ಇಂದೋರ್- ಮಂಗಳೂರು ನಡುವೆ ವಿಶೇಷ ರೈಲು ಸಂಚಾರ, ದಿನಾಂಕ, ಮಾರ್ಗಗಳ ವಿವರ ತಿಳಿಯಿರಿ
ಮಂಗಳೂರು, ಮೇ, 10: ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿಶೇಷ ರೈಲುಗಳನ್ನು ಬಿಡುತ್ತಲೇ ಇದೆ. ಅದರಲ್ಲೂ ಹಬ್ಬಗಳು ಬಂದವೆಂದರೆ ಸಾಕು ಪ್ರಯಾಣಿಕರ ದಟ್ಟಣೆಯನ್ನು ತಡೆಯಲು ಹೆಚ್ಚುವರಿ ರೈಲುಗಳನ್ನು ಬಿಡುತ್ತಲೇ ಬಂದಿದೆ. ಇದೀಗ ಇಂದೋರ್, ಮಂಗಳೂರು ನಡುವೆ ವಿಶೇಷ ರೈಲು ಸೌಲಭ್ಯವನ್ನು ಒದಗಿಸಲಾಗಿದೆ. ಹಾಗಾದರೆ ಈ ರೈಲು ಎಲ್ಲಿ ನಿಲುಗಡೆಯಾಗಲಿದೆ ಮತ್ತು ಯಾವಾಗ ಆರಂಭ ಆಗಲಿದೆ ಎನ್ನುವ ವಿವರವನ್ನು ಇಲ್ಲಿದೆ ತಿಳಿಯಿರಿ.
ಪಶ್ಚಿಮ ರೈಲ್ವೆಯ ಸಹಯೋಗದಲ್ಲಿ ಮೇ 11ರಂದು ಇಂದೋರ್, ಮಂಗಳೂರು ನಡುವೆ ವಿಶೇಷ ರೈಲು ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಭಾರತೀಯ ರೈಲ್ವೆ ಬುಧವಾರ (ಮೇ 10) ಮಾಹಿತಿ ನೀಡಿದೆ. ರೈಲು ಸಂಖ್ಯೆ 09302-ಗುರುವಾರ (ಮೇ 11) ಬೆಳಗ್ಗೆ 11:15ಕ್ಕೆ ಇಂದೋರ್ನಿಂದ ಬಿಡಲಿದ್ದು, ಮೇ 12ರ ಸಂಜೆ 4:15ಕ್ಕೆ ಮಂಗಳೂರಿಗೆ ತಲುಪಲಿದೆ.

ಈ ರೈಲು ದೀವಸ್, ಉಜ್ಜೈನ್ ಜಂಕ್ಷನ್, ನಗ್ಡಾ ಜಂಕ್ಷನ್, ಸೂರತ್, ವಲ್ಸದ್, ವಾಪಿ, ಪಾಲ್ಘರ್, ವಾಸವಿ ರಸ್ತೆ, ಪನ್ವೆಲ್, ರೋಹಾ, ರತ್ನಗಿರಿ, ರಾಜಪುರ ರಸ್ತೆ, ಕುಡಲ್, ತಿವಿಮ್, ಕರ್ಮಲಿ, ಮಡಗಾಂವ್ ಜಂಕ್ಷನ್, ಕಾರವಾರ ಹಾಗೂ ಉಡುಪಿ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.
ಇನ್ನು ನೈಋತ್ಯ ರೈಲ್ವೆಯ ವಿಶೇಷ ಸಹಯೋಗದಲ್ಲಿ ಯಶವಂತಪುರದಿಂದ ಮುರುಡೇಶ್ವರ ಹಾಗೂ ಮುರುಡೇಶ್ವರ- ಯಶವಂತಪುರ ಮಧ್ಯೆ 06587/06588 ಸಂಖ್ಯೆಯ ವಿಶೇಷ ರೈಲು ಸಂಚರಿಸಲಿದೆ ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ. ಈ ರೈಲು ಮುರುಡೇಶ್ವರದಿಂದ ಬುಧವಾರ ಮಧ್ಯಾಹ್ನ 1:30ಕ್ಕೆ ಹೊರಡಲಿದ್ದು, ಗುರುವಾರ (ಮೇ 10) ಬೆಳಗ್ಗೆ 4 ಕ್ಕೆ ಯಶವಂತಪುರ ತಲುಪಲಿದೆ ಎಂದು ತಿಳಿಸಿದೆ.
ಈ ರೈಲು ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೋಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಮೂಕಾಂಬಿಕಾ ರಸ್ತೆ, ಬೈಂದೂರು ಹಾಗೂ ಭಟ್ಕಳದಲ್ಲಿ ನಿಲುಗಡೆ ಆಗಲಿದೆ ಎಂದು ತಿಳಿಸಿದೆ.
ರಾಜ್ಯ ಚುನಾವಣೆ ಹಿನ್ನೆಲೆ ಭಾರತೀಯ ರೈಲ್ವೆಯು ವಿಶೇಷ ರೈಲುಗಳನ್ನು ಓಡಿಸಲು ನಿರ್ಧಾರ ಮಾಡಿತ್ತು ಅದರಂತೆಯೇ ಇದೀಗ ಇಂದೋರ್- ಮುರುಡೇಶ್ವರ, ಮಂಗಳೂರು ನಡುವೆ ವಿಶೇಷ ರೈಲುಗಳು ಸಂಚಾರ ಮಾಡಲಿವೆ.












Click it and Unblock the Notifications