ಮಂಗಳೂರು ಸೆಂಟ್ರಲ್‌ನಿಂದ ರೈಲುಗಳ ಸಂಚಾರ; ಬೇಡಿಕೆಗಳು
ಮಂಗಳೂರು, ಏಪ್ರಿಲ್ 05; ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಮಂಗಳೂರು (ರಿ) ಅಧ್ಯಕ್ಷ ಹನುಮಂತ ಕಾಮತ್ ದಕ್ಷಿಣ ರೈಲ್ವೆ ಮಂಗಳೂರು ವಿಭಾಗದ ಕ್ಷೇತ್ರ ಅಧಿಕಾರಿ ಶಿವರಾಜ್ ಭೇಟಿ ಮಾಡಿ ಹಲವು ಬೇಡಿಕೆಗಳ ಕುರಿತು ಮನವಿ ಸಲ್ಲಿಕೆ ಮಾಡಿದರು. ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ರೈಲು ಸೇವೆ ಆರಂಭಿಸುವುದು, ರೈಲುಗಳ ಸೇವೆಗಳ ವಿಸ್ತರಣೆ ಸೇರಿದಂತೆ ಹಲವು ಬೇಡಿಕೆಗಳು ಇದರಲ್ಲಿ ಸೇರಿವೆ.
ಮಂಗಳೂರು ಜಂಕ್ಷನ್‌ನಿಂದ ಈಗ ಸಂಚಾರ ನಡೆಸುತ್ತಿರುವ ರೈಲು ಸಂಖ್ಯೆ 16575/76 ಮಂಗಳೂರು ಜಂಕ್ಷನ್-ಯಶವಂತಪುರ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ಹಾಗೂ ಸಿ. ಎಸ್. ಎಂ. ಟಿ ಮುಂಬೈ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ನಿಂದಲೇ ಓಡಾಟ ನಡೆಸುವಂತೆ ನಿರ್ಧಾರ ಆಗಿತ್ತು. ಆದರೆ ಈ ರೈಲುಗಳು ಮಂಗಳೂರು ಸೆಂಟ್ರಲ್‌ನಿಂದ ಆರಂಭಿಸಲು ಪ್ಲಾಟ್‌ಫಾರ್ಮ್ ಅಲಭ್ಯ ಕಾರಣ ನೀಡಿದ್ದ ಪಾಲಕ್ಕಾಡ್ ವಿಭಾಗ ಇದನ್ನು ಪೂರ್ವ ನಿರ್ಧಾರಿತ ಮಂಗಳೂರು ಸೆಂಟ್ರಲ್ ಬದಲು ಮಂಗಳೂರು ಜಂಕ್ಷನಿಂದ ಓಡಾಟ ಆರಂಭ ಮಾಡಿತ್ತು ಎಂದು ವಿವರಣೆ ನೀಡಿದ್ದಾರೆ.

ಇದನ್ನು ತೀವ್ರವಾಗಿ ವಿರೋಧಿಸಿದಾಗ ಮಂಗಳೂರು ಸೆಂಟ್ರಲ್‌ನ ಹೊಸ ಎರಡು ಪ್ಲಾಟ್‌ಫಾರ್ಮ್‌ಗಳ ನಿರ್ಮಾಣ ಆದ ನಂತರ ಈ ಗಾಡಿಗಳನ್ನು ಮಂಗಳೂರು ಸೆಂಟ್ರಲ್‌ನಿಂದಲೇ ಆರಂಭಿಸುವುದಾಗಿ ರೈಲ್ವೆ ಅಧಿಕಾರಿಗಳು ಭರವಸೆ ನೀಡಿದ್ದರು. ಈ ಬಗ್ಗೆ ಈ ಹಿಂದೆ ನಡೆದ ಪಾಲಕ್ಕಾಡ್ ವಿಭಾಗ ಮಟ್ಟದ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿಯೂ ಸಹ ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿ ಈ ಎರಡೂ ರೈಲುಗಳನ್ನು ಮಂಗಳೂರು ಸೆಂಟ್ರಲ್‌ನಲ್ಲಿ ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣ ಆದ ತಕ್ಷಣ ವಿಸ್ತರಣೆ ಮಾಡುವಂತೆ ಆಗ್ರಹಿಸಲಾಗಿತ್ತು ಎಂದು ಉಲ್ಲೇಖಿಸಿದರು.
ಈ ಬೇಡಿಕೆಗೆ ಸದರಿ ಸಭೆಯಲ್ಲಿ ಅಧಿಕಾರಿಗಳು ಪೂರಕವಾಗಿ ಸ್ಪಂದಿಸಿ ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣ ಆದ ಬಳಿಕ ಈ ಎರಡೂ ರೈಲು ಗಾಡಿಗಳನ್ನು ವಿಸ್ತರಿಸುವ ಬಗ್ಗೆ ಆಶ್ವಾಸನೆ ನೀಡಿದ್ದರು. ಈಗ ಮಂಗಳೂರು ಸೆಂಟ್ರಲ್‌ನಲ್ಲಿ ಹೊಸ ಪ್ಲಾಟ್‌ಫಾರ್ಮ್‌ಗಳ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು ಶೀಘ್ರವೇ ಪ್ರಯಾಣಿಕರ ಸೇವೆಗೆ ಸಿದ್ಧವಾಗಲಿದೆ. ಈ ಹಿನ್ನಲೆಯಲ್ಲಿ ಹೊಸ ಪ್ಲಾಟ್‌ಫಾರ್ಮ್ ಕಾರ್ಯಾರಂಭ ಆದ ತಕ್ಷಣ ಈ ಎರಡೂ ರೈಲುಗಳನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಯಿತು.

ಮಂಗಳೂರು-ವಿಜಯಪುರ ರೈಲು; ಕರಾವಳಿ ನಗರ ಮಂಗಳೂರಿನಿಂದ ಉತ್ತರ ಕರ್ನಾಟಕದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ರೈಲು ರೈಲು ಸಂಖ್ಯೆ 07377/78 ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್ ಅನ್ನು ಮಂಗಳೂರು ಸೆಂಟ್ರಲ್‌ನಿಂದಲೇ ಸಂಚಾರ ನಡೆಸುವಂತೆ ಈ ಭಾಗದ ಜನತೆ ಈಗಾಗಲೇ ಬೇಡಿಕೆ ಇಟ್ಟಿದ್ದಾರೆ ಹಾಗೂ ಈ ರೈಲಿನ ಆಗಮನ ಸಮಯವನ್ನು ಪರಿಷ್ಕರಿಸಿ ಈಗಿನ ಆಗಮನ ಸಮಯ ಮಧ್ಯಾಹ್ನ 12.30ರ ಬದಲು ಬೆಳಗ್ಗೆ 10 ಗಂಟೆಗೆ ಸುಮಾರಿಗೆ ಮಂಗಳೂರು ಸೆಂಟ್ರಲ್ ತಲುಪುವ ಹಾಗೆ ವೇಳಾಪಟ್ಟಿಯಲ್ಲಿ ಮಾರ್ಪಾಡು ಮಾಡುವಂತೆ ಮನವಿ ಮಾಡಲಾಯಿತು. ಈಗ ಈ ರೈಲು ತತ್ಕಾಲ್ ವಿಶೇಷ ರೈಲಾಗಿ ಓಡಾಟ ನಡೆಸುತ್ತಿದ್ದು ಇದನ್ನು ಸಾಮಾನ್ಯ ದರದ ಎಕ್ಸ್‌ಪ್ರೆಸ್ ರೈಲು ಆಗಿ ಪರಿವರ್ತನೆ ಮಾಡುವಂತೆ ಮನವಿ ಮಾಡಲಾಯಿತು.
ರೈಲು ಸಂಖ್ಯೆ 12685/86 ಮಂಗಳೂರು ಸೆಂಟ್ರಲ್-ಡಾ. ಎಂ. ಜಿ. ಆರ್. ಚೆನ್ನೈ ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಮುರುಡೇಶ್ವರ ತನಕ ವಿಸ್ತರಿಸಲು ಮನವಿ ಮಾಡಲಾಗಿದೆ. ಅಲ್ಲದೇ ಹಾಲಿ ಸಂಚಾರ ನಡೆಸುತ್ತಿರುವ ರೈಲು ಸಂಖ್ಯೆ 10107/08 ಮಂಗಳೂರು ಸೆಂಟ್ರಲ್-ಮಡಗಾಂವ್ ಜಂಕ್ಷನ್ ಮೆಮು ರೈಲನ್ನು ಮಂಗಳೂರು ಸೆಂಟ್ರಲ್‌ನಿಂದ ಈಗ ಮಧ್ಯಾಹ್ನ 3.30ಕ್ಕೆ ನಿರ್ಗಮಿಸುವ ಬದಲು ಸಂಜೆ 4 ಗಂಟೆಗೆ ನಿರ್ಗಮಿಸುವಂತೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲು ಸಹ ಮನವಿ ಸಲ್ಲಿಕೆ ಮಾಡಾಲಾಗಿದೆ. ಈಗ ಸಂಜೆ 5.30ಕ್ಕೆ ಮಂಗಳೂರು ಸೆಂಟ್ರಲ್‌ಗೆ ಆಗಮಿಸಿ ರಾತ್ರಿ ಇಲ್ಲಿಯೇ ತಂಗುವ ರೈಲು ಸಂಖ್ಯೆ 16606 ನಾಗರಕೊಯಿಲು ಜಂಕ್ಷನ್-ಮಂಗಳೂರು ಸೆಂಟ್ರಲ್ ರೈಲಿನ ಬೋಗಿಗಳನ್ನು (ರೇಕ್) ಅನ್ನು ಉಪಯೋಗಿಸಿ ಸಂಜೆ ವೇಳೆಗೆ ಮಂಗಳೂರು ಹಾಗೂ ಮಾಡಗಾಂವ್ ನಡುವೆ ಹೊಸ ಎಕ್ಸ್‌ಪ್ರೆಸ್ ರೈಲು ಸಂಚಾರದ ಆರಂಭಕ್ಕೆ ಬೇಡಿಕೆ ಇಡಲಾಗಿದೆ.












Click it and Unblock the Notifications