ನಿಸರ್ಗ ಪ್ರೇಮಿಗಳ ಸ್ವರ್ಗ ಹಿಮವದ್ ಗೋಪಾಲಸ್ವಾಮಿ ಬೆಟ್ಟ

By: ಲವಕುಮಾರ್ ಬಿಎಂ, ಮೈಸೂರು
Subscribe to Oneindia Kannada

ಕಣ್ಣು ಹಾಯಿಸಿದುದ್ದಕ್ಕೂ ಹಸಿರು ಹಚ್ಚಡದೊಂದಿಗೆ ಕಂಗೊಳಿಸುವ ಗಿರಿಕಂದರಗಳು.. ಸುಡುಬಿಸಿಲಲ್ಲೂ ಬೀಸಿ ಬರುವ ತಂಗಾಳಿ.. ದೇಗುಲದಿಂದ ಕೇಳಿ ಬರುವ ಗಂಟೆಯ ನಿನಾದ.. ಮಂಜುಮುಸುಕಿನ ಆಹ್ಲಾದಕರ ವಾತಾವರಣ.. ಹೀಗೆ ಸದಾ ಪ್ರವಾಸಿಗರಿಗೆ ಉಲ್ಲಾಸ ತುಂಬುತ್ತಾ ತನ್ನತ್ತ ಕೈಬೀಸಿ ಕರೆಯುವ ತಾಣವೇ ಹಿಮವದ್ ಗೋಪಾಲಸ್ವಾಮಿ ಬೆಟ್ಟ.

ರಾಜ್ಯದ ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಮೂರನೇ ಬೆಟ್ಟವಾಗಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯ ಪ್ರದೇಶದಲ್ಲಿದೆ. ಸುಮಾರು 1450 ಅಡಿ ಎತ್ತರದ ಈ ಬೆಟ್ಟದಲ್ಲಿ ಶ್ರೀ ಗೋಪಾಲಸ್ವಾಮಿ ನೆಲೆನಿಂತಿದ್ದು, ಸುಂದರ ದೇಗುಲದೊಂದಿಗೆ ಆಸ್ತಿಕರು-ನಾಸ್ತಿಕರನ್ನೆದೆ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.

ಚಾರಣ ಪ್ರಿಯರಿಗೆ ಹುರುಪಿನ ತಾಣವಾಗಿಯೂ, ನಿಸರ್ಗ ಪ್ರೇಮಿಗಳಿಗೆ ಮುದ ನೀಡುವ, ಭಕ್ತರಿಗೆ ಇಷ್ಟಾರ್ಥ ನೆರವೇರಿಸುವ ಕ್ಷೇತ್ರವಾಗಿಯೂ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಗಮನಸೆಳೆಯುತ್ತಿದೆ. ನೋಡನೋಡುತ್ತಲೇ ಹಿಮದಿಂದ ಆವೃತ್ತವಾಗುತ್ತಾ ರವಿಕಿರಣದಲ್ಲಿ ತನ್ನ ಸ್ನಿಗ್ಧ ಸೌಂದರ್ಯವನ್ನು ತೆರೆದಿಡುವುದು ಈ ಬೆಟ್ಟದ ಮತ್ತೊಂದು ವಿಶೇಷತೆ. ಹೀಗಾಗಿಯೇ ಇಲ್ಲಿಗೆ ದೇಶ-ವಿದೇಶಗಳ ಸಾವಿರಾರು ಪ್ರವಾಸಿಗರು ಆಗಾಗ್ಗೆ ಭೇಟಿ ನೀಡುತ್ತಾರೆ.

Temples of Karnataka : Himavad Gopalaswamy betta near Nanjangud

ನಿಸರ್ಗ ಪ್ರೇಮಿಗಳ ಸ್ವರ್ಗ : ಸದಾ ಒತ್ತಡಗಳಿಂದ, ಪೇಟೆ, ಪಟ್ಟಣಗಳ ಗೌಜುಗದ್ದಲಗಳಲ್ಲಿ ಬದುಕು ಕಟ್ಟಿಕೊಂಡವರು ತಮ್ಮ ವಾರದ ರಜಾ ದಿನಗಳನ್ನು ಕಳೆಯಲು ಇಲ್ಲಿಗೆ ಬಂದರೆ, ಪ್ರೇಮಿಗಳು ಏಕಾಂತ ಬಯಸಿ ಬರುತ್ತಾರೆ. ಹಾಗೆ ಬಂದವರು ದಟ್ಟ ಅರಣ್ಯದ ನಡುವೆ ಹಚ್ಚ ಹಸಿರಿನಿಂದ ಆವೃತವಾದ ಬೆಟ್ಟದ ರಮಣೀಯ ನೋಟವನ್ನು ನೋಡುತ್ತಾ ಮೈಮರೆಯುತ್ತಾರೆ.

ಇನ್ನು ಅತಿ ಎತ್ತರದ ವಿಶಾಲ ಪ್ರದೇಶವನ್ನು ಹೊಂದಿ ತಂಗಾಳಿಯೊಂದಿಗೆ ಮುಂಜಾನೆ ಹೊತ್ತಿನಲ್ಲಿ ಮಂಜು ಸುರಿಯುವುದರಿಂದ ಹಾಗೂ ಇಲ್ಲಿ ಗೋಪಾಲಸ್ವಾಮಿ ನೆಲೆ ನಿಂತಿದ್ದರಿಂದ ಒಟ್ಟಾಗಿ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರು ಬಂದಿರುವುದಾಗಿ ಹೇಳಲಾಗುತ್ತಿದೆ.

ಈಗಾಗಲೇ ಈ ಬೆಟ್ಟದ ಮತ್ತು ಕ್ಷೇತ್ರದ ಖ್ಯಾತಿ ಎಲ್ಲೆಡೆ ಪಸರಿಸುವುದರಿಂದ ಪ್ರವಾಸಿಗರು ತಮ್ಮ ಪ್ರವಾಸದ ಪಟ್ಟಿಯಲ್ಲಿ ಈ ತಾಣವನ್ನು ಸೇರಿಸಿಕೊಳ್ಳುತ್ತಾರೆ. ಬಂಡೀಪುರಕ್ಕೆ ಹೋದವರು ಸಾಮಾನ್ಯವಾಗಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳದೆ ಹಿಂತಿರುಗುವುದಿಲ್ಲ. ಹಬ್ಬ ಹರಿದಿನಗಳು, ಸರ್ಕಾರಿ ರಜಾ ದಿನಗಳಲ್ಲಿ ಇಲ್ಲಿ ಪ್ರವಾಸಿಗರ ದಂಡು ನೆರೆಯುತ್ತದೆ.

-
-
-
-
-
-
-
-
-

ಎಲ್ಲಿದೆ ಬೆಟ್ಟ?: ಗುಂಡ್ಲುಪೇಟೆಯಿಂದ ಸುಮಾರು 20 ಕಿ.ಮೀ. ದೂರದಲ್ಲಿ ಗೋಪಾಲಸ್ವಾಮಿ ಬೆಟ್ಟವಿದ್ದು, ಕಡಿದಾದ ಅಂಕುಡೊಂಕು ರಸ್ತೆಯಲ್ಲಿ ತೆರಳವುದೇ ಒಂದು ರೋಮಾಂಚನಕಾರಿ ಅನುಭವ. ರಸ್ತೆಯು ಕಿರಿದಾಗಿದೆ ಮತ್ತು ತೀರ ಕೆಟ್ಟದಾಗಿರುವುದರಿಂದ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳಲ್ಲಿ ಇಲ್ಲಿಗೆ ತೆರಳಬಹುದಾದರೂ ಎಚ್ಚರಿಕೆಯಿಂದ ಚಲಿಸಬೇಕಾಗುತ್ತದೆ. ಸ್ವಲ್ಪ ನಿಯಂತ್ರಣ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.

ಆದ್ದರಿಂದ ಇಲ್ಲಿ ಚಲಿಸುವ ವಾಹನಗಳ ಚಾಲಕರು ತುಂಬಾ ಜಾಗ್ರತರಾಗಿ ಚಾಲನೆ ಮಾಡಿದ್ದೇ ಆದಲ್ಲಿ ಅಲ್ಲಲ್ಲಿ ಸಿಗುವ ವ್ಯೂ ಪಾಯಿಂಟ್‌ಗಳಲ್ಲಿ ನಿಂತು ನಿಸರ್ಗ ಸೌಂದರ್ಯವನ್ನು ಸವಿಯುತ್ತಾ ಕಾಡಿನೊಳಗೆ ಅಲೆದಾಡುವ ಪ್ರಾಣಿ, ಹಾರಾಡುವ ಪಕ್ಷಿಗಳನ್ನು ನೋಡಬಹುದು. ಅಲ್ಲಲ್ಲಿ ಆನೆ, ಜಿಂಕೆ, ನವಿಲು ದಿಢೀರ್ ದರ್ಶನ ನೀಡಿ ಪ್ರವಾಸಿಗರಿಗೆ ರೋಮಾಂಚನಗೊಳಿಸಿ ಬಿಡುತ್ತವೆ.

ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರು ಇಲ್ಲಿನ ನಿಸರ್ಗಕ್ಕೆ ಮಾರು ಹೋಗಿ ವಾರೆವ್ಹಾ ಎಂದು ಚೀರುತ್ತಾ ತಮ್ಮ ಆನಂದವನ್ನು ವ್ಯಕ್ತಪಡಿಸುತ್ತಾರೆ. ತಮ್ಮೆಲ್ಲಾ ಜಂಜಾಟಗಳನ್ನು ಪ್ರಕೃತಿಯ ಮಡಿಲಲ್ಲಿ ಮರೆತು ಆನಂದತುಂದಿಲರಾಗಿ ಕುಣಿದಾಡುತ್ತಾರೆ.

ಗೋಪಾಲಸ್ವಾಮಿ ದೇಗುಲದ ಇತಿಹಾಸ : ಇಲ್ಲಿರುವ ಹಿಮವದ್ ಗೋಪಾಲಸ್ವಾಮಿ ದೇಗುಲದ ಬಗ್ಗೆ ಹೇಳುವುದಾದರೆ ಇದಕ್ಕೆ ಸುಮಾರು ಏಳು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಇತಿಹಾಸದ ಪ್ರಕಾರ, ಹೊಯ್ಸಳ ದೊರೆ ಚೋಳ ಬಲ್ಲಾಳ ಈ ದೇವಾಲಯವನ್ನು ನಿರ್ಮಿಸಿದನೆಂದೂ ಬಳಿಕ ಮೈಸೂರಿನ ಒಡೆಯರ ಕಾಲದಲ್ಲಿ ಇನ್ನಷ್ಟು ಅಭಿವೃದ್ಧಿಗೊಳಿಸಲಾಯಿತು ಎನ್ನಲಾಗಿದೆ.

ಒಂದೇ ಸುತ್ತುಪೌಳಿಯಲ್ಲಿ ನಿರ್ಮಾಣವಾಗಿರುವ ದೇವಾಲಯ ವಿಶಾಲ ಆವರಣವನ್ನು ಹೊಂದಿದ್ದು, ಮುಖಮಂಟಪದಲ್ಲಿ ದಶಾವತಾರದ ಕೆತ್ತನೆಗಳು, ಬಲಿಪೀಠ, ಧ್ವಜ ಸ್ತಂಭಗಳು ಆಕರ್ಷಕವಾಗಿವೆ.

ಇನ್ನು ಈ ಬೆಟ್ಟಕ್ಕೆ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರು ಹೇಗೆ ಬಂತೆಂಬ ಪ್ರಶ್ನೆಗೆ ಇಲ್ಲಿನವರು ತಮ್ಮದೇ ಆದ ಉತ್ತರವನ್ನು ನೀಡುತ್ತಾರೆ. ಸ್ಥಳೀಯ ಹಿರಿಯರು ಹೇಳುವ ಪ್ರಕಾರ, ಈ ಬೆಟ್ಟಕ್ಕೆ ಹಿಂದೆ ಗೋವರ್ಧನಗಿರಿ ಎನ್ನುತ್ತಿದ್ದರಂತೆ ಇದಕ್ಕೆ ಕಾರಣ ಬೆಟ್ಟ ದೂರದಿಂದ ನೋಡಲು ಹಸುವಿನ ರೀತಿ ಕಾಣುತ್ತದೆಯಂತೆ. ಅಷ್ಟೇ ಅಲ್ಲ ಹಸಿರ ಸಂಪತ್ತಿನಿಂದ ಕಂಗೊಳಿಸುತ್ತಿದ್ದ ಬೆಟ್ಟಕ್ಕೆ ಹಿಂದಿನ ಕಾಲದಲ್ಲಿ ಗೋಪಾಲಕರು ದನ ಮೇಯಿಸಲು ಬರುತ್ತಿದ್ದರಂತೆ. ಗೋಪಾಲಕರು ಬರುತ್ತಿದ್ದರಿಂದ ಗೋವರ್ಧನಗಿರಿ ಗೋಪಾಲಸ್ವಾಮಿ ಬೆಟ್ಟವಾಯಿತಂತೆ.

ರುಕ್ಮಿಣಿ, ಸತ್ಯಭಾಮೆಯರ ಸಹಿತ ಇಲ್ಲಿ ನೆಲೆಸಿರುವ ಶ್ರೀಕೃಷ್ಣನನ್ನು ಸಂತಾನ ಗೋಪಾಲಕೃಷ್ಣ ಎಂದೂ ಕರೆಯಲಾಗುತ್ತದೆ. ಇಲ್ಲಿನ ಮೂಲ ಮೂರ್ತಿಯನ್ನು ಅಗಸ್ತ್ಯ ಮಹರ್ಷಿಗಳು ಪ್ರತಿಷ್ಠಾಪಿಸಿದರೆಂದೂ ಪ್ರತೀತಿಯಿದೆ.

ಇನ್ನು ಗೋಪಾಲಸ್ವಾಮಿ ಬೆಟ್ಟವು ತ್ರಯಂಬಕಾದ್ರಿ, ನೀಲಾದ್ರಿ, ಮಂಗಳಾದ್ರಿ, ಶಂಖರಾದ್ರಿಗಿರಿ, ಹಂಸಾದ್ರಿ, ಗರುಡಾದ್ರಿ, ಪಲ್ಲವಾದ್ರಿ, ಮಲ್ಲಿಕಾರ್ಜುನಗಿರಿ ಮೊದಲಾದ ಬೆಟ್ಟಗಳಿಂದ ಸುತ್ತುವರೆದಿದ್ದು, ಹಂಸತೀರ್ಥ, ಪದ್ಮತೀರ್ಥ, ಶಂಖ ತೀರ್ಥ, ಚಕ್ರ ತೀರ್ಥ, ಗದಾ ತೀರ್ಥ, ಶಜ್ಞಾತೀರ್ಥ, ವನಮೂಲಿಕಾ ತೀರ್ಥ, ತೊಟ್ಲು ತೀರ್ಥ ಎಂಬ ಅಷ್ಟ ತೀರ್ಥಗಳಿವೆ.

ಮಕ್ಕಳಿಲ್ಲದವರು ತೊಟ್ಲು ತೀರ್ಥದಲ್ಲಿ ಸ್ನಾನ ಮಾಡಿದರೆ ಮಕ್ಕಳಾಗುತ್ತವೆಂಬ ನಂಬಿಕೆಯೂ ಇಲ್ಲಿನವರಿಗಿದೆ. ವಿಶ್ವಪ್ರಸಿದ್ಧ ಮೈಸೂರು ದಸರಾ ಸಂದರ್ಭದಲ್ಲಿ ಮೇಲುಕೋಟೆ, ಶ್ರೀರಂಗಪಟ್ಟಣ ದೇವಸ್ಥಾನಗಳೊಂದಿಗೆ ಗೋಪಾಲಸ್ವಾಮಿ ಬೆಟ್ಟದಲ್ಲೂ ವಿಶೇಷ ಪೂಜೆ ನಡೆಯುವುದು ವಿಶೇಷ.

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ತನ್ನದೇ ಮಹತ್ವ ಹಾಗೂ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದೆ. ಅರಣ್ಯ ಇಲಾಖೆ ಈ ಪ್ರದೇಶವನ್ನು ವನ್ಯಜೀವಿ 1972ರ ಅನ್ವಯ ವನ್ಯಜೀವಿ ವಲಯ ಎಂದು ಘೋಷಣೆ ಮಾಡಿದ್ದು, ಭಾರತದಲ್ಲಿ ಅತೀ ಹೆಚ್ಚು ಹುಲಿ ಹೊಂದಿರುವ ಅರಣ್ಯಕ್ಕೆ ಈ ಬೆಟ್ಟ ಒಳಪಟ್ಟಿದೆ.

ರಾಜ್ಯ-ಹೊರರಾಜ್ಯಗಳ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ತಾಣಕ್ಕೆ ಯಾರೇ ಬಂದರೂ ಅವರದೇ ಭಾಷೆಯಲ್ಲಿ ಇಲ್ಲಿ ಕಾರ್ಯನಿರ್ವಹಿಸುವ ಅರ್ಚಕ ವೃಂದ ಮಾಹಿತಿ ನೀಡುತ್ತದೆ. ಇನ್ನು ಭಕ್ತಾಧಿಗಳಿಗೆ ಸ್ವಾದಿಷ್ಟಕರವಾದ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ಇಲ್ಲಿಗೆ ತೆರಳುವ ಮೊದಲು ಸಮೀಪದ ಹಂಗಳ ಗ್ರಾಮದಲ್ಲಿ ಬೇಕಾದ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಹೋಗಬೇಕು. ಬೆಟ್ಟದ ಮೇಲೆ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ. ಪ್ರವೇಶಾವಕಾಶ ಬೆಳಿಗ್ಗೆ 8 ರಿಂದ ಸಂಜೆ 4.30 ಗಂಟೆಯವರಗೆ ಮಾತ್ರ.

ಬೆಟ್ಟಕ್ಕೆ ಹೋಗುವುದು ಹೇಗೆ? : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿಗೆ ಸಮೀಪವಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ರಾಜಧಾನಿ ಬೆಂಗಳೂರಿನಿಂದ 220 ಕಿ.ಮೀ. ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನಿಂದ 74 ಕಿ.ಮೀ. ದೂರದಲ್ಲಿದೆ. ಗುಂಡ್ಲುಪೇಟೆಯಿಂದ 20 ಕಿ.ಮೀ. ಊಟಿ ರಸ್ತೆಯಲ್ಲಿ ಸಾಗಿದರೆ ಅಲ್ಲಿ ಹಂಗಳ ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ ಬಲಗಡೆ ಸಾಗಿದರೆ ಬೃಹದಾಕಾರದಲ್ಲಿ ಹರಡಿ ನಿಂತಿರುವ ಶ್ರೀ ಗೋಪಾಲಸ್ವಾಮಿ ಬೆಟ್ಟ ಎದುರಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
During summer or any other time when you are travelling to Ooty or to Nanjangud you must visit Himavad Gopalaswamy betta and get lost in the greenary. The beautiful place is located in Chamarajanagar district, near Gundlupet. One can see snow falling in the early morning in the temple.
Please Wait while comments are loading...