Tirupati Hubballi Train: ಹುಬ್ಬಳ್ಳಿ-ತಿರುಪತಿ ನಡುವಿನ ಪ್ಯಾಸೆಂಜರ್ ರೈಲು ರದ್ದು
ಹುಬ್ಬಳ್ಳಿಯಿಂದ ತಿರುಪತಿ ಮಾರ್ಗದ ರೈಲು ಪ್ರಯಾಣಿಕರಿಗೆ ಬೇಸರದ ಸುದ್ದಿ ಸಿಕ್ಕಿದೆ. ಹಲವು ಕಾರಣಗಳಿಂದ ಕೆಲವು ದಿನಗಳ ಕಾಲ ಹುಬ್ಬಳ್ಳಿ ತಿರುಪತಿ ನಡುವಿನ ದೈನಂದಿನ ವಿಶೇಷ ಪ್ಯಾಸೆಂಜರ್ ರೈಲು ಸೇವೆಯನ್ನು ರದ್ದು ಮಾಡಲಾಗಿದೆ.
ಅನಿವಾರ್ಯ ಕಾರಣಗಳಿಂದಾಗಿ ಹುಬ್ಬಳ್ಳಿ-ತಿರುಪತಿ, ತಿರುಪತಿ-ಹುಬ್ಬಳ್ಳಿ ನಡುವೆ ಸಂಚರಿಸುವ ರೈಲು ಸೇವೆಗಳನ್ನು ರದ್ದು ಪಡಿಸಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ವಲಯ ತಿಳಿಸಿದೆ ಎಂದು ನೈಋತ್ಯ ರೈಲ್ವೆ ವಿಭಾಗ ಮಾಹಿತಿ ನೀಡಿದೆ. ಈ ಬಗ್ಗೆ ಆದೇಶವನ್ನು ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡಿದೆ.
ರೈಲು ಸಂಖ್ಯೆ 07657 ತಿರುಪತಿ - ಎಸ್‌ಎಸ್‌ಎಸ್ ಹುಬ್ಬಳ್ಳಿ ದೈನಂದಿನ ಪ್ಯಾಸೆಂಜರ್ ವಿಶೇಷ ರೈಲು ಸೇವೆಯನ್ನು ಸೆಪ್ಟೆಂಬರ್ 22ರಿಂದ ಸೆಪ್ಟೆಂಬರ್ 30ರವರೆಗೆ ರದ್ದು ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.

ರೈಲು ಸಂಖ್ಯೆ 07658 ಎಸ್‌ಎಸ್‌ಎಸ್ ಹುಬ್ಬಳ್ಳಿ - ತಿರುಪತಿ ನಡುವೆ ಸಂಚರಿಸುವ ದೈನಂದಿನ ಪ್ಯಾಸೆಂಜರ್ ವಿಶೇಷ ರೈಲು ಸೇವೆಯನ್ನು ಸೆಪ್ಟೆಂಬರ್ 23ರಿಂದ ಅಕ್ಟೋಬರ್ 1ರವರೆಗೆ ರದ್ದು ಮಾಡಲಾಗಿದೆ ಎಂದು ಹೇಳಿದೆ.
ಸೆಪ್ಟೆಂಬರ್ ಅಂತ್ಯದವರೆಗೆ ಹುಬ್ಬಳ್ಳಿಯಿಂದ ತಿರುಪತಿಗೆ ರೈಲು ಸೇವೆ ರದ್ದು ಮಾಡಿರುವುದು ಈ ಭಾಗದ ಭಕ್ತರಿಗೆ ಬೇಸರ ಮೂಡಿಸಿದೆ. ಅಕ್ಟೋಬರ್ 1ರ ಬಳಿಕ ಮೊದಲಿನಂತೆ ರೈಲು ಸೇವೆ ಆರಂಭವಾಗಲಿದೆ.
ಬೆಂಗಳೂರು-ಹೈದರಾಬಾದ್ ವಂದೇಭಾರತ್ ರೈಲು
ಸೆಪ್ಟೆಂಬರ್ 24ರಂದು ಕರ್ನಾಟಕ ರಾಜ್ಯಕ್ಕೆ ಮೂರನೇ ವಂದೇ ಭಾರತ್ ರೈಲು ಸೇವೆ ಲಭ್ಯವಾಗಲಿದೆ. ಹೈದರಾಬಾದ್ ಮತ್ತು ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚರಿಸಲಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಈ ರೈಲಿಗೆ ಚಾಲನೆ ನೀಡಲಿದ್ದಾರೆ.
ಈಗಾಗಲೇ ಕಾಚಿಗುಡ-ಯಶವಂತಪುರ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಾಯೋಗಿಕ ಸಂಚಾರ ನಡೆಸಿದೆ. ಸೆಮಿ ಹೈ ಸ್ಪೀಡ್ ರೈಲು ಬೆಂಗಳೂರು ಹೈದರಾಬಾದ್ ನಡುವೆ 609.81 ಕಿಮೀ ಸಂಚರಿಸಲು 8.30 ಗಂಟೆಗಳನ್ನು ತೆಗೆದುಕೊಳ್ಳಲಿದೆ.
ಯಶವಂತಪುರ ಹೊರತುಪಡಿಸಿ ಇದು ಕರ್ನಾಟಕದ ಯಾವುದೇ ರೈಲು ನಿಲ್ದಾಣದಲ್ಲಿ ಕೂಡ ನಿಲುಗಡೆ ನೀಡುವುದಿಲ್ಲ. ಯಶವಂತಪುರ ಬಿಟ್ಟರೆ ಧರ್ಮಾವರಂನಲ್ಲಿ ನಿಲುಗಡೆ ಇರಲಿದೆ. ಅನಂತಪುರ, ಕರ್ನೂಲು, ಮಹಬೂಬ್ ನಗರ, ಕಾಚಿಗುಡದಲ್ಲಿ ಮಾತ್ರ ನಿಲುಗಡೆ ಇರಲಿದೆ. ಮಧ್ಯಾಹ್ನ 2.45ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಡಲಿದ್ದ, ರಾತ್ರಿ 11.15ಕ್ಕೆ ಕಾಚಿಗುಡ ತಲುಪಲಿದೆ.
ಮರುದಿನ ಬೆಳಗ್ಗೆ 5.30ಕ್ಕೆ ಕಾಚಿಗುಡ ರೈಲು ನಿಲ್ದಾಣದಿಂದ ಹೊರಡಲಿದ್ದು, ಮಧ್ಯಾಹ್ನ 2 ಗಂಟೆಗೆ ಯಶವಂತಪುರ ನಿಲ್ದಾಣಕ್ಕೆ ಆಗಮಿಸಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications