Waterfall: ಮೈಸೂರಿನ ಏಕೈಕ ಜಲಪಾತ ಧನುಷ್ಕೋಟಿ ಸೃಷ್ಟಿಯಾಗಿದ್ದು ಹೇಗೆ?

ಮೈಸೂರು, ಜೂನ್ 30: ರಾಜ್ಯದಲ್ಲಿ ಅರಮನೆ ನಗರಿ, ಸಾಂಸ್ಕೃತಿಕ, ಪಾರಂಪರಿಕ ನಗರಿ, ಪ್ರವಾಸಿಗರ ಸ್ವರ್ಗ ಹೀಗೆ ಹತ್ತು ಹಲವು ವಿಶೇಷತೆಗಳಿಂದ ಪ್ರವಾಸಿಗರನ್ನು ಸೆಳೆಯುವ ಮೈಸೂರು ನಗರಕ್ಕೊಂದು ಸುತ್ತು ಹೊಡೆದು ಪ್ರವಾಸಿ ತಾಣಗಳನ್ನೆಲ್ಲ ವೀಕ್ಷಿಸಿದ ಬಳಿಕ ಶ್ವೇತಧಾರೆಯಾಗಿ ಧುಮ್ಮಿಕ್ಕುವ ಜಲಬೆಡಗಿಯನ್ನು ನೋಡಬೇಕು ಎಂಬ ಬಯಕೆ ಹುಟ್ಟುವುದು ಸಹಜ. ಇಂತಹ ಬಯಕೆಯನ್ನು ತಣಿಸಲೆಂದೇ ಜನ್ಮ ತಾಳಿ ನಿಂತಿದೆ ಚುಂಚನಕಟ್ಟೆಯ ಧನುಷ್ಕೋಟಿ ಜಲಪಾತ.

ಮೈಸೂರು ಜಿಲ್ಲೆಯ ಏಕೈಕ ಜಲಪಾತವೆಂದೇ ಖ್ಯಾತಿ ಪಡೆದಿರುವ ಧನುಷ್ಕೋಟಿ ಜಲಪಾತಕ್ಕೆ ಈಗ ಜೀವಕಳೆ ಬಂದಿದ್ದು, ತನ್ನ ರೌದ್ರತೆಯನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗಾಗಿಯೇ ತೆರೆದಿಟ್ಟು ಕಾಯುತ್ತಿರುವಂತೆ ಭಾಸವಾಗುತ್ತಿದೆ. ಬೇಸಿಗೆಯ ಬಿಸಿಲಿಗೆ ಸಿಲುಕಿ ಹೆಬ್ಬಂಡೆಗಳಲ್ಲಿ ಲೀನವಾಗಿ ಹೋಗಿದ್ದ ಜಲಧಾರೆ ಇದೀಗ ಮುಂಗಾರಿನ ಅಬ್ಬರಕ್ಕೆ ಮರುಹುಟ್ಟು ಪಡೆದು ಹೆಬ್ಬಂಡೆಗಳ ಮೇಲೆ ಮತ್ತು ನಡುವೆ ಭೋರ್ಗೆರೆದು ಧುಮುಕುತ್ತಾ ನಿಸರ್ಗ ಪ್ರೇಮಿಗಳನ್ನು ತನ್ನತ್ತ ಆಕರ್ಷಿಸಲಾರಂಭಿಸಿದೆ. ಮುಂಗಾರು ಬಿರುಸುಗೊಂಡಂತೆಲ್ಲ ಇದರ ಆರ್ಭಟ ಇನ್ನಷ್ಟು ಹೆಚ್ಚಾಗುತ್ತಾ ಹೋಗಲಿದೆ.

Travel News How DhanushnKoti The Only Waterfall In Mysore Was Created

ಕಾವೇರಿ ನದಿಯಿಂದ ಸೃಷ್ಟಿಯಾಗಿರುವ ಧನುಷ್ಕೋಟಿ ಜಲಪಾತ ಮುಂಗಾರಿನಲ್ಲಿ ಉಗ್ರವಾಗಿಯೂ ಹಿಂಗಾರಿನಲ್ಲಿ ಸೌಮ್ಯವಾಗಿಯೂ ಅದಾದ ನಂತರ ಬೇಸಿಗೆಯಲ್ಲಿ ಸೊರಗಿ ಹೋಗಿ ಬಿಡುತ್ತದೆ. ಆದರೂ ತನ್ನ ಚೆಲುವನ್ನು ಆಯಾಯ ಕಾಲಕ್ಕೆ ತಕ್ಕಂತೆ ಪ್ರದರ್ಶಿಸುತ್ತಾ ಪ್ರವಾಸಿಗರನ್ನು ವರ್ಷಪೂರ್ತಿ ಸೆಳೆಯುತ್ತಲೇ ಇರುತ್ತದೆ. ನಡುಮಳೆಗಾಲದ ದಿನದಲ್ಲಿ ಅತ್ತ ಕೊಡಗಿನಲ್ಲಿ ವರುಣ ಅಬ್ಬರಿಸಿದಾಗಲೆಲ್ಲ ಕಾವೇರಿ ನದಿ ಉಗ್ರರೂಪ ತಾಳಲಾರಂಭಿಸುತ್ತಾಳೆ. ಈ ವೇಳೆ ಪ್ರವಾಹೋಪಾದಿಯಲ್ಲಿ ಹರಿದು ಬರುವ ಕಾವೇರಿ ಧನುಷ್ಕೋಟಿಯಲ್ಲಿ ಭೋರ್ಗರೆದು ಧುಮ್ಮಿಕ್ಕುವಾಗ ಕಾಣ ಸಿಗುವ ದೃಶ್ಯಹಗಳು ನಯನಮನೋಹರ ಮಾತ್ರವಲ್ಲದೆ, ರುದ್ರರಮಣೀಯವಾಗಿರುತ್ತದೆ.

ಎಲ್ಲಿದೆ ಈ ಜಲಪಾತ? ಹೋಗುವುದು ಹೇಗೆ?

ಇನ್ನು ಈ ಜಲಪಾತ ಎಲ್ಲಿದೆ? ಹೋಗುವುದು ಹೇಗೆ? ಎಂಬುದನ್ನು ನೋಡುವುದಾದರೆ ಇದು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿಗೆ ಹತ್ತಿರದ ಚುಂಚನಕಟ್ಟೆ ಬಳಿಯಿದ್ದು, ಮೈಸೂರಿನಿಂದ 54ಕಿ.ಮೀ.ದೂರದಲ್ಲಿದೆ. ಕಾವೇರಿ ನದಿಯಿಂದ ಸೃಷ್ಟಿಯಾಗಿರುವ ಧನುಷ್ಕೋಟಿ ಜಲಪಾತವು ವಿಶಾಲ ಬಂಡೆಗಳ ನಡುವೆ ಸುಮಾರು 400 ಅಡಿ ಅಗಲವಾಗಿ 60 ಅಡಿ ಎತ್ತರದಿಂದ ಧುಮುಕುತ್ತದೆ. ಈ ವೇಳೆ ಕಂಡು ಬರುವ ದೃಶ್ಯ ಕಣ್ಮನ ಸೆಳೆಯುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಉಗ್ರರೂಪ ತಾಳಿ ಕೆಂಬಣ್ಣದಿಂದ ಭೋರ್ಗರೆದು ಧುಮುಕುವಾಗಿನ ದೃಶ್ಯ ಮೈನವಿರೇಳಿಸುತ್ತದೆ.

ಈ ಜಲಪಾತದ ಸೃಷ್ಟಿಯ ಹಿಂದೆಯೂ ಪೌರಾಣಿಕ ನಂಟಿರುವುದನ್ನು ನಾವು ಕಾಣಬಹುದಾಗಿದೆ. ಅದು ಏನೆಂದರೆ ಹಿಂದಿನ ಕಾಲದಲ್ಲಿ ಈ ಕ್ಷೇತ್ರವು ದಟ್ಟ ಕಾಡಿನಿಂದ ಕೂಡಿದ ಅರಣ್ಯವಾಗಿತ್ತಂತೆ. ಇದನ್ನು ದಂಡಕಾರಣ್ಯವೆಂದು ಕರೆಯಲಾಗುತ್ತಿತ್ತಂತೆ. ಒಮ್ಮೆ ಇಲ್ಲಿಗೆ ಆಗಮಿಸಿದ ತೃಣಬಿಂಧು ಮಹರ್ಷಿಗಳು ಈ ಸ್ಥಗಳವನ್ನು ನೋಡಿ ತಮ್ಮ ತಪಸ್ಸಿಗೆ ಇದು ಸೂಕ್ತ ಸ್ಥಳವೆಂದು ನಿರ್ಧರಿಸುತ್ತಾರೆ. ಆದರೆ ತಪಸ್ಸು ಮಾಡುವ ಮುನ್ನ ಸ್ನಾನ, ಜಪ ಮಾಡಲು ನದಿ ಅವಶ್ಯಕತೆಯಿರುವುದರಿಂದ ಅವರು ನದಿಗಾಗಿ ಹುಡುಕಾಡುತ್ತಾರೆ.

Travel News How DhanushnKoti The Only Waterfall In Mysore Was Created

ಲಕ್ಷ್ಮಣ ಸೃಷ್ಟಿಸಿದ ಧನುಷ್ಕೋಟಿ ಜಲಪಾತ

ಈ ವೇಳೆ ಅವರಿಗೆ ಅಲ್ಲಿಯೇ ಗುಪ್ತಗಾಮಿನಿಯಾಗಿ ಹರಿಯುವ ಕಾವೇರಿ ನದಿ ಕಾಣಿಸುವುದಿಲ್ಲ. ಹೀಗಾಗಿ ನಾರಾಯಣನನ್ನು ಕುರಿತು ತಪಸ್ಸು ಮಾಡಲು ಆರಂಭಿಸುತ್ತಾರೆ. ಅವರ ತಪಸ್ಸಿಗೆ ಒಲಿದ ನಾರಾಯಣ ಗುಪ್ತಗಾಮಿನಿಯಾದ ಹರಿಯುತ್ತಿದ್ದ ಕಾವೇರಿಯನ್ನು ತೋರಿಸುತ್ತಾನೆ. ಅಷ್ಟೇ ಅಲ್ಲದೆ ತ್ರೇತಾಯುಗದಲ್ಲಿ ರಾಮನ ಅವತಾರವೆತ್ತಿ ರಾವಣನನ್ನು ಸಂಹಾರ ಮಾಡಿ ನಿಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಡುತ್ತೇನೆಂದು ಮಾತು ನೀಡುತ್ತಾನೆ. ಕಾಲಾಂತರದಲ್ಲಿ ತ್ರೇತಾಯುಗದಲ್ಲಿ ಶ್ರೀರಾಮ, ಸೀತೆ ಲಕ್ಷ್ಮಣರಾದಿಯಾಗಿ ವಾನರ ಸೇನೆಯು ಲಂಕೆಯಲ್ಲಿ ರಾವಣನನ್ನು ಸಂಹಾರ ಮಾಡಿ ಹಿಂತಿರುಗುವಾಗಿ ಈ ಕ್ಷೇತ್ರಕ್ಕೆ ಬರುತ್ತಾರೆ.

ಈ ವೇಳೆ ಲಕ್ಷ್ಮಣನಿಗೆ ರಾಮ ಬಂಡೆಯನ್ನು ಒಡೆಯಲು ಹೇಳುತ್ತಾನೆ. ಲಕ್ಷ್ಮಣ ಹೊಡೆದ ಬಾಣಕ್ಕೆ ಬಂಡೆ ಚೂರಾಗಿ ಒಡೆದು ಅದರ ನಡುವಿನಿಂದ ಕಾವೇರಿ ಉಕ್ಕಿ ಹರಿಯುತ್ತಾಳೆ. ಹೀಗೆ ಲಕ್ಷ್ಮಣ ಬಾಣ ಬಿಟ್ಟ ಸ್ಥಳದಲ್ಲಿ ಸೃಷ್ಟಿಯಾದ ಜಲಧಾರೆಯೇ ಧನುಷ್ಕೋಟಿ ಜಲಪಾತವಾಗಿದೆ. ಈ ಜಲಪಾತ ಎಷ್ಟೇ ಭೋರ್ಗರೆದು ಸುತ್ತಮುತ್ತಲ ಜನರ ಕಿವಿಗೆ ಅಪ್ಪಳಿಸಿದರೂ ಇದರ ಇನ್ನೊಂದು ವಿಶೇಷತೆ ಏನೆಂದರೆ ಸಮೀಪದ ರಾಮದೇವರ ದೇವಾಲಯದ ಗರ್ಭಗುಡಿಗೆ ಆ ಶಬ್ದವೇ ಕೇಳಿಸುವುದಿಲ್ಲ. ಇನ್ನು ಚುಂಚನಕಟ್ಟೆಯ ದೇಗುಲಕ್ಕೆ ಬರುವ ಭಕ್ತರು ಜಲಪಾತವನ್ನು ನೋಡಿಕೊಂಡು ಹಿಂತಿರುಗಿದರೆ ಜಲಪಾತವನ್ನು ನೋಡಲೆಂದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.

ಜಲಪಾತವನ್ನು ದೂರದಿಂದಲೇ ವೀಕ್ಷಿಸುವುದು ಒಳಿತು

ಮೈಸೂರಿನ ಸುತ್ತಮುತ್ತ ಪ್ರವಾಸಿಗರಿಗೆ ನೀರಿನಾಟವಾಡಲು ಮತ್ತು ವೀಕ್ಷಿಸಲು ಯಾವುದೇ ಜಲಪಾತಗಳು ಇಲ್ಲದ ಕಾರಣ ವಾರಾಂತ್ಯದ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇತ್ತ ಬರುತ್ತಾರೆ. ಬಹಳಷ್ಟು ಜನರು ಪೇಟೆ, ಪಟ್ಟಣದ ಬದುಕಿನಿಂದ, ಕೆಲಸದ ಒತ್ತಡದಿಂದ ಮುಕ್ತವಾಗಿ ನಿಸರ್ಗದ ಸುಂದರ ಪರಿಸರದಲ್ಲಿ ಧುಮುಕುವ ಜಲಧಾರೆಯನ್ನು ಕಣ್ತುಂಬಿಸಿಕೊಂಡು ಒಂದಷ್ಟು ಸಮಯವನ್ನು ಕಳೆದು ಹೋಗುವ ಸಲುವಾಗಿ ಕುಟುಂಬದೊಂದಿಗೆ ಇಲ್ಲಿಗೆ ಬರುತ್ತಾರೆ. ಹೀಗೆ ಬರುವವರು ಜಲಪಾತದ ರೌದ್ರತೆ, ಕಾವೇರಿ ನದಿಯ ಹರಿವು, ಸುತ್ತಲಿನ ನಿಸರ್ಗದ ಸೌಂದರ್ಯವನ್ನು ಸವಿದು ಹಿಂತಿರುಗುವುದು ಒಳಿತು.

Travel News How DhanushnKoti The Only Waterfall In Mysore Was Created

ಧನುಷ್ಕೋಟಿ ಜಲಪಾತ ಎಷ್ಟು ಸುಂದರವಾಗಿದೆಯೋ ಅಷ್ಟೇ ಅಪಾಯಕಾರಿಯಾಗಿದೆ. ಇಲ್ಲಿ ಈಜುವುದು, ಸ್ನಾನಮಾಡುವುದನ್ನು ನಿರ್ಬಂಧಿಸಲಾಗಿದೆ. ಆದರೂ ಕೆಲವರು ನೀರಿಗಿಳಿದು ಹುಚ್ಚಾಟವಾಡಿ ಪ್ರಾಣ ಕಳೆದುಕೊಂಡಿದ್ದಾರೆ. ಜಲಪಾತ ವೀಕ್ಷಣೆಗೆಂದು ಚುಂಚನಕಟ್ಟೆಗೆ ಬರುವ ಪ್ರವಾಸಿಗರು ರಾಮನದರ್ಶನ ಮಾಡಿ ಜಲಪಾತದ ವೈಭವವನ್ನು ಕಣ್ತುಂಬಿಸಿಕೊಂಡು ಸಮೀಪವಿರುವ ರಾಮಸಮುದ್ರ ಅಣ್ಣೆಕಟ್ಟೆ ಮತ್ತು ಸಕ್ಕರೆ ಗ್ರಾಮದ ಬಳಿಯ ಬಳ್ಳೂರು ಅಣ್ಣೆಕಟ್ಟೆಗೂ ತೆರಳಿ ಅಲ್ಲಿನ ಪ್ರಾಕೃತಿಕ ಚೆಲುವನ್ನು ಸವಿದು ಹಿಂತಿರುಗಿದರೆ ನಿಸರ್ಗದ ನಡುವೆ ಕಳೆದ ಸುಂದರ ಕ್ಷಣಗಳು ನಮ್ಮ ಮೈಮನವನ್ನು ಹಗುರವಾಗಿಸುವುದಲ್ಲದೆ, ಮನಪಟಲದಲ್ಲಿ ಅಚ್ಚೊತ್ತಿದಂತೆ ಉಳಿಯುವುದರಲ್ಲಿ ಸಂಶಯವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+