ಉಡುಪಿ, ಕೊಲ್ಲೂರು, ಶೃಂಗೇರಿ ನೋಡಲು ಈ ರೈಲು ಹತ್ತಿ, ವೇಳಾಪಟ್ಟಿ ವಿವರ
ಬೆಂಗಳೂರು, ನವೆಂಬರ್ 17: ಭಾರತೀಯ ರೈಲ್ವೇ ಸಚಿವಾಲಯ ದೇಶದ ಪ್ರಮುಖ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ಥಳಗಳನ್ನು ರೈಲಿನ ಮೂಲಕ ಸಂಪರ್ಕಿಸುವ 'ಭಾರತ್ ಗೌರವ್' ರೈಲುಗಳನ್ನು ಪರಿಚಯಿಸಿದೆ. ದಕ್ಷಿಣ ಭಾರತದಲ್ಲಿ ಸಂಚಾರ ಈ ಮಾದರಿಯ ಒಂದು ರೈಲು ಕರ್ನಾಟಕದ ಹಲವು ಧಾರ್ಮಿಕ ಕ್ಷೇತ್ರಗಳನ್ನು ಕಣ್ತುಂಬಿಕೊಳ್ಳಲು ಸಹಾಯಕವಾಗಿದೆ.
' ಗೋವಾ, ಮೂಕಾಂಬಿಕಾ & ಸೌತ್ ಕೆನರಾ ವಿಶೇಷ' ಎಂಬ ಭಾರತ್ ಗೌರವ್ ರೈಲು ತನ್ನ 11ನೇ ಸಂಚಾರಕ್ಕೆ ಸಿದ್ಧವಾಗಿದೆ. ಇದು ದಕ್ಷಿಣ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರವಾಸಿಗರಿಗೆ ದರ್ಶನ ಮಾಡಿಸಲಿದೆ. ಕರ್ನಾಟಕದಲ್ಲಿಯೂ ಈ ರೈಲು ಸಂಚಾರ ನಡೆಸಲಿದೆ.

ಯಾವ-ಯಾವ ತಾಣಗಳು?; ಭಾರತ್ ಗೌರವ್ ಪ್ಯಾಕೇಜ್ ಅಡಿ ಸಂಚಾರ ನಡೆಸುವ 'ಗೋವಾ, ಮೂಕಾಂಬಿಕಾ & ಸೌತ್ ಕೆನರಾ ವಿಶೇಷ' ರೈಲು ಕರ್ನಾಟಕದ ಉಡುಪಿ, ಕೊಲ್ಲೂರು ಮೂಕಾಂಬಿಕ ದೇವಾಲಯ, ಮುರುಡೇಶ್ವರ, ಶೃಂಗೇರಿ, ಹೊರನಾಡು ದೇವಾಲಯಗಳ ಭೇಟಿಗೆ ಅನುಕೂಲಕರವಾಗಿದೆ. ಬಳಿಕ ಈ ರೈಲು ಗೋವಾ ರಾಜ್ಯಕ್ಕೆ ಸಾಗುತ್ತದೆ.
SZBG11 ಸಂಖ್ಯೆಯ 'ಗೋವಾ, ಮೂಕಾಂಬಿಕಾ & ಸೌತ್ ಕೆನರಾ ವಿಶೇಷ' ರೈಲು ಡಿಸೆಂಬರ್ 7ರಂದು ಕೊಚುವೇಲಿಯಿಂದ ಹೊರಡಲಿದೆ. ಮಾರ್ಗದಲ್ಲಿ ರೈಲು ಟೆಂಕಸಿ, ಶಿವಕಾಶಿ, ಮುಧುರೈ, ದಿಂಡಿಗಲ್, ತಿರುಚ್ಚಿ, ತಂಜಾವೂರ್, ವಿಲ್ಲುಪುರಂ, ಚೆಂಗಲ್‌ಪೆಟ್, ಚೆನ್ನೈ ಇಗ್ಮೋರ್, ಕಟಪಾಡಿ, ಜೋಲಾರಪಟ್ಟಿ, ಸೇಲಂ, ಪಾಲಕ್ಕಾಡ್, ಕೊಯಿಕ್ಕೋಡ್, ಕಾಸರಗೋಡು, ಮಂಗಳೂರು ಜಂಕ್ಷನ್, ಉಡುಪಿ, ಕಾರವಾರ ಮೂಲಕ ಮಡಗಾಂವ್‌ಗೆ ಡಿಸೆಂಬರ್ 8ರಂದು ತಲುಪಲಿದೆ.
ರೈಲು ಡಿಸೆಂಬರ್ 10ರಂದು ಮಡಗಾಂವ್‌ನಿಂದ ಹೊರಡಲಿದೆ. ಕಾರವಾರ, ಉಡುಪಿ, ಮಂಗಳೂರು ಜಂಕ್ಷನ್, ಕೊಯಿಕ್ಕೋಡ್, ಪಾಲಕ್ಕಾಡ್, ಸೇಲಂ, ಜೋಲಾರಪಟ್ಟಿ, ಕಟಪಾಡಿ, ಚೆನ್ನೈ ಇಗ್ಮೋರ್, ಚೆಂಗಲ್‌ಪೇಟ್, ವಿಲ್ಲುಪುರಂ, ತಂಜಾವೂರ್, ತಿರುಚ್ಚಿ, ದಿಂಡಿಗಲ್, ಮಧುರೈ, ಶಿವಕಾಶಿ, ಟೆಂಕಸಿ ಮೂಲಕ ಡಿಸೆಂಬರ್ 12ರಂದು ಕೊಚಿವೇಲ್ ತಲುಪಲಿದೆ.
ಈ ರೈಲು 3 ಎಸಿ ತ್ರಿ ಟೈರ್, 8 ಸ್ಲೀಪರ್ ಕೋಚ್, 1 ಪ್ಯಾಂಟ್ರಿ ಮತ್ತು 2 ಪವರ್ ಕಾರ್ ಬೋಗಿಗಳನ್ನು ಒಳಗೊಂಡಿದೆ. ಈ ರೈಲಿನಲ್ಲಿ ಸಂಚಾರ ನಡೆಸುವ ಪ್ರಯಾಣಿಕರು ಉಡುಪಿ, ಕೊಲ್ಲೂರು ಮೂಕಾಂಬಿಕ, ಮುರುಡೇಶ್ವರ, ಶೃಂಗೇರಿ ಮತ್ತು ಹೊರನಾಡು ವೀಕ್ಷಣೆ ಮಾಡಬಹುದಾಗಿದೆ.
'ಗೋವಾ, ಮೂಕಾಂಬಿಕಾ & ಸೌತ್ ಕೆನರಾ ವಿಶೇಷ' ಎಂಬ ಭಾರತ್ ಗೌರವ್ ರೈಲು ವಿವರ, ಮಾಹಿತಿಗಾಗಿ 9003140680, 9003140682 (ಚೆನ್ನೈ), 8287931964 (ಮಧುರೈ), 8287931977, 8287932122 (ತಿರುಚ್ಚಿ) ಸಂಖ್ಯೆಗೆ ಕರೆ ಮಾಡಬಹುದು. www.irctctourism.com ವೆಬ್‌ಸೈಟ್‌ಗೆ ಸಹ ಭೇಟಿ ನೀಡಬಹುದು.
ಕರ್ನಾಟಕದಿಂದಲೂ ಒಂದು 'ಭಾರತ್ ಗೌರವ್ ಕಾಶಿ ದರ್ಶನ' ರೈಲು ಸಂಚಾರ ನಡೆಸುತ್ತದೆ. 2022ರ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ರೈಲಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಈ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿದೆ. ಕಾಶಿ ಯಾತ್ರೆ ಹೋಗುವ ಯಾತ್ರಿಕರಿಗೆ ಕರ್ನಾಟಕ ಸರ್ಕಾರ 5 ಸಾವಿರ ರೂ. ಸಬ್ಸಿಡಿ ಸಹ ನೀಡುತ್ತದೆ.
ಕರ್ನಾಟಕ ಸರ್ಕಾರ ಮತ್ತು ರೈಲ್ವೇ ಸಚಿವಾಲಯವು ಕರ್ನಾಟಕದಿಂದ ಕಾಶಿಗೆ ಯಾತ್ರಾರ್ಥಿಗಳನ್ನು ಕಳುಹಿಸಲು ಜಂಟಿಯಾಗಿ ಭಾರತ್ ಗೌರವ್ ಯೋಜನೆಯಡಿ 'ಭಾರತ್ ಗೌರವ್ ಕಾಶಿ ದರ್ಶನ' ರೈಲು ಸಂಚಾರ ಆರಂಭಿಸಿವೆ. ಕಾಶಿ, ಅಯೋಧ್ಯೆ ಮತ್ತು ಪ್ರಯಾಗರಾಜ್‌ಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಆರಾಮದಾಯಕ ವಾಸ್ತವ್ಯವನ್ನು ಈ ರೈಲು ಸೇವೆ ಒದಗಿಸುತ್ತದೆ.











Click it and Unblock the Notifications