Vande Bharat Express: ನೈಋತ್ಯ ರೈಲ್ವೆಗೆ 8 ವಂದೇ ಭಾರತ್, ಯಾವ ಮಾರ್ಗದಲ್ಲಿ ಸಂಚಾರ?
ಬೆಂಗಳೂರು, ಮೇ 04: ಭಾರತೀಯ ರೈಲ್ವೆಯ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ದೇಶವ ವಿವಿಧ ರಾಜ್ಯಗಳಿಂದ ಬೇಡಿಕೆ ಇದೆ. ಕರ್ನಾಟಕದಲ್ಲಿಯೂ ಹೊಸ ಮಾರ್ಗದಲ್ಲಿ ರೈಲು ಪರಿಚಯಿಸಬೇಕು ಎಂದು ರೈಲ್ವೆ ಇಲಾಖೆಗೆ ಮನವಿ ಸಲ್ಲಿಕೆಯಾಗಿದೆ.
ಮಂಗಳೂರು-ಮಡಗಾಂವ್ ಮತ್ತು ಬೆಂಗಳೂರು-ಕೊಯಮತ್ತೂರು ಮಾರ್ಗದಲ್ಲಿ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭವಾಗಿದೆ. ಇನ್ನೂ ಹಲವು ಮಾರ್ಗದಲ್ಲಿ ರೈಲು ಓಡಿಸಬೇಕು ಎಂಬ ಬೇಡಿಕೆಯನ್ನು ನೈಋತ್ಯ ರೈಲ್ವೆಗೆ ಸಲ್ಲಿಕೆ ಮಾಡಲಾಗಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿವೊಂದರಲ್ಲಿ ವೈರಲ್ ಆಗಿರುವ ಪೋಸ್ಟ್ ಕರ್ನಾಟಕದಲ್ಲಿ ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರದ ನಿರೀಕ್ಷೆ ಹುಟ್ಟಿಸಿದೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಜೂನ್ 4ರ ಬಳಿಕ ಬರುವ ಹೊಸ ಸರ್ಕಾರ ರಾಜ್ಯಕ್ಕೆ ವಂದೇ ಭಾರತ್ ಕೊಡುಗೆ ನೀಡಲಿದೆಯೇ? ಕಾದು ನೋಡಬೇಕಿದೆ.
ಏನಿದು ವೈರಲ್ ಪೋಸ್ಟ್: ಕರ್ನಾಟಕದ ಬಹುತೇಕ ರೈಲ್ವೆ ಜಾಲ ನೈಋತ್ಯ ರೈಲ್ವೆ ವಲಯಕ್ಕೆ ಸೇರುತ್ತದೆ. ಹುಬ್ಬಳ್ಳಿಯಲ್ಲಿ ವಲಯ ಪ್ರಧಾನ ಕಛೇರಿಯನ್ನು ಹೊಂದಿದೆ. ಈಗ ವೈರಲ್ ಆಗಿರುವ ಪೋಸ್ಟ್ ಮಾಹಿತಿಯಂತೆ ಚೆನ್ನೈ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಿಂದ ನೈಋತ್ಯ ರೈಲ್ವೆಗೆ 8 ವಂದೇ ಭಾರತ್ ರೈಲುಗಳು ಹಂಚಿಕೆಯಾಗಿವೆ.
ಚೆನ್ನೈ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ 8 ಬೋಗಿಗಳ ಹಲವು ವಂದೇ ಭಾರತ್ ರೈಲುಗಳನ್ನು ತಯಾರಿಸಲಾಗಿದೆ. ಇವುಗಳಲ್ಲಿ 8 ರೈಲುಗಳು ನೈಋತ್ಯ ರೈಲ್ವೆಗೆ ಹಂಚಿಕೆಯಾಗಿವೆ ಎಂಬ ಫೋಟೋ ವೈರಲ್ ಆಗುತ್ತಿದೆ. ಆದರೆ ಈ ಕುರಿತು ಅಧಿಕಾರಿಗಳು ಯಾವುದೇ ಮಾಹಿತಿಯನ್ನು ನೀಡಿಲ್ಲ.
ICF has rolled out one more new Vande Bharat Express 8 car set to SWR
— Karnataka Rail Users (@KARailway) April 30, 2024
Guess the expected route! pic.twitter.com/iAMeekrWEK
ವೈರಲ್ ಆಗಿರುವ ಫೋಟೋ ಪ್ರಕಾರ 25/4/2024ರಂದು ನೈಋತ್ಯ ರೈಲ್ವೆಗೆ ಬೋಗಿಗಳು ಹಂಚಿಕೆಯಾಗಿವೆ. ಆದರೆ ಇವು ಯಾವಾಗ ವಲಯದ ಕೈ ಸೇರಲಿವೆ. ಎಂದು ರೈಲು ಸಂಚಾರ ಆರಂಭವಾಗಲಿದೆ? ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಕರ್ನಾಟಕದಲ್ಲಿ ಸದ್ಯ ಮೈಸೂರು-ಚೆನ್ನೈ, ಬೆಂಗಳೂರು-ಧಾರವಾಡ, ಬೆಂಗಳೂರು-ಹೈದರಾಬಾದ್, ಮಂಗಳೂರು-ಮಡಗಾಂವ್, ಬೆಂಗಳೂರು-ಕೊಯಮತ್ತೂರು, ಬೆಂಗಳೂರು-ಕಲಬುರಗಿ ನಡುವೆ ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗುತ್ತಿದೆ.
ಈಗ ನೈಋತ್ಯ ರೈಲ್ವೆ ಚೆನ್ನೈ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಿಂದ ಪಡೆಯಬಹುದಾದ 8 ಬೋಗಿಗಳ ವಂದೇ ಭಾರತ್ ರೈಲನ್ನು ಯಾವ ಮಾರ್ಗದಲ್ಲಿ ಓಡಿಸಲಾಗುತ್ತದೆ? ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ವಿವಿಧ ಜಿಲ್ಲೆಗಳು ಬೆಂಗಳೂರಿನಿಂದ ವಂದೇ ಭಾರತ್ ರೈಲು ಸಂಪರ್ಕಬೇಕು ಎಂದು ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿವೆ. ಆದರೆ ಯಾವುದೇ ಹೊಸ ಮಾರ್ಗವನ್ನು ಸಹ ಇಲಾಖೆ ಇನ್ನೂ ಘೋಷಣೆ ಮಾಡಿಲ್ಲ.
2023ರಲ್ಲಿ ನೈಋತ್ಯ ರೈಲ್ವೆ ರಾಜ್ಯದ 10 ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರ ನಡೆಸಲು, ರೈಲು ನಿರ್ವಹಣೆಗೆ ಬೇಕಾದ ಮೂಲ ಸೌಲಭ್ಯ ಅಭಿವೃದ್ಧಿಪಡಿಸಲು ಪಟ್ಟಿಯೊಂದನ್ನು ಮಾಡಿತ್ತು. ಈ ಪಟ್ಟಿಯಲ್ಲಿ ಈಗಾಗಲೇ ಹಲವು ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿದೆ, ಕೆಲವು ಮಾರ್ಗಗಳಲ್ಲಿ ರೈಲುಗಳು ಸಂಚಾರ ನಡೆಸಬೇಕಿದೆ.
ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ವಂದೇ ಭಾರತ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಅಲ್ಲದೇ 2023ರ ನವೆಂಬರ್‌ನಲ್ಲಿ ಪ್ರಾಯೋಗಿಕ ಸಂಚಾರ ಸಹ ಮುಕ್ತಾಯಗೊಂಡಿದೆ. ಆದರೆ ಬೆಳಗಾವಿಗೆ ರೈಲು ಸಂಚಾರ ಇನ್ನೂ ಆರಂಭವಾಗಿಲ್ಲ.
ನೈಋತ್ಯ ರೈಲ್ವೆ 19/7/2023ರಂದು ನಡೆದ ಸಭೆಯಲ್ಲಿ ಚರ್ಚಿಸಿದಂತೆ ಬೆಂಗಳೂರು-ಬೆಳಗಾವಿ, ಬೆಂಗಳೂರು-ಹೊಸಪೇಟೆ, ಬೆಂಗಳೂರು-ತಿರುಪತಿ, ಬೆಂಗಳೂರು-ಮುಧುರೈ, ಬೆಂಗಳೂರು-ಪುದುಚೇರಿ, ಬೆಂಗಳೂರು-ಶಿವಮೊಗ್ಗ ಮತ್ತು ಬೀದರ್-ಹುಬ್ಬಳ್ಳಿ ಮಾರ್ಗದಲ್ಲಿ ವಂದೇ ಭಾರತ್ ರೈಲುಗಳ ಸಂಚಾರ ಬಾಕಿ ಇದೆ.
ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸದ್ಯ ಹೊಸ ರೈಲುಗಳನ್ನು ಘೋಷಣೆ ಮಾಡುವಂತಿಲ್ಲ. ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ಜೂನ್ 10ಕ್ಕೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದೆ. ಆದ್ದರಿಂದ ಜೂನ್ ಅಂತ್ಯದ ವೇಳೆಗೆ ಕರ್ನಾಟಕಕ್ಕೆ ಹೊಸ ವಂದೇ ಭಾರತ್ ರೈಲನ್ನು ನಿರೀಕ್ಷೆ ಮಾಡಬಹುದಾಗಿದೆ.












Click it and Unblock the Notifications