ಯಶವಂತಪುರ-ವಿಜಯಪುರ ರೈಲು ವಿಸ್ತರಣೆ; ವೇಳಾಪಟ್ಟಿ
ಬೆಂಗಳೂರು, ಮಾರ್ಚ್ 07: ಬೆಂಗಳೂರು ನಗರದಿಂದ ಉತ್ತರ ಕರ್ನಾಟಕ ಭಾಗಕ್ಕೆ ಸಂಚಾರ ನಡೆಸುವ ಜನರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದೆ. ಯಶವಂತಪುರ-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಜೂನ್ ತಿಂಗಳ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಈ ಕುರಿತು ನೈಋತ್ಯ ರೈಲ್ವೆ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಯಶವಂತಪುರ- ವಿಜಯಪುರ ರೈಲುಗಳ ಸಂಚಾರದ ಅವಧಿಯನ್ನು ಮತ್ತೆ ಮೂರು ತಿಂಗಳವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಹೇಳಿದೆ. ಇದರಿಂದಾಗಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ನೈಋತ್ಯ ರೈಲ್ವೆಯು ಸದ್ಯ ಇರುವ ಈ ರೈಲುಗಳು ಅಸ್ತಿತ್ವದಲ್ಲಿರುವ ವೇಳಾಪಟ್ಟಿ, ನಿಲುಗಡೆ, ದರ ಮತ್ತು ಬೋಗಿಗಳ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲದೇ ರೈಲು ಸೇವೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಹೇಳಿದೆ.
ಆದೇಶದ ವಿವರ
* ಯಶವಂತಪುರ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 06545) ರೈಲನ್ನು ಜೂನ್ 30, 2024ರ ತನಕ ವಿಸ್ತರಿಸಲಾಗುತ್ತಿದೆ. ಈ ಮೊದಲು ಮಾರ್ಚ್ 3, 2024ರ ತನಕ ರೈಲು ಓಡಿಸಲು ಸೂಚನೆ ನೀಡಲಾಗಿತ್ತು.
*ವಿಜಯಪುರ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 06546) ರೈಲನ್ನು ಜುಲೈ 1, 2024 ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಏಪ್ರಿಲ್ 1, 2024 ರವೆರೆಗೆ ಓಡಿಸಲು ಆದೇಶಿಸಲಾಗಿತ್ತು.
ರೈಲುಗಳ ಭಾಗಶಃ ರದ್ದು: ಮಾರ್ಚ್ 7ರಂದು ಮುರುಡೇಶ್ವರ ಮತ್ತು ಸೇನಾಪುರ ಭಾಗದ ನಡುವೆ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಸಲುವಾಗಿ ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ಕುರಿತು ಕೊಂಕಣ ರೈಲ್ವೆ ಮಾಹಿತಿ ನೀಡಿದೆ.
* ಮಾರ್ಚ್ 6ರಂದು ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16585 ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು- ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲು ಕುಂದಾಪುರ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ. ಕುಂದಾಪುರ ಮತ್ತು ಮುರುಡೇಶ್ವರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.
* ಮಾರ್ಚ್ 7 ರಂದು ರೈಲು ಸಂಖ್ಯೆ 16586 ಮುರುಡೇಶ್ವರ- ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಕುಂದಾಪುರ ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಪ್ರಾರಂಭವಾಗಲಿದೆ. ಮುರುಡೇಶ್ವರ ಮತ್ತು ಕುಂದಾಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.
ರೈಲುಗಳ ಮಾರ್ಗ ಬದಲಾವಣೆ: ತಿರುಪತಿ ನಿಲ್ದಾಣದಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ನಿಮಿತ್ತ ಈ ರೈಲುಗಳ ಮಾರ್ಗ ಬದಲಾವಣೆ ಮಾಡಲು ದಕ್ಷಿಣ ಮಧ್ಯ ರೈಲ್ವೆಯು ಸೂಚಿಸಿದೆ.
* ಮಾರ್ಚ್ 11 ಮತ್ತು 18, 2024 ರಂದು ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12890 ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಟಾಟಾನಗರ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಕಟ್ಪಾಡಿ, ಅರಕ್ಕೋಣಂ ಮತ್ತು ರೇಣಿಗುಂಟ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ತಿರುಪತಿ ನಿಲ್ದಾಣದಲ್ಲಿ ನಿಲುಗಡೆ ತಪ್ಪಿರುತ್ತದೆ.
* ಮಾರ್ಚ್ 12, 14, 19, ಮತ್ತು 21, 2024 ರಂದು ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12836 ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು- ಹಟಿಯಾ ದ್ವಿಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಕಟ್ಪಾಡಿ, ಅರಕ್ಕೋಣಂ ಮತ್ತು ರೇಣಿಗುಂಟ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಚಿತ್ತೂರು ಮತ್ತು ತಿರುಪತಿ ನಿಲ್ದಾಣಗಳಲ್ಲಿ ನಿಲುಗಡೆ ತಪ್ಪಿರುತ್ತದೆ.












Click it and Unblock the Notifications