ಸಮ್ಮೇಳನಾಧ್ಯಕ್ಷರ ಭಾಷಣದ ಪೂರ್ಣಪಾಠ (ಭಾಗ 5)
(ಮುಂದುವರಿದಿದೆ...)
ನಾನು ಹಿಂದೆ ಹೇಳಿದಂತೆ ಶಿವಶರಣರು ಹರಿದಾಸರು ತಮ್ಮ ಸಾಹಿತ್ಯದಿಂದ ಒಂದು ಸಾವಿರ ವರ್ಷಗಳ ಉದ್ದಕ್ಕೂ ಮಾಡಿಕೊಂಡು ಬಂದ ಸುಧಾರಣೆಯ ಕೆಲಸವನ್ನು ಒಟ್ಟಾರೆಯಾಗಿ ಈಗ ಸಾಹಿತಿಗಳು ಸಾಧಿಸಲಾಗದಿರುವುದಕ್ಕೆ ಕಾರಣವೇನು? ನಮಗೆ ಬಹಳ ಪೂಜ್ಯನಾದ ಸಂತನಾದ ಜೀವಿತಾದರ್ಶದ ಪ್ರತೀಕರೂಪವಾದ ಸಾಹಿತಿ ಯಾರು ಎಂದರೆ ಕುವೆಂಪು ಅವರೆಂದೊ ಬೇಂದ್ರೆಯವರೆಂದೊ ಕೈಬೆರಳೆಣಿಕೆಯಷ್ಟು ಜನ ಸಿಗಬಹುದು. ಆದರೆ ಈ ಕಲಿಗಾಲಕ್ಕೆ ಅದೂ ಸಾಲದು. ಮತ್ತು ಆಧುನಿಕ ಪಂಥಗಳು ಶರಣ ಹರಿದಾಸ ಪಂಥಗಳಷ್ಟು ಸಾಮಾನ್ಯ ಜನತೆಯ ಮನಃಪರಿಪಾಕವನ್ನು ಕಾಲಾನುಗಣವಾಗಿ ತಿದ್ದಬಲ್ಲಂಥ ಪಂಥಗಳಾಗಲಿಲ್ಲ. ಧರ್ಮದ ಹೆಸರಿನಲ್ಲಿ ಅಂದಿನ ಶರಣ ದಾಸ ಪಂಥಗಳು ವೈರಾಗ್ಯದ ಹೆಸರಿನಲ್ಲಿ ಕಾಯಕದ ಹೆಸರಿನಲ್ಲಿ ಭಕ್ತಿಯ ಹೆಸರಿನಲ್ಲಿ ಏನೆಲ್ಲ ತ್ಯಾಗ ಮಾಡಿ ನಿಷ್ಠೆಯಿಂದ ಜನಸೇವೆಯಲ್ಲಿ ತೊಡಗಿದವೊ ಅಂತಹ ಸಾಹಿತ್ಯ ಸಮೂಹಗಳನ್ನೆ ಇಂದು ನಾವು ಕಾಣಲಾರೆವು.
ಆದ್ದರಿಂದಲೇ ಇವತ್ತಿನವರ ಸಾಹಿತ್ಯ ರಚನೆಗಳು ಕೇವಲ ಶಬ್ದಾಡಂಬರವೆನಿಸಿ ಜನ ಅವುಗಳಿಂದ ಪ್ರೇರಿತರಾಗಲಿಲ್ಲ. ಅಂಥ ಪ್ರೇರಣೆ ಉಂಟುಮಾಡಲು ಇಂದು ಹೊಸದೊಂದು ಸಾಹಿತ್ಯಪಂಥ ಜಾತ್ಯತೀತವಾಗಿ ಸರ್ವಜನಪ್ರಿಯವಾಗಿ ಜಾಗತಿಕ ಆಗುಹೋಗುಗಳ ಹಿನ್ನೆಲೆಯಲ್ಲಿ ಸಂಭಾವಿತವೂ ಆಗಿ ಮೆರೆಯಬೇಕಾಗಿದೆ. ಮತ್ತು ಅದಕ್ಕೆ ಕೆಲವು ಸೃಜನಶೀಲ ಜೀವಗಳು ನಿಷ್ಠೆಯಿಂದ ಸಂಪೂರ್ಣವಾಗಿ ಕಾಯಾ-ವಾಚಾ-ಮನಸಾ ತೆತ್ತುಕೊಳ್ಳಬೇಕು. ಮನೆಯೊಳಗೆ ಒಳ್ಳೆಯ ಮಾತನಾಡಿ ಹೊರಗೆ ಹೋಗಿ ಹೆಂಡ ಕುಡಿದು ಬಂದರೆ ಏನಾಗುತ್ತದೆ? ಸೃಜನಾತ್ಮಕ ಶಕ್ತಿಯ ಜನ ತಮ್ಮ ವಾಣಿಯಿಂದ ಅಂದರೆ ಸಾಹಿತ್ಯದಿಂದ ಜನತೆಯ ಗಮನವನ್ನು ತಮ್ಮತ್ತ ಸೆಳೆಯುವ ಅದಕ್ಕೂ ಹೆಚ್ಚಾಗಿ ತಮ್ಮಂತೆಯೆ ಪ್ರಗತಿಪರ ಕಾರ್ಯಕಲಾಪಗಳಲ್ಲಿ ತೊಡಗುವ ಸಂಕಲ್ಪವನ್ನೂ ಓದುಗರಲ್ಲಿ ಉಂಟು ಮಾಡಬೇಕು. ಮುಖ್ಯವಾಗಿ ಸಾಹಿತ್ಯ ಎನ್ನುವುದು ಒಂದು ಮಾನಸಿಕ ಸುಧಾರಣೆ. ಆ ಸುಧಾರಣೆ ಸಮಾಜದ ದೇಶದ ಉತ್ತಮಿಕೆಗೆ ಬೇಕಾದ ಕಾರ್ಯಕಲಾಪಗಳಲ್ಲಿ ಪ್ರಜೆಯನ್ನು ಪ್ರಕರ್ಷಕವಾಗಿ ತೊಡಗಿಸುವಂತಾಗಬೇಕು.
* * *
ಕನ್ನಡ ದೇಶ-ಭಾಷೆ-ಸಂಸ್ಕೃತಿ-ಸಾಹಿತ್ಯ ಎಂದು ಕೊಚ್ಚಿಕೊಳ್ಳುತ್ತಿರುವ ಈ ಜನ,ಕನ್ನಡವನ್ನು ಮಾತನಾಡುವ ನಾವೆಲ್ಲ ಒಂದು ಜನಾಂಗ; ಎಲ್ಲಾ ನಮ್ಮವರು; ನಮ್ಮಿಂದ ಎಲ್ಲರಿಗೂ ಮರ್ಯಾದೆ ಸಲ್ಲಬೇಕೆಂಬ ಪ್ರಾಥಮಿಕ ಪಾಠವನ್ನೇ ಕಲಿತಿಲ್ಲ. ಕನ್ನಡ ಮಾತನಾಡುವ ಜನರನ್ನು ಅದು, ಇದು ಎಂದು ಹೆಸರಿಟ್ಟು, ಬಹಿಷ್ಕರಿಸಿ, ಅವರನ್ನು ಊರಿಂದ ಹೊರಗಿಟ್ಟು, ಅವರಿಗೆ ಮನೆಯಿಲ್ಲದೆ ಅನ್ನವಿಲ್ಲದೆ ವಿದ್ಯೆಯಿಲ್ಲದೆ ಉದ್ಯೋಗವಿಲ್ಲದೆ ಅತ್ಯಂತ ಶೋಚನೀಯ ಸ್ಥಿತಿಯಲ್ಲಿಟ್ಟಿರುವ ಈ ಕನ್ನಡಿಗರೆಂಬ ನಾವು ಕನ್ನಡಾಂಬೆಗೆ ಕನ್ನಡ ಸರಸ್ವತಿಗೆ ಕನ್ನಡ ಭುವನೇಶ್ವರಿಗೆ ಅವಮಾನ ಮಾಡುತ್ತಿರುವಂತಾಗಿಲ್ಲವೇನು? ಇದು ಯಾರ ಮನಸ್ಸಿಗೂ ಬರುತ್ತಿಲ್ಲವೇನು? ತಮ್ಮಷ್ಟಕ್ಕೆ ತಾವು ಚಳಿಗಾಲದಲ್ಲಿ ಕಂಬಳಿ ಹೊದ್ದುಕೊಂಡವರಂತೆ ಬೆಚ್ಚಗೆ ಕುಳಿತಿರುವರಲ್ಲ? ಹೊಟ್ಟೆಗಿಲ್ಲದವನು ಸಾಯುತ್ತಿರುವಾಗ ಔತಣವನ್ನು ಉಂಡ ಉಂಡಾಡಿಯಂತೆ ದಲಿತರಲ್ಲದ ಜನ ನಿರಪರಾಧಿಗಳೆಂಬಂತೆ ಎಗ್ಗು ಸಿಗ್ಗಿಲ್ಲದೆ ತಿರುಗುತ್ತಿರುವುದು ಒಂದು ಸಾಮಾಜಿಕ ಅಪಹಾಸ್ಯವಾಗಿದೆ. ಇದರಿಂದ ಪಾರಾಗುವ ಇಚ್ಛೆ ಮೇಲ್ವರ್ಗದವರಿಗೆ ಇರುವುದೇ ಆದರೆ ಅವರು ಈ ಅವಮಾನಕರವಾದ ಸಂದರ್ಭದಿಂದ ಮೊದಲು ಹೊರಬರಬೇಕು. ಈ ಸಂಬಂಧವಾಗಿಯೇ ನಾವು ಮಾಡಬಹುದಾದ ಮೊಟ್ಟಮೊದಲ ಅಡಿಪಾಯದ ರೀತಿಯ ಕಾರ್ಯಭಾರವೆಂದರೆ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟವರ್ಗದ ಮಕ್ಕಳಿಗೆ ಶಿಶುವಿಹಾರದಿಂದ ಮೊದಲುಗೊಂಡು ರಾಜ್ಯಾಂಗದತ್ತವಾಗಿ ಒತ್ತಾಯ ಮಾಡಿರುವ ಹತ್ತನೆಯ ತರಗತಿಯವರೆಗೆ ಉಚಿತ-ಕಡ್ಡಾಯ-ಅತ್ಯುತ್ತಮ ಶಿಕ್ಷಣವನ್ನು ಕೊಡುವ ವ್ಯವಸ್ಥೆ ಮಾಡಬೇಕು. ಈ ನಿರ್ಗತಿಕ ವರ್ಗದ ತಂದೆ-ತಾಯಿಯರು ಸ್ವತಃ ವಿದ್ಯಾವಂತರಾಗಿರುವುದಿಲ್ಲವಾಗಿ ವಾಸಿಸಲು ಯೋಗ್ಯವಾದ ಮನೆಗಳೂ ಇಲ್ಲದೆ, ಶುಚಿಯಾದ ಕೇರಿಯೂ ಇರದೆ ಕೆಟ್ಟ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಅವರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಯಾವುದಾದರೂ ಶಾಲೆಗೆ ಕಳಿಸುತ್ತಾರೆ ಎಂದರೆ, ಅದು ಆಗದ ಮಾತು.
ಅವರನ್ನು ಒತ್ತಾಯ ಮಾಡುವುದೆಂದರೆ ತಿನ್ನಲು ಹುಲ್ಲು ಇಲ್ಲದ ಬಡಕಲು ಕುದುರೆಯನ್ನು ಗಾಡಿಗೆ ಕಟ್ಟಿ ಚಾಟಿಯಲ್ಲಿ ಹೊಡೆದಂತೆ ಅವಿವೇಕ, ಅನಾಗರೀಕ. ಆದ್ದರಿಂದ ಸರಕಾರ ಪ್ರತಿವರ್ಷ ಅಲ್ಲ, ಪ್ರತಿನಿತ್ಯ ಹೆಸರಿಸಲು ನಾಚುವ ಎಷ್ಟೋ 'ಯೋಜನೆ'ಗಳಿಗೆ ಕೋಟ್ಯಂತರ ರೂಪಾಯಿಗಳನ್ನು ಅಪವ್ಯಯ ಎನ್ನುವುದು ಬೇಡ, ವ್ಯಯ ಮಾಡುತ್ತಿದೆ. ಅದಷ್ಟನ್ನೂ ವಿವೇಕದಿಂದ ಇದೇ ಸರಕಾರ ಆ ವರ್ಗದ ಜನರ ಮಕ್ಕಳೆಲ್ಲ ಸುಸೂತ್ರವಾಗಿ ವಸತಿ-ಅನ್ನ-ಬಟ್ಟೆ-ವಿದ್ಯೆ-ಈ ಒಂದರಿಂದಲೂ ವಂಚಿತರಾಗದಂತೆ ಬೆಳೆಸಲು ಇರುವ ಮಾರ್ಗ ಒಂದೇ. ಅದು ಪ್ರತಿ ತಾಲ್ಲೂಕು ಮಟ್ಟದಲ್ಲಿ ಅವರಿಗೆ ಪ್ರತ್ಯೇಕವಾದ ಸುಸಜ್ಜಿತ ವಸತಿಶಾಲೆಗಳನ್ನು ತೆರೆದು ತರಬೇತಿ ಪಡೆದ ಉಪಾಧ್ಯಾಯರನ್ನು ನೇಮಿಸಿ ಶಿಶುವಿಹಾರ, ಪ್ರಾಥಮಿಕ, ಪ್ರೌಢ ಎಂಬ ಮೂರೂ ಹಂತಗಳಲ್ಲಿ ಆ ಮಗುವಿಗೆ ಶಿಕ್ಷಣ ಕೊಡುವಂತಾಗಬೇಕು. ಈ ಕೆಲಸವನ್ನು ಮೊದಲು ಐದು ವರ್ಷ ಈ ಸರಕಾರ ಮಾಡಲಿ. ಅನಂತರ ಇದೇ ಸರಕಾರ ಆಡಳಿತಕ್ಕೆ ಬರುವುದು ಖಚಿತ. ಆ ಐದು ವರ್ಷವೂ ಆ ಸರ್ಕಾರ ಇದೇ ರೀತಿ ಅನಾಥರಕ್ಷಕವಾಗಿ ಮುಂದುವರಿದರೆ ಆಚಂದ್ರಾರ್ಕವಾಗಿ ಆ ಸರಕಾರವೇ ಆಡಳಿತದಲ್ಲಿ ಇರುತ್ತದೆ. ಈ ಮಾತು ಸರಕಾರಕ್ಕೂ ಇರಲಿ, ಜನರ ಬುದ್ಧಿಗೂ ಬರುವಂತಾಗಲಿ. ಈ ಭಾಗ್ಯೋದಯದ ಸಾರಥ್ಯವನ್ನು ನಮ್ಮ ಶ್ರೀ ಯಡಿಯೂರಪ್ಪನವರೆ ನಿರ್ವಹಿಸುವಂತಾದರೆ ನನಗಷ್ಟೆ ಅಲ್ಲ, ಇಲ್ಲಿರುವವರಿಗಷ್ಟೆ ಅಲ್ಲ, ಕರ್ನಾಟಕದಲ್ಲಿರುವ, ಹೊರನಾಡಿನಲ್ಲಿರುವ ಕೋಟ್ಯಂತರ ಕನ್ನಡಿಗರಿಗೆ ಆನಂದವಾದೀತು.
ಜೈ ಕರ್ನಾಟಕ, ಜೈ ಹಿಂದ್
ಸಮ್ಮೇಳನಾಧ್ಯಕ್ಷರ ಭಾಷಣ (ಭಾಗ 4)
ದುರ್ಗದ ಚಿತ್ರಗಳನ್ನು ಕಣ್ತುಂಬಿಕೊಳ್ಳಿ
ಯಡ್ಡಿಯಿಂದ ದುರ್ಗದಲ್ಲಿ ಮತ್ತದೇ ಭಾಷಣ
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications