ಯಡಿಯೂರಪ್ಪ ಅವರಿಂದ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ, ಗೃಹ ಸಚಿವ ಆರ್. ಅಶೋಕ ಸ್ವಾಗತ ಭಾಷಣ ಕೋರಿದರು. ಕಸಾಪ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್, ಬಾಲಗಂಗಾಧರನಾಥ ಸ್ವಾಮಿ, ಸಂಸದ ಅನಂತಕುಮಾರ್, ಸಚಿವರಾದ ಸುರೇಶ್ ಕುಮಾರ್, ಡಾ. ಯು.ಆರ್. ಅನಂತಮೂರ್ತಿ, ದೇ.ಜವರೇಗೌಡ, ಡಾ. ಗೀತಾ ನಾಗಭೂಷಣ, ರಾಜ್ಯಸಭಾ ಸದಸ್ಯೆ ಬಿ. ಜಯಶ್ರಿ, ಕನ್ನಡ ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಪಿಜಿಆರ್ ಸಿಂಧ್ಯಾ, ಡಾ. ಡಿ. ಹೇಮಚಂದ್ರ ಸಾಗರ್, ಡಾ. ಎಂ.ಎಂ. ಕಲಬುರ್ಗಿ, ಚಂಪಾ, ಮಾಜಿ ರಾಜ್ಯಪಾಲ ರಾಮಾ ಜೋಯಿಸ್, ಕನ್ನಡ ರಕ್ಷಣಾ ವೇದಿಕೆಯ ನಾರಾಯಣ ಗೌಡ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
ಇದಕ್ಕೂ ಮುನ್ನ, ಬೆಂಗಳೂರು ಮಹಾನಗರ ಪಾಲಿಕೆ ಅಂಗಳದಿಂದ ಬೆಳಗ್ಗೆ 10 ಗಂಟೆಗೆ ಹೊರಟ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮತ್ತು ಗಾಂಧಿನಗರದಿಂದ ಹೊರಟ ಸಿನಿ ಕಲಾವಿದರ ಮರವಣಿಗೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಲೀನವಾಯಿತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮ್ಮಳಾನಧ್ಯಕ್ಷ ಕನ್ನಡ ಪದ ಪಂಡಿತ, ಮಂಡ್ಯ ಮಣ್ಣಿನ ದಿಗ್ಗಜ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರನ್ನು ಸಮ್ಮೇಳನ ಸ್ಥಳಕ್ಕೆ ಬರಮಾಡಿಕೊಂಡರು. ಪ್ರೊ. ಗಂಜಾಂ ವೆಂಕಟಸುಬ್ಬಯ್ಯ ಅವರು ಕೆಲವೇ ಕ್ಷಣಗಳಲ್ಲಿ ಅಧ್ಯಕ್ಷ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮ ನಿರೂಪಣೆ ಶಂಕರ್ ಪ್ರಕಾಶ್ ಮತ್ತು ಅಪರ್ಣ.
ಇದಾದ ನಂತರ ವಿಚಾರ ಗೋಷ್ಠಿಗಳಿಗೆ ಚಾಲನೆ ದೊರೆಯಲಿದೆ. ಮೊದಲ ಗೋಷ್ಠಿಯಲ್ಲಿ "ಕನ್ನಡ ಸಮುದಾಯದ ಆತಂಕಗಳು' ಎನ್ನುವ ವಿಷಯ ಮಂಡನೆಯಾಗಲಿದೆ. ಸಂಜೆ 4.30ಕ್ಕೆ ಆರಂಭವಾಗಲಿರುವ ಈ ಗೋಷ್ಠಿಯು ಪ್ರೊ. ಕೆ.ಇ. ರಾಧಾಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ತಿಂಡಿ, ಊಟ ಭರ್ಜರಿ:
ಸಮ್ಮೇಳನದ ಅಂಗವಾಗಿ ಪ್ರಧಾನ ವೇದಿಕೆಯ ಸಮೀಪ ಮಹಿಳಾ ಸೇವಾ ಸಮಾಜ ಶಾಲೆಯಲ್ಲಿ ಬೆಳಗ್ಗೆ ಸುಮಾರು 40,000 ಮಂದಿಗೆ ತಿಂಡಿ ಹಾಗೂ ಮಧ್ಯಾಹ್ನ ಸುಮಾರು ಮಂದಿಗೆ ಭರ್ಜರಿ ಊಟ ಉಣಬಡಿಸಲಾಯಿತು. ಊಟದ ವೇಳೆ ಯಾವುದೇ ಗೊಂದಲ, ಹಾಹಾಕಾರ ಉಂಟಾಗದಿದ್ದುದು ಈ ಸಮ್ಮೇಳನದ ಹೆಚ್ಚುಗಾರಿಕೆ.ಊಟ ತಿಂಡಿ ವ್ಯವಸ್ಥೆ ಗುತ್ತಿಗೆದಾರರು 'ಅಡಿಗಾಸ್' ಸಸ್ಯಾಹಾರಿ ಹೋಟೆಲು ಸಮೂಹದ ಮಾಲಿಕ ವಾಸುದೇವ ಅಡಿಗ.











Click it and Unblock the Notifications