ಉತ್ತರ ಕನ್ನಡಲ್ಲಿ ಬೇಸಿಗೆ ರಜೆ ಮಸ್ತಿ: ಬಿಸಿಲ ಧಗೆ ನಡುವೆಯೂ ಬೀಚ್‌ನಲ್ಲಿ ಮಸ್ತ್ ಮಜಾ
ಕಾರವಾರ, ಏಪ್ರಿಲ್ 22: ಬೇಸಿಗೆ ರಜೆ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳತ್ತ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಅದರಲ್ಲಿಯೂ ಕರಾವಳಿ ಕಡಲತೀರಗಳು, ಪ್ರಮುಖ ದೇವಾಲಯ, ಕೋಟೆ, ಜಲಸಾಹಸಿ ಕ್ರೀಡೆಗಳತ್ತ ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದು, ಪ್ರವಾಸಿತಾಣಗಳು ನಿತ್ಯವೂ ಜನರಿಂದ ಗಿಜುಗುಡುತ್ತಿದೆ.
ಒಮ್ಮೆ ಉತ್ತರ ಕನ್ನಡ ಪ್ರವೇಶ ಮಾಡಿದರೆ ಹತ್ತಾರು ಪ್ರದೇಶಗಳನ್ನು ಸಾಲಾಗಿ ನೋಡುವ ಅವಕಾಶ ಜಿಲ್ಲೆಯಲ್ಲಿದೆ. ಇದೇ ಕಾರಣಕ್ಕೆ ಪ್ರತಿ ವರ್ಷದಂತೆ ಈ ಬಾರಿಯೂ ಬೇಸಿಗೆ ಆರಂಭವಾಗುತ್ತಿದ್ದಂತೆ ಪ್ರವಾಸಿಗರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಅದರಲ್ಲಿಯೂ ರಜಾ ದಿನಗಳಲ್ಲಿ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿದ್ದಾರೆ.

ಸ್ಕೂಬಾ ಡೈವಿಂಗ್‌ಗೆ ಜನಸಾಗರ
ಅದರಲ್ಲಿಯೂ ಅತೀ ಎತ್ತರದ ಶಿವನಮೂರ್ತಿ ಹೊಂದಿರುವ ಹಾಗೂ ಆತ್ಮಲಿಂಗದ ಒಂದು ಭಾಗವಿರುವ ಶ್ರೀ ಕ್ಷೇತ್ರ ಮುರುಡೇಶ್ವರಕ್ಕೆ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇಲ್ಲಿನ ಬೀಚ್, ಸ್ಕೂಬಾ ಡೈವಿಂಗ್, ಜಲಸಾಹಸಿ ಕ್ರೀಡೆಗಳಲ್ಲಿ ಮಕ್ಕಳು ಕುಟುಂಬಸ್ಥರೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ. ದೇಶ ವಿದೇಶದಲ್ಲಿ ಎಲ್ಲಿಯೋ ನೋಡುತ್ತಿದ್ದ ಸ್ಕೂಬಾ ಡೈವಿಂಗ್ ಈಗ ಕರ್ನಾಟಕದಲ್ಲೇ ಇರುವುದರಿಂದ ನೂರಾರು ಜನರು ಅಲ್ಲಿಗೆ ತೆರಳಿ ಎಂಜಾಯ್ ಮಾಡುತ್ತಿದ್ದಾರೆ.
ಇನ್ನು ಹೊನ್ನಾವರ ತಾಲೂಕಿನಲ್ಲಿ ಅಂತರಾಷ್ಟ್ರೀಯ ಮಾನ್ಯತೆಯ ಬ್ಲೂ ಫ್ಲ್ಯಾಗ್ ಮನ್ನಣೆ ಪಡೆದಿರುವ ಇಕೋ ಬೀಚ್ ಕೂಡ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಹೊನ್ನಾವರದ ಕಾಸರಕೋಡು ಹೆದ್ದಾರಿಯಿಂದ ಸ್ವಲ್ಪ ದೂರದಲ್ಲಿರುವ ಬೀಚ್ ಪ್ರತಿನಿತ್ಯ ಸಾವಿರಾರು ಮಂದಿ ಆಗಮಿಸುತ್ತಿದ್ದಾರೆ. ಇಲ್ಲಿ ಆಸನ ವ್ಯವಸ್ಥೆ, ವಾಚ್ ಟವರ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಪರಿಸರ ಸ್ನೇಹಿ ಸೌಲಭ್ಯಗಳ ಜೊತೆಗ ಸಮೀಪದಲ್ಲಿಯೇ ಉದ್ಯಾನವನ ಕೂಡ ಇರುವುದು ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದೆ.
ಕುಮಟಾ ತಾಲೂಕಿನ ಮಿರ್ಜಾನ್ ಕೋಟೆ, ಯಾಣ, ಕುಮಟಾದ ವನ್ನಳ್ಳಿ ಬೀಚ್, ಬಾಡ ಬೀಚ್‌ಗಳು ಹತ್ತಿರದಲ್ಲಿಯೇ ಇರುವ ಕಾರಣ ಒಂದಾದ ಮೇಲೆ ಒಂದರಂತೆ ತೆರಳಿ ಎಂಜಾಯ್ ಮಾಡುತ್ತಾರೆ.

ಗೋಕರ್ಣದಲ್ಲಿ ಪ್ರವಾಸಿಗರ ದಂಡು
ಇನ್ನು ಪರಶೀವನ ಆತ್ಮಲಿಂಗವಿರುವ ಗೋಕರ್ಣ ಭಕ್ತಿಯ ಹಾಗೂ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹರಿದುಬರುತ್ತಿದ್ದಾರೆ. ಇಲ್ಲಿನ ಮುಖ್ಯ ಕಡಲತೀರ, ಓಂ ಬೀಚ್, ಕುಡ್ಲೆ ಬೀಚ್, ರೆಸಾರ್ಟ್, ಹೊಂ ಸ್ಟೇಗಳು, ಜಲಸಾಹಸಿ ಕ್ರೀಡೆಗಳು ಗಮನ ಸೆಳೆಯುತ್ತಿವೆ. ಅಲ್ಲದೇ ಬೇಸಿಗೆ ರಜೆ ಜೊತೆಗೆ ವಾರಾಂತ್ಯ ವೇಳೆ ಹೆಚ್ಚಿನ ಪ್ರವಾಸಿಗರು ಬಂದು ತೆರಳುತ್ತಿದ್ದಾರೆ.
ಇನ್ನು ಅಂಕೋಲಾದ ಹನಿ ಬೀಚ್, ಕಾರವಾರದ ತಿಳಮಾತಿ, ಟ್ಯಾಗೋರ್ ಬೀಚ್, ದೇವಭಾಗ ಬೀಚ್ ಹಾಗೂ ರೆಸಾರ್ಟ್ ಮತ್ತು ಇಲ್ಲಿನ ಜಲಸಾಹಸಿ ಕ್ರೀಡೆಗಳತ್ತ ಹಾಗೂ ಕಾಳಿ ರಿವರ್ ಗಾರ್ಡನ್ ಹಾಗೂ ಜಲ ಸಾಹಸಿ ಕ್ರೀಡೆಗಳು, ಶೀಖರ ಬೋಟ್ ರೈಡಿಂಗ್, ರಾಕ್ ಗಾರ್ಡನ್, ವಾರ್ಸಿಪ್ ಮ್ಯೂಸಿಯಂ ಪ್ರಮುಖ ಆಕರ್ಷಣೀಯ ಕೇಂದ್ರಗಳಾಗಿದ್ದು, ಪ್ರತಿನಿತ್ಯ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ ಹೀಗೆ ಬಂದವರು ಗೋವಾ ಸಮೀಪ ಇರುವ ಕಾರಣ ಅಲ್ಲಿಗೆ ತೆರಳುತ್ತಿದ್ದಾರೆ. ಗೋವಾಗೆ ತೆರಳಿದವರು ಕಾರವಾರದ ಪ್ರವಾಸಿ ತಾಣಗಳಿಗೆ ಕೂಡ ಭೇಟಿ ನೀಡುತ್ತಿದ್ದಾರೆ.

ಒಟ್ಟಾರೆ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆಯಾದರೂ ಬಿಸಿಲ ಅಬ್ಬರ ಪ್ರವಾಸಿಗರನ್ನು ಬಸವಳಿಯುವಂತೆ ಮಾಡುತ್ತಿದೆ. ಅಲ್ಲದೇ ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆ ಚೆಕ್‌ಪೋಸ್ಟ್ ತೆರೆದು ತಪಾಸಣೆ ನಡೆಸುವ ಕಾರಣ ಪ್ರವಾಸಿಗರಿಗೆ ಕಿರಿಕಿರಿಯಾದಂತಾಗಿದ್ದು, ಈ ಬಗ್ಗೆ ಅಸಮಾಧಾನ ಕೂಡ ಹೊರಹಾಕುತ್ತಿದ್ದಾರೆ.











Click it and Unblock the Notifications