ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐ ಫೋನ್ ಸೃಷ್ಟಿಸಿದವನ ಬದುಕೇ ಒಂದು ಮಾದರಿ

By Staff
|
Google Oneindia Kannada News

Steve Jobs
'ಹೆಂಡತಿಯನ್ನು ಬಿಟ್ಟು ವಾರಗಟ್ಟಲೆ ಇರಬಹುದು.ಆದರೆ ಮೊಬೈಲ್ ಬಿಟ್ಟು ಅರ್ಧ ದಿನ ಸಹ ಇರಲಾಗುವುದಿಲ್ಲ' ಎಂದು ಹಿಂದೊಮ್ಮೆ ವಕ್ರತುಂಡೋಕ್ತಿ ಬರೆದಿದ್ದೆ. 'ಹೆಂಡತಿ ಕಳೆದುಹೋದರೆ ಸಿಗುತ್ತಾಳೆ, ಆದರೆ ಮೊಬೈಲ್ ಹಾಗಲ್ಲ' ಎಂಬುದು ಮತ್ತೊಂದು ವಕ್ರತುಂಡೋಕ್ತಿ. ಆದರೆ ನೀವೇನಾದರೂ ಆಪಲ್ ಕಂಪನಿಯ ಐಫೋನ್ ಬಳಸುತ್ತಿದ್ದರೆ ಮೇಲಿನ ವಕ್ರತುಂಡೋಕ್ತಿಯನ್ನು ತುಸು ಹೀಗೆ ಬದಲಿಸಬಹುದು 'ಹೆಂಡತಿ ಬಿಟ್ಟು ವಾರಗಟ್ಟಲೆ ಇರಬಹುದು.ಆದರೆ ಐಫೋನ್ ಬಿಟ್ಟು ಒಂದು ಗಂಟೆ ಇರಲಾಗುವುದಿಲ್ಲ ಹಾಗೂ ಹೆಂಡತಿ ಕಳೆದುಹೋಗುವುದಿಲ್ಲ, ಆದರೆ ಐಫೋನ್ ಕಳೆದುಹೋದರೆ ಸಿಗುವುದಿಲ್ಲ.

*ವಿಶ್ವೇಶ್ವರ ಭಟ್

' ಐಫೋನನ್ನು ನಾನು ಕಳೆದ ಒಂದು ವರ್ಷದಿಂದ ಬಳಸುತ್ತಿದ್ದೇನೆ. ಅಂದಿನಿಂದ ನಾನು ಮಾಡಲು ಏನೂ ಕೆಲಸವಿಲ್ಲದೇ ಎರಡು ನಿಮಿಷ ಸಹ ಸುಮ್ಮನೆ ಹಾಳು ಮಾಡಿದ್ದಿಲ್ಲ ಅಂದ್ರೆ ಅತಿಶಯೋಕ್ತಿ ಅಲ್ಲ, ಅದನ್ನು ದಯವಿಟ್ಟು ನಂಬಬೇಕು.ಅಷ್ಟರಮಟ್ಟಿಗೆ ಅದು ನನ್ನ ಜೀವನದ ಹಾಗೂ ದೇಹದ ಒಂದು
ಭಾಗವೇ ಆಗಿದೆ. ಎಲ್ಲ ಮೊಬೈಲ್ ಫೋನ್‌ಗಳೂ ಇಂಥದೇ ಅನುಭವ ಕೊಡಲಿಕ್ಕಿಲ್ಲ. ಆದರೆ ಐಫೋನ್ ನಿಮ್ಮ ಕೈಯಲ್ಲಿದ್ದರೆ, ನಿಮಗೆ ನೀರಸ ಕ್ಷಣಗಳೆಂಬುದೇ ಇಲ್ಲ. ಬುದ್ಧಿಗೆ ಕಸರತ್ತು ನೀಡುವ ಗೇಮ್ಸ್‌ಗಳಿಂದ ಹಿಡಿದು ಐದುಸಾವಿರ ಪುಟಗಳ ಡಿಕ್ಷನರಿಯನ್ನು ಸಹ ಓದುತ್ತಾ ಹೋಗಬಹುದು. ಕುಳಿತಲ್ಲಿಂದಲೇ ಭಾರತದಲ್ಲಿ ಸಂಚರಿಸುವ ಎಲ್ಲ ರೈಲುಗಳ ಚಲನವಲನ ಗಮನಿಸಬಹುದು. ಬೆಂಗಳೂರಿನಿಂದ ಹೊರಟ ರೈಲು ಶಿವಮೊಗ್ಗ ತಲುಪುವ ಮುನ್ನ ಯಾವ ಯಾವ ಸ್ಟೇಶನ್‌ಗೆ ಎಷ್ಟು ಹೊತ್ತಿಗೆ ಬರುತ್ತದೆಂಬುದನ್ನು ಅಂಗೈಯಲ್ಲಿ ಮೂಡಿದ ರೇಖೆಗಳಷ್ಟೇ ಸ್ಪಷ್ಟವಾಗಿ ತಟ್ಟನೆ ಹೇಳಬಹುದು. ವಿಮಾನ ಹಾರಾಟದ ಸಮಯವನ್ನೂ ಕುಳಿತಲ್ಲಿಂದಲೇ ಖಚಿತಪಡಿಸಿಕೊಳ್ಳಬಹುದು.

ಬೋರಾದರೆ ನಿಮ್ಮ ಐಫೋನ್‌ನಲ್ಲಿ ತಬಲಾ ಬಾರಿಸಬಹುದು, ಕೊಳಲು ನುಡಿಸಬಹುದು, ಹಾರ್ಮೋನಿಯಂ ಪೆಟ್ಟಿಗೆಯಂತೆ ಬಳಸಬಹುದು. ಗೊತ್ತು, ಪರಿಚಯ ಇಲ್ಲದ ಊರಿಗೆ ಹೋದಾಗ ಐಫೋನ್ ಕೈಯಲ್ಲಿದ್ದರೆ ಗೈಡ್ ಜತೆಯಲ್ಲಿದ್ದಂತೆ. ಇನ್ನುಳಿದಂತೆ ಇಮೇಲ್, ಹಾಡು, ಕೆಮರಾ ಮಾಮೂಲಿ. ಗೂಗಲ್ ಅರ್ಥ್, ಸ್ಟಾಕ್‌ರೇಟ್, ಜಗತ್ತಿನ ಯಾವುದೇ ಊರಿನ ಸಮಯ, ಹವಾಮಾನವನ್ನೆಲ್ಲ ಅರೆಕ್ಷಣದಲ್ಲಿ ತಿಳಿಯಬಹುದು. ಐಫೋನ್‌ಗೆ ಮಿತಿ ಎಂಬುದೇ ಇಲ್ಲ. ಅದೊಂದು ಪುಟ್ಟ ವಿಸ್ಮಯ! ಅದ್ಭುತ ವಂಡರ್! ಐಫೋನ್ ಹೊಂದಿಯೂ ನಿಮಗೆ ಬೋರ್ ಆಗುತ್ತಿದೆಯೆಂದರೆ ನಿಮ್ಮಲ್ಲಿ ಏನೋ ದೋಷವಿದೆ ಎಂದರ್ಥ. ಅದು ಎಲ್ಲಾ, ಏನೆಲ್ಲಾ, ಸಕಲವೂ ಹೌದು. ಐಫೋನ್‌ನ ಯಾವುದಾದರೂ ಮಾಡೆಲ್ ತೆಗೆದುಕೊಳ್ಳಿ, ಅದು ಔಟ್‌ಡೇಟೆಡ್ ಆಯಿತು ಎಂಬುದಿಲ್ಲ, ನೋಕಿಯಾ ಫೋನಿನಂತೆ. ಹಳತಾದಂತೆಲ್ಲ ಅಪ್‌ಡೇಟ್ ಮಾಡಬಹುದು.

ಐಫೋನ್ ಬಗ್ಗೆ ಹೀಗೆ ದಿನಗಟ್ಟಲೆ ಹೇಳುತ್ತಾ ಹೋಗಬಹುದು. ಅಷ್ಟಕ್ಕೂ ಸುಮ್ಮನಾಗದೇ ಮುಂದುವರಿಸಿ ಬೋರು ಹೊಡೆಸಬಹುದು. ನನ್ನ ಉದ್ದೇಶ ಅದಲ್ಲ. ಐಫೋನ್ ವೈಶಿಷ್ಟ್ಯಗಳ ಬಗ್ಗೆ ಕೊರೆದು ಅದನ್ನು ಪ್ರಮೋಟ್ ಮಾಡುವುದು ಸಹ ಉದ್ದೇಶ ಅಲ್ಲ. ಬ್ರಹ್ಮಾಂಡವನ್ನು ಕರ್ಚೀಫ್‌ನಂತೆ ಮಡಚಿ ಕಿಸೆಯಲ್ಲಿ ಇಟ್ಟುಕೊಳ್ಳುವಂತೆ ಇಂಥ ಪವಾಡಸದೃಶ ಪುಟ್ಟ ಉಪಕರಣವನ್ನು ಸೃಷ್ಟಿಸಿದ ಆ ಆಪಲ್ ಕಂಪನಿ, ಅದನ್ನು ಹುಟ್ಟುಹಾಕಿದ ಸ್ಟೀವ್ ಜಾಬ್ಸ್ ಹಾಗೂ ಆತ ಮಾಡಿದ ಒಂದು ಅಪರೂಪದ ಭಾಷಣದ ಬಗ್ಗೆ ಹೇಳಬೇಕೆನಿಸಿತು. ಆ ಕಥೆಗಳಲ್ಲೇ ಆತನ ಪರಿಚಯ-ಪರಿಶ್ರಮ, ಬದುಕು-ಬವಣೆ, ಸ್ಫೂರ್ತಿ-ಸಂದೇಶ ಅಡಗಿದೆ.

ಇವುಗಳ ಮುಂದೆ ಈ ಐಫೋನ್ ಸಹ ಏನೇನೂ ಅಲ್ಲ! ಒಬ್ಬ ಪದವೀಧರನೇ ಅಲ್ಲದ ಆತ, 2005, ಜೂನ್ 12ರಂದು ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನುದ್ದೇಶಿ ಮಾಡಿದ ಭಾಷಣ ಎಂಥವರನ್ನೂ ಆಕರ್ಷಿಸಿ ಬಿಡುತ್ತದೆ, ಯಾರಿಗೂ ಪ್ರೇರಣೆಯಾಗಬಲ್ಲದು.

"ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಈ ವಿವಿಯ ಶೈಕ್ಷಣಿಕ ವರ್ಷದ ಪ್ರಾರಂಭದ ದಿನದಂದು ನಿಮ್ಮೊಂದಿಗಿರಲು ನನಗೆ ನಿಜಕ್ಕೂ ಹೆಮ್ಮೆಯೆನಿಸುತ್ತಿದೆ. ನಾನೆಂದು ವಿವಿಯೊಂದರಿಂದ ಪದವಿ ಪಡೆದವನಲ್ಲ. ನಿಜ ಹೇಳಬೇಕೆಂದರೆ ನನ್ನ ಜೀವನದಲ್ಲಿ ಇಂತಹದ್ದು ಮೊದಲ ಕ್ಷಣ. ಈ ಸಂಬಂರ್ಧದಲ್ಲಿ ನನ್ನ ಜೀವನಕ್ಕೆ ಸಂಬಂಧಿಸಿದ ಮೂರು ಕಥೆಗಳನ್ನು ಹೇಳಲಿಚ್ಚಿಸುತ್ತೇನೆ-ಅಷ್ಟೇ. ಅದರಲ್ಲೇನು ಹೆಚ್ಚಿಲ್ಲ. ಅವು ಬರೀ ಮೂರು ಕಥೆಗಳಷ್ಟೆ".

ನಾನು ಪದವಿಗೆ ಪ್ರವೇಶ ಪಡೆದುಕೊಂಡು 6ತಿಂಗಳಲ್ಲಿಯೇರೀಡ್ ಕಾಲೇಜಿನಿಂದ ಹೊರಬಿದ್ದೆ. ಮುಂದಿನ 18 ತಿಂಗಳಕಾಲ ಮತ್ತೆ ರೆಗ್ಯುಲರ್ ತರಗತಿಗೆ ಕಾಲಿಡಬೇಕೋ, ಬೇಡವೋ ಎಂಬ ತಾಕಲಾಟದಲ್ಲೇ ಇದ್ದೆ. ಕೊನೆಗೂ ಕಾಲೇಜಿಗೆ ಶರಣು ಹೊಡೆದೆ. ನಾನು ಇಷ್ಟಕ್ಕೂ ಕಾಲೇಜನ್ನು ಅರ್ಧಕ್ಕೆ ತೊರೆದಿದ್ದೇಕೆ? ಅದರ ಮೂಲ ನನ್ನ ಹುಟ್ಟಿನ ಪೂರ್ವದಲ್ಲೇ ಇದೆ! ನನ್ನನ್ನು ಹಡೆದಾಕೆ ಗರ್ಭಿಣಿಯಾಗಿದ್ದಾಗ ಆಕಗೆ ಮದುವೆಯೇ ಆಗಿರಲಿಲ್ಲ. ಪದವಿ ವಿದ್ಯಾರ್ಥಿನಿಯಾಗಿದ್ದಳು. ಹಾಗಾಗಿ ಹುಟ್ಟುತ್ತಲೇ ನನ್ನನ್ನು ದತ್ತು ನೀಡಲು ಮುಂದಾದಳು. ಆದರೆ ಅದಕ್ಕೊಂದು ಪೂರ್ವ ಷರತ್ತು ಹಾಕಿದಳು-ನನ್ನನ್ನು ದತ್ತು ತೆಗೆದುಕೊಳ್ಳುವವರು ಪದವೀಧರರಾಗಿಬೇಕು. ತನ್ನ ಮಗುವಿಗೆ ಸರಿಯಾದ ಶಿಕ್ಷಣ ದೊರೆಯಬೇಕು ಎಂಬುದು ಆಕೆಯ ಉದ್ದೇಶವಾಗಿತ್ತು. ವಕೀಲರೊಬ್ಬರು ಹುಟ್ಟುವ ಮೊದಲೇ ನನ್ನನ್ನು ದತ್ತು ತೆಗೆದುಕೊಳ್ಳಲು ಮುಂದೆ ಬಂದರು. ಆದರೆ ಅವರಿಗೆ ಹೆಣ್ಣು ಮಗು ಬೇಕಿತ್ತಂತೆ. ನಾನು ಅಮ್ಮನ ಹೊಟ್ಟೆಯಿಂದ ಹೊರಬಂದಾಗ, 'ನಮಗೆ ವಾಸ್ತವದಲ್ಲಿ ಹೆಣ್ಣು ಮಗು ಬೇಕಿತ್ತು' ಎಂದು ಹಿಂದೇಟು ಹಾಕಿದರು! ಅಷ್ಟರಲ್ಲಿ ಬೇರೊಬ್ಬ ದಂಪತಿ ದತ್ತು ಸ್ವೀಕರಿಸಲು ಕಾದಿರುವುದು ನೆನಪಿಗೆ ಬಂದು, 'ಅನಿರೀಕ್ಷಿತವಾಗಿ ನಮ್ಮ ಬಳಿ ಗಂಡು ಮಗುವೊಂದಿದೆ. ನಿಮಗೆ ಬೇಕಾ?' ಎಂದು ಮಧ್ಯ ರಾತ್ರಿ ಕರೆ ಮಾಡಿದರು. ಅವರು ಸಂತಸದಿಂದಲೇ ಒಪ್ಪಿಕೊಂಡರು. ಆದರೆ ಅಲ್ಲೊಂದು ಸಮಸ್ಯೆಯಿತ್ತು! ನನ್ನನ್ನು ದತ್ತು ತೆಗೆದುಕೊಳ್ಳಲು ಬಂದ ಮಲತಾಯಿಯಾಗಲಿ, ತಂದೆಯಾಗಲಿ ಪದವೀಧರರೇ ಅಗಿರಲಿಲ್ಲ. ಆದಕಾರಣ ದತ್ತು ಸ್ವೀಕಾರ ಕಾಗದ-ಪತ್ರಗಳಿಗೆ ಸಹಿ ಹಾಕಲು ಅಮ್ಮ ಒಪ್ಪಲಿಲ್ಲ. ಆಕೆಯ ಮನವೊಲಿಸಲು ಹಲವು ತಿಂಗಳುಗಳೇ ಬೇಕಾದವು. ಮುಂದೊಂದು ದಿನ ನನ್ನನ್ನು ಕಾಲೇಜಿಗೆ ಕಳುಹಿಸುತ್ತೇವೆ ಎಂದು ಭರವಸೆ ಕೊಟ್ಟ ನಂತರ ಅಮ್ಮ ಒಪ್ಪಿಕೊಂಡಳು.

ಇದಾಗಿ 17 ವರ್ಷಗಳ ನಂತರ ನಾನು ಕಾಲೇಜಿಗೆ ಕಾಲಿಟ್ಟೆ. ಅಂದು ನಾನು ಸ್ಟ್ಯಾನ್‌ಫೋರ್ಡ್‌ನಷ್ಟೇ ದುಬಾರಿ ಕಾಲೇಜನ್ನು ಆಯ್ದುಕೊಂಡಿದ್ದೆ. ನನ್ನ ದತ್ತು ಅಪ್ಪ-ಅಮ್ಮ ದುಡಿದಿದ್ದೆಲ್ಲ ಕಾಲೇಜು ಶುಲ್ಕ ಭರಿಸುವಷ್ಟರಲ್ಲೇ ಬರಿದಾಗುತ್ತಿತ್ತು. ನನಗೋ, ಏನು ಮಾಡಬೇಕು, ಏನು ಮಾಡಬೇಕೆಂದಿದ್ದೇನೆ ಎಂಬುದೇ ತಿಳಿಯದಾಗಿತ್ತು. ಅಪ್ಪ-ಅಮ್ಮ ಜೀವಮಾನವಿಡೀ ಕೂಡಿಟ್ಟಿದ್ದ ಹಣವನ್ನು ಮಾತ್ರ ಬರಿದು ಮಾಡುತ್ತಲೇ ಇದ್ದೆ. ಹೀಗೆ ಆರು ತಿಂಗಳು ಕಳೆದವು. ಕೊನೆಗೆ ಕಾಲೇಜಿಗೇ ಶರಣು ಹೊಡೆಯಲು ನಿರ್ಧರಿಸಿದೆ. ಅದು ನಿಜಕ್ಕೂ ಭಯಹುಟ್ಟಿಸುವ ನಿರ್ಧಾರವಾಗಿತ್ತು. ಈಗ ಹಿಂದಿರುಗಿ ನೋಡಿದರೆ ಅದು ನಾನು
ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಎಂದು ನನಗನಿಸುತ್ತದೆ. ಕಾಲೇಜು ಬಿಟ್ಟ ನಂತರ ನಿರುತ್ಸಾಹದಿಂದ ಕೂಡಿದ್ದ ತರಗತಿಗಳನ್ನು ಬಿಟ್ಟು ನನಗೆ ಇಷ್ಟ ಬಂದ ಕ್ಲಾಸಿಗೆ ಹೋಗುವ ಸ್ವಾತಂತ್ರ್ಯಸಿಕ್ಕಿತು. ಆದರೂ ಅವು ಹೇಳಿಕೊಳ್ಳುವಂಥ ದಿನಗಳಾಗಿರಲಿಲ್ಲ. ಹಾಸ್ಟೆಲ್‌ನಲ್ಲಿ ನನ್ನದೇ ಕೊಠಡಿಯಿರಲಿಲ್ಲ. ಸ್ನೇಹಿತರ ಕೊಠಡಿಯ ನೆಲದಲ್ಲಿ ಮಲಗಿಕೊಳ್ಳುತ್ತಿದ್ದೆ. ಕೋಕ್ ಬಾಟಲಿಗಳನ್ನು ಸಾಗಿಸಿ 5 ಸೆಂಟ್ ಕಾಸು ಗಳಿಸಿ ಊಟ ಮಾಡುತ್ತಿದ್ದೆ. ಪ್ರತಿ ಭಾನುವಾರ ರಾತ್ರಿ 7 ಮೈಲು ನಡೆದು ಹರೇ ಕೃಷ್ಣ ದೇವಾಲಯದಲ್ಲಿ ವಾರಕ್ಕೊಂದುಭರಪೂರ ಭೋಜನ ಮಾಡುತ್ತಿದ್ದೆ.

ನನ್ನ ಯಾವ ಆಸಕ್ತಿ ಹಾಗೂ ಅಂತಃಕರೆಯನ್ನು ಹುಡುಕಿಕೊಂಡು ಹೋದೆನೋ ಅದೇ ಒಂದು ಬೆಲೆಕಟ್ಟಲಾಗದ ಕೊಡುಗೆ ಯಾಯಿತು. ಅಂದರೆ ರೀಡ್ ಕಾಲೇಜು ಆ ಕಾಲದಲ್ಲಿ ಇಡೀ ದೇಶದಲ್ಲಿ ಕ್ಯಾಲಿಗ್ರಫಿಯಲ್ಲಿ ಅತ್ಯುತ್ತಮ ತರಬೇತಿ ನೀಡುತ್ತಿತ್ತು. ಕಾಲೇಜು ಕ್ಯಾಂಪಸ್ ತುಂಬೆಲ್ಲ ಅತ್ಯಂತ ಸುಂದರವಾಗಿ ಕೈಯಲ್ಲಿ ರೂಪಿಸಿದ ಪೋಸ್ಟರ್, ಲೇಬಲ್‌ಗಳು ರಾರಾಜಿಸುತ್ತಿದ್ದವು. ನಾನು ದೈನಂದಿನ ಕ್ಲಾಸ್‌ಗೆ ಶರಣು ಹೊಡೆದಿದ್ದರಿಂದ ಹೆಚ್ಚೇನೂ ಕೆಲಸವೂ ಇರಲಿಲ್ಲ. ಹಾಗಾಗಿ ಕ್ಯಾಲಿಗ್ರಫಿ ಕ್ಲಾಸಿಗೆ ಸೇರಲು ನಿರ್ಧರಿಸಿದೆ. ಪ್ರತಿ ಅಕ್ಷರಗಳ ಮಧ್ಯೆ ಎಷ್ಟು ಅಂತರವಿರಬೇಕು, ಎಷ್ಟು ಅಂತರವಿದ್ದರೆ ಅಕ್ಷರಗಳು ಚೆನ್ನಾಗಿ ಕಾಣುತ್ತವೆ, ಅಕ್ಷರಗಳನ್ನು ಮುದ್ದಾಗಿ ಬರೆಯುವುದು ಹೇಗೆ ಎಂಬುದನ್ನು ಕಲಿಯಲಾರಂಭಿಸಿದೆ. ನಿಜಕ್ಕೂ ಅದು ಕುತೂಹಲ ಕೆರಳಿಸುವ ವಿದ್ಯೆಯಾಗಿತ್ತು. ಅಣಕವೆಂದರೆ ನನ್ನ ಜೀವನಕ್ಕೆ ಇದ್ಯಾವುದೂ ಮುಖ್ಯವಾಗಿರಲಿಲ್ಲ! ಆದರೇನಂತೆ 10 ವರ್ಷಗಳ ನಂತರ ನಾವು ಮ್ಯಾಂಕಿತೋಷ್ ಕಂಪ್ಯೂಟರ್ ಅನ್ನು ವಿನ್ಯಾಸ ಮಾಡುವಾಗ ಅಂದು ಕಲಿತ ವಿದ್ಯೆ ಉಪಯೋಗಕ್ಕೆ ಬಂತು! ಕಲಿತದ್ದನ್ನೆಲ್ಲ ಮ್ಯಾಕ್ ಗೆ ತುಂಬಿದೆ. ಅತ್ಯಂತ ಸುಂದರ ಟೈಪೋಗ್ರಫಿ ಹೊಂದಿದ್ದ ಮೊದಲ ಕಂಪ್ಯೂಟರ್ ಅದಾಯಿತು. ಒಂದು ವೇಳೆ, ನಾನೇನಾದರೂ ಅಂದು ಕ್ಯಾಲಿಗ್ರಫಿ ಎಂಬ ಆ ಒಂದು ಕೋರ್ಸ್ ಮಾಡದಿದ್ದರೆ ಮ್ಯಾಕ್ ಎಂದೆಂದೂ ಬಹುವಿಧದ ಅಚ್ಚು ಹಾಗೂ ಸೂಕ್ತ ಅಕ್ಷರ ಜೋಡಣೆಯನ್ನು ಹೊಂದಿರುತ್ತಿರಲಿಲ್ಲ! ಜತೆಗೆ ನಾನು ಕಾಲೇಜಿಗೆ ಶರಣು ಹೊಡೆಯದಿದ್ದರೆ ಕ್ಯಾಲಿಗ್ರಫಿಯನ್ನು ಖಂಡಿತ ಕಲಿಯುತ್ತಿರಲಿಲ್ಲ ಹಾಗೂ ಪರ್ಸನಲ್ ಕಂಪ್ಯೂಟರ್(ಪಿಸಿ)ಗಳು ಖಂಡಿತ ಈಗಿರುವಂತಹ ಸುಂದರ ಟೈಪೋಗ್ರಫಿಯನ್ನು ಹೊಂದಿರುತ್ತಿರಲಿಲ್ಲ !!

ಅಂದು ನನ್ನ ಮುಂದಿನ ಹೆಜ್ಜೆಗಳು ಬಿಂದುಗಳಾಗಿದ್ದವು, ಸ್ಪಷ್ಟವಾಗಿರಲಿಲ್ಲ. ಹತ್ತು ವರ್ಷದ ನಂತರ ಹಿಂದಿರುಗಿ ನೋಡಿದರೆ ಆ ಬಿಂದುಗಳು ಹೆಜ್ಜೆಗಳಾಗಿವೆ. ಅಂದರೆ ಅವತ್ತು ಭವಿಷ್ಯದ ಬಗ್ಗೆ ಸುಳಿವಿರಲಿಲ್ಲ. ಇವತ್ತು ಅವು ಹೆಜ್ಜೆಗಳಾಗಿ, ನಡೆದು ಬಂದ ಹಾದಿ ಸ್ಪಷ್ಟವಾಗಿ ಕಾಣುತ್ತಿದೆ. ಇಂದು ಏನು ಮಾಡುತ್ತೀರೋ ಅದು ಮುಂದೊಂದು ದಿನ ಉಪಯೋಗಕ್ಕೆ ಬರುತ್ತದೆ ಎಂಬ ವಿಶ್ವಾಸವಿಟ್ಟುಕೊಳ್ಳಿ. ಇಂತಹ ಮನೋಸಂಕಲ್ಪ ನನ್ನನ್ನೆಂದೂ ಕೈಬಿಟ್ಟಿಲ್ಲ, ನನ್ನ ಜೀವನದಲ್ಲಿ ಅಮೂಲ್ಯ ಬದಲಾವಣೆಗಳನ್ನು ಮಾಡುತ್ತಲೇ ಬಂದಿದೆ.

ಎರಡನೇ ಕಥೆ ನನ್ನ ಬಾಲ್ಯದ ಪ್ರೀತಿ'ಯನ್ನು ಗಳಿಸಿ, ಕಳೆದು ಕೊಂಡ ಬಗೆಗಿನದು. ನಿಜಕ್ಕೂ ನಾನು ಅದೃಷ್ಟವಂತ. ಬಾಲ್ಯದಲ್ಲಿ ಏನು ಬಯಸಿ ದೆನೋ ಅದು ಅತಿ ಶೀಘ್ರದಲ್ಲೇ ನನಗೆ ದೊರಕಿತು. ಸ್ಟೀವನ್ ವೋಝ್ನಿಯಾಕ್ ಮತ್ತು ನಾನು ಇಬ್ಬರೇ ನನ್ನ ಪೋಷಕರ ಗ್ಯಾರೇಜ್‌ನಲ್ಲೇ ಆಪಲ್ ಕಂಪನಿಯನ್ನು ಪ್ರಾರಂಭಿಸಿದೆವು. ಆಗ ನನಗೆ ಕೇವಲ ಇಪ್ಪತ್ತು ವರ್ಷ. ಹತ್ತು ವರ್ಷಗಳ ಕಾಲ ಕಷ್ಟಪಟ್ಟು ದುಡಿದೆವು. ಇಂದು ಆಪಲ್ ಕಂಪನಿ 4 ಸಾವಿರ ಉದ್ಯೋಗಿಗಳನ್ನು ಹೊಂದಿರುವ 2 ಶತಕೋಟಿ ಡಾಲರ್ ಮೌಲ್ಯದ ಸಂಸ್ಥೆಯಾಗಿ ಹೊರಹೊಮ್ಮಿದೆ. ನಾವು ಆಗಿನ್ನೂ ನಮ್ಮ ಕಂಪನಿಯ ಅತ್ಯುತ್ತಮ ವಿನ್ಯಾಸವಾಗಿದ್ದ ಮ್ಯಾಕಿಂತೋಷ್ ಕಂಪ್ಯೂಟರನ್ನು ಬಿಡುಗಡೆ ಮಾಡಿದ್ದೆವು. ಮರುವರ್ಷ ನನ್ನನ್ನು ಕಂಪನಿಯಿಂದಲೇ ಕಿತ್ತೊಗೆಯಲಾಯಿತು! ನೀವೇ ಪ್ರಾರಂಭ ಮಾಡಿದ ಕಂಪನಿಯಿಂದ ನಿಮ್ಮನ್ನೇ ಕಿತ್ತೊಗೆಯಲು ಹೇಗೆ ಸಾಧ್ಯ?! ನಾನು ಯಾವ ವ್ಯಕ್ತಿಯನ್ನು ಪ್ರತಿಭಾನ್ವಿತನೆಂದು ಆಪಲ್ ಕಂಪನಿಗೆ ಕರೆದು ತಂದಿದ್ದೇನೊ ಆ ವ್ಯಕ್ತಿಯೇ ನನ್ನ ಕೆಲಸಕ್ಕೆ ಕುತ್ತು ತಂದಿದ್ದ. ಕಂಪನಿಯ ಆಡಳಿತ ಮಂಡಳಿಯವರೂ ಆತನ ಪರ ನಿಂತರು. ಹೀಗೆ ನಾನು ಹೊರಬಿದ್ದಾಗ ನನಗೆ ಮೂವತ್ತು ವರ್ಷ. ಇಡೀ ಜೀವಮಾನ ಯಾವುದರ ಬಗ್ಗೆ ಕನಸುಕಂಡಿದ್ದೆನೋ, ಯಾವುದಕ್ಕಾಗಿ ಶ್ರಮಿಸಿದ್ದೆನೋ ಅದೇ ಕೈಜಾರಿ ಹೋಗಿತ್ತು. ಅದೊಂದು ಮರ್ಮಾಘಾತವನ್ನುಂಟುಮಾಡಿದ ಘಟನೆ.

ಏನು ಮಾಡಬೇಕೆಂಬುದೇ ಹೊಳೆಯಲಿಲ್ಲ. ಓಡಿಹೋಗಿ ಬಿಡಬೇಕು ಎಂದನಿಸಿತು. ಕ್ರಮೇಣ ಮತ್ತೆ ಬೆಳಕು ಹರಿಯಲಾರಂಭಿಸಿತು. ನನ್ನೊಳಗೆ ಆ ಪ್ರೀತಿ, ಛಲ ಇನ್ನೂ ಹೊರಟುಹೋಗಿಲ್ಲ ಎಂದರಿವಾಯಿತು. ಆಪಲ್ ಕಂಪನಿಯಲ್ಲಿ ನನಗೆ ಏನೇ ಅನ್ಯಾಯವಾದರೂ ಅದರ ಮೇಲಿನ ಪ್ರೀತಿ ಹೊರಟುಹೋಗಿರಲಿಲ್ಲ. ಹಾಗಾಗಿ ಮತ್ತೆ ಹೊಸದಾಗಿ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದೆ. ಮುಂದಿನ ಐದು ವರ್ಷಗಳಲ್ಲಿ ನೆಕ್ಸ್ಟ್' ಮತ್ತು ಪಿಕ್ಸರ್' ಎಂಬ ಕಂಪನಿಗಳನ್ನು ಪ್ರಾರಂಭಿಸಿದೆ. ಜಗತ್ತಿನ ಮೊಟ್ಟಮೊದಲ ಕಂಪ್ಯೂಟರ್ ರೂಪಿತ ಆನಿಮೇಷನ್ ಚಲನಚಿತ್ರ ಟಾಯ್ ಸ್ಟೋರಿ'ಯನ್ನು ನಿರ್ಮಾಣ ಮಾಡಿದ್ದೇ ನನ್ನ ಕಂಪನಿ ಪಿಕ್ಸರ್. ಅದು ಇಂದು ಜಗತ್ತಿನ ಅತ್ಯಂತ ಯಶಸ್ವಿ ಆನಿಮೇಷನ್ ಸ್ಟುಡಿಯೊ ಆಗಿ ಹೊರಹೊಮ್ಮಿದೆ. ಇತ್ತ ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಆಪಲ್ ಕಂಪನಿ ನನ್ನ ನೆಕ್ಸ್ಟ್ ಅನ್ನು ಖರೀದಿ ಮಾಡಿತು! ನೆಕ್ಸ್ಟ್ ರೂಪಿಸಿದ್ದ ತಂತ್ರಜ್ಞಾನವೇ ಕುಸಿಯುತ್ತಿದ್ದ ಆಪಲ್ ಕಂಪನಿಯನ್ನುಎತ್ತಿಹಿಡಿದಿದೆ. ಒಂದು ವೇಳೆ ನನ್ನನ್ನು ಆಪಲ್ ಕಂಪನಿಯಿಂದ ಹೊರಹಾಕದಿದ್ದರೆ ಇದ್ಯಾವುದೂ ಆಗುತ್ತಿರಲಿಲ್ಲ. ಔಷಧ ಖಂಡಿತ ಕಹಿಯಾಗಿರುತ್ತದೆ. ಆದರೆ ರೋಗಿಗೆ ಅದು ಬೇಕಿತ್ತು. ಜೀವನದಲ್ಲಿ ಕೆಲವೊಮ್ಮೆ ಇಟ್ಟಿಗೆಯೇ ನಿಮ್ಮ ತಲೆಯ ಮೇಲೆ ಬಂದು ಬೀಳಬಹುದು. ಆದರೆ ವಿಶ್ವಾಸವನ್ನು ಕಳೆದುಕೊಳ್ಳ ಬೇಡಿ. ನಾನು ಯಾವುದನ್ನು ಅತಿಯಾಗಿ ಪ್ರೀತಿಸಿದೆನೋ ಅದೇ ಕೆಲಸ ಮಾಡಿದೆ. ಹಾಗೆಯೇ ನಿಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದೇ ಕೆಲಸ ಮಾಡಿ. ಜೀವನದಲ್ಲಿ ಅತಿ ಹೆಚ್ಚು ತೃಪ್ತಿ ಕೊಡುವ ವಿಷಯವೆಂದರೆ ಮನಸ್ಸಿಗೆ ಇಷ್ಟವಾದ ಕೆಲಸವನ್ನು ಮಾಡುವುದು. ಆದರೆ ಎಂದಿಗೂ ನಿಲ್ಲದಿರಿ, ಕಾರ್ಯಪ್ರವೃತ್ತರಾಗಿರಿ.

ಮೂರನೆಯದ್ದು ನನ್ನ ಸಾವಿಗೆ ಸಂಬಂಧಿಸಿದ್ದು. ನಾನು 17 ವರ್ಷದವನಿದ್ದಾಗ ನುಡಿಮುತ್ತೊಂದನ್ನು ಓದಿದ್ದೆ. 'ಒಂದು ವೇಳೆ ಇದೇ ನಿಮ್ಮ ಕಡೆಯ ದಿನ ಎಂದು ಪ್ರತಿದಿನವನ್ನೂ ಕಳೆದರೆ ಒಂದಲ್ಲಾ ಒಂದು ದಿನ ಅದು ನಿಜವಾಗುತ್ತದೆ' ಈ ನುಡಿಮುತ್ತು ನನ್ನ ಮೇಲೆ ಶಾಶ್ವತ ಪರಿಣಾಮವನ್ನು ಬೀರಿದೆ. ಅಲ್ಲಿಂದ ಇಲ್ಲಿಯವರೆಗೂ 33 ವರ್ಷಗಳು ಕಳೆದಿವೆ. ಪ್ರತಿ ದಿನ ಬೆಳಗ್ಗೆ ಎದ್ದು ಕನ್ನಡಿಯ ಮುಂದೆ ನಿಂತು ನನ್ನನ್ನು ನಾನೇ ಕೇಳಿಕೊಳ್ಳುತ್ತೇನೆ 'ಇದೇ ನಿನ್ನ ಜೀವನದ ಕಡೆಯ ದಿನವೆಂದಾದರೆ ಇಂದು ಏನನ್ನು ಮಾಡಲು ಇಚ್ಛಿಸುತ್ತೀಯಾ?' ಇಲ್ಲ' ಎಂಬ ಉತ್ತರ ಯಾವಾಗ ಸತತವಾಗಿ ಹಲವು ದಿನಗಳ ಕಾಲ ಬರುತ್ತದೋ ಆಗ ನಾನೇನನ್ನೋ ಬದಲಾಯಿಸಿಕೊಳ್ಳಬೇಕು ಎಂದರ್ಥ. ಸದ್ಯದಲ್ಲೇ ನಾನು ಸಾಯಲಿದ್ದೇನೆ ಎಂದು ನೆನಪು ಮಾಡಿಕೊಳ್ಳುವುದು ಜೀವನದಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಏಕೆಂದರೆ ಸಾವಿನ ಮುಂದೆ ಎಲ್ಲ ನಿರೀಕ್ಷೆ, ಬಿಂಕ-ಬಿನ್ನಾಣಗಳು, ಸೋಲಿನ ಭಯ, ಮುಜುಗರ ಮುಂತಾದುವುಗಳು ಗೌಣವಾಗಿ ಯಾವುದು ಮಹತ್ವದ್ದೋ ಅದು ಮಾತ್ರ ಎದ್ದು ಕಾಣಲಾರಂಭಿಸುತ್ತದೆ. ಸಾಯುತ್ತೇನೆ ಎಂದು ನೆನಪಿಸಿಕೊಳ್ಳುವುದೇ ನಾನೇನೋ ಕಳೆದುಕೊಳ್ಳುತ್ತೇನೆ ಎಂಬ ಭಯದಿಂದ ಹೊರಬರಲು ಇರುವ ಸೂಕ್ತ ಮಾರ್ಗ. ಅಂದರೆ ಸಾವು ಮುಂದಿದೆ ಎಂದು ಗೊತ್ತಾದರೆ ನಿಮ್ಮ ಮನಸಿಗನಿಸಿದ್ದನ್ನು ಮಾತ್ರ ಮಾಡುತ್ತೀರಿ.

ಒಂದು ವರ್ಷದ ಹಿಂದೆ ನನಗೆ ಕ್ಯಾನ್ಸರ್ ಆಗಿದೆ ಎಂದು ಪರೀಕ್ಷೆಯಿಂದ ಬೆಳಕಿಗೆ ಬಂತು. ಬೆಳಗ್ಗೆ 7.30ಕ್ಕೆ ಸ್ಕ್ಯಾನ್ ಮಾಡಿದರು. ಕ್ಯಾನ್ಸರ್ ಗಡ್ಡೆ ಸ್ಪಷ್ಟವಾಗಿ ಗೋಚರಿಸತೊಡಗಿತ್ತು. ಇದು ಗುಣಪಡಿಸಲಾಗದಂತಹ ಕ್ಯಾನ್ಸರ್, ನೀವು 3ರಿಂದ 6ತಿಂಗಳಿಗಿಂತ ಹೆಚ್ಚು ಕಾಲ ಬದುಕುವುದಿಲ್ಲ ಎಂದು ವೈದ್ಯರು ಹೇಳಿದರು. ಮನೆಗೆ ಹೋಗಿ ಮುಖ್ಯ ಕೆಲಸ ಕಾರ್ಯಗಳನ್ನು ಮುಗಿಸಿಬಿಡಿ ಎಂದು ಸಲಹೆ ಮಾಡಿದರು. ಅಂದರೆ ನಿಮ್ಮ ಮಕ್ಕಳಿಗೆ ಏನೇನು ಹೇಳಬೇಕೋ, ಏನನ್ನು ವರ್ಗಾಯಿಸಬೇಕೋ ಅದನ್ನೆಲ್ಲ ಮುಗಿಸಿಬಿಡಿ, ಸಾವು ಸನ್ನಿಹಿತವಾಗಿದೆ ಎಂಬುದು ಅವರ ಮಾತಿನ ಅರ್ಥವಾಗಿತ್ತು. ಹೀಗೆ ಮನೆಯವರಿಗೆ ವಿದಾಯ ಹೇಳುವ ಸಂದರ್ಭ ಎದುರಾಗಿತ್ತು. ಇಡೀ ದಿನವನ್ನು ಅದೇ ಯೋಚನೆಯಲ್ಲಿ ಕಳೆದೆ. ಸಂಜೆ ಮತ್ತೊಂದು ದೈಹಿಕ ಪರೀಕ್ಷೆಗೆ ಒಳಗಾದೆ. ನನ್ನ ಗಂಟಲೊಳಗಿಂದ ಎಂಡೊಸ್ಕೋಪನ್ನಿಳಿಸಿ ವೈದ್ಯರು ದೃಷ್ಟಿಹಾಯಿಸಿದರು. ಹಾಗೆ ನೋಡಿದವರು ಹರ್ಷೋಲ್ಲಾಸದಿಂದ ಕೂಗಾಡತೊಡಗಿದರು. ಅದು ಶಸ್ತ್ರಚಿಕಿತ್ಸೆಯಿಂದ ಗುಣ ಪಡಿಸಬಹುದಾದ ಕ್ಯಾನ್ಸರ್ ಆಗಿತ್ತು. ಇಂದು ನಾನು ಆರೋಗ್ಯದಿಂದಿದ್ದೇನೆ. ಆದರೆ ನಾನು ಸಾವನ್ನು ತೀರಾ ಸನಿಹದಿಂದ ನೋಡಿ ಬಂದಿದ್ದೆ. ಆ ಅನುಭವದ ಹಿನ್ನೆಲೆಯಲ್ಲಿ ಹೇಳುವುದಾದರೆ ಸಾವೂ ಕೂಡ ಒಂದು ಉಪಯುಕ್ತ ವಿಚಾರ. ಎಲ್ಲರೂ ಸ್ವರ್ಗಕ್ಕೆ ಹೋಗಲು ಬಯಸುತ್ತಾರೆ, ಆದರೆ ಸಾಯಲು ಯಾರೂ ಬಯಸುವುದಿಲ್ಲ. ಆದರೂ ಸಾವು ಎಂಬುದು ನಾವೆಲ್ಲರೂ ಹೋಗಿ ಸೇರುವ ಸಮಾನ ತಾಣ. ಇದುವರೆಗೂ ಯಾರೂ ಸಾವಿನಿಂದ ತಪ್ಪಿಸಿಕೊಂಡಿಲ್ಲ. ಅಷ್ಟಕ್ಕೂ ಅದು ಬದಲಾವಣೆಯ ಒಂದು ಏಜೆಂಟ್. ಹೊಸ ಜೀವಗಳು ಸೃಷ್ಟಿಯಾಗಿ, ಹಳೆ ತಲೆಗಳು ಕಳಚಿ ಬೀಳಲೇಬೇಕು. ಇದು ನಿಮಗೆ ನಾಟಕೀಯವೆನಿಸಬಹುದು. ಆದರೂ ಸತ್ಯ. ಜೀವನವೆಂಬುದು ಕ್ಷಣಿಕ. ಇತರರು ಏನನ್ನುತ್ತಾರೋ ಎಂಬುದಕ್ಕಂಜಿ ಸಮಯವನ್ನು ವ್ಯರ್ಥ ಮಾಡಬೇಡಿ.

ಈ ಮೇಲಿನ ಮೂರು ಘಟನೆಗಳಲ್ಲೇ ಸ್ಟೀವ್ ಜಾಬ್ಸ್‌ನ ಜೀವನ, ನಡೆದು ಬಂದ ಹಾದಿ ಹೆಣೆದುಕೊಂಡಿದೆ. ಐಫೋನ್ ಎಂಬಐಲನ್ನು ಸೃಷ್ಟಿರುವ ಆತ ಬರೀ ಒಬ್ಬ ಯಶಸ್ವಿ ಉದ್ಯಮಿಯಲ್ಲ,ಉತ್ಪನ್ನದ ಹಿಂದೆಯೂ ಆತನ ಬುದ್ಧಿಶಕ್ತಿ ಇದೆ. ಪ್ರತಿಭೆ ಹಾಗೂ ಉದ್ಯಮಶೀಲತೆ ಎರಡೂ ಜತೆಯಾಗಿರುವುದು ಅಪರೂಪ. ಆತನ ಜೀವನವೇ ಒಂದು ಸ್ಫೂರ್ತಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X