Bisile Ghat: ಪಶ್ಚಿಮ ಘಟ್ಟದ 3 ಜಿಲ್ಲೆಗಳ ಸಂಬಂಧ ಬೆಸೆಯುವ ಬಿಸಿಲೆಘಾಟ್‌ಗೆ ಒಮ್ಮೆ ಭೇಟಿ ನೀಡಿ!

ಮಡಿಕೇರಿ, ಆಗಸ್ಟ್‌ 11: ಪಶ್ಚಿಮ ಘಟ್ಟದ ಮೂರು ಜಿಲ್ಲೆಯ ನಿಸರ್ಗ ಸೌಂದರ್ಯವನ್ನು ಒಂದೆಡೆ ನಿಂತು ಆಸ್ವಾದಿಸಲು ಇಷ್ಟಪಡ್ತೀರಾ? ಹಾಗಿದ್ದರೆ ನೀವು ತಪ್ಪದೆ ಬಿಸಿಲೆಘಾಟ್‌ಗೆ ಬನ್ನಿ. ಇಲ್ಲಿಗೆ ಬಂದವರಿಗೆ ಪ್ರಪಾತ ಮತ್ತು ಬೆಟ್ಟಗಳಿಗೆ ಹಸಿರನ್ನು ತುಂಬಿದ ಸುಂದರ ಪಾಕೃತಿಕ ಚೆಲುವಿನ ಚಿತ್ತಾರ ಲಭ್ಯವಾಗುತ್ತದೆ.

ಇಲ್ಲಿಗೆ ಕಾಲಿಟ್ಟು ಕಾನನದ ನಡುವಿನ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಾ ಹೋದಂತೆಯೇ ನಿಸರ್ಗದ ಸುಂದರ ನೋಟ ಒಂದರ ಮೇಲೊಂದರಂತೆ ಎದುರಾಗುತ್ತಾ ಹೋಗುತ್ತದೆ. ಆ ನೋಟ ಹೇಗಿರುತ್ತದೆ ಎಂದರೆ ದೂರದಲ್ಲಿ ಮುಗಿಲನ್ನು ಚುಂಬಿಸುವ ಗಿರಿಶಿಖರಗಳು. ಅವುಗಳ ಮೇಲೆ ಹಸಿರನ್ನೊದ್ದು ಕುಳಿತ ಕಾನನ..ಗಿರಿಕಂದಕಗಳಲ್ಲಿ ಒತ್ತೊತ್ತಾಗಿ ಬೆಳೆದು ವೃಕ್ಷಸಮೂಹ. ಪ್ರಪಾತದಾಚೆಗೆ ಕರಿಬಂಡೆಗಳ ಮೇಲೆ ಹಾಲ್ನೊರೆಯುಕ್ಕಿಸಿ ಹರಿಯುವ ನದಿ..ಬೀಸಿ ಬರುವ ಕುಳಿರ್‌ ಗಾಳಿ..ಹಕ್ಕಿಗಳ ಚಿಲಿಪಿಲಿ..ಜೇನು ಹುಳುಗಳ ಝೇಂಕಾರ..ಮುಂಜಾನೆ, ಸಂಜೆ ಮತ್ತು ಮಳೆಗಾಲದ ದಿನಗಳಲ್ಲಿ ನಮ್ಮನ್ನು ಬಿಡದೆ ಬೆಟ್ಟ ಕಂದಕವನ್ನೆಲ್ಲ ಆವರಿಸಿ ಲಾಗ ಹೊಡೆಯುವ ಮಂಜು ಕಲ್ಪನೆಯ ಕಡಲಿಗೂ ಜೀವ ತುಂಬಿ ಬಿಡುತ್ತದೆ.

Travel News: Bisle Ghat View Point Speciality

ಬಿಸಿಲೆಘಾಟ್ ಅತ್ತ ದಕ್ಷಿಣ ಕನ್ನಡ, ಇತ್ತ ಕೊಡಗು. ನಡುವಿನ ಹಾಸನ ಜಿಲ್ಲೆಯ ನೆಲದಲ್ಲಿರುವ ಕಾರಣ ಮೂರು ಜಿಲ್ಲೆಗಳ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಬಿಸಿಲೆಘಾಟ್‌ನಿಂದ ನಿಂತು ನೋಡಿದರೆ ಎದುರಿಗೆ ಕಾಣುವ ಕೊಡಗಿನ ನಿಸರ್ಗದ ಚೆಲುವು ಮನ ತಣಿಸಿದರೆ, ಎಡಗಡೆಗೆ ಹಾಸನ, ಬಲಗಡೆಗೆ ದಕ್ಷಿಣ ಕನ್ನಡದ ನೋಟವೂ ಲಭ್ಯವಾಗುತ್ತದೆ. ಇನ್ನು ಕೊಡಗಿನ ಸೋಮವಾರಪೇಟೆ, ದಕ್ಷಿಣ ಕನ್ನಡದ ಕುಕ್ಕೆಸುಬ್ರಹ್ಮಣ್ಯ, ಹಾಸನದ ಸಕಲೇಶಪುರಕ್ಕೆ ಈ ತಾಣ ಸಮೀಪವಿರುವುದರಿಂದ ಈ ಸ್ಥಳಗಳಿಗೆ ಭೇಟಿ ನೀಡಿದ ಪ್ರವಾಸಿಗರು ಬಿಸಿಲೆಘಾಟ್‌ ಗೂ ಪ್ರಯಾಣ ಬೆಳೆಸುವುದು ಸಾಮಾನ್ಯವಾಗಿದೆ.

ಪಶ್ಚಿಮ ಘಟ್ಟದ ಅರಣ್ಯದ ಸುಂದರ ನೋಟ

ಬಿಸಿಲೆಘಾಟ್ ಪಶ್ಚಿಮ ಘಟ್ಟದ ಅರಣ್ಯದ ಸುಂದರ ನೋಟವನ್ನು ಪ್ರವಾಸಿಗರಿಗೆ ಉಣಬಡಿಸುತ್ತದೆ. ಮಲೆನಾಡಿನಲ್ಲಿ ನೆಲೆನಿಂತಿರುವುದರಿಂದ ರಸ್ತೆಯ ಇಬ್ಭಾಗದಲ್ಲಿಯೂ ಬೆಳೆದು ನಿಂತ ಹೆಮ್ಮರಗಳು, ಬೆಟ್ಟಗುಡ್ಡಗಳ ನಡುವಿನ ಅಂಕುಡೊಂಕಾದ ರಸ್ತೆಯಲ್ಲಿ ಸಾಗಬೇಕು. ಇದೊಂದು ರೀತಿಯ ರೋಮಾಂಚನಕಾರಿ ಅನುಭವ ಎಂದರೆ ತಪ್ಪಾಗಲಾರದು.

Travel News: Bisle Ghat View Point Speciality

ಸುಬ್ರಹ್ಮಣ್ಯ ಮತ್ತು ಸಕಲೇಶಪುರ ರಸ್ತೆಯಲ್ಲಿ ತೆರಳಿದರೆ ರಸ್ತೆ ಬದಿಯಲ್ಲಿಯೇ ಬಿಸಿಲೆಘಾಟ್‌ನ ಪ್ರವೇಶ ದ್ವಾರ ಕಾಣಿಸುತ್ತದೆ. ಈ ಪ್ರವೇಶದ್ವಾರದೊಳಗೆ ಮುನ್ನಡೆದರೆ ನಿಸರ್ಗದ ರಮಣೀಯ ದೃಶ್ಯ ನಮ್ಮನ್ನು ಕುಣಿದು ಕುಪ್ಪಳಿಸುವಂತೆ ಮಾಡಿ ಬಿಡುತ್ತದೆ. ಗುಡ್ಡದ ಮೇಲಿನ ಕಡಿದಾದ ದಾರಿಯಲ್ಲಿ ಸಾಗುತ್ತಿದ್ದರೆ ಎಡಭಾಗದಲ್ಲಿ ಕಣ್ಣು ಹಾಯಿಸಿದುದ್ದಕ್ಕೂ ಕಾಣುವ ನೂರಾರು ಅಡಿಯ ಪ್ರಪಾತ ಎದೆ ಢವಢವ ಬಡಿದುಕೊಳ್ಳುವಂತೆ ಮಾಡುತ್ತದೆ.

ಅರಣ್ಯ ಇಲಾಖೆಯ ಅಧೀನದಲ್ಲಿ ಈ ತಾಣವಿದ್ದು, ಪ್ರವಾಸಿಗರಿಗೆ ಪ್ರಕೃತಿಯ ಚೆಲುವನ್ನು ವೀಕ್ಷಿಸಲೆಂದೇ ಎರಡಂತಸ್ತಿನ ವೀಕ್ಷಣಾ ಗೋಪುರವನ್ನು ನಿರ್ಮಿಸಲಾಗಿದೆ. ಇಲ್ಲಿಂದ ನಿಂತು ನೋಡಿದರೆ ನಿಸರ್ಗದ ಚೆಲುವು ನಮ್ಮೆಲ್ಲಾ ಜಂಜಾಟವನ್ನು ಮರೆಸಿ ಮನದಲ್ಲಿ ನೆಮ್ಮದಿ ನೆಲೆಸುವಂತೆ ಮಾಡಿಬಿಡುತ್ತದೆ. ದೂರದಲ್ಲಿ ಸಾಲುಗಟ್ಟಿ ನಿಂತ ಹಾಸನ, ಕೊಡಗು, ದಕ್ಷಿಣಕನ್ನಡ ಜಿಲ್ಲೆಗಳಿಗೆ ಸೇರಿದ ಬೆಟ್ಟಗಳು ಮುಗಿಲನ್ನು ಚುಂಬಿಸುತ್ತಿವೆಯೇನೋ ಎಂಬಂತೆ ಗೋಚರವಾಗುತ್ತದೆ.

Travel News: Bisle Ghat View Point Speciality

ಹಗಲು ಹೊತ್ತಿನಲ್ಲಿ ಮಾತ್ರ ಪ್ರವೇಶ

ಇಲ್ಲಿಂದ ನಿಂತು ನೋಡಿದ್ದೇ ಆದರೆ ಹಾಸನ ಜಿಲ್ಲೆಗೆ ಸೇರಿದ 1112 ಮೀ. ಎತ್ತರದ ಪಟ್ಟಬೆಟ್ಟ, 900 ಮೀ. ಎತ್ತರದ ಇನ್ನಿಕಲ್ಲು ಬೆಟ್ಟ, ದಕ್ಷಿಣಕನ್ನಡ ಜಿಲ್ಲೆಗೆ ಸೇರಿದ 1319 ಮೀ. ಎತ್ತರದ ಕುಮಾರ ಪರ್ವತ, ಕೊಡಗಿಗೆ ಸೇರಿದ 1119 ಮೀ. ಎತ್ತರದ ದೊಡ್ಡಬೆಟ್ಟ ಹಾಗೂ 1712 ಮೀ. ಎತ್ತರದ ಪುಷ್ಪಗಿರಿ ಪರ್ವತಗಳು ಗಮನಸೆಳೆಯುತ್ತವೆ. ಹಸಿರಿನ ನುಣ್ಣನೆಯ ಬೆಟ್ಟ ಕಣ್ಣನ್ನು ತಂಪಾಗಿಸುತ್ತದೆ.

ಅರಣ್ಯದ ನಡುವೆ ನಿರ್ಮಾಣವಾಗಿರುವ ತಾಣವಾದುದರಿಂದ ಇಲ್ಲಿ ನಿಗದಿತ ಸಮಯಗಳಲ್ಲಿ ಮಾತ್ರ ಪ್ರವೇಶಾವಕಾಶವಿದ್ದು, ರಾತ್ರಿ ವೇಳೆಯಲ್ಲಿ ಈ ಮಾರ್ಗಗಳಲ್ಲಿ ಸಂಚರಿಸುವುದು ಅಪಾಯ. ಏಕೆಂದರೆ ಅರಣ್ಯವಲಯವಾದುದರಿಂದ ಕಾಡಾನೆ ಸೇರಿದಂತೆ ವನ್ಯ ಮೃಗಗಳು ಸಂಚರಿಸುತ್ತಿರುತ್ತವೆ. ಇಲ್ಲಿಗೆ ಸಮೀಪದ ಗ್ರಾಮಗಳ ಮನೆಗಳಲ್ಲಿ ಪ್ರವಾಸಿಗರಿಗೆ ಊಟದ ವ್ಯವಸ್ಥೆಗಳಿವೆಯಾದರೂ ಆಹಾರ ಪದಾರ್ಥ ಸೇರಿದಂತೆ ಅಗತ್ಯ ವಸ್ತುಗಳನ್ನು ಜೊತೆಯಲ್ಲಿ ಕೊಂಡೊಯ್ಯುವುದು ಒಳ್ಳೆಯದು. ಆದರೆ ಸ್ವಚ್ಛತೆಗೆ ಆದ್ಯತೆ ನೀಡುವುದನ್ನು ಮರೆಯಬಾರದು.

ಬಿಸಿಲೆಘಾಟ್‌ಗೆ ಹೋಗುವುದು ಹೇಗೆ?

ಹಾಸನಕ್ಕೆ ತೆರಳುವ ಪ್ರವಾಸಿಗರು ಸಕಲೇಶಪುರಕ್ಕೆ ತೆರಳಿದರೆ ಅಲ್ಲಿಂದ 50 ಕಿ.ಮೀ. ದೂರ ಕ್ರಮಿಸಿದರೆ ಬಿಸಿಲೆಘಾಟ್ ತಲುಪಬಹುದು. ದಕ್ಷಿಣಕನ್ನಡದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದವರು ಅಲ್ಲಿಂದ ಸುಮಾರು 20 ಕಿ.ಮೀ.ಸಾಗಿದರೆ ಸಾಕು. ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರು ತಾಲೂಕು ಕೇಂದ್ರದಲ್ಲೊಂದಾದ ಸೋಮವಾರಪೇಟೆಗೆ ತೆರಳಿ ಅಲ್ಲಿಂದ 40ಕಿ.ಮೀ. ದೂರವನ್ನು ಶಾಂತಳ್ಳಿ, ಕುಂದಳ್ಳಿ ರಸ್ತೆಯಲ್ಲಿ ವಣಗೂರು ಮೂಲಕ ಸಾಗಿದರೆ ಕೂಡುರಸ್ತೆ ಎಂಬ ಸ್ಥಳ ಸಿಗುತ್ತದೆ. ಅಲ್ಲಿಂದ ಎಡಕ್ಕೆ ತಿರುಗಿ ಮುಂದೆ ಸಾಗಿದರೆ ಬಿಸಿಲೆಘಾಟ್‌ನ್ನು ತಲುಪಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+