ಹದ್ದಿನಕಲ್ಲು ಆಂಜನೇಯನಿಂದ ಭೂತ ಚೇಷ್ಟೆಗಳಿಗೆ ಪರಿಹಾರ: ಇಲ್ಲಿ ಇಂದ್ರಜಿತ್‌ಗೂ ಪೂಜೆ!
ಮಂಡ್ಯ, ಜುಲೈ 13: ಮನುಷ್ಯನ ಮೇಲೆ ಆವಾಹನೆಯಾಗುವ ಭೂತ, ಪ್ರೇತ, ಮಾಯ, ಮಂತ್ರ ಹೀಗೆ ದುಷ್ಟಶಕ್ತಿಗಳಿಂದ ಸಂಕಷ್ಟಕ್ಕೀಡಾದವರಿಗೆ ಅಭಯ ನೀಡುವ ಕ್ಷೇತ್ರವೊಂದು ಮಂಡ್ಯ ಜಿಲ್ಲೆಯಲ್ಲಿದೆ. ಈ ಕ್ಷೇತ್ರದಲ್ಲಿ ರಾಮಾಯಣ ಕಾಲದ ಆಂಜನೇಯನ ಜತೆಗೆ ಇಂದ್ರಜಿತ್ ಪೂಜಿಸಲ್ಪಡುತ್ತಾ ನೊಂದು ಬಂದವರ ಸಂಕಷ್ಟ ನಿವಾರಿಸುತ್ತಿದ್ದಾನೆ. ಹಾಗಾದರೆ ಈ ಕ್ಷೇತ್ರ ಇರುವುದು ಎಲ್ಲಿ? ಹೋಗುವುದು ಹೇಗೆ? ಎಂಬ ಕುತೂಹಲ ಕಾಡದಿರದು.
ಎಷ್ಟೇ ವೈಜ್ಞಾನಿಕ ಅನ್ವೇಷಣೆಗಳಾಗಿದ್ದರೂ ನಮ್ಮ ನಂಬಿಕೆಗಳು ಇನ್ನೂ ಜೀವಂತವಾಗಿವೆ. ಮತ್ತು ಅದರಿಂದ ಹಲವರಿಗೆ ಹಲವು ರೀತಿಯಲ್ಲಿ ಒಳ್ಳೆಯದು ಆಗಿದೆ. ಹೀಗಾಗಿಯೇ ನಮಗೆ ಒಳ್ಳೆಯದಾದರೆ ಆ ಶಕ್ತಿಯನ್ನು ನಂಬುತ್ತೇವೆ ಮತ್ತು ಪೂಜಿಸುತ್ತೇವೆ. ದೈವಶಕ್ತಿಗಳು ಹಿಂದಿನಿಂದಲೂ ನಂಬಿಕೊಂಡು ಬಂದಿದ್ದೇವೆ. ಹೀಗಾಗಿ ದೇಶದಾದ್ಯಂತ ಶಕ್ತಿದೇವರ ಕ್ಷೇತ್ರಗಳಿರುವುದನ್ನು ಕಾಣಬಹುದಾಗಿದೆ. ಇಂತಹ ಕ್ಷೇತ್ರಗಳ ಪೈಕಿ ಮಾಟ, ಮಂತ್ರ, ಪೀಡೆಗಳ ಉಪದ್ರವ, ದುಷ್ಟಗಾಳಿ ಹೀಗೆ ಹಲವು ರೀತಿಯ ತೊಂದರೆಗಳಿಂದ ಬಳಲುವವರಿಗೆ ಮಂಡ್ಯ ಜಿಲ್ಲೆಯ ಇಂದ್ರಜಿತ್ ಸಮೇತ ಆಂಜನೇಯ ನೆಲೆನಿಂತ ಹದ್ದಿನಕಲ್ಲು ಕ್ಷೇತ್ರ ಪರಿಹಾರ ಕಲ್ಪಿಸುವ ತಾಣವಾಗಿದೆ.

ಈ ಕ್ಷೇತ್ರವು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗಡಿಗ್ರಾಮವಾದ ಭೈರಸಂದ್ರದ ಬಳಿಯಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಿಗೆ ಹತ್ತಿರವಾಗಿರುವುದರಿಂದ ಈ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಬರುವುದನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ ಆಂಜನೇಯನ ಕ್ಷೇತ್ರಗಳಲ್ಲಿ ಗಾಳಿ ಸೋಂಕಿಗೆ ಒಳಗಾದವರು ಬಂದು ಪುಣ್ಣೀರನ್ನು ಹಾಕಿಸಿಕೊಂಡು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಆದರೆ ಹದ್ದಿನಕಲ್ಲು ಆಂಜನೇಯ ಕ್ಷೇತ್ರದಲ್ಲಿ ಇಂದ್ರಜಿತ್ ಪೂಜಿಸಲ್ಪಡುತ್ತಿರುವುದು ಇನ್ನಷ್ಟು ವಿಶೇಷವಾಗಿದೆ.
ಹದ್ದಿನಕಲ್ಲು ಕ್ಷೇತ್ರ ಎಲ್ಲಿದೆ? ಹೋಗುವುದು ಹೇಗೆ?
ತೇತ್ರಾಯುಗದಲ್ಲಿ ರಾವಣನ ಪುತ್ರನಾದ ಇಂದ್ರಜಿತ್ ಇಂದ್ರಜಾಲ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದನು. ಹೀಗಾಗಿ ಇಲ್ಲಿ ನೆಲೆನಿಂತ ಇಂದ್ರಜಿತ್ ಮಾಯ, ಮಂತ್ರ, ಗಾಳಿ ಸೋಂಕುಗಳಿಗೆ ಒಳಗಾಗಿ ಸಮಸ್ಯೆಯನ್ನು ಅನುಭವಿಸುವ ಭಕ್ತರ ಸಂಕಷ್ಟವನ್ನು ದೂರ ಮಾಡುತ್ತಾನೆ ಎಂಬ ನಂಬಿಕೆಯಿದೆ. ಹೀಗಾಗಿಯೇ ಇಲ್ಲಿಗೆ ಹರಕೆ ಹೊತ್ತು ಬರುವ ಭಕ್ತರು ಅದು ನಿವಾರಣೆಯಾದ ಖುಷಿಯಲ್ಲಿ ಹಿಂತಿರುಗುತ್ತಾರೆ. ಇನ್ನು ಇಂದ್ರಜಿತ್ ಸಮೇತ ಆಂಜನೇಯ ನೆಲೆನಿಂತಿರುವ ಹದ್ದಿನಕಲ್ಲು ಕ್ಷೇತ್ರವು ನೈಸರ್ಗಿಕವಾಗಿಯೂ ಸುಂದರ ತಾಣವಾಗಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗಡಿಗ್ರಾಮವಾದ ಭೈರಸಂದ್ರದ ಬಳಿಯಿರುವ ಹದ್ದಿನಕಲ್ಲು ಆಂಜನೇಯ ಕ್ಷೇತ್ರಕ್ಕೆ ಮಂಗಳೂರು- ಬೆಂಗಳೂರು ರಾಜ್ಯ ಹೆದ್ದಾರಿಯ ಬೆಳ್ಳೂರು ಕ್ರಾಸ್ ನಲ್ಲಿರುವ ಟೋಲ್ ಕೇಂದ್ರದಿಂದ ಮುಂದಕ್ಕೆ ಬೆಂಗಳೂರಿನ ಕಡೆಗೆ ಎರಡು ಕಿ.ಮೀ ಸಾಗಿದರೆ ಹದ್ದಿನಕಲ್ಲು ಆಂಜನೇಯಸ್ವಾಮಿ ಕ್ಷೇತ್ರಕ್ಕೆ ಸ್ವಾಗತಿಸುವ ಹೆಬ್ಬಾಗಿಲು ಸಿಗುತ್ತದೆ. ಈ ಹಾದಿಯಲ್ಲಿ ಸುಮಾರು ನಾಲ್ಕು ಕಿ.ಮೀ ಮುನ್ನಡೆದರೆ ಭೈರಸಂದ್ರ ಗ್ರಾಮವಿದ್ದು, ಇದುವೇ ಹದ್ದಿನಕಲ್ಲು ಆಂಜನೇಯನ ನೆಲೆಯಾಗಿದೆ.

ದೇಗುಲ ತಲುಪಲು ಸಾವಿರ ಮೆಟ್ಟಿಲು ಏರಬೇಕು
ಇಲ್ಲಿ ಹನುಮಂತನ ದೇಗುಲವಿದ್ದು, ಸುತ್ತಲೂ ಬೃಹತ್ ಬಂಡೆಗಳಿಂದ ಆವೃತವಾದ ಬೆಟ್ಟಗಳು ಅದರ ನಡುವಿನ ಹಸಿರ ಸಿರಿ ಇಲ್ಲಿನ ಆಕರ್ಷಣೆ. ಸದಾ ನಗರದ ಗೌಜು ಗದ್ದಲದಲ್ಲಿದ್ದವರಿಗೆ ಇದು ಮನಸ್ಸಿಗೆ ಶಾಂತಿ ನೀಡುವ ತಾಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಮನಶಾಂತಿಗಾಗಿ ಬರುವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಆದರೆ ಇಲ್ಲಿಂದಲೇ ಆಂಜನೇಯನನ್ನಾಗಲೀ, ಇಂದ್ರಜಿತ್ ನನ್ನಾಗಲೀ ನೋಡಲು ಸಾಧ್ಯವಿಲ್ಲ. ಸ್ವಲ್ಪ ಶ್ರಮಪಡಲೇ ಬೇಕಾಗುತ್ತದೆ.
ಇಲ್ಲಿನ ಹನುಮಂತರಾಯಸ್ವಾಮಿ ದೇವಾಲಯದ ಪಕ್ಕದ ರಸ್ತೆಯಲ್ಲಿ ಕಡಿದಾದ ಹಾದಿಯಲ್ಲಿ ಸುಮಾರು ಒಂದು ಸಾವಿರ ಮೆಟ್ಟಿಲನ್ನು ಏರಲೇ ಬೇಕು. ಹೀಗೆ ಬೆಟ್ಟ ಏರುತ್ತಾ ಹೋಗುವಾಗ ಹಾದಿಯುದ್ದಕ್ಕೂ ವಾನರರು ಸ್ವಾಗತಿಸುತ್ತಾರೆ. ಬೆಟ್ಟದ ಮೇಲ್ಭಾಗ ತಲುಪುತ್ತಿದ್ದಂತೆಯೇ ಗರುಡಗಂಭದ ಆಂಜನೇಯನ ಮೂರ್ತಿಯ ದರ್ಶನವಾಗುತ್ತದೆ. ದೇಶದಲ್ಲಿಯೇ ಅಪರೂಪದ ಪುಣ್ಯಕ್ಷೇತ್ರವಾಗಿರುವ ಈ ಕ್ಷೇತ್ರವನ್ನು ದಾನಿಗಳು ಹಾಗೂ ಭಕ್ತರ ನೆರವಿನಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಭಿವೃದ್ಧಿಗೊಳಿಸಲಾಗಿದೆ.
ತಿರುಮಲ ಮಾದರಿಯ ಗರ್ಭಗುಡಿಯ ಗೋಪುರ
ಇಲ್ಲಿನ ಶ್ರೀ ಆಂಜನೇಯಸ್ವಾಮಿಯ ದೇವಾಲಯವನ್ನು ಪುನರುಜ್ಜೀವನಗೊಳಿಸಲಾಗಿದ್ದು, ತಿರುಮಲದಲ್ಲಿನ ಶ್ರೀ ವೆಂಕಟೇಶ್ವರಸ್ವಾಮಿಯ ದೇವಾಲಯದ ಗರ್ಭ ಗುಡಿಯ ಗೋಪುರದಂತೆ ದೇವಾಲಯದ ಗರ್ಭಗುಡಿ ಗೋಪುರವನ್ನು ಬಂಗಾರ ಲೇಪಿತ ತಗಡುಗಳಿಂದ ಅಲಂಕಾರ ಮಾಡಲಾಗಿದೆ. 80 ಅಡಿ ಎತ್ತರದ ರಾಜಗೋಪುರವು ಆಕರ್ಷಕವಾಗಿದೆ. ಇಲ್ಲಿ ಹರಕೆ ಹೊತ್ತ ಭಕ್ತರು ಆಂಜನೇಯಸ್ವಾಮಿಯ ಸರ್ವಾಲಂಕೃತ ಮೂರ್ತಿಯ ಅಡ್ಡಪಲ್ಲಕಿ ಉತ್ಸವವನ್ನು ನಡೆಸಿ ಹರಕೆ ತೀರಿಸಲು ಅವಕಾಶವಿದೆ.

ಕ್ಷೇತ್ರದಲ್ಲಿ ಪರ ಮತ್ತು ಪೂಜಾ ಕಾರ್ಯಗಳನ್ನು ನೆಂಟರಿಷ್ಟರು ಹಾಗೂ ಬಂಧುಗಳೊಡಗೂಡಿ ನಡೆಸಲು ವಿಶಾಲವಾದ ಸಭಾ ಭವನಗಳು ಹಾಗೂ ಮಂಟಪಗಳನ್ನು ನಿರ್ಮಿಸಲಾಗಿದೆ. ಬೆಟ್ಟದ ಕೆಳಗೆ ಹಾಗೂ ಮೇಲ್ಬಾಗದಲ್ಲಿ ಭಕ್ತರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯದಲ್ಲಿ ಪ್ರತಿನಿತ್ಯವೂ ಪೂಜೆ ಪುರಸ್ಕಾರಗಳು ಹಾಗೂ ಉತ್ಸವಗಳು ನಡೆದರೆ, ಶನಿವಾರದ ವಿಶೇಷ ದಿನಗಳಂದು ಹಾಗೂ ಹಬ್ಬ ಹರಿದಿನಗಳು, ಹನುಮಜಯಂತಿಯಂದು ಆಂಜನೇಯಸ್ವಾಮಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆಯುತ್ತವೆ.
ಹದ್ದಿನಕಲ್ಲು ಆಂಜನೇಯ ಕ್ಷೇತ್ರದ ವಿಶೇಷತೆ ಏನು?
ಬೇರೆಡೆ ಇರುವ ಆಂಜನೇಯ ಕ್ಷೇತ್ರಗಳಿಗೆ ಹೋಲಿಸಿದರೆ ಹದ್ದಿನಕಲ್ಲು ಆಂಜನೇಯ ಕ್ಷೇತ್ರವು ಹಲವು ವೈಶಿಷ್ಟ್ಯತೆ ಹೊಂದಿರುವುದನ್ನು ಕಾಣಬಹುದಾಗಿದೆ. ಬೇಡಿ ಬಂದ ಭಕ್ತರನ್ನು ಹರಸಿ ಆಶೀರ್ವದಿಸುವುದು ಒಂದೆಡೆಯಾದರೆ, ಅಸುರ ಇಂದ್ರಜಿತ್ ಗೆ ಪೂಜೆ ಸಲ್ಲಿಕೆಯಾಗುವುದು ವಿಶೇಷತೆಯಾಗಿದೆ. ಆಂಜನೇಯನಿಗೆ ಹಣ್ಣುಕಾಯಿಯ ನೈವೇದ್ಯವಾದರೆ, ಹರಕೆ ಹೊತ್ತವರು ಸಮೀಪದಲ್ಲಿರುವ ಇಂದ್ರಜಿತ್ ಗೆ ಮಾಂಸಹಾರಿ ಊಟದ ಎಡೆ ಬಡಿಸುತ್ತಾರೆ. ಇದೆಲ್ಲವನ್ನು ಇಲ್ಲಿನ ಕೋತಿಗಳು ಭಕ್ಷಿಸುವುದರೊಂದಿಗೆ ಮಾಂಸಹಾರಿಗಳಾಗಿರುವುದು ಗಮನಾರ್ಹವಾಗಿದೆ.
ಅದು ಏನೇ ಇರಲಿ ಹದ್ದಿನಕಲ್ಲು ಆಂಜನೇಯಸ್ವಾಮಿ ಕ್ಷೇತ್ರವು ಆಂಜನೇಯಸ್ವಾಮಿ ಕ್ಷೇತ್ರಗಳಲ್ಲಿಯೇ ವಿಭಿನ್ನ. ಇದರ ಜತೆಗೆ ಗಾಳಿ, ಪೀಡೆ ಪಿಶಾಚಿಗಳ ಸೋಂಕಿಗೆ ಶಾಶ್ವತವಾದ ಪರಿಹಾರವನ್ನು ದೊರಕಿಸಿಕೊಡುವ ಕ್ಷೇತ್ರವೂ ಹೌದು. ಇಂದ್ರಜಾಲ ವಿದ್ಯೆಯನ್ನು ಕರಗತಮಾಡಿಕೊಂಡಿದ್ದ ರಾವಣನ ಪುತ್ರ ಇಂದ್ರಜಿತ್ನಯನ್ನು ಪೂಜಿಸುವ ಏಕೈಕ ಕ್ಷೇತ್ರವೂ ಇದು. ಬೆಟ್ಟದಲ್ಲಿ ನೆಲೆಕಂಡುಕೊಂಡಿರುವ ವಾನರಗಳು ಹಣ್ಣು ಕಾಯಿಯ ಜೊತೆಗೆ ಮಾಂಸಾಹಾರವನ್ನು ಸ್ವೀಕರಿಸುವುದು ಇಲ್ಲಿಯೇ... ಹೀಗಾಗಿಯೇ ಈ ಕ್ಷೇತ್ರ ಹಲವು ವಿಶೇಷತೆಗಳ ತಾಣವಾಗಿ ಎಲ್ಲರ ಗಮನಸೆಳೆಯುತ್ತಿದೆ.












Click it and Unblock the Notifications