಸದನದಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡುತ್ತಾ, ಕೆರೆಗೆ ನೀರು ತುಂಬುವ ಯೋಜನೆ ವ್ಯರ್ಥ ಎಂದಿದ್ದಾರೆ. ಹನಿ ನೀರಾವರಿ ಯೋಜನೆಯಿಂದ ಸರ್ಕಾರಕ್ಕೆ ಯಾವುದೇ ಉಪಯೋಗವಿಲ್ಲ ಎಂದು ಹೇಳಿರುವುದು ಖಂಡನೀಯ. ರೈತರಿಂದಲೇ ದೇಶ ನಡೆಯುತ್ತಿರುವುದು, ರೈತರೇ ದೇಶದಲ್ಲಿ ಹೆಚ್ಚು ಟ್ಯಾಕ್ಸ್ ಕಟ್ಟುತ್ತಿರುವುದು. ಕೂಡಲೇ ಡಿಕೆಶಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ರಾಜೀನಾಮೆಗೆ ಒತ್ತಾಯಿಸಿ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು, ರೈತರು ರಸ್ತೆ ತಡೆ ನಡೆಸಿದ್ದರಿಂದ ಕಿಲೋ ಮೀಟರ್‌ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತು ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ
ಬೆಂಬಲ ಬೆಲೆ ನಿಗದಿಪಡಿಸುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ(ಮೂಲ ಸಂಘಟನೆ)ದ ಕಾರ್ಯಕರ್ತರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಇತ್ತೀಚೆಗಷ್ಟೇ ಪ್ರತಿಭಟನೆ ನಡೆಸಿದ್ದರು.
ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಜಯಂತಿ ಅಂಗವಾಗಿ ನಗರದ ಸರ್‌ಎಂ.ವಿ.ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದ್ದರು.
ರಸಗೊಬ್ಬರ, ಕೀಟ ನಾಶಕ, ಕಾರ್ಮಿಕರ ಕೂಲಿ, ಉಳುಮೆ ವೆಚ್ಚ ಮುಂತಾದ ವೆಚ್ಚಗಳು ದುಪ್ಪಟ್ಟಾಗಿದ್ದು, ಉತ್ಪಾದನಾ ವೆಚ್ಚ ಅಧಿಕಾರವಾಗಿರುವ ಕಾರಣ ಕಬ್ಬಿಗೆ ಟನ್ ಒಂದಕ್ಕೆ ಕನಿಷ್ಠ 4,500 ರೂಪಾಯಿ ರಾಜ್ಯ ಸಲಹಾ ಬೆಲೆ(ಎಸ್.ಎ.ಪಿ) ನಿಗದಿ ಮಾಡಬೇಕು. ಪಶು ಆಹಾರದ ಬೆಲೆ ಹೆಚ್ಚಳ ಹಾಗೂ ಪಶು ಸಾಕಾಣಿಕೆ ನಿರ್ವಹಣಾ ವೆಚ್ಚ ಹೆಚ್ಚಾಗಿದ್ದು, ಪ್ರತಿ ಲೀಟರ್ ಹಾಲಿಗೆ ಕನಿಷ್ಠ 40 ಮತ್ತು ಸರ್ಕಾರದ ಸಹಾಯ ಧನ 8ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದರು.
ರಾಜ್ಯ ಸರ್ಕಾರ ತಂದಿರುವ ಮಾರಕ ಕೃಷಿ ಕಾಯ್ದೆಗಳು ಕೃಷಿ ಹಾಗೂ ಕೃಷಿ ಉತ್ಪನ್ನಗಳ ಮಾರಾಟವನ್ನು ಕಾರ್ಪೋರೆಟ್ ಕಂಪನಿಗಳಿಗೆ ವಹಿಸುವ ಹುನ್ನಾರ ನಡೆಸುತ್ತಿದೆ. ಕೃಷಿ ಕ್ಷೇತ್ರವನ್ನು ಕಡೆಗಣಿಸಿ ರೈತರು ಕೃಷಿಯಿಂದ ವಿಮುಖರಾಗುವಂತೆ ಮಾಡಿ ಕೃಷಿಯನ್ನು ಕಾರ್ಪೋರೆಟ್ ಕಂಪನಿಗಳಿಗೆ ವಹಿಸುವ ಹುನ್ನಾರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಜಿಲ್ಲೆಯಲ್ಲಿರುವ ಕೆರೆ ಕಟ್ಟೆಗಳು ಹೂಳು ತುಂಬಿ ಕೆರೆಗಳು ಮುಚ್ಚಿಹೋಗುತ್ತಿದ್ದು, ಈ ಬೇಸಿಗೆ ಅವಧಿಯಲ್ಲಿ ಎಲ್ಲ ಕರೆ ಕಟ್ಟೆಗಳ ಹೂಳು ತೆಗೆಸಿ, ಕೆರೆ ಕಟ್ಟೆಗಳ ಪುನಃಶ್ಚೇತನ ಮಾಡಬೇಕು. ಆ ಮೂಲಕ ಅಂತರ್ಜಲ ವೃದ್ಧಿಯಾಗಲು ಕ್ರಮವಹಿಸಬೇಕು.
ಕೇಂದ್ರ ಸರ್ಕಾರ ಮೂರು ಮಾರಕ ಕೃಷಿ ಕಾಯಿದೆಗಳನ್ನು ವಾಪಸ್ಸು ಪಡೆದಂತೆ ರಾಜ್ಯ ಸರ್ಕಾರವು ಕೂಡ ಮೂರು ಮಾರಕ ಕೃಷಿ ಕಾಯಿದೆಗಳಾದ ಭೂ ಸುಧಾರಣಾ ತಿದ್ದುಪಡಿ ಕಾಯಿದೆ 2020, ಎಪಿಎಂಸಿ ತಿದ್ದುಪಡಿ ಕಾಯಿದೆ 2020 ಹಾಗೂ ಜಾನುವಾರು ಕಾಯಿದೆ 2020, ಎಪಿಎಂಸಿ ತಿದ್ದುಪಡಿ ಕಾಯಿದೆ 2020 ಹಾಗೂ ಜಾನುವಾರು ಹತ್ಯೆ ನಿಷೇಧ ಕಾಯಿದೆ 2020 ಅನ್ನು ಕೂಡಲೇ ರದ್ದು ಪಡಿಸಬೇಕು ಎಂದು ಆಗ್ರಹಿಸಿದ್ದರು.
ಸೇವಾ ವಲಯವಾದ ವಿದ್ಯುತ್ ಕ್ಷೇತ್ರವನ್ನು ವಿದ್ಯುತ್ ಕಾಯಿದೆಗೆ ತಿದ್ದುಪಡಿ ತಂದು ಖಾಸಗಿ ಕರಣ ಮಾಡಲು ಹೊರಟಿರುವ ಕ್ರಮವನ್ನು ಕೇಂದ್ರ ಸರ್ಕಾರ ಕೈ ಬಿಡಬೇಕು. ಖಾಸಗಿ ಕರಣದಿಂದ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ನಿಂತಲ್ಲಿ ಆಹಾರ ಉತ್ಪಾದನೆ ಮೇಲೆ ಹಾಗೂ ಭಾಗ್ಯ ಜ್ಯೋತಿ ಕುಟೀರ ಜ್ಯೋತಿ ಮುಂತಾದ ಯೋಜನೆಗಳಲ್ಲಿ ವಿದ್ಯುತ್ ಬಳಕೆದಾರರ ಮೇಲೆ ದುಷ್ಪರಿಣಾಮ ಬೀರಲಿದ್ದು, ಈ ವಿದ್ಯುತ್ ತಿದ್ದುಪಡಿ ಕಾಯಿದೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದರು.
ಮುಂಗಾರು ಸಕಾಲಕ್ಕೆ ಬಿದ್ದ ಕಾರಣ ಜಿಲ್ಲೆಯಲ್ಲಿ ರಾಗಿಯು ಉತ್ತಮ ಪಸಲು ಬಂದಿರುವ ಕಾರಣ ರಾಗಿಗೆ ಕ್ವಿಂಟಾಲ್ ಕನಿಷ್ಠ 5,000 ರೂಪಾಯಿಗೆ ಬೆಲೆ ನಿಗದಿ ಪಡಿಸಬೇಕು. ಕೊಬ್ಬರಿ ಬೆಲೆ ಕುಸಿದಿದ್ದು ರಾಜ್ಯ ಸರ್ಕಾರ ನಿಗದಿ ಪಡಿಸಿರುವ ಬೆಂಬಲ ಬೆಲೆ 11,750 ರೂ ಅವೈಜ್ಞಾನಿಕ ಬೆಲೆಯಾಗಿದ್ದು, ಕೊಬ್ಬರಿಗೆ ಕನಿಷ್ಠ 18,000 ರೂ ಬೆಲೆ ನಿಗದಿಪಡಿಸಬೇಕು. ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ವಿದ್ಯುತ್ ಬಾಕಿ ಬಲವಂತವಾಗಿ ವಸೂಲಿ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದರು.
ಮುಂಬರುವ ಬೇಸಿಗೆ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಕೆರೆ ಕಟ್ಟೆಗಳ ಹೂಳು ತೆಗೆಸಬೇಕು. ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಬೇಕು. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ದುಬಾರಿ ಬಡ್ಡಿಯನ್ನು ವಿಧಿಸಿ ಒತ್ತೆ ಇಟ್ಟ ಚಿನ್ನಾಭರಣಗಳನ್ನು ಬಿಡಿಸಿಕೊಳ್ಳಲಾಗದ ಸ್ಥಿತಿಗೆ ತಂದೊಂಡಿದ್ದು ಈ ಸಂಸ್ಥೆಗಳ ಮೇಲೆ ನಿಯಂತ್ರಣ ತರಬೇಕು ಎಂದು ಒತ್ತಾಯಿಸಿದ್ದರು.












Click it and Unblock the Notifications