ಮೈಸೂರಿನಲ್ಲಿ ಜೈನರ ಪವಿತ್ರ ಸ್ಥಳ: ಶಾಂತಿ ಅರಸಿ ಬರುವವರಿಗೆ ಗೊಮ್ಮಟಗಿರಿ ಪ್ರಸಕ್ತ ತಾಣ
ಮೈಸೂರು, ನವೆಂಬರ್ 20: ಶಾಂತಿ, ಅಹಿಂಸೆ, ಲೌಕಿಕ ವ್ಯವಹಾರಗಳ ತ್ಯಾಗ ಮತ್ತು ಸರಳ ಜೀವನದ ಉಪದೇಶಗಳನ್ನು ಜಗತ್ತಿಗೆ ಸಾರುತ್ತಾ ಬಂದಿರುವ ಬಾಹುಬಲಿ ಅರ್ಥಾತ್ ಗೊಮ್ಮಟೇಶ್ವರನ ಪ್ರತಿಮೆಗಳು ಹಲವೆಡೆ ಕಾಣಸಿಗುತ್ತವೆ. ಅದರಲ್ಲೂ ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ವಿಶ್ವಖ್ಯಾತ ಗಳಿಸಿದೆ.
ಉಳಿದಂತೆ, ಧರ್ಮಸ್ಥಳ, ಕಾರ್ಕಳ, ವೇಣೂರು, ಮಂಡ್ಯದ ಕೆಆರ್‌ಎಸ್ ಹಿನ್ನೀರು ಪ್ರದೇಶದ ಬಸ್ತಿಕೋಟೆ ಹಾಗೂ ಮೈಸೂರಿನ ಗೊಮ್ಮಟಗಿರಿಯಲ್ಲಿ ಗೊಮ್ಮಟೇಶ್ವರ ನೆಲೆ ನಿಂತು ಭಕ್ತರನ್ನು ಸೆಳೆಯುತ್ತಿರುವುದು ವಿಶೇಷವಾಗಿದೆ.

ಸಾಮಾನ್ಯವಾಗಿ ಗೊಮ್ಮಟೇಶ್ವರ ಎಂದ ತಕ್ಷಣ ನಮ್ಮ ಚಿತ್ತ ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಗೊಮ್ಮಟೇಶ್ವರನತ್ತ ಹೊರಳುತ್ತದೆ. ಆದರೆ ಭಕ್ತರ ಅನುಕೂಲಕ್ಕೆ ತಕ್ಕಂತೆ ಮತ್ತು ಶಾಂತಿ, ತ್ಯಾಗ, ಸರಳತೆಯನ್ನು ಸಾರುವ ನಿಟ್ಟಿನಲ್ಲಿ ವಿವಿಧೆಡೆ ಜೈನ ಧರ್ಮಗಳ ಪ್ರಾಬಲ್ಯವಿದ್ದ ಪ್ರಾಂತ್ಯಗಳಲ್ಲಿ ಹಲವು ಶತಮಾನಗಳ ಹಿಂದೆಯೇ ಗೊಮ್ಮಟೇಶ್ವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿರುವುದನ್ನು ಕಾಣಬಹುದಾಗಿದೆ.
ಆ ಪೈಕಿ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಗೆ ಸೇರಲ್ಪಡುವ ಬೆಟ್ಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಗೊಮ್ಮಟಗಿರಿ ಬೆಟ್ಟದಲ್ಲಿ ನೆಲೆ ನಿಂತಿರುವ ಗೊಮ್ಮಟೇಶ್ವರ ಒಂದಾಗಿದ್ದು, ಜೈನರಿಗೆ ಪವಿತ್ರ ತಾಣವಾಗಿ, ಪ್ರವಾಸಿಗರಿಗೆ ಪ್ರವಾಸಿ ತಾಣವಾಗಿಯೂ ಆಕರ್ಷಿಸುತ್ತಿದೆ. ಗೊಮ್ಮಟಗಿರಿ ಕ್ಷೇತ್ರ ಶ್ರವಣಬೆಳಗೊಳದಷ್ಟು ಪ್ರಖ್ಯಾತಿ ಹೊಂದಿಲ್ಲದಿದ್ದರೂ ಪ್ರವಾಸಿ ತಾಣವಾಗಿ ಪ್ರವಾಸಿಗರನ್ನು ಮತ್ತು ಭಕ್ತರನ್ನು ತನ್ನತ್ತ ಸೆಳೆಯುವಲ್ಲಿ ಹಿಂದೆ ಬಿದ್ದಿಲ್ಲ.
ಎಂಟು ಶತಮಾನಗಳ ಇತಿಹಾಸ
ಪ್ರತಿ ದಿನವೂ ಇಲ್ಲಿಗೆ ಪ್ರವಾಸಿಗರು ಮತ್ತು ಜೈನಭಕ್ತರು ಆಗಮಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಹೋಗುತ್ತಿರುತ್ತಾರೆ. ಈ ಕ್ಷೇತ್ರದ ಕುರಿತಂತೆ ನೋಡುತ್ತಾ ಹೋದರೆ ಇಲ್ಲಿರುವ ಗೊಮ್ಮಟೇಶ್ವರ ಮೂರ್ತಿಗೆ ಸುಮಾರು ಎಂಟು ಶತಮಾನಗಳ ಇತಿಹಾಸ ಇರುವುದು ಗೊತ್ತಾಗುತ್ತದೆ. ಇನ್ನೂರು ಅಡಿ ಎತ್ತರ, ಇನ್ನೂರೈವತ್ತು ಅಡಿ ಅಗಲದ ಹೆಬ್ಬಂಡೆಯಲ್ಲಿ ಹದಿನಾರು ಅಡಿ ಎತ್ತರದ ಏಕಶಿಲೆಯಲ್ಲಿ ಗೊಮ್ಮಟೇಶ್ವರನನ್ನು ನಿರ್ಮಿಸಲಾಗಿದೆ. ಈ ಮೂರ್ತಿ ಬಳಿಗೆ ತಲುಪಬೇಕಾದರೆ ಹೆಬ್ಬಂಡೆಯ ಸುಮಾರು ತೊಂಬತ್ತು ಮೆಟ್ಟಿಲನ್ನು ಹತ್ತಿ ಸಾಗಬೇಕು. ಹೀಗೆ ಸಾಗಿದ ಬಳಿಕ ಗೊಮ್ಮಟೇಶ್ವರನ ದರ್ಶನವಾಗುತ್ತದೆ.

ಈ ಗೊಮ್ಮಟೇಶ್ವರನ ನಿರ್ಮಾಣದ ಕುರಿತಂತೆ ಯಾವುದೇ ಶಾಸನಗಳು ಲಭ್ಯವಾಗಿಲ್ಲ. ಹೀಗಾಗಿ ಕೆಲವರು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಸಂದರ್ಭದಲ್ಲಿ ಈ ಭಾಗದಲ್ಲಿದ್ದ ಗಂಗರಸರು ಈ ಮೂರ್ತಿಯನ್ನು ನಿರ್ಮಿಸಿರಬಹುದೆಂದು ಹೇಳಿದರೆ ಮತ್ತೆ ಕೆಲವರು ಶ್ರವಣಬೆಳಗೊಳದ ಗೊಮ್ಮಟೇಶ್ವರನ ಮೂರ್ತಿ ಕೆತ್ತಿದ ಚಾವುಂಡರಾಯನೇ ಇದನ್ನು ಕೆತ್ತಿರಬಹುದೆಂದು ಹೇಳುತ್ತಾರೆ.
ಕಪ್ಪು ಶಿಲೆಯಿಂದ ಕೆತ್ತಲ್ಪಟ್ಟ ಬಾಹುಬಲಿ
ಇನ್ನು ಇಲ್ಲಿಗೆ ಸಮೀಪವಿರುವ ರಟ್ನಳ್ಳಿ ಬ್ರಹ್ಮದೇವರ ದೇವಾಲಯಕ್ಕೂ ಇಲ್ಲಿಗೆ ಸಂಬಂಧವಿದೆ ಎಂದು ಜನ ಮಾತಾಡಿಕೊಳ್ಳುತ್ತಾರೆ. ಅದೇನೇ ಇರಲಿ. ಜೈನತೀರ್ಥಂಕರರ ಸಾಂಪ್ರದಾಯಿಕ ಚಿಹ್ನೆಯಾದ ಹಾವು ಬಾಹುಬಲಿಯ ಪಾದತಳದಿಂದ ಮುಡಿಯವರೆಗೆ ಆವರಿಸಿದೆ. ಕಪ್ಪು ಶಿಲೆಯಿಂದ ಕೆತ್ತಲ್ಪಟ್ಟಿರುವ ಮೂರ್ತಿ ಆಕರ್ಷಕವಾಗಿದೆ. ಪ್ರಶಾಂತತೆ ಮೊಗದಲ್ಲಿ ಕಾಣಿಸುತ್ತದೆ.
ಇಲ್ಲಿನ ಬೆಟ್ಟದ ತಪ್ಪಲಿನ ಬಲಭಾಗದಲ್ಲಿ ವರ್ಧಮಾನ ಕಾಲದ 24ಜೈನ ತೀರ್ಥಂಕರರ ಕೂಟಗಳು ಎಡಭಾಗದಲ್ಲಿ ಕುಂದಾಚಾರ್ಯರ ದ್ವಿಸಹಸ್ರಾಬ್ದಿ ಜ್ಞಾಪಕಾರ್ಥವಾಗಿ ನಿರ್ಮಿಸಿರುವ ಪಾದ ಕೂಟ, ಹಾಗೂ ಪಕ್ಕದಲ್ಲೇ ಜಲಮಂದಿರವೂ ಇದೆ.
ಸರ್ಕಾರ ಈ ತಾಣವನ್ನು ಅಭಿವೃದ್ಧಿ ಮಾಡಿದ್ದೇ ಆದರೆ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಬಹುದಾಗಿದೆ. ಕಾರಣ ಇಲ್ಲಿನ ಪ್ರಕೃತಿ ಸೌಂದರ್ಯ ತಾಣಕ್ಕೆ ಮೆರಗು ನೀಡುತ್ತದೆ. ಒಂದೆಡೆ ಅರಬ್ಬಿ ತಿಟ್ಟು ಅರಣ್ಯದ ಹಸಿರು ಹಚ್ಚಡ ಮತ್ತೊಂದೆಡೆ ಕೆಆರ್ ಎಸ್ ಜಲಾಶಯದ ಹಿನ್ನೀರ ನೋಟ ನಿಸರ್ಗಪ್ರೇಮಿಯೊಬ್ಬ ಖುಷಿಪಡಲು, ಭಕ್ತರ ಮನಸ್ಸು ಶಾಂತಿಗೆ ಹೊರಳಲು ಇನ್ನೇನು ಬೇಕು?
ಶಾಂತಿ ಅರಸಿ ಬರುವವರಿಗೆ ಸೂಕ್ತ ತಾಣ
ಮೈಸೂರಿನಿಂದ ಹುಣಸೂರು ರಸ್ತೆಯಲ್ಲಿ ತೆರಳಿದರೆ ಇಲವಾಲ ದಾಟಿ ಮುಂದೆ ಸಾಗಿದರೆ ಬಲಬದಿಯಲ್ಲಿ ಗೊಮ್ಮಟಗಿರಿಗೆ ತೆರಳುವ ಮಾರ್ಗ ಸಿಗುತ್ತದೆ. ಕೊಡಗು, ಹಾಸನ, ಮಂಗಳೂರಿಗೆ ತೆರಳುವ ಪ್ರವಾಸಿಗರು ಮಾರ್ಗ ಮಧ್ಯೆ ಸಿಗುವ ಗೊಮ್ಮಟಗಿರಿಗೆ ತೆರಳಿ ಗೊಮ್ಮಟೇಶ್ವರನ ದರ್ಶನ ಮಾಡಿಕೊಂಡು ತಮ್ಮ ಪ್ರಯಾಣವನ್ನು ಮುಂದುವರೆಸಬಹುದಾಗಿದೆ.
ಶ್ರವಣ ಬೆಳಗೊಳದಲ್ಲಿ ನಡೆಯುವಂತೆ ಇಲ್ಲಿಯೂ ಮಸ್ತಕಾಭಿಷೇಕ ನಡೆಯುತ್ತದೆ. ಈ ಸಂದರ್ಭ ಸಹಸ್ರಾರು ಮಂದಿ ಇಲ್ಲಿ ನೆರೆಯುತ್ತಾರೆ. ಇತರೆ ದಿನಗಳಲ್ಲಿ ಹೆಚ್ಚಿನ ಗೌಜು ಗದ್ದಲವಿಲ್ಲದೆ ಈ ತಾಣ ಪ್ರಶಾಂತವಾಗಿರುತ್ತದೆ. ಶಾಂತಿ ಬಯಸಿ ಬರುವವರಿಗೆ ಗೊಮ್ಮಟಗಿರಿ ಅದ್ಭುತ ತಾಣ ಎನ್ನುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications