ಕಾಫಿನಾಡಿನ ಮೆರಗು ಹೆಚ್ಚಿಸಿದ ಈ ಅದ್ಭುತ ತಾಣದ ಅಳಿವು, ಉಳಿವು ಈಗ ಸರ್ಕಾರದ ಕೈಯಲ್ಲಿ
ಚಿಕ್ಕಮಗಳೂರು, ಅಕ್ಟೋಬರ್, 18: ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳದ ಕನ್ನಡಿಗರೇ ಇಲ್ಲ ಅನ್ಸತ್ತೆ. ಕಣ್ಣಿನ ದೃಷ್ಟಿ ಮುಗಿದರೂ ಮುಗಿಯದ ಈ ಸೌಂದರ್ಯಕ್ಕೆ ಆಯಸ್ಸು ಹೆಚ್ಚಿಲ್ಲ ಎಂಬ ಅನುಮಾನ ಈಗ ಮೂಡಿದೆ. ಏಕಂದರೆ 2019ರಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ಸರ್ಕಾರಕ್ಕೆ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರುವ ಮುಳ್ಳಯ್ಯನಗಿರಿ ತಪ್ಪಲಿನ ಸುಮಾರು ಸುಮಾರು 14 ಸಾವಿರ ಎಕರೆಯನ್ನ ಮುಳ್ಳಯ್ಯನಗಿರಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಬಳಿಕ ಅದು 18,284 ಎಕರೆಯಾಗಿತ್ತು.
ತದನಂತರ ಸಾರ್ವಜನಿಕ ಉದ್ದೇಶಗಳಿಗೆ 1,448 ಎಕರೆಯನ್ನ ಕೈಬಿಟ್ಟು 16,836 ಎಕರೆ ಪ್ರದೇಶವನ್ನ ಸಂರಕ್ಷಿತ ಪ್ರದೇಶ ಮಾಡಲು ವರದಿ ಸಲ್ಲಿಸಿತ್ತು. ಆದರೆ, ಈಗ ಪುನಃ ಆ ವರದಿ ಪರಿಷ್ಕರಣೆಗೊಂಡು ಮೊದಲ ಹಂತವಾಗಿ ಕೇವಲ 4,636 ಎಕರೆ ಪ್ರದೇಶವನ್ನಷ್ಟೇ ಸಂರಕ್ಷಿತ ಪ್ರದೇಶವನ್ನಾಗಿಸಲು ಸರ್ಕಾರ ಮುಂದಾಗಿದೆ. ಇದು ಕೆಲ ಪರಿಸರಪ್ರಿಯರು ಹಾಗೂ ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಮೊದಲ ಹಂತದ ಬಳಿಕ ಎರಡನೇ ಹಂತ ನಿಜಕ್ಕೂ ಆಗುತ್ತಾ ಅನ್ನೋದು ಪರಿಸರವಾದಿಗಳ ಆತಂಕ. 18,284 ಸಾವಿರ ಎರಕೆಯಿಂದ 16,836 ಎರಕೆಗೆ ಬಂದು ಬಳಿಕ 4 ಸಾವಿರ ಎಕರೆಗೆ ಬರಲು ಕಾರಣ ಒತ್ತುವರಿದಾರರೇ ಕಾರಣ ಎಂಬ ಮಾತು ಕೇಳಿ ಬಂದಿದೆ. ಈಗಾಗಲೇ ಮುಳ್ಳಯ್ಯನಗಿರಿಯಲ್ಲಿ ಬಹುತೇಕ ಭೂಮಿ ಒತ್ತುವರಿಯಾಗಿ, ಕಾಫಿತೋಟವಾಗಿದೆ. ಫಾರಂ 53, 54, 57ರ ಅಡಿ ಸಾವಿರಾರು ಜನ ಭೂಮಿಗಾಗಿ ಅರ್ಜಿ ಹಾಕಿದ್ದಾರೆ. ರಾಜಕಾರಣದ ಒತ್ತಡದಿಂದಲೇ ಸರ್ಕಾರ ಇಂದು 18 ಸಾವಿರದಿಂದ 4 ಸಾವಿರಕ್ಕೆ ಬಂದಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
ಮುಳ್ಳಯ್ಯನಗಿರಿ ದಟ್ಟ ಅರಣ್ಯದಲ್ಲಿ ಸಾವಿರಾರು ಪ್ರಾಣಿಗಳಿವೆ. ಹಲವು ನದಿಗಳ ಉಗಮ ಸ್ಥಾನವಾಗಿದೆ. ಹತ್ತಾರು ಕೆರೆಗಳಿಗೆ ನೀರಿನ ಮೂಲವಾಗಿದೆ. ಮುಳ್ಳಯ್ಯನಗಿರಿಯಲ್ಲಿ ಈಗಾಗಲೇ ಅರಣ್ಯವೇ ಒತ್ತುವರಿಯಾಗಿದೆ. ಈಗಲೇ ಮುಳ್ಳಯ್ಯನಗಿರಿಯನ್ನ ಉಳಿಸದಿದ್ದರೆ ಮುಂದಿನ ದಿನಗಳಲ್ಲಿ ಒತ್ತುವರಿದಾರರಿಂದ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಉಳಿಗಾಲ ಇರುವುದಿಲ್ಲ ಎನ್ನುವ ಆತಂಕ ಸ್ಥಳಿಯರು ಹಾಗೂ ಪರಿಸರವಾದಿಗಳದ್ದಾಗಿದೆ.
ಹಾಗಾಗಿ, ಈಗಲೇ ಮುಳ್ಳಯ್ಯಗಿರಿಗೊಂದು ಭದ್ರತೆ ಮಾಡದಿದ್ದರೆ ಮುಂದಿನ ಎಂಟತ್ತು ವರ್ಷಗಳಲ್ಲಿ ಮುಳ್ಳಯ್ಯನಗಿರಿ ತಪ್ಪಲಿನ ಪ್ರದೇಶ ಒತ್ತುವರಿ ಹಾಗೂ ತೋಟಗಳಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಆತಂಕ ಪರಿಸರವಾದಿಗಳದ್ದಾಗಿದೆ.
ಒಟ್ಟಾರೆ, ಸರ್ಕಾರ ಮುಳ್ಳಯ್ಯನಗಿರಿ ತಪ್ಪಲಿನಲ್ಲಿನಲ್ಲಿ ಹಲವು ಗ್ರಾಮಗಳಿವೆ. ಆದರೆ ಅಲ್ಲಿನ ಜನರಿಗೆ ಯಾವುದೇ ತೊಂದರೆಯಾಗಂತೆ ಪರಿಸರ ಉಳಿಸಲು ಮುಂದಾಗಿದೆ. ಆದರೆ ಸರ್ಕಾರ ಮಾತ್ರ ಯಾವುದೋ ಮುಲಾಜು-ಒತ್ತಡಕ್ಕೆ ಸಿಲುಕಿ ಈ ರೀತಿ 18 ಸಾವಿರದಿಂದ 4 ಸಾವಿರಕ್ಕೆ ಬಂದಿದೆ ಎಂಬ ಅನುಮಾನ ಮೂಡಿದೆ.
ಇರೋ ಮುಳ್ಳಯ್ಯನಗಿರಿಯನ್ನು ಉಳಿಸಿಕೊಂಡರೇ ಮುಂದಿನ ಪೀಳಿಗೆಗೂ ಉಳಿಯಲಿದೆ. ಸರ್ಕಾರ ಮುಲಾಜಿಗೋ ಅಥವಾ ಒತ್ತಡಕ್ಕೋ ಒಳಗಾಗಿ ಮುಳ್ಳಯ್ಯನಗಿರಿಯನ್ನು ಕಳೆದುಕೊಂಡರೆ ಎಷ್ಟು ಸಾವಿರ ಕೋಟಿ ಹಾಕಿದರೂ ನೈಸರ್ಗಿಕ ಈ ತಾಣವನ್ನು ಮತ್ತೆ ಮರಳಿ ಪಡೆಯಲು ಸಾಧ್ಯವಿಲ್ಲ.












Click it and Unblock the Notifications