ಶೀಘ್ರದಲ್ಲೇ ಬೆಂಗಳೂರು-ಕಾರವಾರ ನಡುವೆ ರಾತ್ರಿ ರೈಲು ಸಂಚಾರ?
ಬೆಂಗಳೂರು, ಆಗಸ್ಟ್ 21: ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಸಂಪರ್ಕಿಸಲು ಹೆಚ್ಚುವರಿ ರೈಲುಗಳು ಬೇಕು ಎಂಬುದು ಹಳೆಯ ಬೇಡಿಕೆ. ಹಬ್ಬ, ಸಾಲು ಸಾಲು ರಜೆ ಸಂದರ್ಭದಲ್ಲಿ ಇರುವ ರೈಲುಗಳಲ್ಲಿ ಸೀಟುಗಳು ಸಿಗದೆ ಪ್ರಯಾಣಿಕರು ದುಪ್ಪಟ್ಟು ದರ ನೀಡಿ ಖಾಸಗಿ ಬಸ್‌ಗಳಲ್ಲಿ ಸಂಚಾರ ನಡೆಸಬೇಕಾಗಿದೆ. ಬೆಂಗಳೂರು-ಕಾರವಾರ ನಡುವೆ ರಾತ್ರಿ ಹೊತ್ತಿನಲ್ಲಿ ರೈಲು ಸಂಚಾರ ಆರಂಭಿಸಬೇಕು ಎಂಬ ಬೇಡಿಕೆ ಇತ್ತು, ಶೀಘ್ರವೇ ಈ ಬೇಡಿಕೆ ಈಡೇರುವ ನಿರೀಕ್ಷೆ ಇದೆ. ಈ ರೈಲು ಮಂಗಳೂರು, ಉಡುಪಿ ಮೂಲಕ ಉತ್ತರ ಕನ್ನಡ ಜಿಲ್ಲೆಯ ಕಾರವಾರವನ್ನು ತಲುಪಲಿದೆ.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರೈಲ್ವೆ ಅಧಿಕಾರಿಗಳ ಸಭೆಯನ್ನು ನಡೆಸಿದರು. ಕರಾವಳಿ ಭಾಗದ ರೈಲ್ವೆ ಬೇಡಿಕೆಗಳ ಕುರಿತು ಮಾಹಿತಿಯನ್ನು ಪಡೆದರು. ಆಗ ಬೆಂಗಳೂರು-ಕಾರವಾರ ರಾತ್ರಿ ರೈಲಿನ ಬಗ್ಗೆ ಸಭೆಯಲ್ಲಿ ವಿಷಯ ಚರ್ಚಿಸಿದರು.

ಕರಾವಳಿ ಭಾಗದ ಜನರ ಅನುಕೂಲಕ್ಕಾಗಿ ರಾತ್ರಿ 10 ಗಂಟೆಗೆ ಬೆಂಗಳೂರಿನಿಂದ ಹೊರಡುವ ರೈಲಿನ ಅಗತ್ಯವಿದೆ. ಬೆಂಗಳೂರು-ಕಾರವಾರ ನಡುವೆ ರಾತ್ರಿ ಸಂಚಾರ ನಡೆಸುವ ರೈಲಿನ ಪ್ರಸ್ತಾವನೆ ಸಿದ್ಧಪಡಿಸಿ, ರೈಲ್ವೆ ಸಚಿವರ ಜೊತೆ ಈ ಬೇಡಿಕೆ ಕುರಿತು ಚರ್ಚಿಸುತ್ತೇನೆ ಎಂದು ಸಭೆಯಲ್ಲಿ ಸಂಸದರು ಭರವಸೆ ನೀಡಿದರು.
ಈ ಬಾರಿಯ ಮಳೆಗಾಲದಲ್ಲಿ ಹಾಸನದಲ್ಲಿ ಗುಡ್ಡ ಕುಸಿತದ ಕಾರಣ ಬೆಂಗಳೂರು-ಕರಾವಳಿ ನಡುವಿನ ರೈಲು ಸೇವೆ ವ್ಯತ್ಯಯವಾಗುತ್ತಲೇ ಇದೆ. ಇದೇ ಸಮಯದಲ್ಲಿ ಶಿರಾಡಿ, ಚಾರ್ಮಾಡಿಯಲ್ಲಿಯೂ ವಾಹನಗಳ ಸಂಚಾರಕ್ಕೆ ತೊಂದರೆ ಆಗಿ, ಜನರು ಸಂಚಾರಕ್ಕೆ ಕಷ್ಟ ಪಡುವಂತಾಗಿದೆ. ಬೆಂಗಳೂರು ನಗರದಿಂದ ರಾತ್ರಿ ಹೊರಟು, ಬೆಳಗ್ಗೆ ಕಾರವಾರ ತಲುಪುವ ರೈಲು ಬೇಕು ಎಂದು ಹಿಂದಿನಿಂದಲೂ ಬೇಡಿಕೆ ಇಡಲಾಗುತ್ತಿದೆ.
ಸಭೆಯಲ್ಲಿ ಪಾಲ್ಗೊಂಡಿದ್ದ ಕೊಂಕಣ ರೈಲ್ವೆ ವಿಭಾಗದ ಮುಖ್ಯಸ್ಥ ಸಂತೋಷ್ ಕುಮಾರ್ ಝಾ, ರೈಲು ಹಳಿ ದ್ವಿಪಥ, ಹೊಸ ರೈಲು, ರೈಲು ವಿಸ್ತರಣೆ, ಸಮಯ ಬದಲಾವಣೆ ಮತ್ತು ಹೊಸ ನಿಲುಗಡೆ ಕುರಿತು ಹಲವು ಮನವಿಗಳು ಬಂದಿವೆ. ರೈಲ್ವೆ ಮಂಡಳಿ ಈ ಕುರಿತು ತೀರ್ಮಾನ ಕೈಗೊಳ್ಳಬೇಕಿದೆ ಎಂದರು.
ವಂದೇ ಭಾರತ್ ರೈಲು: ಸಭೆಯಲ್ಲಿ ಕುಂದಾಪುರದಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ಅವಕಾಶ ನೀಡಬೇಕು ಎಂಬ ಚರ್ಚೆಯೂ ನಡೆಯಿತು. ಅಲ್ಲದೇ ಮಂಗಳೂರು-ಬೆಂಗಳೂರು, ಕಾರವಾರ-ಮುಂಬೈ ನಡುವೆ ರೈಲು ಸಂಚಾರ ಆರಂಭಿಸಬೇಕು ಎಂದು ಚರ್ಚಿಸಲಾಯಿತು.
ಮಂಗಳೂರು-ಮಡಗಾಂವ್ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಆದರೆ ಈ ರೈಲಿಗೆ ಕುಂದಾಪುರದಲ್ಲಿ ನಿಲುಗಡೆ ಇಲ್ಲ. ರೈಲಿಗೆ ಕುಂದಾಪುರ ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತೆ ಭಟ್ಕಳದಲ್ಲಿ ನಿಲುಗಡೆ ನೀಡಬೇಕು ಎಂದು ಬೇಡಿಕೆ ಇಡಲಾಗುತ್ತಿದೆ. ಆದರೆ ರೈಲ್ವೆ ಇಲಾಖೆ ಇನ್ನೂ ಈ ಕುರಿತು ತೀರ್ಮಾನ ಕೈಗೊಂಡಿಲ್ಲ.
ಬೆಂಗಳೂರು ಮತ್ತು ಮಂಗಳೂರು ನಡುವೆ ವಂದೇ ಭಾರತ್ ರೈಲುಗಳ ಸಂಚಾರ ಆರಂಭವಾಗಬೇಕು ಎಂಬುದು ಸಹ ಪ್ರಮುಖ ಬೇಡಿಕೆಯಾಗಿದೆ. ಆದರೆ ರೈಲುಗಳ ನಿರ್ವಹಣೆ, ಪ್ಲಾಟ್‌ಫಾರ್ಮ್‌ಗಳ ನಿರ್ಮಾಣ ಕಾರ್ಯದ ಹಿನ್ನಲೆಯಲ್ಲಿ ಈ ಬೇಡಿಕೆ ಕೇಳಿ ಬಂದಾಗ ರೈಲ್ವೆ ಇಲಾಖೆ ಸರಿಯಾದ ಸಮಯದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿತ್ತು.
ಹಬ್ಬದ ಸಂದರ್ಭದಲ್ಲಿ ಸಂಚಾರ ನಡೆಸುತ್ತಿದ್ದ ವಾಸ್ಕೋ-ವೇಲಂಕಣಿ ರೈಲನ್ನು ಮತ್ತೆ ಆರಂಭಿಸಬೇಕು. ಉಡುಪಿ-ವಾರಣಾಸಿ, ಉಡುಪಿ-ಅಯೋಧ್ಯೆ, ಉಡುಪಿ-ತಿರುಪತಿ ರೈಲು ಸೇವೆ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.












Click it and Unblock the Notifications