Get Updates
Get notified of breaking news, exclusive insights, and must-see stories!

ರೈತರ ಆತ್ಮಹತ್ಯೆ, ಖಾಲಿ ಹುದ್ದೆಗಳ ಭರ್ತಿ: ಸದನದಲ್ಲಿ ಚರ್ಚೆಗೆ ಅವಕಾಶ ಕೋರಿ ಸಭಾಪತಿಗೆ ಬಿಜೆಪಿ ಪತ್ರ

ಬೆಂಗಳೂರು: ರಾಜ್ಯದ ಆಡಳಿತ ಯಂತ್ರದ ಸಂಪೂರ್ಣ ಕುಸಿತ ಹಾಗೂ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಧೋರಣೆಗಳನ್ನು ಖಂಡಿಸಿ ನಾಡಿನ ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಸದನದಲ್ಲಿ "ತುರ್ತು ಚರ್ಚೆ"ಗೆ ಅವಕಾಶ ಕೋರಿ ಕರ್ನಾಟಕ ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕರಾದ ಛಲವಾದಿ ಟಿ. ನಾರಾಯಣಸ್ವಾಮಿ ಅವರು ಸಭಾಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.

ವಿಧಾನ ಪರಿಷತ್ತಿನ ಅಧಿವೇಶನವು ನಡೆಯುತ್ತಿರುವ ಈ ಸಂದರ್ಭದಲ್ಲಿ, ವಿರೋಧ ಪಕ್ಷದ ನಾಯಕನಾಗಿ ರಾಜ್ಯದ ಸದ್ಯದ ದುಸ್ಥಿತಿಯನ್ನು ನಿಮ್ಮ ಗಮನಕ್ಕೆ ತರುವುದು ನನ್ನ ಕರ್ತವ್ಯವೆಂದು ಭಾವಿಸುತ್ತೇನೆ. ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದ ದಿನದಿಂದಲೂ ಕೇವಲ ರಾಜಕೀಯ ದ್ವೇಷ ಸಾಧನೆಯಲ್ಲೇ ಮಗ್ನವಾಗಿದ್ದು, ರಾಜ್ಯದ ಅಭಿವೃದ್ಧಿ ಮತ್ತು ಜನರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಬಲಿಕೊಟ್ಟಿದೆ. ಸರ್ಕಾರದ ಆಡಳಿತ ವ್ಯವಸ್ಥೆಯು ಸಂಪೂರ್ಣವಾಗಿ ಕುಸಿದುಬಿದ್ದಿದ್ದು, ಜನಸಾಮಾನ್ಯರು ಅಕ್ಷರಶಃ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ತಪ್ಪಾಗಲಾರದು ಆದ್ದರಿಂದ ಸದನದ ಈ ವಿಶೇಷ ಅಧಿವೇಶನವು ಕೇವಲ ಔಪಚಾರಿಕವಾಗದೆ, ರಾಜ್ಯದ ಸಂಕಷ್ಟಗಳ ಚರ್ಚೆಯ ವೇದಿಕೆಯಾಗಬೇಕಿದೆ.

Karnataka Bjp Writes Speaker Seeking An Urgent Debate On Administrative Machinery Collapsed In State

ಈ ಅತ್ಯುನ್ನತ ಸದನವು ಕೇವಲ ರಾಜಕೀಯ ಮೇಲಾಟಗಳಿಗೆ ಅಥವಾ ಪರಸ್ಪರ ದ್ವೇಷ ತೀರಿಸಿಕೊಳ್ಳುವ ವೇದಿಕೆಯಾಗಬಾರದು ಎನ್ನುವುದು ನಾಡಿನ ಜನರ ಆಶಯವಾಗಿದೆ. ಪ್ರಸ್ತುತ ರಾಜ್ಯದಲ್ಲಿ ಜನಸಾಮಾನ್ಯರು ಅನುಭವಿಸುತ್ತಿರುವ ಕಷ್ಟಕಾರ್ಪಣ್ಯಗಳು ಅಕ್ಷರಶಃ ಹೇಳತೀರದಾಗಿವೆ. ಆಡಳಿತ ವ್ಯವಸ್ಥೆಯು ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಈ ಸಂದರ್ಭದಲ್ಲಿ, ಕೆಳಕಂಡ ವಿಷಯಗಳ ಕುರಿತು ಆದ್ಯತೆಯ ಮೇರೆಗೆ ಚರ್ಚೆ ನಡೆಸಲು ತಾವು ಅನುಮತಿ ನೀಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

ಕೃಷಿ ವಲಯದ ಆಕ್ರಂದನ ಮತ್ತು ರೈತರ ಆತ್ಮಹತ್ಯೆಗಳು

ರಾಜ್ಯದಲ್ಲಿ ಅನ್ನದಾತರು ಅನಾಥರಾಗಿದ್ದಾರೆ. ಹವಾಮಾನ ವೈಪರೀತ್ಯ, ಬೆಳೆಹಾನಿ ಮತ್ತು ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಸಾಲದ ಬಾಧೆ ತಾಳಲಾರದೆ ಪ್ರತಿ ಜಿಲ್ಲೆಯಲ್ಲೂ ರೈತರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರವು ಪರಿಹಾರ ವಿತರಿಸುವಲ್ಲಿ ತಾರತಮ್ಯ ಮಾಡುತ್ತಿದೆ. ಕೃಷಿ ಇಲಾಖೆಯು ಕೇವಲ ಕಾಗದದ ಮೇಲೆ ಮಾತ್ರ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಸರ್ಕಾರದ ಸ್ಪಂದನೆ ಈ ವಿಷಯದಲ್ಲಿ ಶೂನ್ಯವಾಗಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ. ಅನ್ನದಾತರಿಗೆ ನೆರವಾಗಲು ರಾಜ್ಯ ಸರ್ಕಾರ ಹಾಕಿಕೊಂಡಿರುವ ಯೋಜನೆಗಳೇನು ಎಂಬ ಬಗ್ಗೆ ಗಂಭೀರ ಚರ್ಚೆಯಾಗಬೇಕಿದೆ.

SCSP/TSP ಅನುದಾನದ ಲೂಟಿ ಮತ್ತು ಸಾಮಾಜಿಕ ಅನ್ಯಾಯ

ಪರಿಶಿಷ್ಟ ವರ್ಗಗಳ ಏಳಿಗೆಗೆ ಮೀಸಲಿಟ್ಟಿದ್ದ SCSP/TSP ಯೋಜನೆಯ 39,000 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ರಾಜ್ಯ ಸರ್ಕಾರವು ಅಕ್ರಮವಾಗಿ ತನ್ನ 'ಗ್ಯಾರಂಟಿ' ಯೋಜನೆಗಳಿಗೆ ವರ್ಗಾಯಿಸಿದೆ. ಇದು ಸಂವಿಧಾನಬದ್ಧವಾಗಿ ಪರಿಶಿಷ್ಟ ವರ್ಗಗಳಿಗೆ ಸಿಗಬೇಕಾದ ಹಕ್ಕನ್ನು ಕಿತ್ತುಕೊಂಡಂತಾಗಿದ್ದು, ಸಾಮಾಜಿಕ ನ್ಯಾಯದ ಕತ್ತು ಹಿಸುಕಿದಂತಾಗಿದೆ. ಈ ಅನುದಾನವು ಅವರ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಕ್ಕೆ ಬಳಕೆಯಾಗಬೇಕಿತ್ತು. ಈ ಅಕ್ರಮ ವರ್ಗಾವಣೆಯ ಕುರಿತು ಶ್ವೇತಪತ್ರ ಹೊರಡಿಸಬೇಕು. ಇದು ಸಂವಿಧಾನ ವಿರೋಧಿ ನಡಯಾಗಿದೆ.

ನಿಗಮ ಮಂಡಳಿಗಳ ನಿಷ್ಕ್ರಿಯತೆ

ರಾಜ್ಯದ ವಿವಿಧ ಅಭಿವೃದ್ಧಿ ನಿಗಮಗಳಿಗೆ ರಾಜ್ಯ ಸರ್ಕಾರದಿಂದ ಅನುದಾನ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ ಹಾಗೂ ಅನುದಾನ ಕಡಿತವಾಗಿದೆ. ಇದರಿಂದ ಜನಕಲ್ಯಾಣ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ.

ಹದಗೆಟ್ಟ ಕಾನೂನು ಸುವ್ಯವಸ್ಥೆ ಮತ್ತು ಡ್ರಗ್ಸ್ ಮಾಫಿಯಾ

ರಾಜ್ಯದಲ್ಲಿ ಕೊಲೆ, ಸುಲಿಗೆ, ಟಾರ್ಗೆಟ್ ರಾಜಕಾರಣ, ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ಮೇಲೆ ದೌರ್ಜನ್ಯ, ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗಿರುವುದು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಮಿತಿಮೀರಿವೆ. ಪೊಲೀಸ್ ಇಲಾಖೆಯು ಆಡಳಿತ ಪಕ್ಷದ ಕೈಗೊಂಬೆಗಳಂತೆ ವರ್ತಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ರಾಜ್ಯದಲ್ಲಿ ಇಂದು ಜನಸಾಮಾನ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಡ್ರಗ್ಸ್ ಜಾಲವು ಯುವಜನತೆಯನ್ನು ಬಲಿ ತೆಗೆದುಕೊಳ್ಳುತ್ತಿದೆ

ಅಕ್ರಮ ವಲಸಿಗರು

ರಾಜ್ಯದ ಗಡಿ ಭಾಗಗಳಲ್ಲಿ ಮತ್ತು ನಗರ ಪ್ರದೇಶಗಳಲ್ಲಿ ಅಕ್ರಮ ವಲಸಿಗರ ಸಂಖ್ಯೆ ಸ್ಫೋಟಕವಾಗಿ ಹೆಚ್ಚುತ್ತಿದೆ, ಇದು ರಾಷ್ಟ್ರೀಯ ಭದ್ರತೆಗೇ ಸವಾಲಾಗಿದೆ. ಅಕ್ರಮ ವಲಸಿಗರ ಹಾವಳಿಯಿಂದ ರಾಜ್ಯದ ಭದ್ರತೆಗೇ ಧಕ್ಕೆ ಬಂದಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ.

ಸಂಪೂರ್ಣ ಕುಸಿದ ಮೂಲಭೂತ ಸೌಕರ್ಯಗಳು

ರಸ್ತೆ ಗುಂಡಿಗಳ ಸಾಮ್ರಾಜ್ಯ: ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ರಸ್ತೆಗಳು ಮೃತ್ಯುಕೂಪಗಳಾಗಿವೆ. ಗ್ರಾಮೀಣ ರಸ್ತೆಗಳ ನಿರ್ಮಾಣ ಮತ್ತು ದುರಸ್ತಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ನಕಲಿ ಬಿಲ್ಲುಗಳ ಹಾವಳಿ ಹೆಚ್ಚಿದೆ. ವಸತಿ ಯೋಜನೆಯ ಶೂನ್ಯ ಸಾಧನೆ: ಬಡಜನರಿಗೆ ಮನೆ ನೀಡುವ ಘೋಷಣೆಗಳು ಕೇವಲ ಜಾಹೀರಾತುಗಳಿಗೆ ಸೀಮಿತವಾಗಿವೆ. ಲಕ್ಷಾಂತರ ಅರ್ಜಿಗಳು ಧೂಳು ಹಿಡಿಯುತ್ತಿವೆ. ಸರ್ಕಾರದ ಕಾರ್ಯಕ್ರಮಗಳಿಗೆ ದುಂದು ವೆಚ್ಚ ಮಾಡುತ್ತಿದ್ದಾರೆ. ಕುಡಿಯುವ ನೀರಿನ ಹಾಹಾಕಾರ: 'ಜಲಜೀವನ್ ಮಿಷನ್' ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಗ್ರಾಮೀಣ ಭಾಗದಲ್ಲಿ ಹನಿ ನೀರಿಗೂ ಪರದಾಡುವ ಸ್ಥಿತಿ ಇದೆ.

ಸಾರ್ವಜನಿಕ ಸೇವೆಗಳು ಮತ್ತು ನಿರುದ್ಯೋಗ

ಖಾಲಿ ಹುದ್ದೆಗಳ ಭರ್ತಿ: ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಬ್ಯಾಕ್ಲ್ಯಾಗ್ ಹುದ್ದೆಗಳು ಹಾಗೂ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ಯಾವುದೇ ನೇಮಕಾತಿ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳುತ್ತಿಲ್ಲ. ಇದರಿಂದ ಆಡಳಿತ ಯಂತ್ರ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ. ಸಾರ್ವಜನಿಕರ ಕೆಲಸವು ವಿಳಂಬವಾಗುತ್ತಿವೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 2.8 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಅರ್ಹ ಯುವಕರು ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ, ಆದರೆ ಸರ್ಕಾರವು ಹೊಸ ನೇಮಕಾತಿ ಮಾಡದೆ ಕಾಲಹರಣ ಮಾಡುತ್ತಿದೆ. ಇದರಿಂದ ಆಡಳಿತ ಯಂತ್ರವು ಮಂದಗತಿಯಲ್ಲಿ ಸಾಗುತ್ತಿದೆ. ಸರ್ಕಾರವು ಕೇವಲ ಭರವಸೆಗಳನ್ನು ನೀಡುತ್ತಿದೆಯೇ ಹೊರತು ನೇಮಕಾತಿ ಮಾಡುತ್ತಿಲ್ಲ.

ಶಿಕ್ಷಣ ಮತ್ತು ಆರೋಗ್ಯ: ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಮತ್ತು ಔಷಧಿಗಳ ಲಭ್ಯತೆಯಿಲ್ಲದೆ ಬಡವರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವಂತಾಗಿದೆ. ಸರ್ಕಾರಿ ಆಸ್ಪತ್ರೆಗಳು ಕೇವಲ ರೆಫರಲ್ ಆಸ್ಪತ್ರೆಗಳಾಗಿ ಬದಲಾಗಿದ್ದು, ಬಡವರಿಗೆ ಉಚಿತ ಔಷಧಿ ಮತ್ತು ಚಿಕಿತ್ಸೆ ಸಿಗದಂತಾಗಿದೆ. ಆಸ್ಪತ್ರೆಗಳಿಗೆ ಬರದೆ ಕಾಯಿಲೆಗಳಿಂದ ನರಳಿ ಸಾಯುವವರ ಸಂಖ್ಯೆಯೂ ಸಹ ಕಡಿಮೆ ಏನೂ ಇಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ ʼಚಿಕಿತ್ಸೆʼ ನೀಡಬೇಕಾದ ಅವಶ್ಯಕತೆ ನಿರ್ಮಾಣವಾಗಿದೆ.

ಹಾಸ್ಟೆಲ್ಗಳ ಸಮಸ್ಯೆಗಳು : ಪರಿಶಿಷ್ಟ ಜಾತಿ ವಿದ್ಯಾರ್ಥಿ ನಿಲಯಗಳನ್ನು ಬಹಳ ಅಮಾನುಷವಾಗಿ ನಡೆಸಿಕೊಳ್ಳುತ್ತಿರುವ ಈ ಸರ್ಕಾರವು ತೆರಿಗೆದಾರರ ಹಣವನ್ನು ಸರಿಯಾಗಿ ಉಪಯೋಗಿಸದೇ, ಪೋಲು ಮಾಡುತ್ತಾ ದೀರ್ಘಕಾಲಿಕವಾಗಿ ಬಹಳ ಕೆಳ ಮಟ್ಟದಲ್ಲಿ ವಿದ್ಯಾರ್ಥಿನಿಲಯಗಳ ವ್ಯವಸ್ಥೆಯನ್ನು ಹಾಳುಮಾಡುತ್ತಿದೆ. ಹಾಸ್ಟೆಲ್ಗಳನ್ನು ಉನ್ನತ ಮಟಕ್ಕೆ ಏರಿಸಲು ಸರ್ಕಾರವು ಕಾರ್ಯೋನ್ಮುಖವಾಗಬೇಕಾಗಿದೆ. ವಿದ್ಯಾರ್ಥಿಗಳನ್ನು ಕನಿಷ್ಠ ಮಾನವೀಯವಾಗಿ ನಡೆಸಿಕೊಳ್ಳಬೇಕಿದೆ.

ಬೆಲೆ ಏರಿಕೆ ಮತ್ತು ಆರ್ಥಿಕ ಹೊರೆ:ವಿವಿಧ ವಲಯಗಳಲ್ಲಿ ತೆರಿಗೆ ಮತ್ತು ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಆಡಳಿತ ಯಂತ್ರವು ಜನಪರವಾಗಿ ಕೆಲಸ ಮಾಡುವ ಬದಲು ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ.

ಬಸ್ಗಳ ಸಮಸ್ಯೆ: ವಿದ್ಯಾರ್ಥಿಗಳಿಗೆ ಮತ್ತು ಗ್ರಾಮೀಣ ಜನರಿಗೆ ಸರಿಯಾದ ಸಮಯಕ್ಕೆ ಬಸ್ಗಳಿಲ್ಲ. ಇರುವ ಬಸ್ಗಳು ಗುಜರಿ ಸೇರುತ್ತಿವೆ. ಉತ್ತರ ಕರ್ನಾಟಕಕ್ಕೆ ಹಾಗೂ ಗ್ರಾಮೀಣ ಪ್ರಾಂತ್ಯಕ್ಕೆ ಹೊಸ ಬಸ್ಗಳ ವ್ಯವಸ್ಥೆ ಮಾಡಬೇಕಿದೆ.

ಬೆಲೆ ಏರಿಕೆ ಮತ್ತು ಆರ್ಥಿಕ ದಿವಾಳಿತನ: ತೆರಿಗೆಗಳ ಏರಿಕೆ, ಸಾರಿಗೆ ದರ ಹೆಚ್ಚಳದ ಪ್ರಸ್ತಾಪ ಮತ್ತು ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಜನರ ಜೀವನ ದುಸ್ತರವಾಗಿದೆ. ಸರ್ಕಾರದ ಖಜಾನೆ ಖಾಲಿಯಾಗಿದ್ದು, ರಾಜ್ಯವು ಆರ್ಥಿಕ ದಿವಾಳಿತನದತ್ತ ಸಾಗುತ್ತಿದೆ. ಸರ್ಕಾರದ ಖಜಾನೆ ಖಾಲಿಯಾಗಿದ್ದು, ಲೋಕೋಪಯೋಗಿ, ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಇನ್ನಿತರ ಪ್ರಮುಖ ಇಲಾಖೆಗಳಿಗೆ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೆ ಇಲಾಖೆಗಳು ಸ್ತಬ್ಧಗೊಂಡಿವೆ. ವೇತನ ನೀಡುವ ಇಲಾಖೆಗಳಾಗಿ ಮಾತ್ರ ಮಾರ್ಪಟ್ಟಿವೆ.

ಪ್ರಸ್ತುತ ರಾಜ್ಯ ಸರ್ಕಾರವು "ಗ್ಯಾರಂಟಿಗಳ ಗುಂಗಿನಲ್ಲಿ" ಮುಳುಗಿ ಹೋಗಿದ್ದು, ತನ್ನ ಸಂವಿಧಾನಬದ್ಧವಾದ ಮಹತ್ತರ ಕಾರ್ಯಗಳನ್ನು ಸಂಪೂರ್ಣವಾಗಿ ಮರೆತಿದೆ. "ಸಾಲದಲ್ಲಿ ಶೂಲ" ಎನ್ನುವಂತೆ, ಈ ಸರ್ಕಾರವು ಅಭಿವೃದ್ಧಿ ಕಾರ್ಯಗಳಿಗಾಗಿ ಹಣವಿಲ್ಲದೆ ವರ್ಷಕ್ಕೆ ಒಂದು ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲವನ್ನು ಮಾಡುತ್ತಿದೆ. ಕೇವಲ ದಿನಗಳನ್ನು ದೂಡಲು 'ಸಾಲ'ವನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಈ ಸರ್ಕಾರದ ನಡೆ ರಾಜ್ಯವನ್ನು ಆರ್ಥಿಕ ಅಧೋಗತಿಗೆ ತಳ್ಳುತ್ತಿದೆ.

ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಮತದಾರರನ್ನು ಯಾಮಾರಿಸಲು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಪ್ರಸ್ತುತ ತನ್ನದೇ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಭರವಸೆಗಳಲ್ಲಿ ಕನಿಷ್ಠ ಶೇ. 5 ರಷ್ಟು ಸಹ ಜಾರಿಗೆ ತಂದಿರುವುದಿಲ್ಲ. ಕೇವಲ ಸರ್ಕಾರವು ತನ್ನ 2.5 ವರ್ಷ ಅವಧಿಯನ್ನು ಪೂರೈಸಿದೆಯೇ ಹೊರತು ರಾಜ್ಯದ ಅಭಿವೃದ್ಧಿ ಕಡೆಗೆ ಕಿಂಚಿತ್ತೂ ಕಾರ್ಯೋನ್ಮುಖವಾಗಿಲ್ಲ. ಒಂದು ರೀತಿಯಲ್ಲಿ ಈ ಚುನಾವಣಾ ಪ್ರಣಾಳಿಕೆಯು ಮತದಾರರನ್ನು ಯಾಮಾರಿಸಲು ರಚಿಸಿದ ಸುಳ್ಳು ಭರವಸೆಗಳ ಪಟ್ಟಿ. ಒಟ್ಟಿನಲ್ಲಿ ಸರ್ಕಾರದ ನೈತಿಕ ಅಧಃಪತನ ಮತ್ತು ಸಂಪೂರ್ಣ ಆಡಳಿತಾತ್ಮಕ ವೈಫಲ್ಯ ಎದ್ದು ಕಾಣುತ್ತಿದೆ.

ಮೇಲಿನ ಎಲ್ಲಾ ಸಮಸ್ಯೆಗಳು ರಾಜ್ಯದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಕಳವಳಕಾರಿಯಾಗಿವೆ. ನಾವು ವಿರೋಧ ಪಕ್ಷವಾಗಿ ಕೇವಲ ರಾಜಕೀಯ ಮಾಡಲು ಇಲ್ಲಿ ಬಂದಿಲ್ಲ; ರಾಜ್ಯದಲ್ಲಿ ಇಂದು ಜನಪರ ಆಡಳಿತ ಮರೀಚಿಕೆಯಾಗಿದೆ. ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. GBA ಸಮಸ್ಯೆಗಳು, ರಸ್ತೆ ಗುಂಡಿಗಳ ಹಾವಳಿ ಮತ್ತು ಕುಡಿಯುವ ನೀರಿನ ಸಮಸ್ಯೆಗಳಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಈ ಸರ್ಕಾರ ಭಯಪಡುತ್ತಿದೆ. ಈ ಅಧಿವೇಶನವು ಕೇವಲ ಸರ್ಕಾರದ ಗುಣಗಾನಕ್ಕೆ ಸೀಮಿತವಾಗಬಾರದು. ವಿರೋಧ ಪಕ್ಷವಾಗಿ ನಾವು ರಾಜ್ಯದ ಜನರ ನೋವಿಗೆ ಧ್ವನಿಯಾಗಲು ಬಯಸುತ್ತೇವೆ.

ಆದ್ದರಿಂದ, ಗೌರವಾನ್ವಿತ ಸಭಾಪತಿಗಳಾದ ತಾವು ಈ ವಿಶೇಷ ಅಧಿವೇಶನದಲ್ಲಿ ರಾಜಕೀಯ ದ್ವೇಷದ ಚರ್ಚೆಗಳಿಗಿಂತ ಮಿಗಿಲಾಗಿ ಈ "ಜ್ವಲಂತ ಸಮಸ್ಯೆಗಳ" ಚರ್ಚೆಗೆ ಹೆಚ್ಚಿನ ಸಮಯ ಮೀಸಲಿಡಬೇಕು ಮತ್ತು ಸರ್ಕಾರದಿಂದ ತಕ್ಷಣದ ಉತ್ತರದ ಜೊತೆಗೆ ಪರಿಹಾರವನ್ನು ಒದಗಿಸಬೇಕು.

ಈ "ಜ್ವಲಂತ ಸಮಸ್ಯೆಗಳ" ಕುರಿತು ಚರ್ಚಿಸಲು ಮತ್ತು ಜನರಿಗೆ ನ್ಯಾಯ ಒದಗಿಸಲು ಯುದ್ಧೋಪಾದಿಯಲ್ಲಿ ಆದ್ಯತೆ ನೀಡಬೇಕು. ಈ ಮೂಲಕ ಸರ್ಕಾರದ ವೈಫಲ್ಯಗಳನ್ನು ತಿದ್ದಿ, ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಮಹತ್ಕಾರ್ಯಕ್ಕೆ ತಾವು ಅವಕಾಶ ನೀಡಬೇಕೆಂದು, ಈ ಎಲ್ಲಾ ಸಮಸ್ಯೆಗಳ ಕುರಿತು ಚರ್ಚಿಸಲು ಮತ್ತು ಸರ್ಕಾರದಿಂದ ಸ್ಪಷ್ಟ ಉತ್ತರ ಹಾಗೂ ಪರಿಹಾರ ಪಡೆಯಲು ತಾವು ಆದ್ಯತೆಯ ಮೇಲೆ ಅವಕಾಶ ಮಾಡಿಕೊಡಬೇಕೆಂದು ನಾನು ಒತ್ತಾಯಪೂರ್ವಕವಾಗಿ ಗೌರವಾನ್ವಿತರಾದ ತಮ್ಮಲ್ಲಿ ಮನವಿಯನ್ನು ಸಲ್ಲಿಸುತ್ತಿದ್ದೇನೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+