Cheating on Tirupati Thimmappa: ಚುನಾವಣೆಗಾಗಿ ತಿರುಪತಿ ತಿಮ್ಮಪ್ಪನಿಗೂ ಪಂಗನಾಮ ಹಾಕಿದ ಟಿಟಿಡಿ? ತನಿಖೆಗೆ ಆಗ್ರಹ
ವಿಜಯವಾಡ ಮಾರ್ಚ್ 27: ತಿರುಪತಿ ತಿರುಮಲದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯಾವಹಾರಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಸರ್ಕಾರದ ಅನುಮತಿ ಇಲ್ಲದೆ ಕೋಟ್ಯಾಂತರ ರೂಪಾಯಿ ಎಂಜಿನಿಯರಿಂಗ್ ವರ್ಕ್ ಆರ್ಡರ್‌ಗಳನ್ನು ನೀಡಲಾಗಿದೆ ಎಂದು ದೂರಲಾಗಿದೆ.
ಟಿಡಿಪಿ ಅಧಿಕೃತ ವಕ್ತಾರ ನೀಲಾಯಪಾಲೆಂ ವಿಜಯ್ ಕುಮಾರ್ ಅವರು ದೇವಸ್ಥಾನದ ಟ್ರಸ್ಟ್ ಬೋರ್ಡ್ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಮತ್ತು ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಎವಿ ಧರ್ಮಾ ರೆಡ್ಡಿ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದಾರೆ. ಕರುಣಾಕರ್ ರೆಡ್ಡಿ ಮತ್ತು ಧರ್ಮಾ ರೆಡ್ಡಿ ಉಸ್ತುವಾರಿಯಲ್ಲಿ ಟಿಟಿಡಿಯಿಂದ ದೊಡ್ಡ ಪ್ರಮಾಣದ ಆರ್ಥಿಕ ಅಕ್ರಮಗಳು ನಡೆಯುತ್ತಿವೆ ಎಂದು ಟಿಡಿಪಿ ಮಂಗಳವಾರ ಆರೋಪಿಸಿದೆ.

ಬಜೆಟ್ ಅನುಮೋದನೆ ಅಥವಾ ಸರ್ಕಾರದ ಅನುಮತಿಯಿಲ್ಲದೆ ₹ 1,300 ಕೋಟಿ ಮೌಲ್ಯದ ಎಂಜಿನಿಯರಿಂಗ್ ವರ್ಕ್ ಆರ್ಡರ್‌ಗಳನ್ನು ನೀಡಲಾಗಿದೆ ಎಂದು ವಿಜಯ್ ಕುಮಾರ್ ಆರೋಪಿಸಿದ್ದಾರೆ. ಜೊತೆಗೆ ಕರುಣಾಕರ್ ರೆಡ್ಡಿ ಅಧ್ಯಕ್ಷರಾದ ನಂತರ ಟಿಟಿಡಿ ಮಂಡಳಿ ಸಭೆಗಳಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ಗೌಪ್ಯತೆಯನ್ನು ಕಾಪಾಡುತ್ತಿದೆ ಎಂದು ವಿಜಯ್ ಕುಮಾರ್ ಹೇಳಿದರು.
ಶಾಸಕರಾದ ಕರುಣಾಕರ್ ರೆಡ್ಡಿ ಮಗ ಚುನಾವಣೆಯಲ್ಲಿ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ, ಕರುಣಾಕರ್ ರೆಡ್ಡಿ ಅವರು ಟಿಟಿಡಿ ನಿಧಿಯಿಂದ ತಿರುಪತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನಿರ್ಧಾರಗಳನ್ನು ತೆಗೆದುಕೊಂಡರು. ಇದು ಟಿಟಿಡಿ ನಿಯಮಗಳ ಉಲ್ಲಂಘನೆ ಮಾತ್ರವಲ್ಲದೆ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆಯಾಗಿದೆ. ಏಕೆಂದರೆ ಎಂಸಿಸಿ ಬಂದ ನಂತರ ಕೆಲಸದ ಆದೇಶಗಳನ್ನು ನೀಡಲಾಗುತ್ತಿದೆ. ಮಾತ್ರವಲ್ಲದೆ ಈ ಕಾಮಗಾರಿಗಳಲ್ಲಿ ಕರುಣಾಕರರೆಡ್ಡಿ ಶೇ.10ರಷ್ಟು ಕಿಕ್ ಬ್ಯಾಕ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಹೀಗಾಗಿ ತಿರುಪತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಟಿಟಿಡಿ ನೀಡಿದ ಕೆಲಸದ ಆದೇಶಗಳನ್ನು ಪರಿಶೀಲಿಸುವಂತೆ ಭಾರತೀಯ ಚುನಾವಣಾ ಆಯೋಗವನ್ನು (ಇಸಿಐ) ಟಿಡಿಪಿ ವಕ್ತಾರರು ಒತ್ತಾಯಿಸಿದ್ದಾರೆ. ತಿರುಪತಿಯಲ್ಲಿ ಕಟ್ಟಡ ವಿನ್ಯಾಸವೂ ಇಲ್ಲದೇ ಈಗಿರುವ ಕಟ್ಟಡಗಳನ್ನು ಕೆಡವಿ ಎರಡು ಚೌಲ್ಟ್ರಿ ನಿರ್ಮಾಣಕ್ಕೆ ವರ್ಕ್ ಆರ್ಡರ್ ನೀಡಲಾಗಿದೆ ಎಂದರು. ಪ್ರತಿ ಕೋಳಿ ಫಾರಂ ನಿರ್ಮಿಸಲು 300 ಕೋಟಿ ರೂಪಾಯಿ ಖರ್ಚು ಮಾಡಲಾಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು.
ಮಗ ಸ್ಪರ್ಧಿಸಲು ಕರುಣಾಕರ್ ರೆಡ್ಡಿ ಹಿತಾಸಕ್ತಿ ಹೊಂದಿರುವುದಕ್ಕೆ ಟಿಟಿಡಿ ವತಿಯಿಂದ ಈ ಟೆಂಡರ್‌ಗಳನ್ನು ಕರೆಯಲಾಗಿದೆ. ಇದು ಸ್ಪಷ್ಟವಾಗಿ ಎಂಸಿಸಿ ಉಲ್ಲಂಘನೆಯ ಪ್ರಕರಣವಾಗಿದೆ. ಮತ್ತೊಂದೆಡೆ, ರಕ್ಷಣಾ ಎಸ್ಟೇಟ್ ಸೇವಾ ಅಧಿಕಾರಿಯಾಗಿರುವ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮ ರೆಡ್ಡಿ ಅವರು ಕಳೆದ ಐದು ವರ್ಷಗಳಿಂದ ಟಿಟಿಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯಮಂತ್ರಿ ಅವರೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ಧರ್ಮ ರೆಡ್ಡಿ ಅವರ ನಿಯೋಜನೆಯನ್ನು ವಿಸ್ತರಿಸುವಂತೆ ಕೋರಿದ್ದಾರೆ ಎಂದು ವಿಜಯ್ ಕುಮಾರ್ ಹೇಳಿದ್ದಾರೆ.
ಟಿಟಿಡಿ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳ ಅಕ್ರಮಗಳು ಮತ್ತು ಅವರು ಎಸಗುತ್ತಿರುವ ಎಂಸಿಸಿ ಉಲ್ಲಂಘನೆಗಳ ಬಗ್ಗೆ ತನಿಖೆ ನಡೆಸುವಂತೆ ವಿಜಯ್ ಕುಮಾರ್ ಇಸಿಐಗೆ ಮನವಿ ಮಾಡಿದ್ದಾರೆ.












Click it and Unblock the Notifications