ಕ್ಯಾಪ್ಟನ್ ಹೊಸ ಪಕ್ಷದ ಹೆಸರು ಘೋಷಿಸುತ್ತಿದ್ದಂತೆ ಕಾಂಗ್ರೆಸ್‌ನಿಂದ 'ಐಕ್ಯತೆ' ಪ್ರದರ್ಶನ
ಚಂಡೀಗಢ, ನವೆಂಬರ್ 03: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ತನ್ನ ಹೊಸ ಪಕ್ಷದ ಹೆಸರನ್ನು ಘೋಷಣೆ ಮಾಡಿದ್ದಾರೆ. ಈ ಬೆನ್ನಲ್ಲೇ ಪಂಜಾಬ್ ಕಾಂಗ್ರೆಸ್ ತನ್ನ ಐಕ್ಯತೆಯನ್ನು ಪ್ರದರ್ಶನ ಮಾಡುವ ಯತ್ನವನ್ನು ಮಾಡಿದೆ. ಅಮರೀಂದರ್ ಸಿಂಗ್ ತನ್ನ ಹೊಸ ಪಕ್ಷದ ಹೆಸರು 'ಪಂಜಾಬ್ ಲೋಕ ಕಾಂಗ್ರೆಸ್' ಎಂದು ಘೋಷಣೆ ಮಾಡಿದ್ದಾರೆ. ಈ ಬೆನ್ನಲ್ಲೇ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಪಂಜಾಬ್ ಕಾಂಗ್ರೆಸ್ ನಾಯಕರುಗಳು "ಕಾಂಗ್ರೆಸ್‌ನ ಎಲ್ಲಾ ಸಚಿವರುಗಳು ಹಾಗೂ ಶಾಸಕರುಗಳು ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಪರವಾಗಿಯೇ ಇದ್ದಾರೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ," ಎಂದು ಹೇಳಿಕೊಂಡಿದೆ.
ಪಂಜಾಬ್ ಕಾಂಗ್ರೆಸ್‌ನ ಮುಖ್ಯಸ್ಥ ಸ್ಥಾನವನ್ನು ನವಜೋತ್ ಸಿಂಗ್ ಸಿಧುಗೆ ಭಾರೀ ವಿರೋಧದ ನಡುವೆ ನೀಡಿದ ಬೆನ್ನಲ್ಲೇ ಅಮರೀಂದರ್ ಸಿಂಗ್ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಇರಿಸು ಮುರಿಸು ಹೊಂದಿದ್ದರು. ತನ್ನ ಮುಖ್ಯಮಂತ್ರಿ ಸ್ಥಾನವನ್ನು ತೊರೆಯುವಂತೆ ಕೆಲವು ಶಾಸಕರುಗಳ ಒತ್ತಡ ಹೆಚ್ಚಾಗುತ್ತಿದ್ದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಮರೀಂದರ್ ಸಿಂಗ್ ಬಳಿಕ ಕಾಂಗ್ರೆಸ್ ಅನ್ನು ಕೂಡಾ ತೊರೆದಿದ್ದಾರೆ.
ಪಂಜಾಬ್ ಕಾಂಗ್ರೆಸ್ನಲ್ಲಿ ಮುಗಿಯದ ಆಂತರಿಕ ಕಲಹ, ಚನ್ನಿ ವಿರುದ್ಧ ಸಿಧು ಗುಡುಗು
ಆ ಬಳಿಕ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಆಗಿದ್ದು, ಅಮರೀಂದರ್ ಬಿಜೆಪಿ ಸೇರ್ಪಡೆ ಆಗಲಿದ್ದಾರಾ ಎಂಬ ಅನುಮಾನಗಳು, ಊಹಾಪೋಹಗಳು ಹರಡಿದ್ದವು. ಈ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಅಮರೀಂದರ್ ಸಿಂಗ್ ತಾನು ಬಿಜೆಪಿ ಸೇರುವುದಿಲ್ಲ. ಇದು ರೈತರ ಕುರಿತಾದ ವಿಷಯದಲ್ಲಿ ಮಾತನಾಡಲು ಮಾಡಿದ ಭೇಟಿ ಎಂದು ಹೇಳಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಮರೀಂದರ್ ಸಿಂಗ್ ತನ್ನ ಹೊಸ ಪಕ್ಷವನ್ನು ಘೋಷಣೆ ಮಾಡಿದ್ದಾರೆ.

ಕಾಂಗ್ರೆಸ್ ನಾಯಕರು ತನ್ನ ಪಕ್ಷಕ್ಕೆ ಸೇರುವ ಸುಳಿವು ನೀಡಿದ ಕ್ಯಾಪ್ಟನ್
ಹಾಗೆಯೇ ನಿನ್ನೆಯಷ್ಟೇ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿರುವ ಅಮರೀಂದರ್ ಸಿಂಗ್, ತನ್ನ ಹೊಸ ಪಕ್ಷದ ಹೆಸರು ಪಂಜಾಬ್ ಲೋಕ ಕಾಂಗ್ರೆಸ್ ಎಂದು ತಿಳಿಸಿದ್ದಾರೆ. ಈ ಪತ್ರದಲ್ಲಿ ಕಾಂಗ್ರೆಸ್ ಹೈಕಮಾಂಡ್ ವಿರುದ್ದ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ಇನ್ನು ತನ್ನ ಅಧಿಕಾರ ಅವಧಿಯಲ್ಲಿ ಮರಳು ಗಣಿಗಾರಿಕೆಯನ್ನು ಮಾಡಿದ್ದಾರೆ ಎಂದು ಆರೋಪವನ್ನು ಹೊಂದಿರುವ ಸಚಿವರುಗಳ ಹೆಸರನ್ನು ತಾನು ಬಹಿರಂಗ ಮಾಡುವುದಾಗಿಯೂ ಅಮರೀಂದರ್ ಸಿಂಗ್ ಎಚ್ಚರಿಕೆಯನ್ನು ನೀಡಿದ್ದಾರೆ. ಕಾಂಗ್ರೆಸ್ ನಾಯಕರು ತನ್ನ ಸಂಪರ್ಕದಲ್ಲಿ ಇದ್ದಾರೆ. ತನ್ನ ಹೊಸ ಪಕ್ಷಕ್ಕೆ ಸೇರ್ಪಡೆ ಆಗುವ ಸಾಧ್ಯತೆಗಳು ಇದೆ ಎಂದು ಕೂಡಾ ಅಮರೀಂದರ್ ಸುಳಿವು ನೀಡಿದ್ದಾರೆ. ಈ ಬೆನ್ನಲ್ಲೆ ಪಂಜಾಬ್ ಕಾಂಗ್ರೆಸ್‌ಗೆ ಅಮರೀಂದರ್ ಪತ್ರವು ಎಚ್ಚರಿಕೆಯ ಕರೆ ಘಂಟೆಯಂತೆ ಆಗಿದೆ. ಅಮರೀಂದರ್ ಸಿಂಗ್ ಹೊಸ ಪಕ್ಷದ ಹೆಸರು ಘೋಷಣೆ ಮಾಡುತ್ತಿದ್ದಂತೆ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಕಾಂಗ್ರೆಸ್‌ನ ಸಚಿವರುಗಳು ಹಾಗೂ ಶಾಸಕರುಗಳ ಸಭೆಯನ್ನು ಕರೆದಿದ್ದು, ಪಕ್ಷದೊಂದಿಗೆ ಇರುವಂತೆ ಎಲ್ಲರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್ ಜೊತೆ ಇರುವಂತೆ ಸಿಎಂ ಮನವಿ
ಈ ಸಭೆಯ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಚನ್ನಿ ಕಚೇರಿಯು, "ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್‌ರ ನೇರವಾದ ದೃಢ ನಿರ್ಧಾರವನ್ನು ಎಲ್ಲಾ ಸಚಿವರುಗಳು ಹಾಗೂ ಶಾಸಕರುಗಳು ಶ್ಲಾಘಿಸಿದ್ದಾರೆ," ಎಂದು ಈ ಉಲ್ಲೇಖ ಮಾಡಿದೆ. ಈ ಹೇಳಿಕೆಯಲ್ಲಿ ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ಮುಕ್ತಾಯಗೊಳಿಸಲು ಮತ್ತು ಪಂಜಾಬ್‌ನಲ್ಲಿ ಬಿಎಸ್‌ಎಫ್‌ನ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಲು ಅಧಿಸೂಚನೆಯನ್ನು ಕೋರಿದ ವಿಶೇಷ ಅಸೆಂಬ್ಲಿ ಅಧಿವೇಶನವನ್ನು ಕರೆಯುವ ಮುಖ್ಯಮಂತ್ರಿಯ ಕ್ರಮವನ್ನು ನಿರ್ದಿಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಇನ್ನು ಮುಖ್ಯಮಂತ್ರಿ ವಿದ್ಯುತ್ ದರವನ್ನು ಕಡಿತ ಮಾಡಿರುವುದಕ್ಕೆ ಸಚಿವರುಗಳು ಹಾಗೂ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಕೂಡಾ ಈ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇನ್ನು ಈ ಸಭೆಯ ವಿಡಿಯೋದಲ್ಲಿ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಚನ್ನಿ "ಸರ್ಕಾರಕ್ಕೆ ಇನ್ನೂ ಕೂಡಾ ಒಂದುವರೆ ತಿಂಗಳುಗಳ ಆಡಳಿತ ಅವಧಿ ಇದೆ," ಎಂದು ಹೇಳುವುದು ಕಂಡು ಬಂದಿದೆ. "ಕಾಂಗ್ರೆಸ್ ನಾಯಕರುಗಳ ಎಲ್ಲಾ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳುವ ಕಾರ್ಯವನ್ನು ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಹಣಕಾಸು ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ," ಎಂದು ಕೂಡಾ ಸ್ಪಷ್ಟವಾಗಿ ಹೇಳಿದ್ದಾರೆ.
ಹೊಸ ರಾಜಕೀಯ ಪಕ್ಷದ ಹೆಸರು ಘೋಷಿಸಿದ ಅಮರಿಂದರ್ ಸಿಂಗ್

ಚುನಾವಣಾ ಚಾಣಕ್ಯನ ಸಲಹೆ ಪಡೆಯಿರಿ
ಈ ನಡುವೆ ಮುಂಬರುವ ಚುನಾವಣೆಯಲ್ಲಿ ಚುನಾವಣಾ ಚಾಣಕ್ಯ ಎಂದೇ ಪ್ರಸಿದ್ಧವಾದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್‌ರ ಸಲಹೆಯನ್ನು ಪಡೆದುಕೊಳ್ಳುವಂತೆ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ಚೌಧರಿ ಸಲಹೆ ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ಅಮರೀಂದರ್ ಸಿಂಗ್ ಹಾಗೂ ಪ್ರಶಾಂತ್ ಕಿಶೋರ್ ಜೊತೆಯಾಗಿ ಕಾರ್ಯತಂತ್ರ ರೂಪಿಸಿದ್ದು ಪಂಜಾಬ್‌ನಲ್ಲಿ ಕಾಂಗ್ರೆಸ್ ಜಯಗಳಿಸಿದೆ ಎಂಬ ಮಾತುಗಳ ನಡುವೆ ಈ ಸಲಹೆಯು ಬಂದಿದೆ. ಈ ಸಂದರ್ಭದಲ್ಲೇ ಪಕ್ಷದ ಎಲ್ಲಾ ನಾಯಕರುಗಳು ಜೊತೆಯಾಗಿ ಇರುವಂತೆ ಪಂಜಾಬ್ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಮನವಿ ಮಾಡಿದ್ದಾರೆ.
ಕಾಂಗ್ರೆಸ್‌ಗೆ ಮತ್ತೆ ಸೇರುವ ವದಂತಿ: 'ಹೊಂದಾಣಿಕೆ ಸಮಯ ಮುಗಿದಿದೆ' ಎಂದ ಅಮರೀಂದರ್

ನಿಂತಲ್ಲಿ ನಿಲ್ಲದ ಸಿಧು, ಒಮ್ಮೆ ಪಕ್ಷದ ಪರ, ಒಮ್ಮೆ ವಿರೋಧ
ಇನ್ನು ಈ ಮಧ್ಯೆ ನವಜೋತ್ ಸಿಂಗ್ ಸಿಧು ಒಮ್ಮೆ ಪಕ್ಷವನ್ನು ಹೊಗಳಿದರೆ ಮತ್ತೊಮ್ಮೆ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಚನ್ನಿರ ಪರವಾಗಿ ಮಾತನಾಡಿದ್ದ ನವಜೋತ್ ಸಿಂಗ್ ಸಿಧು ಈಗ ಈಗ ಚನ್ನಿಯನ್ನು ದೂರಿದ್ದಾರೆ. ಮುಖ್ಯಮಂತ್ರಿ ಚನ್ನಿ ಸರ್ಕಾರಿ ಉದ್ಯೋಗಿಗಳಿಗೆ ತುಟ್ಟಿ ಭತ್ಯೆಯನ್ನು ಶೇ.11 ರಷ್ಟು ಏರಿಕೆ ಮಾಡಿ, ಗೃಹ ಉಪಯೋಗಿ ವಿದ್ಯುತ್ ಗೆ ಪ್ರತಿ ಯೂನಿಟ್ ಗೆ ರೂಪಾಯಿ 3 ರಷ್ಟು ಕಡಿತಗೊಳಿಸುವ ಘೋಷಣೆಯನ್ನು ಪ್ರಕಟಿಸಿದ್ದರು. ಇದನ್ನು ಟೀಕೆ ಮಾಡಿರುವ ಸಿಧು "ಇಂತಹ ಭರವಸೆಗಳನ್ನು ನೋಡಿ ಮತ ಚಲಾಯಿಸದೇ ರಾಜ್ಯದ ಅಭಿವೃದ್ಧಿಯ ಅಜೆಂಡಾವನ್ನು ಗಮನದಲ್ಲಿಟ್ಟುಕೊಂಡು ಮತಚಲಾವಣೆ ಮಾಡಿ," ಎಂದು ಹೇಳಿದ್ದಾರೆ. "ಕೊನೆಯ ಎರಡು ತಿಂಗಳಲ್ಲಿ ಜನತೆಗೆ ಲಾಲಿಪಪ್ ನ್ನು ನೀಡುತ್ತಾರೆ. ಆದರೆ ಪ್ರಶ್ನೆ ಇರುವುದು ಎಲ್ಲಿಂದ ಸರ್ಕಾರ ನೀಡುತ್ತದೆ? ಜನರಿಗೆ ಸುಳ್ಳು ಭರವಸೆ ನೀಡಿ ಸರ್ಕಾರ ರಚಿಸುವುದೇ ಉದ್ದೇಶವೇ?," ಎಂದು ಪ್ರಶ್ನೆ ಮಾಡುವ ಮೂಲಕ ಸರ್ಕಾರದ ಬಳಿ ಹಣದ ಕೊರತೆ ಇದೆ ಎಂಬುವುದನ್ನು ಬೊಟ್ಟು ಮಾಡಿದ್ದಾರೆ. ಆದರೆ ಚನ್ನಿ ಮಾತ್ರ ಸಭೆಯಲ್ಲಿ, "ಹಣಕಾಸು ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ," ಎಂದು ಸ್ಪಷ್ಟನೆ ನೀಡಿದ್ದಾರೆ.
(ಒನ್‌ಇಂಡಿಯಾ ಸುದ್ದಿ)