ಮೇ 6, 7ಕ್ಕೆ ಬೆಂಗಳೂರು-ವಿಜಯನಗರ ವಿಶೇಷ ರೈಲು, ವೇಳಾಪಟ್ಟಿ
ಬೆಂಗಳೂರು, ಮೇ 02: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮೇ 7ರಂದು ಮತದಾನ ನಡೆಯುತ್ತಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮತದಾನ ನಡೆಯಲಿದ್ದು, ಸಾವಿರಾರು ಜನರು ಬೆಂಗಳೂರು ನಗರದಿಂದ ಮತದಾನ ಮಾಡಲು ಊರುಗಳಿಗೆ ತೆರಳಲಿದ್ದಾರೆ.
ಮತದಾನ ಮಾಡಲು ತೆರಳು ಜನರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಬೆಂಗಳೂರಿನ ಯಶವಂತಪುರ ಮತ್ತು ವಿಜಯನಗರ ನಡುವೆ ಒಂದು ಟ್ರಿಪ್ ವಿಶೇಷ ರೈಲನ್ನು ಓಡಿಸಲಿದೆ. ಈಗಾಗಲೇ ರೈಲಿನ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ.

ಯಶವಂತಪುರ ಮತ್ತು ವಿಜಯನಗರ ನಡುವೆ ರೈಲು ನಂಬರ್ 07319/ 07320 ರೈಲು ಒಂದು ಟ್ರಿಪ್ ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ. ಈ ರೈಲು ಮೇ 6ರಂದು ಯಶವಂತಪುರದಿಂದ ಮತ್ತು ಮೇ 7ರಂದು ವಿಜಯನಗರದಿಂದ ಸಂಚಾರ ನಡೆಸಲಿದೆ.
ಒಂದು ಟ್ರಿಪ್ ವಿಶೇಷ ರೈಲು 1 ಎಸಿ 2 ಟೈರ್, 2 ಎಸಿ 2 ಟೈರ್, 8 ಸ್ಲೀಪರ್ ಕೋಚ್, 4 ಜನರಲ್ ಸೆಕೆಂಡ್ ಕ್ಲಾಸ್, 2 ಲಗೇಜ್ ಕಂ ಬ್ರೇಕ್ ವ್ಯಾನ್ ಒಳಗೊಂಡಿದೆ. ಆನ್‌ಲೈನ್ ಮೂಲಕ ಮುಂಗಡ ಟಿಕೆಟ್ ಬುಕ್ ಮಾಡಬಹುದಾಗಿದೆ.
ರೈಲು ವೇಳಾಪಟ್ಟಿ: ರೈಲು ನಂಬರ್ 07319 ಯಶವಂತಪುರ-ವಿಜಯನಗರ ಮೇ 6ರ ಸೋಮವಾರ 21:55ಕ್ಕೆ ಯಶವಂತಪುರದಿಂದ ಹೊರಡಲಿದೆ. ರೈಲು ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಎಸ್ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ ಜಂಕ್ಷನ್, ಬೆಳಗಾವಿ, ಗೋಕಾಕ್ ರೋಡ್, ಘಟಪ್ರಭಾ, ಚಿಕ್ಕೋಡಿ ರೋಡ್, ರಾಯಭಾಗ, ಕುಡಚಿ, ಉಗಾರ ಖುರ್ದಾ ಮೂಲಕ ವಿಜಯನಗರಕ್ಕೆ 10.30ಕ್ಕೆ ತಲುಪಲಿದೆ.
ರೈಲು ನಂಬರ್ 07320 ವಿಜಯನಗರ-ಯಶವಂತಪುರ ರೈಲು ಮೇ 7ರ ಮಂಗಳವಾರ 16:30ಕ್ಕೆ ವಿಜಯನಗರದಿಂದ ಹೊರಡಲಿದೆ. ಉಗಾರ ಖುರ್ದಾ, ಕುಡಚಿ, ರಾಯಭಾಗ, ಚಿಕ್ಕೋಡಿ ರೋಡ್, ಘಟಪ್ರಭಾ, ಗೋಕಾಕ್ ರೋಡ್, ಬೆಳಗಾವಿ, ಲೋಂಡಾ ಜಂಕ್ಷನ್, ಧಾರವಾಡ, ಎಸ್ಎಸ್‌ಎಸ್ ಹುಬ್ಬಳ್ಳಿ, ಎಸ್ಎಸ್‌ಎಂ ಹಾವೇರಿ, ಹರಿಹರ, ದಾವಣಗೆರೆ, ಬೀರೂರು ಜಂಕ್ಷನ್, ಅರಸೀಕರೆ ಜಂಕ್ಷನ್, ತುಮಕೂರು ಮೂಲಕ ಯಶವಂತಪುರ ಜಂಕ್ಷನ್‌ಗೆ 5.25ಕ್ಕೆ ಆಗಮಿಸಲಿದೆ.
ಒಂದು ಟ್ರಿಪ್ ಮಾತ್ರ ಸಂಚಾರ ನಡೆಸು ವಿಶೇಷ ರೈಲು ಇದಾಗಿದೆ ಎಂದು ನೈಋತ್ಯ ರೈಲ್ವೆ ಸ್ಪಷ್ಟಪಡಿಸಿದೆ. ಮತದಾನದ ದಿನ ಊರುಗಳಿಗೆ ಬೆಂಗಳೂರು ನಗರದಿಂದ ಸಂಚಾರ ನಡೆಸುವ ಜನರು ಈ ರೈಲಿನ ಉಪಯೋಗ ಪಡೆದುಕೊಳ್ಳಬಹುದಾಗಿದೆ.
ಅಂದಹಾಗೆ ಮೇ 7ರ ಮಂಗಳವಾರ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಉತ್ತರ ಕನ್ನಡ, ಧಾರವಾಡ, ದಾವಣಗೆರೆ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.











Click it and Unblock the Notifications