ಕರಿಘಟ್ಟದ ಹಸಿರು ಚೆಲ್ಲುವ ನಿಸರ್ಗದ ನೋಟ ನೋಡಿದ್ದೀರಾ? ಈ ಕ್ಷೇತ್ರದ ವಿಶೇಷತೆ ಏನು ಗೊತ್ತಾ..?
ವೀಕೆಂಡ್ ಟ್ರಿಪ್ ಗೆ ಸ್ಥಳೀಯವಾಗಿರುವ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿಗೆ ತೆರಳಿ ಒಂದಷ್ಟು ಸಮಯವನ್ನು ಕಳೆದು ಬರುವುದು ಜಾಣತನವಾಗುತ್ತದೆ. ಅದರಲ್ಲೂ ತಲೆ ಸುಡುವ ಬೇಸಿಗೆಯಲ್ಲಿ ಒಂದಷ್ಟು ತಂಗಾಳಿ ಬೀಸುವ, ನಿಸರ್ಗದ ಸುಂದರ ತಾಣಗಳಿಗೆ ತೆರಳಿದ್ದೇ ಆದರೆ ಮೈಮನ ಹಗುರವಾಗಿರುವುದರೊಂದಿಗೆ ಒತ್ತಡದ ಬದುಕಿಗೆ ಬದಲಾವಣೆ ಸಿಕ್ಕಂತಾಗುತ್ತದೆ. ಇದೆಲ್ಲ ಸಾಧ್ಯವಾಗಬೇಕಾದರೆ ಕರಿಘಟ್ಟದತ್ತ ಪ್ರಯಾಣ ಹೊರಡಬೇಕಾಗುತ್ತದೆ.
ಕರಿಘಟ್ಟದ ಬಗ್ಗೆ ಮೈಸೂರು ಮಂಡ್ಯ ಭಾಗದವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಹಲವು ಸಿನಿಮಾಗಳಲ್ಲಿ ಇಲ್ಲಿನ ಸುಂದರತೆ ದಾಖಲಾಗಿದೆ. ಕರಿಘಟ್ಟಕ್ಕೆ ಹಸಿರು ಕಾನನದ ನಡುವಿನ ಅಂಕು ಡೊಂಕಾದ ಏರು ಹಾದಿಯಲ್ಲಿ ಸಾಗುವ ಮಜಾ ಮತ್ತು ದೂರದಿಂದ ಕಾಣಸಿಗುವ ಸುಂದರ ದೃಶ್ಯ ನಮ್ಮ ಮನಪಟಲದಲ್ಲಿ ಅಚ್ಚೊತ್ತಿದಂತೆ ಉಳಿಯುತ್ತದೆ. ಇಲ್ಲಿಗೆ ಮಳೆಗಾಲದಲ್ಲಿ ಭೇಟಿ ನೀಡಿದಾಗ ಸಿಗುವ ದೃಶ್ಯಕ್ಕೂ ಬೇಸಿಗೆಯಲ್ಲಿ ಕಂಡು ಬರುವ ನೋಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ಅದು ಏನೇ ಇರಲಿ ಕರಿಘಟ್ಟಕ್ಕೆ ಯಾವತ್ತೇ ಭೇಟಿ ನೀಡಿದರೂ ನಿಮ್ಮ ಪ್ರಯಾಣ ಸುಖಕರ ಮತ್ತು ಸುಂದರವಾಗಿರುತ್ತದೆ ಎನ್ನು ವುದರಲ್ಲಿ ಎರಡು ಮಾತಿಲ್ಲ. ಮಂಡ್ಯ ಜಿಲ್ಲೆಗೆ ಸೇರುವ ಕರಿಘಟ್ಟವು ಶ್ರೀರಂಗಪಟ್ಟಣಕ್ಕೆ ಸುಮಾರು ಆರು ಕಿ.ಮೀ.ದೂರದಲ್ಲಿದೆ. (ಮೈಸೂರಿನಿಂದ 22ಕಿ.ಮೀ) ಅಲ್ಲದೆ ಶ್ರೀರಂಗಪಟ್ಟಣವು ಮೈಸೂರಿಗೆ ಸಮೀಪದಲ್ಲಿರುವ ಕಾರಣ ಮೈಸೂರಿಗೆ ಬರುವ ಪ್ರವಾಸಿಗರು ಈ ತಾಣವನ್ನು ತಮ್ಮ ಪ್ರವಾಸದ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದಾಗಿದೆ.
ಇದು ಭಕ್ತರಿಗೆ ಭಕ್ತಿಯ ತಾಣ
ಸಾಮಾನ್ಯವಾಗಿ ಶ್ರೀರಂಗಪಟ್ಟಣ ಪವಿತ್ರಕ್ಷೇತ್ರವಾಗಿಯೂ ಐತಿಹಾಸಿಕ ತಾಣವಾಗಿಯೂ ಗಮನಸೆಳೆಯುತ್ತದೆ. ಇಲ್ಲಿಗೆ ಸಮೀಪದಲ್ಲಿ ನಿಸರ್ಗ ಸೌಂದರ್ಯವನ್ನು ಮೈಮೇಲೆ ಎಳೆದು ಕೊಂಡು ಕರಿಘಟ್ಟ ನಿಂತಿದೆ. ಪಕೃತಿಯ ಚೆಲುವನ್ನು ಹೊಂದಿರುವುದಲ್ಲದೆ, ಶ್ರೀ ವೆಂಕಟರಮಣಸ್ವಾಮಿ ದೇಗುಲವೂ ಇರುವುದರಿಂದ ಭಕ್ತರಿಗೆ ಭಕ್ತಿಯ ತಾಣವಾಗಿ, ನಿಸರ್ಗ ಪ್ರೇಮಿಗಳಿಗೆ ರಮಣೀಯ ತಾಣವಾಗಿ ತನ್ನತ್ತ ಸೆಳೆಯುತ್ತದೆ.
ಕರಿಘಟ್ಟವು ಕಪ್ಪಾದ ಬಂಡೆಕಲ್ಲುಗಳಿಂದ ಕೂಡಿ ಮತ್ತು ಅದರ ನಡುವೆ ಬೃಹತ್ ಗಿಡಮರಗಳಿಲ್ಲದೆ, ಹುಲ್ಲು, ಕುರುಚಲು ಕಾಡುಗಳಿಂದ ಕೂಡಿದ ಬೆಟ್ಟವಾಗಿದೆ. ಹೀಗಾಗಿ ಬೇಸಿಗೆ ಬರುತ್ತಿದ್ದಂತೆಯೇ ಇಲ್ಲಿನ ಕಾಡು ಬಿಸಿಲಿಗೆ ಒಣಗಿ ಕರಿಕಲ್ಲುಗಳು ಎದ್ದು ಕಾಣಿಸುತ್ತವೆ. ಇನ್ನು ಈ ಬಂಡೆಗಳು ಸದಾ ಕಪ್ಪಾಗಿರಬೇಕು ಎಂಬ ಮೂಢನಂಬಿಕೆ ಕಾರಣ ಇಲ್ಲಿ ಬೆಂಕಿ ಹಚ್ಚಲಾಗುತ್ತದೆ ಎಂಬ ಆರೋಪಗಳಿವೆ. ಇನ್ನು ಕೆಲವರು ಕಾಡ್ಗಿಚ್ಚಿನಿಂದ ಅಗ್ನಿ ಅನಾಹುತ ಸಂಭವಿಸುತ್ತವೆ ಎಂದು ಹೇಳುತ್ತಾರೆ. ಆದರೆ ಪ್ರತಿವರ್ಷವೂ ಈ ಅರಣ್ಯದಲ್ಲಿ ಅಗ್ನಿ ಅನಾಹುತ ಸಂಭವಿಸುವುದು ಮಾತ್ರ ಬೇಸರದ ಸಂಗತಿಯಾಗಿದೆ.

ವೆಂಕಟರಮಣಸ್ವಾಮಿ ದೇಗುಲದ ವಿಶೇಷತೆ
ಈ ಬೆಟ್ಟದಲ್ಲಿರುವ ವೆಂಕಟರಮಣಸ್ವಾಮಿ ದೇಗುಲದಲ್ಲಿ ಶ್ರೀನಿವಾಸ ನೆಲೆನಿಂತಿರುವ ಕಾರಣ ಪರಮ ಪವಿತ್ರವಾಗಿದೆ. ಇನ್ನು ಶಿಷ್ಯರೊಂದಿಗೆ ದಕ್ಷಿಣ ಭಾರತದಲ್ಲಿ ಯಾತ್ರೆ ಕೈಗೊಂಡ ಭೃಗು ಮಹರ್ಷಿಗಳು ಕರಿಘಟ್ಟಕ್ಕೆ ಬಂದಿದರೆಂದೂ ಅವರು ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಸಲುವಾಗಿ ಶ್ರೀನಿವಾಸನ ಮೂಲ ವಿಗ್ರಹವನ್ನು ಪ್ರತಿಷ್ಠಾಪಿಸಿದರೆಂದೂ ಹೇಳಲಾಗುತ್ತದೆ. ಇನ್ನು ಈ ದೇಗುಲವನ್ನು ಚೋಳರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಪುರಾತತ್ವ ಇಲಾಖೆಯ ದಾಖಲೆಗಳು ಹೇಳುತ್ತವೆ. ಆ ನಂತರ ದೇಗುಲವನ್ನು ಮೈಸೂರಿನ ಅರಸರು ಜೀರ್ಣೋದ್ಧಾರಗೊಳಿಸಿದರು ಎನ್ನಲಾಗಿದೆ.
ಶ್ರೀರಂಗಪಟ್ಟಣದಿಂದ ಅಂಕು ಡೊಂಕಾದ ಹಾದಿಯಲ್ಲಿ ಕರಿಘಟ್ಟದ ಕಡೆಗೆ ತೆರಳಿದರೆ ಬೆಟ್ಟ ತಲುಪುತ್ತಿದ್ದಂತೆಯೇ ಪ್ರವೇಶದ್ವಾರ ಕಾಣಿಸುತ್ತದೆ ಇಲ್ಲಿಂದ 550 ಮೆಟ್ಟಿಲುಗಳನ್ನೇರಿ ದೇಗುಲದತ್ತ ತೆರಳಬಹುದಾಗಿದೆ. ಇನ್ನು ರಸ್ತೆಯ ಮೂಲಕವೂ ದೇಗುಲಕ್ಕೆ ಸಾಗಬಹುದಾಗಿದೆ. ಈ ಮೆಟ್ಟಿಲುಗಳನ್ನು ಮೈಸೂರಿನ ಮಹಾರಾಜ ಚಿಕ್ಕದೇವರಾಜ ಒಡೆಯರ್ ನಿರ್ಮಿಸಿದ್ದಾರೆ. ಮೆಟ್ಟಿಲನ್ನೇರುವಾಗ ಸುಸ್ತಾದರೆ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಇಕ್ಕೆಲಗಳಲ್ಲಿ ಅರವಟ್ಟಿಗೆಯ ವ್ಯವಸ್ಥೆಯಿದೆ.
ರಾಜರ ಕಾಲದಲ್ಲಿ ಕಾವಲು ಕಾಯುತ್ತಿದ್ದರು
ಉತ್ತರ ದಿಕ್ಕಿಗೆ ಬಾಗಿಲು ಹೊಂದಿರುವ ಶ್ರೀನಿವಾಸ ದೇಗುಲದ ಬಗ್ಗೆ ಹೇಳಬೇಕೆಂದರೆ ಇದರ ಗರ್ಭಗುಡಿಯು ದ್ರಾವಿಡ ಶೈಲಿಯಲ್ಲಿದ್ದು, ಶ್ರೀನಿವಾಸನ ವಿಗ್ರಹವು ಕೃಷ್ಣ ಶಿಲೆಯಿಂದ ನಿರ್ಮಿಸಲಾಗಿದೆ. ಇದರ ಬಲಬದಿಯಲ್ಲಿ ಯೋಗಾ ವೆಂಕಟೇಶ ಹಾಗೂ ಎಡಬದಿಯಲ್ಲಿ ಭೋಗಾ ವೆಂಕಟೇಶನ ವಿಗ್ರಹಗಳಿವೆ. ಜತೆಗೆ ದೇಗುಲದಲ್ಲಿ ದಕ್ಷಿಣಕ್ಕೆ ಪದ್ಮಾವತಿ ಅಮ್ಮನವರ ಗುಡಿ ಇದೆ. ಗರುಡ, ಆಂಜನೇಯ, ಸೀತಾರಾಮ, ಲಕ್ಷ್ಮಣರ ಆಕರ್ಷಕ ವಿಗ್ರಹಗಳು ಇಲ್ಲಿವೆ. ಇಷ್ಟೇ ಅಲ್ಲದೆ ದೇವಸ್ಥಾನದ ಹೊರಗೆ ಹತ್ತಾರು ಕಲ್ಲಿನ ಮಂಟಪಗಳು ಇತಿಹಾಸದ ಕಥೆ ಹೇಳುತ್ತವೆ.
ವೆಂಕಟರಮಣ ಸ್ವಾಮಿ ದೇವಸ್ಥಾನವಿರುವ ಕರಿಘಟ್ಟವು ಸಮುದ್ರ ಮಟ್ಟದಿಂದ 2,697 ಅಡಿಗಳ ಎತ್ತರದಲ್ಲಿದೆ. ಬೆಟ್ಟದಲ್ಲಿ ಕಪ್ಪುಕಲ್ಲುಗಳೇ ಹೆಚ್ಚಿರುವ ಹಿನ್ನಲೆಯಲ್ಲಿ ಕರಿಗಿರಿ, ಬೆಟ್ಟದ ಮೇಲ್ಭಾಗದಲ್ಲಿ ಮೋಡಗಳು ಲಾಸ್ಯವಾಡುವುದರಿಂದ ನೀಲಾಚಲ ಹೀಗೆ ಹಲವು ಹೆಸರುಗಳಿಂದ ಕರೆಯುವುದಿದೆ. ಕರಿಘಟ್ಟವು ಶ್ರೀನಿವಾಸನ ಗುಡ್ಡ, ಕಾವಲು ಗುಡ್ಡ ಹಾಗೂ ಚಿನ್ನಾಯಕನಹಳ್ಳಿ ಗುಡ್ಡ ಎಂಬ ಮೂರು ಗುಡ್ಡ ಪ್ರದೇಶದಿಂದ ಆವೃತವಾಗಿದೆ. ಇದು ಎತ್ತರದ ಪ್ರದೇಶವಾಗಿರುವುದರಿಂದ ಹಿಂದೆ ಟಿಪ್ಪು ಮತ್ತು ಮೈಸೂರು ಅರಸರ ಕಾಲದಲ್ಲಿ ಶತ್ರುಗಳ ಮೇಲೆ ಕಣ್ಣಿಟ್ಟು ಕಾಯಲು ಈ ಪ್ರದೇಶವನ್ನು ಬಳಕೆ ಮಾಡಿಕೊಂಡಿದ್ದರಂತೆ ಹೀಗಾಗಿ ಕಾವಲುಗೋಪುರ ಹಾಗೂ ಕೋಟೆ ಬೆಟ್ಟ ಎಂದು ಕರೆಯಲಾಗುತ್ತದೆ.
ಸುತ್ತಮುತ್ತಲ ಸುಂದರ ನೋಟ ಲಭ್ಯ
ಇವತ್ತು ಇಲ್ಲಿಂದ ದೃಷ್ಟಿ ನೆಟ್ಟರೆ ಕಾವೇರಿಯ ವಿಹಂಗಮ ನೋಟದೊಂದಿಗೆ ಮಂಡ್ಯದ ಸುಂದರ ತಾಣಗಳಾದ ಶ್ರೀರಂಗಪಟ್ಟಣ, ಗಂಜಾಂ, ಪಾಂಡವಪುರ, ಕುಂತಿಬೆಟ್ಟ, ಮೇಲುಕೋಟೆ ಬೆಟ್ಟದ ಸರಹದ್ದುಗಳು ಹಾಗೂ ಮೈಸೂರಿನ ಹಲವು ಸುಂದರ ನೋಟಗಳು ಕಣ್ಣಿನಲ್ಲಿ ಸೆರೆಯಾಗುತ್ತದೆ. ಕರಿಘಟ್ಟದ ತುತ್ತತುದಿಯಲ್ಲಿ ಸುಮಾರು 60-70 ಮೀಟರ್ ಉದ್ದ ಟಿಪ್ಪು ಕಾಲದ ಕೋಟೆಯ ಅವಶೇಷಗಳು ಹಾಗೂ ಹಾದಿಯಲ್ಲಿನ ಕೆಂಬಣ್ಣದ ಕೋಡುಗಲ್ಲಿನಂತೆ ಆಂಗ್ಲದ ಸಿ' ಅಕ್ಷರದಾಕಾರದಲ್ಲಿ ಸುಮಾರು 5 ಅಡಿ ಎತ್ತರದ ನಾಲ್ಕು ಕೋಟೆಯ ಗೋಡೆಗಳನ್ನು ಸ್ಥಳೀಯ ಕಲ್ಲುಗಳಿಂದ ನಿರ್ಮಿಸಲಾಗಿತ್ತು ಇದು ಇವತ್ತಿಗೂ ಇತಿಹಾಸದ ಕಥೆ ಹೇಳುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ಕರಿಘಟ್ಟಕ್ಕೆ ಹೋಗುವವರಿಗೆ ಶ್ರೀರಂಗಪಟ್ಟಣದಿಂದ ಬಸ್ ಹಾಗೂ ಖಾಸಗಿ ವಾಹನಗಳ ವ್ಯವಸ್ಥೆಯಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications