ಚಾರಣಪ್ರಿಯರೇ ಗಮನಿಸಿ..! ಕೊಡಗಿನಲ್ಲಿ ಈ ಬೆಟ್ಟಕ್ಕೆ ಮಿಸ್ ಮಾಡದೇ ಭೇಟಿ ನೀಡಿ, ವಿಶೇಷತೆ ಇಲ್ಲಿದೆ
ಮಡಿಕೇರಿ, ಫೆಬ್ರವರಿ 03: ಕೊಡಗು ಬೆಟ್ಟಗುಡ್ಡಗಳಿಂದ ಆವೃತವಾದ ಜಿಲ್ಲೆಯಾಗಿದ್ದು, ಇಲ್ಲಿ ಹಲವಾರು ಬೆಟ್ಟಗಳಿದ್ದು ಅವುಗಳ ಪೈಕಿ ಕೆಲವು ಚಾರಣಕ್ಕೆ ಮಾತ್ರ ಸೀಮಿತವಾಗಿದ್ದರೆ, ಇನ್ನು ಕೆಲವು ಪೌರಾಣಿಕ ಐಹಿತ್ಯ ಹೊಂದಿ ಭಕ್ತಿಯ ತಾಣವಾಗಿಯೂ, ಸಾಹಸಪ್ರಿಯರಿಗೆ ಚಾರಣ ತಾಣವಾಗಿಯೂ ಗಮನಸೆಳೆಯುತ್ತಿವೆ. ಇಂತಹ ಬೆಟ್ಟಗಳ ಸಾಲಿಗೆ ಸೋಮವಾರಪೇಟೆಗೆ ಸುಮಾರು ಏಳು ಕಿ.ಮೀ.ದೂರದಲ್ಲಿರುವ ಹೊನ್ನಮ್ಮನಕೆರೆ ದಡದಲ್ಲಿರುವ ಪಾಂಡವರ ಬೆಟ್ಟವೂ ಸೇರುತ್ತದೆ.
ಹೊನ್ನಮ್ಮನ ಕೆರೆ ಹೆಣ್ಣು ಮಗಳೊಬ್ಬಳ ತ್ಯಾಗ ಬಲಿದಾನದ ಪ್ರತೀಕವಾಗಿದ್ದು, ಇದೊಂದು ಪವಿತ್ರ ಕ್ಷೇತ್ರವಾಗಿ ಗಮನಸೆಳೆಯುತ್ತದೆ. ಇದರ ಸುತ್ತಲೂ ಬೆಟ್ಟಗುಡ್ಡಗಳು ಸುತ್ತುವರೆದಿದ್ದು, ಇಲ್ಲಿ ಮೇಲ್ನೋಟಕ್ಕೆ ಹಲವಾರು ಬೆಟ್ಟಗಳು ಕಣ್ಮನ ಸೆಳೆಯುತ್ತವೆ. ಕೆರೆಯದಡದಲ್ಲಿ ನಿಂತು ಸುತ್ತಲೂ ಮುಗಿಲೆತ್ತರಕ್ಕೆ ಚಾಚಿರುವ ಬೆಟ್ಟಗುಡ್ಡಗಳನ್ನು ನೋಡುವುದೇ ಒಂಥರಾ ಮಜಾ ಎನಿಸುತ್ತದೆ. ಕಣ್ಣು ಹಾಯಿಸಿದೆಡೆ ಹಸಿರು ಚೆಲ್ಲಿದ ಸುಂದರ ಪರಿಸರದಲ್ಲಿ ಒಂದಷ್ಟು ಹೊತ್ತು ಕಳೆಯುವುದೇ ಮನಸ್ಸಿಗೆ ಖುಷಿಕೊಡುತ್ತದೆ.

ಬೃಹತ್ ಕೆರೆಯಲ್ಲಿ ಅಲೆಯಾಡುವ ನೀರು.. ಸುತ್ತಲಿಂದ ಬೀಸಿ ಬರುವ ತಂಗಾಳಿ, ಮೌನವನ್ನು ಸೀಳಿಕೊಂಡು ಬರುವ ಪ್ರಾಣಿ, ಪಕ್ಷಿಗಳ ಕೂಗು ಎಲ್ಲವೂ ಹೊಸತೊಂದು ಲೋಕಕ್ಕೆ ನಮ್ಮನ್ನು ಎಳೆದೊಯ್ಯುತ್ತದೆ. ಅದರಲ್ಲೂ ಕೆರೆಯ ದಡದಲ್ಲಿ ಹೆಜ್ಜೆ ಹಾಕುತ್ತಾ ಹೋದರೆ ಮನಸ್ಸು ಹಗುರವಾಗುತ್ತದೆ. ಸಾಧ್ವಿ ಹೊನ್ನಮ್ಮನಳ ಬಲಿದಾನ ಕಥೆ ಮನಪಟಲದಲ್ಲಿ ಸುತ್ತಲಾರಂಭಿಸುತ್ತದೆ.
ಒಂದೊಂದು ಊರಿನಲ್ಲಿ ಒಂದೊಂದು ಹೆಸರಿನಲ್ಲಿ ಮುತ್ತೈದೆಯರು ಕೆರೆಗೆ ಹಾರವಾಗಿ ಕುಟುಂಬದ ಘನತೆ ಎತ್ತಿ ಹಿಡಿದು ಊರಿನ ಜನಕ್ಕಾಗಿ ಜೀವವನ್ನೇ ತ್ಯಾಗ ಮಾಡಿದ ಸಾಹಸಗಾಥೆಗಳು ನೆನಪಾಗುತ್ತಾ ಹೋಗುತ್ತದೆ. ಹಾಗೆಯೇ ನಮಗರಿವಿಲ್ಲದೆಯೇ ಅವರಿಗೊಂದು ಭಕ್ತಿಯ ನಮನ ಸಲ್ಲಿಕೆಯಾಗಿ ಬಿಡುತ್ತದೆ.
ಪಾಂಡವರ ಬೆಟ್ಟದ ವಿಶೇಷತೆಗಳೇನು?
ಇಲ್ಲಿರುವ ವಿಶಾಲ ಕೆರೆದಡದಲ್ಲಿ ಭಕ್ತರನ್ನು ಸಲಹಲೆಂದೇ ನೆಲೆನಿಂತ ಹೊನ್ನಮ್ಮನ ದರ್ಶನ ಮಾಡಿಕೊಂಡು ಮುನ್ನಡೆದರೆ ಬೆಟ್ಟಗಳ ತಪ್ಪಲಿಗೆ ತೆರಳಬಹುದಾಗಿದೆ. ಇಲ್ಲಿ ಪಾಂಡವರಬೆಟ್ಟ, ಗವಿಬೆಟ್ಟ, ಜೇನುಕಲ್ಲುಬೆಟ್ಟ, ಮೋರಿಬೆಟ್ಟವಲ್ಲದೆ, ಬೆಟ್ಟದಲ್ಲಿ ಬೃಹದಾಕಾರದ ಕೋಳಿ ಕೂಗಿದ ಕಲ್ಲು ಮತ್ತು ಕುದುರೆ ನೆಗೆದ ಕಲ್ಲುಗಳು ಇರುವುದು ವಿಶೇಷವಾಗಿದೆ.

ಈ ಬೆಟ್ಟಗಳನ್ನೇರುವುದು ಅಷ್ಟೇನು ಕಷ್ಟವಲ್ಲ. ಒಂದಷ್ಟು ಶ್ರಮವಹಿಸಿ ಬೆಟ್ಟವೇರಿದರೆ ಪ್ರಕೃತಿಯ ರಮ್ಯನೋಟ ನಮ್ಮ ಕಣ್ಣುಗಳಿಗೆ ಹಬ್ಬದೂಟವನ್ನು ನೀಡುತ್ತದೆ. ಇನ್ನು ಇಲ್ಲಿರುವ ಬೆಟ್ಟಗಳಿಗೂ ಪುರಾಣದ ಕಥೆಗಳಿಗೂ ನಂಟಿರುವುದು ಕಾಣಿಸುತ್ತದೆ. ಇಲ್ಲಿ ಪ್ರಚಲಿತದಲ್ಲಿರುವ ಕಥೆಗಳ ಪ್ರಕಾರ ದ್ರೌಪದಯುಗದ ಮಹಾಭಾರತಕ್ಕೂ ಇಲ್ಲಿಗೂ ಒಡನಾಟವಿರುವುದು ಗೊತ್ತಾಗುತ್ತದೆ.
ಪಾಂಡವರಬೆಟ್ಟ ಮತ್ತು ಗವಿಬೆಟ್ಟ ಒಂಬೈನೂರು ಅಡಿ ಎತ್ತರದಲ್ಲಿದ್ದು, ಹಲವು ವೈಶಿಷ್ಟ್ಯತೆ ಹೊಂದಿರುವುದನ್ನು ಕಾಣಬಹುದಾಗಿದೆ. ಈ ಬೆಟ್ಟಕ್ಕೆ ಮಹಾಭಾರತದ ನಂಟಿದೆ. ದ್ರೌಪದಯುಗದಲ್ಲಿ ಕೌರವರೊಂದಿಗೆ ಪಗಡೆಯಲ್ಲಿ ಸೋತ ಪಾಂಡವರು ದ್ರೌಪದಿಯೊಂದಿಗೆ ವನವಾಸಕ್ಕೆ ತೆರಳಿದ್ದರು. ವನವಾಸದ ಕಾಲದಲ್ಲಿ ಅವರು ಈ ಪ್ರದೇಶಕ್ಕೆ ಬಂದಿದ್ದರು. ಹೀಗೆ ಬಂದವರು ಇಲ್ಲಿ ಕೆಲಕಾಲ ನೆಲೆಸಿದ್ದರು ಎಂಬ ನಂಬಿಕೆಯಿದೆ. ಹೀಗಾಗಿಯೇ ಈ ಬೆಟ್ಟವನ್ನು ಪಾಂಡವರ ಬೆಟ್ಟ ಎಂದು ಕರೆಯಲಾಗುತ್ತದೆ. ಇಲ್ಲಿ 17 ಪುಟ್ಟ ಕುಟೀರಗಳಿದ್ದು ಅದನ್ನು ಪಾಂಡವರೇ ನಿರ್ಮಿಸಿದರು ಎಂಬ ನಂಬಿಕೆಯಿದೆ.
ಎಲ್ಲರ ಆಕರ್ಷಿಸುವ ಎರಡು ಕಲ್ಲುಗಳು
ಇನ್ನು ಪಾಂಡವರ ಬೆಟ್ಟದ ಬಳಿಯ ಬೆಟ್ಟದ ಮಧ್ಯದಲ್ಲಿ 20 ಮೀಟರ್ ಉದ್ದದ ಗುಹೆ(ಗವಿ)ಯಿದೆ. ಈ ಗವಿ ಇರುವುದರಿಂದಲೇ ಈ ಬೆಟ್ಟಕ್ಕೆ ಗವಿಬೆಟ್ಟ ಎಂಬ ಹೆಸರು ಬಂದಿದೆ. ಈ ಗವಿಯಲ್ಲಿ ಚಿಕ್ಕದಾದ ಕೊಳವೊಂದಿದೆ. ಅದರಲ್ಲಿ ಉದ್ಭವಿಸುವ ಜಲವನ್ನು ತೀರ್ಥವೆಂದು ಉಪಯೋಗಿಸಲಾಗುತ್ತದೆ. ಬೆಟ್ಟದ ಮೇಲೆ ತೆರಳಲು ದಾರಿಗಳಿದ್ದು ಇದರಲ್ಲಿ ಮುನ್ನಡೆದರೆ ಬೆಟ್ಟದ ತುದಿಗೆ ಹೋಗಬಹುದು.

ಅಲ್ಲಿ ಬೃಹತ್ ಹೆಬ್ಬಂಡೆಗಳಿವೆ. ಈ ಎರಡು ಕಲ್ಲುಗಳ ಪೈಕಿ ಒಂದನ್ನು ಕೋಳಿ ಕೂಗಿದ ಕಲ್ಲೆಂದೂ ಮತ್ತೊಂದನ್ನು ಕುದುರೆ ನೆಗೆದ ಕಲ್ಲೆಂದು ಹೇಳಲಾಗುತ್ತದೆ. ಇದರ ಮೇಲೆ ನಿಂತು ನೋಡಿದ್ದೇ ಆದರೆ ಪ್ರಕೃತಿಯ ವಿಹಂಗಮನೋಟ ಮೂಕಸ್ಮಿತರನ್ನಾಗಿ ಮಾಡುತ್ತದೆ. ದೂರದ ಬೆಟ್ಟಗಳಾಚೆ ಕಾಣಸಿಗುವ ಸೂರ್ಯಾಸ್ತಮಾನದ ದೃಶ್ಯ ಮನಮೋಹಕವಾಗಿರುತ್ತದೆ.
ದೊಡ್ಡಮಳ್ತೆ ಸೇರಿದಂತೆ ಇವತ್ತಿನ ಈ ಪ್ರದೇಶವನ್ನು ಹಿಂದೆ ಏಳುಸಾವಿರ ಸೀಮೆ ಎಂದು ಕರೆಯಲಾಗುತ್ತಿತ್ತಂತೆ. ಕ್ರಿ.ಶ.1034 ರಿಂದ 1297ರವರೆಗೆ ಈ ಸೀಮೆಯನ್ನು ಚಂಗಲವಾಸ್ ಎಂಬ ರಾಜಮನೆತನ ಆಳುತ್ತಿತ್ತಂತೆ. 1106ರಲ್ಲಿ ಆಗಿನ ಏಳುಸಾವಿರ ಸೀಮೆಗೆ ಒಳಪಟ್ಟಿದ್ದ ದೊಡ್ಡಮಳ್ತೆಯಲ್ಲಿ ವ್ಯಾಪಾರಿ ಕಲ್ಲನಕೇರಿ ಮಲ್ಲೇಗೌಡ ಎಂಬಾತ ವಾಸಿಸುತ್ತಿದ್ದನಂತೆ. ಆತನ ಸೊಸೆಯೇ ಹೊನ್ನಮ್ಮ. ಆಕೆಯ ಬಲಿದಾನದಿಂದಲೇ ಬೃಹತ್ ಹೊನ್ನಮ್ಮನ ಕೆರೆ ಸೃಷ್ಟಿಯಾಗಿದೆ.
ಹತ್ತಿರದಲ್ಲಿಯೇ ಹಲವು ಪ್ರವಾಸಿ ತಾಣಗಳಿವೆ
ಸುಮಾರು 16.20 ಎಕರೆ ವಿಸ್ತೀರ್ಣ ಹೊಂದಿದೆ. ಈ ಕೆರೆಯಿಂದ ದೊಡ್ಡಮಳ್ತೆ, ಹಾರೋಹಳ್ಳಿ, ಮಸಗೊಡು, ಅಬ್ಬೂರು, ಮೋರಿಕಲ್ಲು ಹಾಗೂ ಅಡಿನಾಡೂರು ಗ್ರಾಮಗಳ ಕೃಷಿಕರ ಜಮೀನಿಗೆ ನೀರು ಹರಿಯುತ್ತದೆ. ಕೆರೆಯ ಪ್ರವೇಶ ದ್ವಾರದ ಬಲಕ್ಕೆ ಪುರಾತನ ಕಾಲದ ಗುಡಿಯೊಳಗೆ ಸಿದ್ದೇಶ್ವರ ದೇವರು ಹಾಗೂ ಪೂರ್ವಕ್ಕೆ ಮುಕ್ಕಾಲು ಕಿ.ಮೀ.ದೂರದಲ್ಲಿ ಶಿಲಾರಾಶಿಯ ಮಧ್ಯೆ ದೊಡ್ಡ ನಂದಿ ಹಾಗೂ ಚಿಕ್ಕ ನಂದಿ ವಿಗ್ರಹಗಳಿವೆ. ಕೆರೆದಡದಲ್ಲಿ ಬಸವೇಶ್ವರ ಮತ್ತು ಹೊನ್ನಮ್ಮನ ದೇಗುಲವಿದೆ.

ಇನ್ನು ಇಲ್ಲಿಗೆ ಪುಷ್ಪಗಿರಿಧಾಮ, ಹಾರಂಗಿಜಲಾಶಯ, ಬಿಸಿಲೆಘಾಟ್, ಕಾವೇರಿ ನಿಸರ್ಗಧಾಮ, ದುಬಾರೆ ಸೇರಿದಂತೆ ಹಲವು ಪ್ರವಾಸಿತಾಣಗಳು ಹತ್ತಿರವಾಗಲಿವೆ. ಹೀಗಾಗಿ ಸುತ್ತಲಿನ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ವೇಳೆ ಇಲ್ಲಿಗೂ ಪ್ರವಾಸಿಗರು ಆಗಮಿಸಬಹುದಾಗಿದೆ. ಬೆಂಗಳೂರಿನಿಂದ ಇಲ್ಲಿಗೆ ಸುಮಾರು 250 ಕಿ.ಮೀ. ದೂರವಾಗಲಿದೆ. ಸೋಮವಾರಪೇಟೆ ಪಟ್ಟಣವು ಕೇವಲ ಏಳು ಕಿ.ಮೀ. ದೂರದಲ್ಲಿ ಇರುವ ಕಾರಣ ವಾಸ್ತವ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್












Click it and Unblock the Notifications