ಕನ್ನಡಿಗರ ಉದ್ದೇಶಿಸಿ ಎನ್ಆರ್ಎನ್ ಏನು ಹೇಳಲಿದ್ದಾರೆ?

ನಾರಾಯಣ ಮೂರ್ತಿ ಅವರ ಕನ್ನಡ ಅಥವಾ ಇಂಗ್ಲಿಷ್ ಪ್ರೇಮ ಹೇಗೇ ಇರಲಿ, ಕನ್ನಡ ನಾಡಿನ ಯುವ ಜನತೆಯನ್ನು ಉದ್ದೇಶಿಸಿ ಅವರು ಮಾಡುತ್ತಿರುವ ಕನ್ನಡ ಭಾಷಣದಲ್ಲಿ ಏನು ಮಾತನಾಡಲಿದ್ದಾರೆ ಎಂದು ಕನ್ನಡ ನಾಡು ಮಾತ್ರವಲ್ಲ, ಹೊರನಾಡ ಕನ್ನಡಿಗರು ಮತ್ತು ಸಾಫ್ಟ್ ವೇರ್ ಜಗತ್ತು ಕಾದು ಕುಳಿತಿರಲಿದೆ.
ನಾನೂ ಒಬ್ಬ ಕನ್ನಡಿಗ, ಕನ್ನಡ ನಾಡಿನಲ್ಲೇ ಓದಿದವನು, ಕನ್ನಡ ಶಾಲೆಯಲ್ಲೇ ಕಲಿತವನು, ಕನ್ನಡ ನನ್ನ ಅಂತರಂಗದ ಭಾಷೆ, ಕನ್ನಡ ನನ್ನ ಮನದ ಭಾಷೆ, ನಾನು ಕನ್ನಡ ದ್ವೇಷಿಯಲ್ಲ ಎಂಬಿತ್ಯಾದಿಯಾಗಿ ನಾರಾಯಣ ಮೂರ್ತಿಯವರು, ಅವರನ್ನು ವಿರೋಧಿಸಿದವರಿಗೆ ಸಮಜಾಯಿಷಿ ನೀಡುವಂತಾಗಿದ್ದು ನಿಜಕ್ಕೂ ವಿಷಾದನೀಯ ಸಂಗತಿ. ವಿವಾದಗಳು ನಾರಾಯಣ ಮೂರ್ತಿಯವರಿಗೆ ಹೊರತೇನೂ ಅಲ್ಲ. ಆದರೆ, ಈಗ ಎದ್ದಿದ್ದ ವಿವಾದ ಅನಗತ್ಯವಾಗಿತ್ತು. ಬೆಂಗಳೂರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಕೂಡ ಎನ್ಆರ್ಎನ್ ಉದ್ಘಾಟನೆಗೆ ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ.
ನಿಜಕ್ಕೂ ಕನ್ನಡ ನಾಡು ಅನೇಕಾನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಅನ್ಯ ಭಾಷಿಕರ ಹಾವಳಿಯಿಂದಾಗಿ ಕನ್ನಡಿಗರಿಗೆ ಸಿಗಬೇಕಾದ ಉದ್ಯೋಗ, ಮಾನ್ಯತೆ ದೊರೆಯುತ್ತಿಲ್ಲ ಎಂಬುದು ಒಂದು ಕೂಗಾದರೆ, ಗ್ರಾಸ್ ರೂಟ್ ಲೆವೆಲ್ಲಿನಲ್ಲಿಯೇ ಕನ್ನಡದ ಮಣ್ಣಿನ ಮಕ್ಕಳು ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲಿ ಬಡವರ ಮಕ್ಕಳು ಆಂಗ್ಲ ವಿದ್ಯಾರ್ಜನೆಯಿಂದ ವಂಚಿತರಾಗುತ್ತಿರುವುದು. ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಈ ಬಗ್ಗೆ ವಿಷದವಾಗಿ ಪ್ರಸ್ತಾಪಿಸಿರುವ ನಾರಾಯಣ ಮೂರ್ತಿ ಅವರು, ಕನ್ನಡ ವಿದ್ಯಾಭ್ಯಾಸ ಬಡ ಮಕ್ಕಳಿಗೆ ಬೇಡ ಅಂತಲ್ಲ, ಅವರಿಗೂ ಆಂಗ್ಲ ಮಾಧ್ಯಮದ ಶಿಕ್ಷಣ ಅವರಿಗೂ ಲಭ್ಯವಾಗಬೇಕು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಎರಡನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಜಗತ್ತಿನ ಎಲ್ಲೆಡೆಯಿಂದ ಲಕ್ಷಾಂತರ ಜನ ಭಾಗವಹಿಸಲಿದ್ದಾರೆ. ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬಂಡವಾಳವನ್ನು ಕೂಡ ಹೂಡುತ್ತಿರುವ ನಾರಾಯಣ ಮೂರ್ತಿಯವರು ಬೆಳಗಾವಿಯಲ್ಲಿ ನೆರೆಯುವ ಯುವಕರನ್ನು ಉದ್ದೇಶಿಸಿ ಏನು ಹಿತನುಡಿಗಳನ್ನು ಹೇಳಲಿದ್ದಾರೆ ಎಂಬುದು ಸದ್ಯಕ್ಕೆ ಎಲ್ಲರಲ್ಲಿ ಉದ್ಭವವಾಗಿರುವ ಪ್ರಶ್ನೆ.
ಮತ್ತೊಂದು ವಿವಾದ : ನಾರಾಯಣ ಮೂರ್ತಿಯವರನ್ನು ಉದ್ಘಾಟಕರನ್ನಾಗಿ ಮಾಡಿದ ಹಿನ್ನೆಲೆಯಲ್ಲಿ ಉದ್ಭವಾಗಿದ್ದ ವಿವಾದ ಬಗೆಹರಿಯುವ ಹಂತದಲ್ಲೇ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ಬೆಳಗಾವಿ ಮೇಯರ್ ಕನ್ನಡಿಗ ನಿಂಗಪ್ಪ ನಿರ್ವಾಣಿ ಅವರು, ತಮ್ಮ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸದೆ ಆಯೋಜಕರು ತಮಗೆ ಮತ್ತು ಕನ್ನಡಕ್ಕೆ ಅವಮಾನ ಮಾಡಿದ್ದಾರೆ ಎಂದು ಬೊಬ್ಬಿಡುತ್ತಿದ್ದಾರೆ. ಪ್ರತಿಯಾಗಿ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.












Click it and Unblock the Notifications