ವಚನ ಸಾಹಿತ್ಯದ ವಕ್ತಾರ ಎಲ್ ಬಸವರಾಜು

ಕರ್ನಾಟಕದಲ್ಲಿ ಸಂಸ್ಕೃತಿ, ಇತಿಹಾಸ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದವರ ದೊಡ್ಡ ಪಟ್ಟಿಯೇ ಇದೆ. ಆರ್ ನರಸಿಂಹಾಚಾರ್ , ತಿತಾ ಶರ್ಮ, ತೀನಂಶ್ರೀ, ಡಿಎಲ್ ನರಸಿಂಹಾಚಾರ್ಯ, ಆ ನೇ ಉಪಾಧ್ಯೆ ,ಡಾ. ಆರ್ ಸಿ ಹಿರೇಮಠ,ಸಂ.ಶಿ. ಭೂಸನೂರ ಮಠ ಮುಂತಾದವರ ಸಾಲಿನಲ್ಲಿ ಎದ್ದು ನಿಲ್ಲುವ ಹೆಸರು ವಚನ ವಿದ್ವಾಂಸ ಡಾ.ಎಲ್ .ಬಸವರಾಜು ಅವರದು. ಆನಂತರದಲ್ಲಿ ಎಂ.ಚಿದಾನಂದ ಮೂರ್ತಿ, ಸಾಶಿ ಮರುಳಯ್ಯ, ಹಂ.ಪ ನಾಗರಾಜಯ್ಯ,ಡಾ. ಎಂ.ಎಂ ಕಲಬುರ್ಗಿ, ಚಂದ್ರಶೇಖರ್ ಇತರರನ್ನು ನೆನೆಯಬಹುದು.
ಬಸವರಾಜು ಅವರ ಜನನ, ವಿದ್ಯಾಭ್ಯಾಸ : ಕೋಲಾರ ಜಿಲ್ಲೆಯ ಎಡಗೂರಿನಲ್ಲಿ 1919 ಅಕ್ಟೋಬರ್ 5 ರಂದು ಬಸವರಾಜು ಅವರು ಜನಿಸಿದರು. ಇವರ ತಾಯಿ ವೀರಮ್ಮ, ತಂದೆ ಲಿಂಗಪ್ಪ.ಎಡಗೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ತುಮಕೂರಿನ ಸಿದ್ಧಗಂಗೆಯಲ್ಲಿ ಪ್ರೌಢಶಿಕ್ಷಣ ಮುಗಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎ ಮತ್ತು ಮೈಸೂರು ವಿವಿಯಲ್ಲಿ ಎಂಎ ಪದವಿ ಗಳಿಸಿದರು. ಮೂರು ದಶಕಗಳಿಗೂ ಹೆಚ್ಚು ಕಾಲ ಮೈಸೂರು ವಿವಿಯ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಅಪಾರ ಶಿಷ್ಯವರ್ಗವನ್ನು ಸಂಪಾದಿಸಿದರು.
ಸಂಶೋಧನೆಯ ಜೊತೆಗೆ ಸೃಜನಶೀಲ ಸಾಹಿತ್ಯ ರಚನೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡವರು ಬಸವರಾಜು. ವಚನ ಸಾಹಿತ್ಯ, ವೀರಶೈವ ಧರ್ಮದ ಬಗ್ಗೆ ಅಧಿಕಾರಯುತವಾಗಿ, ಆಧಾರಗಳ ಸಮೇತ ವಿವರಿಸಬಲ್ಲ ದಣಿಯದ ಜೀವ ಎಲ್ ಬಿ, ಮನಸ್ಸು ಎಷ್ಟು ಮೃದುವೋ ವಿಷಯ ಪ್ರತಿಪಾದನೆಯಲ್ಲಿ ಅಷ್ಟೇ ಕಠಿಣ. ಕವಿ ಮನಸ್ಸು, ಬಂಡಾಯಗಾರರ ಛಲ ಅವರ ಗುಣ.
ಪ್ರಶಸ್ತಿ, ಪುರಸ್ಕಾರ : ಎಲ್ ಬಿ ಅವರಿಗೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಪ್ರೊ. ಸಂ. ಶಿ. ಭೂಸನೂರ ಮಠ ಪ್ರಶಸ್ತಿ, ಪಂಪ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಬಸವ ಪುರಸ್ಕಾರ ರಾಷ್ಟ್ರೀಯ ಸಮ್ಮಾನ, ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾ ಸಮ್ಮಾನ, ರಾಷ್ಟ್ರಕವಿ ಎಂ ಗೋವಿಂದ ಪೈ ಪ್ರಶಸ್ತಿ, ಮೈಸೂರು ವಿವಿಯ ಗೌರವ ಡಾಕ್ಟರೇಟ್ ಇತ್ಯಾದಿ.
ಸಾಹಿತ್ಯ ಕೃತಿಗಳು : ನಾಟಕಾಮೃತ ಬಿಂದುಗಳು, ಭಾರತ ರೂಪಕ, ರಾಮಾಯಣ ನಾಟಕ ತ್ರಿವೇಣಿ, ಅಲ್ಲಮನ ವಚನ ಚಂದ್ರಿಕೆ, ಅಲ್ಲಮನ ವಚನಗಳು, ಬಸವಣ್ಣನವರ ವಚನಗಳು, ಸರ್ವಜ್ಞನ ವಚನಗಳು, ಅಕ್ಕನ ವಚನಗಳು, ದೇವರದಾಸಿಮಯ್ಯ ವಚನಗಳು, ಬಸವ ವಚನಾಮೃತ, ಪರಮಾರ್ಥ, ಶಿವದಾಸ ಗೀತಾಂಜಲಿ, ತಿರುಮಲಾರ್ಯ ಮತ್ತು ಚಿಕ್ಕದೇವರಾಜ ಒಡೆಯರು, ಶೃಂಗಾರ ನಿದರ್ಶನ, ಮಹಾದೇವನ ಮಹಾಲಿಂಗೇಂದ್ರ ವಿಜಯ, ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯ ಸಂಪಾದನೆ, ವೀರಶೈವ ತತ್ವ ಮತ್ತು ಆಚರಣೆ, ಕನ್ನಡ ಛಂದಸ್ಸಂಪುಟ, ಪಂಪನ ಆದಿ ಪುರಾಣ, ವಚನ ಚಿಂತನ, ಕಲುಬುರ್ಗಿಯ ಶರಣಬಸವ, ತೊರವೆ ರಾಮಾಯಣ ಸಂಗ್ರಹ, ಹರಹರನು ಕಂಡ ಜ್ಯೋತಿರ್ಲಿಂಗದ ಮೂರು ಮುಖಗಳು, ಶಬ್ದಮಣಿದರ್ಪಣ, ಶರಣ ಬಸವ ಸಂಪುಟ ಹಾಗೂ ಮುಂತಾದವು.
'ಕಲಿಯುವವರೆ ಕಲಿಸಲು ಯೋಗ್ಯರು', ಮಾನವ ಜಾತಿ ತಾನೊಂದೇ ವಲಂ'ಎಂಬುದರಲ್ಲಿ ನಂಬಿಕೆಯಿಟ್ಟಿರುವ 90 ರ ಹರೆಯ ಜ್ಞಾನವೃದ್ಧ ಎಲ್ ಬಿ ಅವರ ಚಿಂತನೆಗಳು ಸದಾ ಅನುಕರಣೀಯ.
ಜ್ಞಾನದಿಂದಲಿ ಇಹವು ಜ್ಞಾನದಿಂದಲಿ ಪರವು
ಜ್ಞಾನವಿಲ್ಲದಿರೆ ಸಕಲವೂ ತನಗಿದ್ದು
ಹಾನಿ ಕಾಣಯ್ಯ -ಸರ್ವಜ್ಞ
ಮಾಹಿತಿ : ಕನ್ನಡಕವಿ.ಕಾಂ
ಇದನ್ನೂ ಓದಿ : ಚಿತ್ರದುರ್ಗದಲ್ಲಿ ಸಾಹಿತ್ಯ ಸಮ್ಮೇಳನ












Click it and Unblock the Notifications