ಸಮ್ಮೇಳನಾಧ್ಯಕ್ಷರ ಭಾಷಣದ ಪೂರ್ಣಪಾಠ (ಭಾಗ 2)
(ಮುಂದುವರಿದಿದೆ...)
ಅದರ ಲಕ್ಷಣ ಆ ಕವಿರಾಜಮಾರ್ಗದ ಪ್ರಕಾರವೇ ಈ ಮುಂದಿನಂತಿದೆ:
"ನುಡಿಗೆಲ್ಲಂ ಸಲ್ಲದ ಕನ್ನಡದೊಳ್
ಚತ್ತಾಣಮುಂ ಬೆದಂಡೆಯುಮೆಂದು
ಈಗಡಿನ ನೆಗೞ್ತೆಯ ಕಬ್ಬದೊಳ್
ಒಡಂಬಡಂ ಮಾಡಿದರ್ ಪುರಾತನ ಕವಿಗಳ್"
(ಕವಿರಾಜಮಾರ್ಗ - 1-32)
"ಕಂದಂಗಳ್ ಅಲ್ಪಮಾಗಿರೆ
ಸುಂದರ ವೃತ್ತಂಗಳ್ ಅಕ್ಕರಂ ಚೌಪದಿ
ಮತ್ತಂ ದಲ್ ಗೀತಿಕೆ ತಿವದಿಗಳ್
ಅಂದಂಬೆತ್ತೆಸೆಯೆ ಪೇೞ್ದೊಡೆ
ಅದು ಚತ್ತಾಣಂ"
(ಕವಿರಾಜಮಾರ್ಗ 1-35)
ಕಂದಮುಂ ಅಮಳಿನ ವೃತ್ತಮುಮ್
ಒಂದೊಂದು
ಎಡೆಗೊಂದು ಜಾತಿ
ಜಾಣೆಸೆಯೆ ಬೆಡಂಗೊಂದಿ ಅವೞೊಳಮರೆ
ಪೇವಿಲ್ ಸುಂದರ ರೂಪಿಂ
ಬೆದಂಡೆಗಬ್ಬಮದಕ್ಕುಂ!
(ಕವಿರಾಜಮಾರ್ಗ 1-34)
ಜಾಣೆಸೆಯೆ ಬೆಡಂಗೊಂದಿ ಅವೞೊಳಮರೆ
ಪೇವಿಲ್ ಸುಂದರ ರೂಪಿಂ
ಬೆದಂಡೆಗಬ್ಬಮದಕ್ಕುಂ!
(ಕವಿರಾಜಮಾರ್ಗ 1-34)
* ಮೇಲಣ ಮೂರೂ ಪದ್ಯಗಳಿಗೆ ಕ್ರಮವಾಗಿ ಅರ್ಥ: ಈ ಪದ್ಯಕಾವ್ಯ ಪ್ರಕಾರದಲ್ಲೇ ನಮ್ಮ ಪುರಾತನ ಕವಿಗಳು ಕನ್ನಡಕ್ಕೇ ವಿಶಿಷ್ಟವಾದ ಚತ್ತಾಣ ಮತ್ತು ಬೆದಂಡೆ ಎಂಬ ಎರಡು ಕಾವ್ಯ ಪ್ರಕಾರಗಳನ್ನು ಅಂತರ್ಗತಗೊಳಿಸಿದರು (32). ಕೆಲವೇ ಕಂದಗಳಿದ್ದು ವೃತ್ತ ಅಕ್ಕರ ಚೌಪದಿ ಗೀತಿಕೆ ಮತ್ತು ತ್ರಿಪದಿಗಳು ಸಮರಸವಾಗಿ ಕೂಡಿಬಂದರೆ ಅದೇ "ಚತ್ತಾಣ". (35) ಒಂದೊಂದು ಕಂದ ಮತ್ತು ವೃತ್ತವೂ ಆ ಎರಡರ ನಡುವೆ ಒಂದು "ಜಾತಿ"ಯೂ ಸೇರಿಬಂದರೆ [ಅಥವಾ ಕಂದವೂ ವೃತ್ತವೂ ಒಂದೊಂದೆಡೆಗೆ ಒಂ[ದೊಂ]ದೂ - ಇವುಗಳ ಜೊತೆಗೆ "ಜಾತಿ"ಯೂ ಹೊಂದಿಕೊಂಡು ಬಂದರೆ ಅದೇ ಸುಂದರ ರೂಪಿನ ಬೆದಂಡೆ ಆಗುವುದು. (34)
ಕವಿರಾಜಮಾರ್ಗದ ಮೇಲಣ ಉಲ್ಲೇಖದಲ್ಲಿ ಅಸ್ಪಷ್ಟವಾದ ಭಾಗವೆಂದರೆ ಇಡಿಯಾಗಿ ಚತ್ತಾಣ ಮತ್ತು ಬೆದಂಡೆಗಳನ್ನು ಕುರಿತುದು. ಅದರೊಳಗೂ ಅಸ್ಪಷ್ಟತಮವಾದುದೆಂದರೆ ಈ "ಬೆದಂಡೆ" ಎಂಬುದನ್ನು ಕುರಿತ 34 ನೇ ಪದ್ಯ.ಅದರೊಳಗೂ ಅಸ್ಪಷ್ಟತಮವಾದುದೆಂದರೆ ಕಗ್ಗಂಟಿನಂತಹ ಅರ್ಥಗ್ರಂಥಿಯನ್ನು ಒಳಗೊಂಡಿರುವ "ಜಾತಿ" ಎಂಬ ಶಬ್ದ! ಆದುದರಿಂದಲೇ ಈ 34ನೇ ಕಂದಪದ್ಯ ಹುತ್ತದೊಳಗಣ ವೃತ್ತದಂತಿದ್ದು ನೆಲೆಗಾಣುವ ಪ್ರಯತ್ನ(ದಲ್ಲಿ) ಇದು ಸರ್ಪಕ್ಕೇ ಸವಾಲಿನಂತಿದೆ. ಈ ಬಗ್ಗೆ ತೀ.ನಂ.ಶ್ರೀ. ಯವರು ಈ ಸಂಬಂಧವಾಗಿ ಮಾಡಿರುವ ಸಂಶೋಧಿತ ನಿರ್ಣಯ ಈ ಮುಂದಿನಂತಿದೆ:
"ಈ ಜಾತಿ(ಬೆದಂಡೆ)ಯ ಕಾವ್ಯದಲ್ಲಿ ಸಂಖ್ಯಾವಿಭೇದಗಳನ್ನು ಬಿಟ್ಟರೆ ಒಂದು ಮುಖ್ಯಾಂಶ ಎದ್ದು ಕಾಣುತ್ತದೆ. ಇದರಲ್ಲಿ ಬರುವ ಛಂದಸ್ಸು ಎರಡೇ ಬಗೆಯದು : ಕಂದ, ಜೊತೆಗೆ ಯಾವುದಾದರೂ ಒಂದು ಪ್ರಸಿದ್ಧ ವೃತ್ತ. ಹೆಚ್ಚಿನ ವೈವಿಧ್ಯಕ್ಕೆ ಇಲ್ಲಿ ಅವಕಾಶವಿಲ್ಲ. ಅಂತೂ ಕವಿರಾಜಮಾರ್ಗ ಕಾವ್ಯಾವಲೋಕನ ಈ ಎರಡರ ಮತದಂತೆಯೂ ಬೆದಂಡೆಯಲ್ಲಿ ಕಂದಗಳೂ ನಡುನಡುವೆ ಒಂದೇ ಜಾತಿಯ ವೃತ್ತಗಳೂ ಸೇರಿ ಬಂದಿರಬೇಕೆಂದು ನಿರ್ಣಯಿಸಬಹುದು" (ಪ್ರಬುದ್ಧ ಕರ್ನಾಟಕ, ಸಂಪುಟ 44, ಸಂಚಿಕೆ 4, ಪುಟ 87-88) ಎಂದಿರುವರಾಗಿ ಪೂಜ್ಯ ತೀ.ನಂ.ಶ್ರೀ.ಯವರು ಕವಿರಾಜಮಾರ್ಗದ ಆ 34ನೇ ಕಂದಪದ್ಯದೊಳಗಣ ಜಾತಿ ಎಂಬ ಪದವು ವಿಧ ಎಂಬ ಸಾಮಾನ್ಯಾರ್ಥವಾಹಿಯಾಗಿರದೆ ಸಂಗೀತಶಾಸ್ತ್ರದ ಒಂದು ಪರಿಭಾಷೆಯಾಗಿದೆ ಎಂಬುದನ್ನು ಗುರುತಿಸಲಿಲ್ಲ. ಅವರು "ಜಾತಿ" ಎಂಬುದರ ಅರ್ಥಗ್ರಂಥಿಯನ್ನು ದೃಷ್ಟಿಸದೆ ಅದು ಬಿಡುವತ್ತ ಬಿಡಿಸದೆ ಮನ ಬಂದತ್ತ ಎಳೆಯನ್ನು ತುಯ್ದೆಳೆದರು. ಫಲಿತಾಂಶ: ಅದು ಕಗ್ಗಂಟಾಯಿತು.
ಪ್ರಸ್ತುತ 34ನೇ ಕಂದಪದ್ಯದ ಪ್ರಕಾರ "ಬೆದಂಡೆಯಲ್ಲಿ ಕಂದಗ ಜೊತೆಗೆ ಬಳಸುವ ವೃತ್ತಗಳಲ್ಲಿ ವೈವಿಧ್ಯವಿರಬೇಕೇ ಬೇಡವೇ ಎಂಬುದಲ್ಲ ವಿಚಾರಣೀಯ ಅಂಶ! ಬೆದಂಡೆಗಬ್ಬದಲ್ಲಿ ಇರಬೇಕಾದುದು ಕಂದ ಮತ್ತು ವೃತ್ತಗಳು ಮಾತ್ರವೋ? ಜೊತೆಗೆ ಮೂರನೆಯದಾಗಿ (ಆ ನಡುವೆ) "ಜಾತಿ" ಎಂಬುದೂ ಇರಬೇಡವೋ? ಇರುವುದಾದರೆ ಆ "ಜಾತಿ" ಎಂಬುದರ ಪರಿಭಾಷೆ (=ಸ್ವರೂಪ) ಏನು ಎಂಬುದು!
ಕವಿರಾಜಮಾರ್ಗದ ಪ್ರಕಾರ ಚತ್ತಾಣ ಬೆದಂಡೆ ಎಂಬ ಎರಡು ಪದ್ಯಕಾವ್ಯಪ್ರಕಾರಗಳಲ್ಲೂ ಕಂದ ವೃತ್ತಗಳಿರಬೇಕೆನ್ನುವುದು ಸಮಾನಾಂಶ. ಹೀಗಿರುವಲ್ಲಿ ಕಂದವೃತ್ತಗಳ ಜೊತೆಗೆ ಅಕ್ಕರ ಚೌಪದಿ ಗೀತಿಕೆ ತ್ರಿಪದಿಗಳು ಸೇರ್ಪಡೆಯಾಗಿದ್ದರೆ "ಚತ್ತಾಣ"ವೆನಿಸಿ - ಆ ಅಕ್ಕರ ಚೌಪದಿ ಗೀತಿಕೆ ತ್ರಿಪದಿಗಳಿಗೆ ಬದಲಾಗಿ "ಜಾತಿ" ಎಂಬುದು ಸೇರ್ಪಡೆಯಾಗಿದ್ದರೆ "ಬೆದಂಡೆ" ಎನಿಸಿಕೊಳ್ಳುವುದೆಂಬುದು ಕವಿರಾಜಮಾರ್ಗಕಾರನ 1-34 ನೇ ಮಾತಿನ ಮುಖ್ಯಾರ್ಥ!
ಹಾಗಾದರೆ ಚತ್ತಾಣದಿಂದ ಬೆದಂಡೆಯನ್ನು ಬೇರ್ಪಡಿಸುವ ವಿಶಿಷ್ಟಾಂಶವಾದ "ಜಾತಿ" ಎಂದರೇನು? ಈಗ ಅದರತ್ತ ನಮ್ಮ ವಿಚಾರವನ್ನು ಹೊರಳಿಸಬಹುದು: ನೇಮಿಚಂದ್ರನ ಒಂದು ಪದ್ಯವನ್ನು ನೋಡಿರಿ : ಲೀಲಾವತಿಯ ಬಳಿಗೆ ಅವಳ ಪ್ರಿಯತಮನಾದ ಕಂದರ್ಪನನ್ನು ಕರೆತಂದ ಪರಿಯನ್ನು ವರ್ಣಿಸಿರುವ ಸಂದರ್ಭವದು:
| ಸಮ್ಮೇಳನಾಧ್ಯಕ್ಷರ ಭಾಷಣ (ಭಾಗ 1) | ಸಮ್ಮೇಳನಾಧ್ಯಕ್ಷರ ಭಾಷಣ (ಭಾಗ 3) |












Click it and Unblock the Notifications