ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾದ ಗದಗ ಬೈಪಾಸ್ ರೈಲು ನಿಲ್ದಾಣ
ಗದಗ, ಮೇ 12: ಉತ್ತರ ಕರ್ನಾಟಕ ಭಾಗದ ರೈಲು ಪ್ರಯಾಣಿಕರು ಅದರಲ್ಲೂ ಗದಗದ ಜನರು ರೈಲ್ವೆ ಇಲಾಖೆ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಗದಗ ಬೈಪಾಸ್ ಮೂಲಕ ರೈಲುಗಳ ಸಂಚಾರಕ್ಕೆ ದಿನಾಂಕ ನಿಗದಿಯಾಗಿದ್ದು, ಜನರ ಅಸಮಾಧಾನಕ್ಕೆ ಕಾರಣ. ಗದಗ ಜಂಕ್ಷನ್‌ಗೆ ರೈಲು ಬರಬೇಕು ಎಂಬುದು ಬೇಡಿಕೆಯಾಗಿದೆ.
ಗದಗ ನಗರದ ಹೊರವಲಯದಲ್ಲಿ ಗದಗ ಬೈಪಾಸ್ ಕ್ಯಾಬಿನ್ ರೈಲುನಿಲ್ದಾಣ ನಿರ್ಮಾಣ ಮಾಡಲಾಗಿದೆ. ಈ ರೈಲು ನಿಲ್ದಾಣ ಯಾವ ಉದ್ದೇಶಕ್ಕೆ ನಿರ್ಮಾಣ ಮಾಡಲಾಗಿದೆ ಎಂಬುದು ಗದಗ ಜನರ ಪ್ರಶ್ನೆಯಾಗಿದೆ. ಇದರ ನಡುವೆಯೇ ಈ ನಿಲ್ದಾಣ ಉದ್ಘಾಟನೆಗೂ ಮುನ್ನ ಇಲ್ಲಿಂದ ರೈಲು ಸಂಚಾರ ಆರಂಭಿಸಲಾಗುತ್ತಿದೆ.

ಮೇ 12 ರಿಂದ ಸಂಚಾರ ನಡೆಸುವ ಬೆಳಗಾವಿ-ಗೋಮತಿ ನಗರ ರೈಲು ಜುಲೈ 2ರ ತನಕ ಗದಗ ಬೈಪಾಸ್ ನಿಲ್ದಾಣದ ಮೂಲಕ ಸಾಗಲಿದೆ ಎಂದು ರೈಲ್ವೆ ಇಲಾಖೆ ವೇಳಾಪಟ್ಟಿಯಲ್ಲಿ ಹೇಳಿದೆ. ರೈಲು ನಂಬರ್ 07389/ 07390 ಬೆಳಗಾವಿಯಿಂದ ಹೊರಟು ಧಾರವಾಡ, ಹುಬ್ಬಳ್ಳಿ ಮೂಲಕ ನೇರವಾಗಿ ಗದಗ ಬೈಪಾಸ್‌ನಿಂದ ಬಾದಾಮಿಗೆ ಸಾಗಿ ನಿಲುಗಡೆಗೊಳ್ಳಲಿದೆ.
ಬಾಗಲಕೋಟೆ, ಆಲಮಟ್ಟಿ, ವಿಜಯಪುರ ಮೂಲಕ ಸಾಗುವ ರೈಲು ಗದಗ ಜಂಕ್ಷನ್‌ಗೆ ಬರುವುದಿಲ್ಲ. ಅಲ್ಲದೇ ಗೋಮತಿ ನಗರ-ಬೆಳಗಾವಿ ರೈಲು ಸಹ ಗದಗ ಬೈಪಾಸ್ ಮೂಲಕವೇ ಸಂಚಾರ ನಡೆಸಲಿದೆ ಎಂಬುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ರೈಲ್ವೆ ಹೋರಾಟ ಸಮಿತಿ ಇದನ್ನು ಖಂಡಿಸಿ ಇಲಾಖೆ ವಿರುದ್ಧ ಹೋರಾಟ ನಡೆಸಲು ಮುಂದಾಗಿದೆ.
ನಮ್ಮ ಗದಗ ಜನತೆಗೆ ಚಿಪ್ಪು ಹಾಗೂ ಚೊಂಬು ನೀಡುತ್ತಿರುವ ಕೇಂದ್ರ ಸರ್ಕಾರ, ಹುಬ್ಬಳ್ಳಿ- ವಿಜಯಪುರ Exp & ಹುಬ್ಬಳ್ಳಿ - ಸೊಲ್ಲಾಪುರ Exp ರೈಲುಗಳನ್ನು ಗದಗ ಜಂಕ್ಷನ್ ಬದಲಿಗೆ ಗದಗ ಬೈಪಾಸ್ ಮುಖಾಂತರ ಓಡಿಸುವ ಹುನ್ನಾರ ನಡೆಯುತ್ತಿದೆ.@narendramodi @BJP4Karnataka @KPCCKarnataka @JoshiPralhad @BSBommai @HKPatilINC https://t.co/FILisx59sG
— ಗದಗ ರೈಲು ಬಳಕೆದಾರರು Gadag Railway Users (@GadagRailUsers) May 9, 2024
ಬೈಪಾಸ್ ನಿಲ್ದಾಣ ಏಕೆ?; ಅಮೃತ್ ಭಾರತ್ ಯೋಜನೆಯಡಿ 23.05 ಕೋಟಿ ರೂ. ವೆಚ್ಚದಲ್ಲಿ ಗದಗ ರೈಲು ನಿಲ್ದಾಣವನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿಯೇ ನಗರದಿಂದ 10 ಕಿ. ಮೀ. ದೂರದಲ್ಲಿರುವ ಬೈಪಾಸ್ ನಿಲ್ದಾಣಕ್ಕೆ ರೈಲುಗಳನ್ನು ಸ್ಥಳಾಂತರ ಮಾಡುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.
ವಿಜಯಪುರ-ಹುಬ್ಬಳ್ಳಿ ಮಾರ್ಗದ ರೈಲುಗಳು ಗದಗ ಜಂಕ್ಷನ್‌ಗೆ ಬಂದು ಇಂಜಿನ್ ಬದಲಾಯಿಸಿ ಹೊರಡಲು 0 ರಿಂದ 15 ನಿಮಿಷ ಬೇಕಾಗುತ್ತದೆ. ಈ ಸಮಯ ಕಡಿಮೆ ಮಾಡಲು ಗದಗ ಬೈಪಾಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಆದರೆ ಈಗ ವಿಶೇಷ ರೈಲುಗಳನ್ನು ಬೈಪಾಸ್ ನಿಲ್ದಾಣದ ಮೂಲಕ ಸಂಚಾರ ನಡೆಸುವಂತೆ ಮಾಡಿ ಜಂಕ್ಷನ್‌ಗೆ ರೈಲು ಬರದಂತೆ ಮಾಡಲಾಗುತ್ತಿದೆ ಎಂದು ಜನರು ದೂರಿದ್ದಾರೆ.
ಕೊಪ್ಪಳ, ವಿಜಯನಗರ, ಬಳ್ಳಾರಿ ಭಾಗದ ಜನರು ಗದಗ ಜಂಕ್ಷನ್‌ನಲ್ಲಿ ಇಳಿದು ರೈಲು ಬದಲಾವಣೆ ಮಾಡುತ್ತಿದ್ದರು. ಈಗ ರೈಲು ಗದಗ ಬೈಪಾಸ್‌ನಲ್ಲಿ ನಿಂತರೆ ಅಲ್ಲಿಂದ 200 ರೂ. ಆಟೋ ಬಾಡಿಗೆ ಪಾವತಿ ಮಾಡಿ ಮತ್ತೆ ಗದಗ ಜಂಕ್ಷನ್‌ಗೆ ಆಗಮಿಸಬೇಕು. ಬೈಪಾಸ್‌ಗೆ ರೈಲು ಸ್ಥಳಾಂತರ ಯಾವುದೇ ಮುಂದಾಲೋಚನೆ ಇಲ್ಲದ ತೀರ್ಮಾನ ಎಂದು ಜನರು ಇಲಾಖೆ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ಸುಮಾರು 4 ದಶಕಗಳಿಂದ ಉತ್ತರ ಮತ್ತು ದಕ್ಷಿಣ ಭಾರತದ ರಾಜ್ಯಗಳನ್ನು ಸಂಪರ್ಕಿಸುವ ಮೂಲಕ ಗದಗ ಜಂಕ್ಷನ್ ಕಾರ್ಯ ನಿರ್ವಹಣೆ ಮಾಡುತ್ತಿದೆ. ಈಗ ಹಲವು ರೈಲುಗಳನ್ನು ಗದಗ ಬೈಪಾಸ್ ಮೂಲಕ ಸಂಚಾರ ನಡೆಸುವಂತೆ ಮಾಡಿ ಜಂಕ್ಷನ್‌ನಿಂದ ಜನರನ್ನು ದೂರ ಮಾಡಲಾಗುತ್ತಿದೆ ಎಂದು ಪ್ರಯಾಣಿಕರು ದೂರಿದ್ದಾರೆ.
ಅಧಿಕಾರಿಗಳು ಈಗಾಗಲೇ ರೈಲು ನಂಬರ್ 06919/20, 07329/30 ಮತ್ತು 07331/32 ರೈಲುಗಳನ್ನು ಗದಗ ಬೈಪಾಸ್ ಮೂಲಕ ಜೂನ್ 1ರಿಂದ ಓಡಿಸಲು ತೀರ್ಮಾನಿಸಿದ್ದಾರೆ. ಅಧಿಕಾರಿಗಳು ತಾತ್ಕಾಲಿಕವಾಗಿ ರೈಲುಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಎಲ್ಲಾ ರೈಲುಗಳು ಬೈಪಾಸ್ ಮೂಲಕ ಸಾಗಿದರೆ ಜಂಕ್ಷನ್‌ನಿಂದ ಜನರು ಬೈಪಾಸ್ ನಿಲ್ದಾಣಕ್ಕೆ ಹೇಗೆ ಬರಬೇಕು? ಎಂದು ಹೋರಾಟಗಾರರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications