'ಪೊಲೀಸರೇ ಹೆದ್ದಾರಿಯನ್ನು ಬಂದ್ ಮಾಡಿದ್ದಾರೆ': ರೈತರು
ನವದೆಹಲಿ, ಅಕ್ಟೋಬರ್ 03: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ದ ರೈತರು ಸರಿಸುಮಾರು ಒಂದು ವರ್ಷದಿಂದ ಪ್ರತಿಭಟನೆಯನ್ನು ನಡೆಸುತ್ತಿದ್ದು, ಶನಿವಾರ ಸಿಂಘು ಗಡಿಯಲ್ಲಿ ವಾಹನಗಳು ಸಂಚಾರ ಮಾಡುವುದನ್ನು ತಡೆದಿದ್ದಾರೆ.
ಈ ಘಟನೆಯು ಸುಪ್ರೀಂ ಕೋರ್ಟ್ ರೈತರ ಈ ಪ್ರತಿಭಟನೆಗೆ ಆಕ್ಷೇಪ ಪಕ್ತಪಡಿಸಿದ ಬೆನ್ನಲ್ಲೇ ನಡೆದಿದೆ. "ನಗರಕ್ಕೆ ನಮಗೆ ಪ್ರವೇಶ ಮಾಡಲು ದೆಹಲಿ ಪೊಲೀಸರು ಅವಕಾಶ ನೀಡುತ್ತಿಲ್ಲ, ಆದ್ದರಿಂದ ನಾವು ಗಡಿಯಲ್ಲೇ ಉಳಿಯಬೇಕಾದ ಪರಿಸ್ಥಿತಿ ಬಂದಿದೆ" ಎಂದು ರೈತರು ಆರೋಪ ಮಾಡಿದ್ದಾರೆ.
ಗಡಿಯಲ್ಲಿ ರೈತರು ಬಂದ್ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ 63 ವರ್ಷದ ಸಾಧು ಸಿಂಗ್ ಹಾಗೂ 70 ವರ್ಷದ ನಿಚತ್ರ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. "ನಾವು ರಸ್ತೆಯನ್ನು ಬಂದ್ ಮಾಡಲೇ ಇಲ್ಲ. ಪೊಲೀಸರೇ ಬ್ಯಾರಿಕೇಡ್ ಅನ್ನು ಹಾಕಿದ್ದಾರೆ," ಎಂದು ತಿಳಿಸಿದ್ದಾರೆ. "ಇನ್ನು ವಾಹನಗಳಿಗೆ ಸಂಚಾರ ಮಾಡಲು ಆಗದ ಸಂದರ್ಭದಲ್ಲಿ ನಾವೇ ವಾಹನಕ್ಕೆ ಸಂಚರಿಸಲು ದಾರಿ ಮಾಡಿ ಕೊಟ್ಟಿದ್ದೇವೆ," ಎಂದಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ರೈತರು ಹೌದು ಎಂದು ಒಗ್ಗಟ್ಟಿನಲ್ಲಿ ಕೂಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಅತ್ತಿತ್ತ ಓಡಾಡುತ್ತಿದ್ದ ಮಹಾತ್ಮ ಗಾಂಧಿ!
ಇನ್ನು ಶನಿವಾರ ಗಾಂಧಿ ಜಯಂತಿ ಆದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಪ್ರದೇಶದಲ್ಲಿ ಮಹಾತ್ಮ ಗಾಂಧಿಯಂತೆ ವೇಷ ಧರಿಸಿದ ವ್ಯಕ್ತಿಯೊಬ್ಬರು ಅತ್ತಿತ್ತ ಓಡಾಟ ನಡೆಸುತ್ತಿದ್ದರು. ಹಾಗೆಯೇ ಎಲ್ಲಾ ಪ್ರತಿಭಟನಾನಿರತರಿಗೆ ಆಹಾರವನ್ನು ಈ ಸಂದರ್ಭದಲ್ಲಿ ವಿತರಣೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ಮಹಾತ್ಮ ಗಾಂಧಿ ವೇಶಧಾರಿಯಾದ ಮಧ್ಯ ಪ್ರದೇಶದ ಸಂತೋಷ್ ಗಾಂಧಿ ಎಂಬ ವ್ಯಕ್ತಿ, "ರೈತರ ಬೇಡಿಕೆಗೆ ಜನರು ಬೆಂಬಲ ನೀಡಬೇಕು ಎಂದು ನಾನು ಒತ್ತಾಯಿಸುತ್ತೇನೆ," ಎಂದು ತಿಳಿಸಿದ್ದಾರೆ.

ಬಡ ಕಾರ್ಮಿಕರಿಗೆ ಆಹಾರ ನೀಡುತ್ತಿರುವ ರೈತರು
75 ವರ್ಷದ ಸುಬೇಗ್ ಸಿಂಗ್, "ನಾವು ನಾಗರಿಕರಿಗೆ ಯಾವುದೇ ತೊಂದರೆಯನ್ನು ಉಂಟು ಮಾಡಿಲ್ಲ," ಎಂದು ಹೇಳಿದ್ದಾರೆ. "ನಾವು ನಿರಂತರವಾಗಿ ಬಡವರಿಗೆ ಹಾಗೂ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದೇವೆ ಹಾಗೂ ಕಾರ್ಮಿಕರ, ಬಡವರ ಮಕ್ಕಳಿಗೂ ಸಹಾಯ ಮಾಡುತ್ತಿದ್ದೇವೆ. ಬಡ ಕಾರ್ಮಿಕರು ಆಹಾರವನ್ನು ಪಡೆದುಕೊಳ್ಳಲು ಪ್ರತಿಭಟನಾ ಸ್ಥಳಕ್ಕೆ ಬರುತ್ತಾರೆ," ಎಂದು ಹೇಳಿದ್ದಾರೆ. ಕಳೆದ ನವೆಂಬರ್‌ನಿಂದ ಪ್ರತಿಭಟನೆ ಸ್ಥಳದಲ್ಲಿ ಇರುವ 80 ವರ್ಷದ ಗುರ್ಮಿತ್ ಸಿಂಗ್ ಈ ಸಂದರ್ಭದಲ್ಲಿ ಮಾತನಾಡಿ, "ನಮ್ಮ ಬೇಡಿಕೆಯನ್ನು ಪೂರೈಸುವವರೆಗೂ ನಾವು ಈ ಸ್ಥಳದಿಂದ ಎಲ್ಲಿಗೂ ಹೋಗುವುದಿಲ್ಲ," ಎಂದಿದ್ದಾರೆ.

ಹೆದ್ದಾರಿ ಬಂದ್ ಮಾಡಿದ್ದು ಬಿಜೆಪಿ ಸರ್ಕಾರದ ಪೊಲೀಸರು
ಈ ನಡುವೆ ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾವು "ಹೆದ್ದಾರಿಯನ್ನು ಬಿಜೆಪಿ ಸರ್ಕಾರದ ಪೊಲೀಸರು ಬಂದ್ ಮಾಡಿದ್ದಾರೆ," ಎಂದು ಆರೋಪ ಮಾಡಿದೆ. "ರೈತರ ಬೇಡಿಕೆಯನ್ನು ಪೂರೈಸಿದರೆ ಪ್ರತಿಭಟನೆಯು ನಿಲ್ಲಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ತಿಳಿದಿದೆ. ಆದರೆ ಹಾಗೆ ಮಾಡದಿರಲು ಕೇಂದ್ರ ಸಕಾರ ನಿರ್ಧಾರ ಮಾಡಿದೆ. ನೂರು ರೈತರು ಹುತಾತ್ಮರಾದರೂ ಕೂಡಾ ಪ್ರತಿಭಟನೆಯನ್ನು ತಡೆಯುವ ಸಲುವಾಗಿ ರೈತರ ಬೇಡಿಕೆ ಪರಿಹರಿಸಲು ಸರ್ಕಾರ ಒಪ್ಪಲ್ಲ," ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯರು ಹೇಳಿದ್ದಾರೆ.

ಸ್ಥಳೀಯರಿಂದ ಭಾರೀ ಬೆಂಬಲ ದೊರೆಯುತ್ತಿದೆ
ಸ್ಥಳೀಯರ ಪ್ರತಿಕ್ರಿಯೆ ಹೇಗಿದೆ ಎಂದು ರೈತರನ್ನು ಮಾಧ್ಯಮಗಳು ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದ ರೈತರು, "ಸ್ಥಳೀಯರಿಂದ ನಮಗೆ ಭಾರೀ ಬೆಂಬಲ ದೊರೆಯುತ್ತಿದೆ," ಎಂದಿದ್ದಾರೆ. "ಸ್ಥಳೀಯರು ಕೂಡಾ ಪ್ರತಿಭಟನೆಗೆ ಆಗಾಗ ಬರುತ್ತಾ ಇರುತ್ತಾರೆ," ಎಂದು ಹೇಳಿದ್ದಾರೆ. "ಹೊಸ ಹೊಸ ಮುಖಗಳು ಪ್ರತಿಭಟನಾ ಸ್ಥಳದಲ್ಲಿ ಕಾಣಿಸಕೊಳ್ಳುತ್ತಿದೆ," ಎಂದು ಕೂಡಾ ಹೇಳಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications