ಪ್ರವಾಸಿತಾಣಗಳು ‘ಪ್ರವಾಸಿಗರ ಸ್ವರ್ಗ’ವಾಗಲು ನಾವೇನು ಮಾಡಬೇಕು?

ಮೈಸೂರು, ಏಪ್ರಿಲ್ 26: ಬೇಸಿಗೆ ರಜೆಯಲ್ಲಿ ಮನೆಮಂದಿ ಮಕ್ಕಳ ಜೊತೆಗೆ ಪ್ರವಾಸಿ ತಾಣಗಳಿಗೆ ಟ್ರಿಪ್ ಹೋಗುವುದು ಹಿಂದಿನಿಂದಲೂ ನಡೆದು ಬಂದಿದ್ದು, ಇತ್ತೀಚೆಗಿನ ವರ್ಷಗಳಲ್ಲಿ ಇದು ಹೆಚ್ಚಾಗಿದೆ. ಅದರಲ್ಲೂ ಸೋಷಿಯಲ್ ಮೀಡಿಯಾ ಜನಪ್ರಿಯವಾದ ನಂತರವಂತು ಹೊಸ, ಹೊಸ ತಾಣಗಳನ್ನು ಪರಿಚಯಿಸುತ್ತಿರುವ ಕಾರಣದಿಂದಾಗಿ ಅವುಗಳನ್ನೊಮ್ಮೆ ನೋಡಿ ಬರೋಣವೆಂದು ಹೊರಡುವವರಿಗೇನು ಕೊರತೆಯಿಲ್ಲ. ಹೀಗಾಗಿಯೇ ಜನರೇ ಬಾರದ ಕುಗ್ರಾಮಗಳಲ್ಲೂ ಜನ ಕಾಣುವಂತಾಗಿದೆ.

ಬಹಳಷ್ಟು ಸುಂದರ ತಾಣಗಳು ಪಟ್ಟಣಗಳಿಂದ ದೂರವಿದ್ದುದರಿಂದ, ಸರಿಯಾದ ರಸ್ತೆಗಳಿಲ್ಲದ ಕಾರಣದಿಂದ ಮತ್ತು ಅವುಗಳನ್ನು ಜನಕ್ಕೆ ಪರಿಚಯಿಸದೆ ಹೋದುದರಿಂದಾಗಿ ಎಲೆಯ ಮರೆಯ ಕಾಯಿಯಂತೆ ಉಳಿದು ಹೋಗಿದ್ದವು. ಆದರೀಗ ಎಲ್ಲವೂ ಬದಲಾಗಿದೆ. ಪ್ರವಾಸಿ ತಾಣಗಳನ್ನು ಹುಡುಕಿಕೊಂಡು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಯಾವಾಗ ಪ್ರವಾಸಿಗರು ಬರಲು ಆರಂಭಿಸಿದರೋ ಹಳ್ಳಿಗಳಲ್ಲೂ ವ್ಯಾಪಾರ, ವಹಿವಾಟುಗಳು ಶುರುವಾಗಿದೆ. ಇದೆಲ್ಲವೂ ಪ್ರವಾಸೋದ್ಯಮದ ಬದಲಾವಣೆ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗಿದೆ.

Travel News Making Tourist Destinations a Paradise for Visitors

ಇತ್ತೀಚೆಗಿನ ದಿನಗಳಲ್ಲಿ ದುಡಿಮೆಯ ಜೊತೆಗೆ ಪ್ರವಾಸಕ್ಕೂ ಹೆಚ್ಚಿನವರು ಆದ್ಯತೆ ನೀಡುತ್ತಿರುವುದರಿಂದ ಹಲವು ರೀತಿಯಲ್ಲಿ ಉದ್ಯೋಗಗಳು ಸೃಷ್ಟಿಯಾಗಿವೆ. ಬಹಳಷ್ಟು ಜಿಲ್ಲೆ, ರಾಜ್ಯಗಳಿಗೆ ಪ್ರವಾಸೋದ್ಯಮದಿಂದ ಆದಾಯ ಹರಿದು ಬರುವಂತಾಗಿದೆ. ಹಿಂದೆ ಮಲೆನಾಡುಗಳಲ್ಲಿ ಸುಂದರ ಪ್ರವಾಸಿ ತಾಣಗಳು, ದೇಗುಲಗಳು, ಬೆಟ್ಟಗುಡ್ಡಗಳು ಹೀಗೆ ಸುಂದರತೆ ಕಾಲುಮುರಿದುಕೊಂಡು ಬಿದ್ದಿದ್ದರೂ ಅದನ್ನು ನೋಡಲು ಹೋಗುವವರು ಇರಲಿಲ್ಲ. ಆದರೀಗ ಹಾಗಿಲ್ಲ ಬದಲಾಗಿದೆ. ಚಿಕ್ಕ ಪುಟ್ಟ ಸ್ಥಳಗಳು ಕೂಡ ಹೆಚ್ಚು ಹೆಸರು ಮಾಡುತ್ತಿವೆ.

Take a Poll

ವ್ಯಾಪಾರದ ಹೆಸರಿನಲ್ಲಿ ಸುಲಿಗೆ ನಡೆಯದಿರಲಿ

ಪ್ರವಾಸಿಗರು ಕೂಡ ವಿಶೇಷತೆ ಹೊಂದಿರುವ ಸ್ಥಳಗಳನ್ನು ಹುಡುಕಿಕೊಂಡು ಹೋಗುತ್ತಿರುವುದರಿಂದ ವ್ಯಾಪಾರ, ವ್ಯವಹಾರ, ಹೋಂಸ್ಟೇ, ಹೋಟೆಲ್ ಹೀಗೆ ಹಲವು ಕ್ಷೇತ್ರಗಳು ಚೇತರಿಕೆ ಕಂಡಿವೆ. ಜನ ಹಳ್ಳಿಯಲ್ಲಿದ್ದುಕೊಂಡೇ ನಾಲ್ಕುಕಾಸು ನೋಡುವಂತಾಗಿದೆ. ಇದೆಲ್ಲವೂ ಪ್ರವಾಸೋದ್ಯಮದ ಕಾರಣದಿಂದ ಆಗಿದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಆದರೆ ಇದರ ನಡುವೆ ಪ್ರವಾಸಿಗರನ್ನು ಸುಲಿಗೆ ಮಾಡುವವರು ಹುಟ್ಟಿಕೊಳ್ಳುತ್ತಿರುವುದು ಮಾತ್ರ ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಇವತ್ತು ಪ್ರವಾಸಿ ತಾಣಗಳಲ್ಲಿ ವ್ಯಾಪಾರ ಮಾಡುವವರಿಂದ ಆರಂಭವಾಗಿ ಎಲ್ಲರೂ ಹಣವನ್ನಷ್ಟೇ ನೋಡುತ್ತಿದ್ದಾರೆ. ವ್ಯಾಪಾರ ಮಾಡಿ ಲಾಭಗಿಟ್ಟಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ವ್ಯಾಪಾರದ ಹೆಸರಿನಲ್ಲಿ ಸುಲಿಗೆಗೆ ಇಳಿದಿರುವುದು ಸುಳ್ಳೇನಲ್ಲ. ಈಗೀಗ ಪ್ರವಾಸ ಹೋಗುವವರು ಕೂಡ ಪ್ರವಾಸಿ ತಾಣಗಳಲ್ಲಿನ ಮೋಸ ವಂಚನೆಯ ಬಗ್ಗೆ ಅರಿತು ವ್ಯಾಪಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇಷ್ಟೇ ಅಲ್ಲದೆ, ದೂರದಿಂದ ಬರುವ ಪ್ರವಾಸಿಗರೊಂದಿಗೆ ಸ್ಥಳೀಯ ಕೆಲವರು ಅನುಚಿತವಾಗಿ ವರ್ತಿಸಿ ಭಯ ಹುಟ್ಟಿಸುವವರು ಇಲ್ಲದಿಲ್ಲ.

Travel News Making Tourist Destinations a Paradise for Visitors

ವರ್ಷದಿಂದ ವರ್ಷಕ್ಕೆ ಪ್ರವಾಸೋದ್ಯಮ ವೃದ್ಧಿ

ಮೊದಲೆಲ್ಲ ಪ್ರವಾಸಿಗರು ಬೇಸಿಗೆಯ ದಿನಗಳು ಮತ್ತು ಅಕ್ಟೋಬರ್ ನಂತರ ದಸರಾ, ಕ್ರಿಸ್ ಮಸ್ ರಜೆಗಳಲ್ಲಿ ಪ್ರವಾಸಕ್ಕೆ ಹೋಗುತ್ತಿದ್ದರು. ಆದರೆ ಎಂಎನ್ ಸಿ ಕಂಪನಿಗಳು ಬಂದ ನಂತರ ಅವರು ವೀಕೆಂಡ್ ಟ್ರಿಪ್ ಗಳನ್ನು ಹುಟ್ಟು ಹಾಕಿದ್ದು ವಾರವಿಡೀ ಕಂಪ್ಯೂಟರ್ ಲ್ಯಾಪ್ ಟಾಪ್ ಗೆ ಅಂಟಿಕೊಂಡು ಕುಳಿತವರು ವಾರಾಂತ್ಯದಲ್ಲಿ ಮೈಕೊಡವಿಕೊಂಡು ದೇಹ ಮತ್ತು ಮನಸ್ಸಿನ ನೆಮ್ಮದಿಗಾಗಿ ನಿಸರ್ಗದ ನಡುವೆ ಕಾಲ ಕಳೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದು, ಇದೀಗ ವೀಕೆಂಡ್ ಟ್ರಿಪ್ ಗಳು ಜನಪ್ರಿಯವಾಗಿದ್ದು, ಪ್ರವಾಸಿ ತಾಣಗಳು ವೀಕೆಂಡ್ ನಲ್ಲಿ ಪ್ರವಾಸಿಗರಿಂದ ತುಂಬಿತುಳುಕುವಂತಾಗಿದೆ.

ವೀಕೆಂಡ್ ನಲ್ಲಿ ಬೆಟ್ಟ ಹತ್ತುವುದು, ದೇಗುಲಗಳಿಗೆ ಹೋಗುವುದು, ಹೋಂಸ್ಟೇ, ರೆಸಾರ್ಟ್, ಹೋಟೆಲ್ ಗಳಲ್ಲಿ ವಾಸ್ತವ್ಯ ಹೂಡುವುದು ಮೊದಲಾದವು ನಡೆಯುತ್ತಿವೆ. ಇದರ ಜೊತೆಗೆ ವರ್ಷದ ಎಲ್ಲ ಸಮಯದಲ್ಲೂ ಪ್ರವಾಸಕ್ಕೆ ಹೋಗುವುದು ಕೂಡ ಅಭ್ಯಾಸವಾಗಿದೆ. ಮೊದಲೆಲ್ಲ ಮಳೆಗಾಲ ಆರಂಭವಾಯಿತೆಂದರೆ ಮಲೆನಾಡಿನ ಕಡೆಗೆ ಮುಖ ಮಾಡುವವರು ಇರುತ್ತಿರಲಿಲ್ಲ. ಆದರೀಗ ಮಾನ್ಸೂನ್ ಟ್ರಿಪ್ ಗಮನಸೆಳೆಯುತ್ತಿದೆ. ಇದೆಲ್ಲವೂ ವರ್ಷದಿಂದ ವರ್ಷಕ್ಕೆ ಪ್ರವಾಸೋದ್ಯಮವನ್ನು ಬೆಳೆಯುವಂತೆ ಮಾಡಿದೆ.

ಪ್ರವಾಸೋದ್ಯಮದ ವೃದ್ಧಿಗೆ ಸಹಕಾರ ಅಗತ್ಯ

ಪ್ರವಾಸೋದ್ಯಮವನ್ನು ಪ್ರವಾಸ ಸ್ನೇಹಿ ಉದ್ಯಮವಾಗಿ ಮಾಡಬೇಕಾದರೆ ಪ್ರವಾಸಿ ತಾಣಗಳಲ್ಲಿ ಒಂದೊಳ್ಳೆಯ ವಾತಾವರಣವನ್ನು ನಿರ್ಮಾಣ ಮಾಡಬೇಕಾದ ಜವಬ್ದಾರಿ ಪ್ರವಾಸೋದ್ಯಮ ಇಲಾಖೆ ಮತ್ತು ಸ್ಥಳೀಯ ಆಡಳಿತದ್ದಾಗಿದೆ. ಯಾವುದೇ ಪ್ರವಾಸಿಗ ಬಂದರೂ ಅವನು ಮತ್ತೊಮ್ಮೆ ಬರುವಂತಹ ವಾತಾವರಣ ಅಲ್ಲಿರಬೇಕು. ಅದನ್ನು ಹೊರತು ಪಡಿಸಿ ಕಿರಿಕಿರಿಯಾಗುವಂತಿರಬಾರದು. ಅದರಲ್ಲೂ ಪ್ರವಾಸಿಗರಿಗೆ ಮೋಸ, ವಂಚನೆ ಮಾಡುವುದು, ಅತಿರೇಖದಿಂದ ವರ್ತಿಸುವುದು, ಕಿರಿಕಿರಿ ಮಾಡುವುದು, ಪುಂಡಪೋಕರಿಗಳ ಹಾವಳಿಗಳನ್ನು ತಡೆಗಟ್ಟಬೇಕಾಗುತ್ತದೆ.

Travel News Making Tourist Destinations a Paradise for Visitors

ಪ್ರವಾಸಿ ತಾಣಗಳಲ್ಲಿ ದೂರದಿಂದ ಪ್ರವಾಸಿಗರಿಗೆ ಗೌರವ ನೀಡಿ ಅವರಿಗೆ ಖುಷಿ ಕೊಡುವಂತೆ, ಮತ್ತೊಮ್ಮೆ ಅವರು ಬರುವಂತೆ ಸ್ಥಳೀಯರು ನಡೆದುಕೊಳ್ಳ ಬೇಕಾಗುತ್ತದೆ. ಅದನ್ನು ಬಿಟ್ಟು ಪ್ರವಾಸಿಗರನ್ನು ವ್ಯಾಪಾರಿ ಮನೋಭಾವದಿಂದ ನೋಡುವುದು ಸರಿಯಲ್ಲ. ಅತಿಥಿಗಳಂತೆ ಕಂಡರೆ ಮತ್ತು ಧರ್ಮರೀತಿಯಲ್ಲಿ ವ್ಯಾಪಾರ ಮಾಡಿದರೆ ಅವರು ಮತ್ತೊಮ್ಮೆ ಬರಲು ಅನುಕೂಲವಾಗುತ್ತದೆ. ಅಷ್ಟೇ ಅಲ್ಲದೆ ಒಂದೊಳ್ಳೆಯ ಅನುಭವವನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವ ಮೂಲಕ ಇನ್ನಷ್ಟು ಪ್ರವಾಸಿಗರು ಇತ್ತ ಮುಖ ಮಾಡಲು ಸಾಧ್ಯವಾಗುತ್ತದೆ. ಪ್ರವಾಸೋದ್ಯಮ ಬೆಳೆಯ ಬೇಕಾದರೆ ಎಲ್ಲರ ಸಹಕಾರ ಮತ್ತು ಕೊಡುಗೆ ಅಗತ್ಯವಾಗಿದೆ. ಹಾಗೆಯೇ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+