ಮೈಸೂರು: ಧನುಷ್ಕೋಟಿಯ ಕಾವೇರಿ ವೈಭವಕ್ಕೆ ಮುಗಿಬಿದ್ದ ಪ್ರವಾಸಿಗರು..!
ಮೈಸೂರು, ಜುಲೈ 25: ಅತ್ತ ಕೊಡಗಿನಲ್ಲಿ ಮಳೆ ಸುರಿದು ಕಾವೇರಿ ಭೋರ್ಗರೆದು ಹರಿದರೆ ಇತ್ತ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆಯ ಧನುಷ್ಕೋಟಿಯಲ್ಲಿ ಕಾವೇರಿಯ ಜಲವೈಭವ ಶುರುವಾಗಿ ಬಿಡುತ್ತದೆ. ಈ ಸುಂದರ ದೃಶ್ಯಕ್ಕೆ ಕಾಯುವ ಪ್ರವಾಸಿಗರ ಅತ್ತ ಹೆಜ್ಜೆ ಹಾಕಿ ವಿಶಾಲ ಹೆಬ್ಬಂಡೆಯಲ್ಲಿ ರುದ್ರನರ್ತನಗೈಯ್ಯುವ ಕಾವೇರಿಯನ್ನು ನೋಡಿ ಕಣ್ತುಂಬಿಸಿಕೊಳ್ಳುತ್ತಾರೆ.
ಎಂದಿನಂತೆ ಮಳೆ ಬಂದರೆ ಕಾವೇರಿಯೂ ಶಾಂತಳಾಗಿ ಹರಿಯುತ್ತಾಳೆ ಹೀಗೆ ಹರಿದು ಬಂದು ಧನುಷ್ಕೋಟಿಯಲ್ಲಿ ಧುಮ್ಮಿಕ್ಕುವಾಗ ಶ್ವೇತಧಾರಿಯಾಗಿ ಕಂಗೊಳಿಸುತ್ತಾಳೆ. ಆದರೀಗ ಕಾವೇರಿ ಶಾಂತಳಾಗಿಲ್ಲ. ಅಬ್ಬರಿಸುತ್ತಲೇ ಹರಿದು ಬರುತ್ತಿದ್ದಾಳೆ. ಆಕೆ ಆರ್ಭಟ ಮತ್ತು ಭೋರ್ಗರೆತದ ರುದ್ರನರ್ತನ ರೋಮಾಂಚನಕಾರಿಯಾಗಿದೆ. ಅಷ್ಟೇ ಅಲ್ಲದೆ ಇಲ್ಲಿ ಸೃಷ್ಠಿಯಾಗಿರುವ ಹತ್ತಾರು ದೃಶ್ಯಗಳು ರುದ್ರರಮಣೀಯವಾಗಿ ಮೈಮನವನ್ನು ಸೆಳೆಯುತ್ತಿವೆ.

ಕಾವೇರಿ ನದಿಯಿಂದ ಸೃಷ್ಠಿಯಾಗಿರುವ ಚುಂಚನಕಟ್ಟೆಯ ಧನುಷ್ಕೋಟಿ ಜಲಪಾತ ಈ ಭಾಗದ ಪ್ರವಾಸಿಗರಿಗೆ ಮುದ ನೀಡುವ ಪ್ರವಾಸಿ ತಾಣಗಳಲ್ಲೊಂದಾಗಿದೆ. ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಮತ್ತು ಕಾವೇರಿ ನದಿಯಲ್ಲಿ ನೀರಿನ ಹರಿವು ಕೂಡ ಹೆಚ್ಚಿರುವುದರಿಂದ ಧನುಷ್ಕೋಟಿ ಕಾವೇರಿಯದು ಬರೀ ನರ್ತನವಲ್ಲ ಅದು ರುದ್ರನರ್ತನ. ಈ ಒಂದು ಕ್ಷಣಕ್ಕಾಗಿ ಮುಂಗಾರು ಆರಂಭದಿಂದಲೇ ಕಾಯುತ್ತಿದ್ದವರೀಗ ಅತ್ತ ದೌಡಾಯಿಸುತ್ತಿದ್ದು ಕಾವೇರಿಯ ವೈಭವವನ್ನು ಕಣ್ಣಾರೆ ನೋಡಿ ಖುಷಿ ಪಡುತ್ತಿದ್ದಾರೆ.
ಮಳೆಗಾಲದಲ್ಲಿ ಕಾವೇರಿ ರುದ್ರನರ್ತನ
ಬೇಸಿಗೆಯ ದಿನಗಳಲ್ಲಿ ಯಾವುದೇ ಅಬ್ಬರವಿಲ್ಲದೆ ಶಾಂತವಾಗಿ ಧುಮುಕುವ ಜಲಧಾರೆ ಮಳೆಗಾಲದಲ್ಲಿ ಮಾತ್ರ ರೌದ್ರತೆಯನ್ನು ತಾಳುತ್ತದೆ. ಹೆಬ್ಬಂಡೆಗಳ ಮೇಲೆ ಅಗಲವಾಗಿ ಕೆಂಬಣ್ಣದೊಂದಿಗೆ ಭೋರ್ಗರೆದು ಸುಮಾರು 40ಕ್ಕೂ ಹೆಚ್ಚು ಅಡಿ ಎತ್ತರದಿಂದ ಧುಮುಕುವಾಗ ಕಂಡು ಬರುವ ದೃಶ್ಯ ಅದ್ಭುತ. ಈಗಿನ ಪರಿಸ್ಥಿತಿಯಲ್ಲಿ ಜಲಪಾತದತ್ತ ತೆರಳುವ ಪ್ರಯತ್ನ ಮಾಡದಿರುವುದು ಒಳಿತು ಒಂದು ವೇಳೆ ಹೋದರೂ ದೂರದಿಂದಲೇ ಕಾವೇರಿಯ ಜಲವೈಭವ ನೋಡಿ ಹಿಂತಿರುಗುವುದು ಒಳ್ಳೆಯದು.

ಜಲಪಾತದ ಸನಿಹಕ್ಕೆ ಹೋಗಬೇಡಿ
ದೂರದಿಂದ ಬರುವ ಬಹಳಷ್ಟು ಪ್ರವಾಸಿಗರು ಜಲಪಾತವನ್ನು ನೋಡಿದ ತಕ್ಷಣವೇ ಮೈಮರೆಯುತ್ತಾರೆ. ಅಷ್ಟೇ ಅಲ್ಲದೆ ಅದರ ಸನಿಹಕ್ಕೆ ಹೋಗುವ ಕೆಟ್ಟ ಪ್ರಯತ್ನ ಮಾಡುತ್ತಾರೆ. ಇಂತಹ ಕೆಲಸಕ್ಕೆ ಯಾರೂ ಕೈಹಾಕಬೇಡಿ. ಇಲ್ಲಿ ಪ್ರಾಣ ಕಳೆದುಕೊಂಡವರ ದೊಡ್ಡಪಟ್ಟಿಯೇ ಇದೆ. ಸದಾ ನಗರದ ಗೌಜು ಗದ್ದಲ, ಕೆಲಸಗಳ ಒತ್ತಡ ಇವುಗಳನ್ನೆಲ್ಲ ದೇಹ ಮತ್ತು ಮನಸ್ಸಿನಿಂದ ಆಚೆ ಹಾಕುವ ಶಕ್ತಿ ಪ್ರಕೃತಿಗಿದೆ. ಆದುದರಿಂದ ಇಂತಹ ಸ್ಥಳಗಳಿಗೆ ಬಂದಾಗ ಇಲ್ಲಿನ ನಿಸರ್ಗ ಸೌಂದರ್ಯವನ್ನು ಆಹ್ಲಾದಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಆಗ ಮೈಮನ ಹಗುರವಾಗುತ್ತದೆ. ಅದನ್ನು ಬಿಟ್ಟು ಪ್ರಕೃತಿಗೆ ವಿರುದ್ಧವಾಗಿ ಹೋದರೆ ಅದು ಮಾರಕವಾಗುವುದರಲ್ಲಿ ಎರಡು ಮಾತಿಲ್ಲ.
ಇಲ್ಲಿ ಮೈಮರೆತರೆ ಸಂಕಷ್ಟ ತಪ್ಪಿದಲ್ಲ
ಕಾವೇರಿಯ ಜಲವೈಭವದ ದೃಶ್ಯಗಳನ್ನು ದೂರದಿಂದಲೇ ನೋಡಿ ಹಿಂತಿರುಗಿ ಎಂಬ ಸೂಚನೆ ನೀಡುತ್ತಾ ಬಂದಿದ್ದರೂ ಅದನ್ನು ಉಲ್ಲಂಘಿಸಿ ನೀರಿಗಿಳಿದು ಈಜುವ ಪ್ರಯತ್ನ ಮಾಡಿ ಪ್ರಾಣ ಕಳೆದುಕೊಳ್ಳುತ್ತಲೇ ಇರುತ್ತಾರೆ. ಸಾಮಾನ್ಯವಾಗಿ ದೂರದಿಂದ ಬರುವ ಪ್ರವಾಸಿಗರಿಗೆ ಇಲ್ಲಿನ ದುರಂತಗಳ ಅರಿವಿಲ್ಲದೆ ಇರುವುದರಿಂದ ಸೂಚನಾಫಲಕಗಳಿದ್ದರೂ ಅದಕ್ಕೆ ಸೊಪ್ಪು ಹಾಕದೆ ನದಿಗಿಳಿದು ನೀರಿನಲ್ಲಿ ಆಟವಾಡಲು ಮುಂದಾಗುತ್ತಾರೆ. ಇದರಿಂದ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಾರೆ.

ವೀಕೆಂಡ್‌ನಲ್ಲಿ ಜನ ಜಾತ್ರೆ
ಇನ್ನು ಚುಂಚನಕಟ್ಟೆಗೆ ಬರುವ ಪ್ರವಾಸಿಗರು ಇಲ್ಲಿಗೆ ಸಮೀಪವಿರುವ ರಾಮಸಮುದ್ರ ಅಣೆಕಟ್ಟೆ ಮತ್ತು ಸಕ್ಕರೆ ಗ್ರಾಮದ ಬಳಿಯ ಬಳ್ಳೂರು ಅಣ್ಣೆಕಟ್ಟೆಗೂ ತೆರಳಿ ನಿಸರ್ಗದ ಸೌಂದರ್ಯವನ್ನು ಸವಿಯಹುದಾಗಿದೆ. ಈಗ ಎಲ್ಲ ಅಣೆಕಟ್ಟೆಗಳು ಜಲವೈಭವಕ್ಕೆ ಸಾಕ್ಷಿಯಾಗಿದ್ದು, ನೋಡ ಬರುವ ಪ್ರವಾಸಿಗರಿಗೆ ತಮ್ಮ ಚೆಲುವನ್ನು ಉಣಬಡಿಸಲು ನಿಂತಿವೆಯೇನೋ ಎಂಬಂತೆ ಭಾಸವಾಗುತ್ತಿವೆ. ಹೀಗಾಗಿ ವೀಕೆಂಡ್ ಗಳಲ್ಲಿ ಇಲ್ಲಿ ಜನಜಾತ್ರೆಯೇ ನೆರೆಯುತ್ತಿದೆ. ಒಟ್ಟಾರೆಯಾಗಿ ಕಾವೇರಿ ನದಿ ಸೃಷ್ಠಿಸಿರುವ ಈ ಸುಂದರ ಜಲಪಾತ ಹಲವು ರೀತಿಯಲ್ಲಿ ತನ್ನ ಚೆಲುವನ್ನು ತೆರೆದಿಡುತ್ತಾ ಪ್ರವಾಸಿಗರ ಸೆಳೆಯುತ್ತಿದೆ.












Click it and Unblock the Notifications