ಯುಪಿ ಅಲ್ಪಸಂಖ್ಯಾತರ ಮತದತ್ತ ಚಿತ್ತ: ಓವೈಸಿ ಬಿಜೆಪಿಯ 'ಬಿ ಟೀಮ್' ಎಂದ ಕಾಂಗ್ರೆಸ್ ನಾಯಕ
ಲಕ್ನೋ, ನವೆಂಬರ್ 12: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯ ಮೇಲೆ ಹಲವಾರು ಮಂದಿ ಚಿತ್ತ ನೆಟ್ಟಿದ್ದಾರೆ. ಮುಖ್ಯವಾಗಿ ಅಲ್ಪಸಂಖ್ಯಾತ ಸಮುದಾಯದ ಮತವನ್ನು ಪಡೆಯುವ ನಿಟ್ಟಿನಲ್ಲಿ ಕೆಲವು ಪಕ್ಷಗಳು ತಂತ್ರಗಾರಿಕೆಯನ್ನು ಮಾಡುತ್ತಿದೆ. ಬಿಜೆಪಿ, ಕಾಂಗ್ರೆಸ್ ಸೇರಿದಂತ ಬೇರೆ ಬೇರೆ ಪಕ್ಷಗಳ ಮುಖ್ಯಸ್ಥರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಈ ನಡುವೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಕೂಡಾ ರಾಜ್ಯಕ್ಕೆ ಆಗಾಗ ಭೇಟಿ ನೀಡುತಲೇ ಇದ್ದಾರೆ.
ಇನ್ನು ಈ ಮಧ್ಯೆ ಉತ್ತರ ಪ್ರದೇಶದ ಅಲ್ಪಸಂಖ್ಯಾತರ ಮತಕ್ಕೆ ಕಾಂಗ್ರೆಸ್ ಕೂಡಾ ಬಲೆ ಬೀಸುತ್ತಿದೆ. ಸಮಾಜವಾದಿ ಪಕ್ಷವು ಈಗಾಗಲೇ ತಮ್ಮ ಪಕ್ಷಕ್ಕೆ ಅಧಿಕ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಮತ ಹಾಕುತ್ತಾರೆ ಎಂದು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಬಿಎಸ್‌ಪಿ ಪಕ್ಷವೂ ಕೂಡಾ ಅಲ್ಪಸಂಖ್ಯಾತ ಸಮುದಾಯದ ಮತಕ್ಕಾಗಿ ಓಲೈಕೆಯ ಕಾರ್ಯವನ್ನು ಸತತವಾಗಿ ಮಾಡುತ್ತಾ ಬಂದಿದೆ.
2022 ಯುಪಿ ಚುನಾವಣೆ: 7 ಪಕ್ಷ, ಸದಸ್ಯರು- ಬಿಜೆಪಿಯ ಹೊಸ ಜಾತಿ ಒಕ್ಕೂಟ ಹೀಗಿದೆ ನೋಡಿ
ಎಐಎಂಐಎಂ ಮುಖ್ಯಸ್ಥರು ಅಸಾದುದ್ದಿನ್ ಓವೈಸಿ ಹಾಗೂ ಭಾಗಿದಾರಿ ಸಂಕಲ್ಪ ಮೋರ್ಚಾವು ಉತ್ತರ ಪ್ರದೇಶದಲ್ಲಿ ಹಲವಾರು ರ್‍ಯಾಲಿಗಳನ್ನು ಆಯೋಜನೆ ಮಾಡಿದೆ. ಇವೆಲ್ಲವುದರ ನಡುವೆ ಕಾಂಗ್ರೆಸ್ ನಾಯಕ ನಸೀಮುದ್ದೀನ್ ಸಿದ್ದಿಕ್, ಎಐಎಂಐಎಂ ಮುಖ್ಯಸ್ಥರು ಅಸಾದುದ್ದಿನ್ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಸಾದುದ್ದಿನ್ ಓವೈಸಿ ಉತ್ತರ ಪ್ರದೇಶ ರಾಜ್ಯದ್ಯಾಂತ ಮಾಡುವ ರ್‍ಯಾಲಿಗಳಿಂದಾಗಿ ಏನು ಕೂಡಾ ಪ್ರಯೋಜನ ಆಗುವುದಿಲ್ಲ. ಎಷ್ಟೇ ಆದರೂ ಓವೈಸಿ "ಬಿಜೆಪಿಯ ಬಿ ಟೀಮ್" ಎಂದು ಕಾಂಗ್ರೆಸ್ ನಾಯಕ ನಸೀಮುದ್ದೀನ್ ಸಿದ್ದಿಕ್ ಟೀಕೆ ಮಾಡಿದ್ದಾರೆ.
"ಓವೈಸಿಯದ್ದು ಬಿಜೆಪಿಯ ಬಿ ಟೀಮ್. ಈ ವಿಚಾರವನ್ನು ಮುಸ್ಲೀಮರು ಹಾಗೂ ಬೇರೆ ಅಲ್ಪಸಂಖ್ಯಾತ ಸಮುದಾಯದವರು ತೋರಿಸಿಕೊಟ್ಟಿದ್ದಾರೆ. ಓವೈಸಿಯು ನೀಡುವ ಹೇಳಿಕೆಯ ಮೂಲಕ ಹಾಗೂ ಚರ್ಚೆಯ ಮೂಲಕ ಬಿಜೆಪಿಗೆ ಲಾಭ ಮಾಡಿಕೊಡುತ್ತಾರೆ. ಬಿಜೆಪಿಗೆ ಲಾಭವಾಗುವ ವಿಚಾರವನ್ನೇ ಓವೈಸಿ ಮಾತನಾಡುತ್ತಾರೆ," ಎಂದು ಕಾಂಗ್ರೆಸ್ ನಾಯಕ ನಸೀಮುದ್ದೀನ್ ಸಿದ್ದಿಕ್ ಆರೋಪ ಮಾಡಿದ್ದಾರೆ.
ಯುಪಿಯಲ್ಲಿ ಬ್ರಾಹ್ಮಣರ ಮತಕ್ಕೆ ಬಲೆ: ವಿಪಕ್ಷದ ಓಲೈಕೆ, ಬಿಜೆಪಿಯಿಂದ ಉಳಿಸಿಕೊಳ್ಳುವ ಪ್ರಯತ್ನ
ಚುನಾವಣೆಯಲ್ಲಿ ಓವೈಸಿಯ ಪ್ರಭಾವ ಏನೂ ಇರಲ್ಲ ಎಂದ ನಸೀಮುದ್ದೀನ್
"ಮುಂದಿನ ವರ್ಷ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಸೇರಿ ಹಲವು ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಆದರೆ ಅಸಾದುದ್ದಿನ್ ಓವೈಸಿ ಈ ಮುಂದಿನ ವಿಧಾನಸಭೆ ಚುನಾವಣೆ ಸೇರಿದಂತೆ ಯಾವುದೇ ಚುನಾವಣೆಯಲ್ಲಿ ಏನೂ ಪರಿಣಾಮವನ್ನು ಉಂಟು ಮಾಡಲ್ಲ," ಎಂದು ವ್ಯಂಗ್ಯವಾಡಿದರು. "ಬಿಹಾರದಲ್ಲಿ ತನ್ನ ಯಶಸ್ಸನ್ನು ಪಶ್ಚಿಮ ಬಂಗಾಳದಲ್ಲಿಯೂ ಪಡೆಯಲು ಓವೈಸಿಗೆ ಆಗುವುದಿಲ್ಲ. ಹಾಗೆಯೇ ಮುಂದಿನ ಚುನಾವಣೆಯಲ್ಲಿಯೂ ಓವೈಸಿಯ ಪಕ್ಷ ಯಾವುದೇ ಪರಿಣಾಮವನ್ನು ಉಂಟು ಮಾಡಲ್ಲ. ಜನರು ಹೆಚ್ಚು ಜಾಗರೂಕರಾಗಿದ್ದಾರೆ, ಆದ್ದರಿಂದ ಜನರು ಎಂದಿಗೂ ದಾರಿ ತಪ್ಪಲ್ಲ," ಎಂದು ಕೂಡಾ ಹೇಳಿದರು.
ಜನರು ಈ ಬಾರಿ ಖಂಡಿತ ಎಸ್‌ಪಿಗೆ ಮತ ಹಾಕುತ್ತಾರೆ ಎಂದ ಎಸ್‌ಪಿ ನಾಯಕ
ಇನ್ನು ಉತ್ತರ ಪ್ರದೇಶ ಚುನಾವಣೆಯ ಬಗ್ಗೆ ಮಾತನಾಡಿದ ಸಮಾಜವಾದಿ ಪಕ್ಷದ ರಾಮ ಗೋವಿಂದ ಚೌಧರಿ, "ಉತ್ತರ ಪ್ರದೇಶದಲ್ಲಿ ಇರುವ ಪ್ರಮುಖ ಅಲ್ಪಸಂಖ್ಯಾತ ಸಮುದಾಯವು ಸಮಾಜವಾದಿ ಪಕ್ಷಕ್ಕೆ ಮತ ಹಾಕಬೇಕು ಎಂದು ಈಗಾಗಲೇ ನಿರ್ಧಾರ ಮಾಡಿ ಆಗಿದೆ," ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ "ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದಿಂದ ಆಡಳಿತದಲ್ಲಿ ಮುಸ್ಲಿಂ ಸಮುದಾಯವು ಬಹಳ ನೊಂದು ಹೋಗಿದೆ. ಮುಸ್ಲಿಂ ಸಮುದಾಯಕ್ಕೆ ಗೌರವವಿಲ್ಲದಂತಾಗಿದೆ. ಆದ್ದರಿಂದ ಈ ಸಮುದಾಯ ಈ ಬಾರಿ ತಮ್ಮ ಮತವನ್ನು ನಷ್ಟ ಮಾಡಿಕೊಳ್ಳುವುದಿಲ್ಲ. ಅವರು ಸಮಾಜವಾದಿ ಪಕ್ಷಕ್ಕೆ ಮತ ಹಾಕುತ್ತಾರೆ," ಎಂದು ಉಲ್ಲೇಖ ಮಾಡಿದ್ದಾರೆ.
ಉ.ಪ್ರ ಚುನಾವಣೆ: ಯಾವ ಪಕ್ಷದೊಂದಿಗೂ ಮೈತ್ರಿ ಇಲ್ಲ ಎಂದ ಮಾಯಾವತಿ
ಇನ್ನು ಈ ಬಗ್ಗೆ ಮಾತನಾಡಿದ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, "ಎಲ್ಲಾ ವರ್ಗದ ಜನರು ಬಿಜೆಪಿ ಆಡಳಿತದಿಂದಾಗಿ ಬಳಲಿ ಹೋಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಆಡಳಿತದಿಂದಾಗಿ ನೊಂದು ಹೋಗದೆ ಇರುವ ಯಾವುದೇ ಸಮುದಾಯವೂ ಇಲ್ಲ. ಯಾವುದೇ ಜಾತಿ, ಧರ್ಮದ ಬೇಲಿ ಇಲ್ಲದೆ ಎಲ್ಲಾ ಜನರು ಬಿಜೆಪಿ ಆಡಳಿತದಲ್ಲಿ ನೊಂದು ಹೋಗಿದ್ದಾರೆ," ಎಂದಿದ್ದಾರೆ.
(ಒನ್‌ಇಂಡಿಯಾ ಸುದ್ದಿ)