ಕೊಡಗನ್ನು“ಭಾರತದ ಸ್ಕಾಟ್‌ಲ್ಯಾಂಡ್” ಎಂದು ಕರೆಯೋದು ಯಾಕೆ ಗೊತ್ತಾ?
ಬೇಸಿಗೆ ರಜೆಯಲ್ಲಿ ತಂಪಾದ ವಾತಾವರಣ, ಹಸಿರು ಪ್ರಕೃತಿ ಮತ್ತು ಮಂಜಿನಿಂದ ಆವರಿಸಿದ ಬೆಟ್ಟಗಳನ್ನು ನೋಡಬೇಕು ಎನ್ನುವ ಆಸೆ ತುಂಬಾ ಜನರಿಗೆ ಇರುತ್ತದೆ. ಅಂತಹ ಪ್ರಕೃತಿ ಸೌಂದರ್ಯವನ್ನು ಒಂದೇ ಸ್ಥಳದಲ್ಲಿ ಅನುಭವಿಸಬೇಕೆಂದರೆ ಕರ್ನಾಟಕದ ನಮ್ಮ ಹೆಮ್ಮೆಯ ಕೊಡಗು ಜಿಲ್ಲೆ ಅತ್ಯುತ್ತಮ ಆಯ್ಕೆ ಎಂದೆ ಹೇಳಬಹುದು. "ಭಾರತದ ಸ್ಕಾಟ್‌ಲ್ಯಾಂಡ್" ಎಂದೇ ಖ್ಯಾತಿ ಪಡೆದಿರುವ ಕೊಡಗು ತನ್ನ ಮಂಜು ಮುಸುಕಿದ ಪರ್ವತಗಳು, ಕಾಫಿ ತೋಟಗಳು, ಜಲಪಾತಗಳು ಮತ್ತು ತಂಪಾದ ಹವಾಮಾನದಿಂದ ಪ್ರವಾಸಿಗರನ್ನು ಸೆಳೆಯುತ್ತದೆ.
ಕೊಡಗು ಅಥವಾ ಕೂರ್ಗ್ ಕರ್ನಾಟಕದ ದಕ್ಷಿಣ-ಪಶ್ಚಿಮ ಭಾಗದಲ್ಲಿರುವ ಸುಂದರವಾದ ಪ್ರವಾಸಿ ತಾಣ ಆಗಿದೆ. ಇದು ಬೆಂಗಳೂರಿನಿಂದ ಸುಮಾರು 260 ಕಿಲೋಮೀಟರ್ ಮತ್ತು ಮೈಸೂರಿನಿಂದ ಸುಮಾರು 120 ಕಿಲೋಮೀಟರ್ ದೂರದಲ್ಲಿದೆ. ಪಶ್ಚಿಮ ಘಟ್ಟಗಳ ಮಧ್ಯೆ ನೆಲೆಸಿರುವ ಕೊಡಗು ಸುತ್ತಲೂ ಹಸಿರು ಕಾಡುಗಳು, ಬೆಟ್ಟಗಳು ಮತ್ತು ನದಿಗಳಿಂದ ಆವರಿಸಿಕೊಂಡಿದೆ. ಬೇಸಿಗೆಯ ಬಿಸಿಲಿನಿಂದ ದೂರವಾಗಿ ಕೆಲವು ದಿನಗಳನ್ನು ಶಾಂತವಾಗಿ ಕಳೆಯಲು ಇದು ಸೂಕ್ತ ತಾಣವಾಗಿದೆ.

ಸ್ಕಾಟ್‌ಲ್ಯಾಂಡ್ ಆಫ್ ಇಂಡಿಯಾ
ಕೊಡಗನ್ನು "ಸ್ಕಾಟ್‌ಲ್ಯಾಂಡ್ ಆಫ್ ಇಂಡಿಯಾ" ಎಂದು ಕರೆಯಲು ಪ್ರಮುಖ ಕಾರಣ ಅಲ್ಲಿನ ಪ್ರಕೃತಿ ಸೌಂದರ್ಯ. ಮಂಜಿನಿಂದ ಆವರಿಸಿದ ಗುಡ್ಡಗಳು, ಹಸಿರು ಕಣಿವೆಗಳು ಮತ್ತು ತಂಪಾದ ವಾತಾವರಣವು ಸ್ಕಾಟ್‌ಲ್ಯಾಂಡ್‌ನ ನೆನಪನ್ನು ಮೂಡಿಸುತ್ತದೆ. ವರ್ಷಪೂರ್ತಿ ಇಲ್ಲಿನ ಹವಾಮಾನ ತಂಪಾಗಿರುವುದರಿಂದ ಬೇಸಿಗೆಯಲ್ಲೂ ಪ್ರವಾಸಿಗರಿಗೆ ಆರಾಮದಾಯಕ ಅನುಭವ ಸಿಗುತ್ತದೆ. ಎಲ್ಲೆಡೆ ಹರಡಿಕೊಂಡಿರುವ ಕಾಫಿ ಮತ್ತು ಮಸಾಲೆ ತೋಟಗಳು ಮನಸ್ಸಿಗೆ ಹಿತ ನೀಡುತ್ತವೆ.
ಕೊಡಗಿನಲ್ಲಿ ನೋಡಬಹುದಾದ ಅನೇಕ ಪ್ರವಾಸಿ ತಾಣಗಳಿವೆ. ಮಡಿಕೇರಿಯ ಸಮೀಪವಿರುವ ಅಬ್ಬೆ ಜಲಪಾತವು ಕಾಫಿ ತೋಟಗಳ ಮಧ್ಯೆ ಹರಿದು ಬರುವ ಸುಂದರ ಜಲಪಾತವಾಗಿದ್ದು, ಪ್ರವಾಸಿಗರ ಮೆಚ್ಚಿನ ಸ್ಥಳವಾಗಿದೆ. ಕುಶಾಲನಗರದ ಬಳಿ ಕಾವೇರಿ ನದಿ ತೀರದಲ್ಲಿರುವ ದುಬಾರೆ ಆನೆ ಶಿಬಿರದಲ್ಲಿ ಆನೆಗಳಿಗೆ ಆಹಾರ ನೀಡುವುದು ಮತ್ತು ಸ್ನಾನ ಮಾಡಿಸುವ ಅನುಭವ ಪಡೆಯಬಹುದು. ನಿಸರ್ಗಧಾಮವು ಬಿದಿರು ಮರಗಳಿಂದ ಆವರಿಸಿದ ಪ್ರಶಾಂತವಾದ ಪ್ರದೇಶವಾಗಿದ್ದು ಕುಟುಂಬದೊಂದಿಗೆ ಸಮಯ ಕಳೆಯಲು ಸೂಕ್ತವಾಗಿದೆ.
ಬ್ರಹ್ಮಗಿರಿ ಬೆಟ್ಟಗಳಲ್ಲಿ (ಸಮುದ್ರ ಮಟ್ಟದಿಂದ 1,276 ಮೀಟರ್ ಎತ್ತರ) ನೆಲೆಸಿರುವ ತಲಕಾವೇರಿ ಕೂಡ ಕೊಡಗಿನ ಪ್ರಮುಖ ಆಕರ್ಷಣೆಯಾಗಿದೆ. ಕಾವೇರಿ ನದಿಯ ಉದ್ಭವ ಸ್ಥಳವಾಗಿರುವ ಈ ಪ್ರದೇಶ ಬೆಟ್ಟಗಳ ನಡುವೆ ನೆಲೆಸಿದ್ದು ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತದೆ. ಮಡಿಕೇರಿ ಕೋಟೆ ಕೊಡಗಿನ ಇತಿಹಾಸವನ್ನು ಪರಿಚಯಿಸುವ ಪ್ರಮುಖ ತಾಣವಾಗಿದೆ.
ಸಾಹಸ ಚಟುವಟಿಕೆಗಳನ್ನು ಇಷ್ಟಪಡುವವರಿಗೆ ಕೊಡಗು ಅತ್ಯುತ್ತಮ ಸ್ಥಳ. ತಡಿಯಂಡಮೋಳ್ ಬೆಟ್ಟದಲ್ಲಿ ಟ್ರೆಕ್ಕಿಂಗ್ ಮಾಡಬಹುದು. ಬರಪೋಳೆ ನದಿ ಕೊಡಗು ಜಿಲ್ಲೆಯ ದಕ್ಷಿಣ ಭಾಗದಲ್ಲಿ ಹರಿಯುವ ಪ್ರಮುಖ ನದಿಯಾಗಿದ್ದು, ಇದು ಕಂಗನ ಹೊಳೆ ಮತ್ತು ಕಾಕಟಹೊಳೆಗಳ ಸಂಗಮದಿಂದ ಸೃಷ್ಟಿಯಾಗಿದೆ. ಬರಪೋಳೆ ನದಿಯಲ್ಲಿ ರಿವರ್ ರಾಫ್ಟಿಂಗ್ ಅನುಭವಿಸಬಹುದು. ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದಲ್ಲಿ ವನ್ಯಜೀವಿಗಳನ್ನು ನೋಡಬಹುದಾಗಿದೆ. ಅಲ್ಲದೆ ಕಾಫಿ ತೋಟಗಳ ಭೇಟಿ ಮೂಲಕ ಕಾಫಿ ತಯಾರಿಕೆ ಪ್ರಕ್ರಿಯೆಯನ್ನೂ ತಿಳಿದುಕೊಳ್ಳಬಹುದು.
ಕೊಡಗಿನ ಮತ್ತೊಂದು ವಿಶೇಷತೆ ಎಂದರೆ ಭಾರತದಲ್ಲಿ ಉತ್ಪಾದನೆಯಾಗುವ ಕಾಫಿಯ ಸುಮಾರು 40ರಷ್ಟು ಶೇಕಡಾ ಭಾಗ ಇಲ್ಲಿಯೇ ಬೆಳೆಯಲಾಗುತ್ತದೆ. ಕೊಡವ ಸಮುದಾಯವು ತನ್ನ ವಿಶಿಷ್ಟ ಸಂಸ್ಕೃತಿ ಮತ್ತು ಧೈರ್ಯಶಾಲಿ ಪರಂಪರೆಯಿಂದ ಪ್ರಸಿದ್ಧವಾಗಿದೆ. ಜೊತೆಗೆ ಕೊಡಗು ದೇಶದ ಅತ್ಯಂತ ಹಸಿರು ಮತ್ತು ಸ್ವಚ್ಛ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.














Click it and Unblock the Notifications