ಬಳ್ಳಾರಿ-ಹಂಪಿ-ದಾವಣಗೆರೆ-ಮಂಗಳೂರು ನಡುವೆ ಹೊಸ ರೈಲು
ಬಳ್ಳಾರಿ, ಅಕ್ಟೋಬರ್ 07: ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಬಳ್ಳಾರಿಗೆ ಭೇಟಿ ನೀಡಿದ್ದರು. ಬಳ್ಳಾರಿ ಜಿಲ್ಲೆಯ ವಿವಿಧ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ನೂತನ ಜಿಲ್ಲಾಡಳಿತ ಭವನದ ಕಛೇರಿ ಸಭಾಂಗಣದಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಹೊಸ ರೈಲುಗಳಿಗಾಗಿ ಬೇಡಿಕೆ ಸಲ್ಲಿಸಲಾಗಿದೆ.
ವಿಜಯನಗರ ರೈಲ್ವೇ ಅಭಿವೃದ್ಧಿ ಕ್ರಿಯಾ ಸಮಿತಿ ಸಚಿವ ವಿ. ಸೋಮಣ್ಣಗೆ ಮನವಿಯೊಂದನ್ನು ಸಲ್ಲಿಕೆ ಮಾಡಿದೆ. ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ರೈಲ್ವೆ ಬೇಡಿಕೆಗಳನ್ನು ಜಾರಿಗೊಳಿಸುವ ಬಗ್ಗೆ ಮನವಿಗಳನ್ನು ಮಾಡಿದೆ. ಹಲವು ರೈಲು ಯೋಜನೆಗಳ ಕುರಿತು ಉಲ್ಲೇಖ ಮಾಡಿದೆ.

ಮನವಿಯಲ್ಲಿ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳು ನೈಋತ್ಯ ರೈಲ್ವೆ ವಲಯಕ್ಕೆ ದೊಡ್ಡ ಪ್ರಮಾಣದಲ್ಲಿ ಆದಾಯ ನೀಡುತ್ತಿದ್ದರೂ, ಈ ಜಿಲ್ಲೆಗಳ ಜನರಿಗೆ ಅಗತ್ಯವಾದ ರೈಲು ಸೌಲಭ್ಯಗಳು ದೊರೆಯುತ್ತಿಲ್ಲ. ಆದುದರಿಂದ ತಾವುಗಳು ಈ ರೈಲು ಯೋಜನೆಗಳನ್ನು ಜಾರಿಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದು ಮನವಿ ಮಾಡಲಾಗಿದೆ.
ಯಾವ-ಯಾವ ರೈಲು ಯೋಜನೆಗಳು: ಬಳ್ಳಾರಿ-ಹೊಸಪೇಟೆ (ಹಂಪಿ)-ದಾವಣಗೆರೆ-ಮಂಗಳೂರು ನಡುವೆ ನೂತನ ರೈಲು ಆರಂಭಿಸುವ ಬಗ್ಗೆ. ಕೆಲದಿನಗಳ ಹಿಂದೆ ದೇಶದ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಸಮಾರಂಭ ಒಂದರಲ್ಲಿ ಮಾತನಾಡುತ್ತಾ 2030ನೇ ವರ್ಷದೊಳಗೆ ನಮ್ಮ ದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳ ಬೆಳವಣಿಗೆಯಿಂದ 20 ಲಕ್ಷ ಕೋಟಿ ರೂಪಾಯಿ ಆದಾಯ ಸಂಗ್ರಹಿಸಬಹುದಾಗಿದ್ದು, ಅಂದಾಜು 14 ಕೋಟಿ ಉದ್ಯೋಗ ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಹೀಗಾಗಿ ಪ್ರಧಾನಮಂತ್ರಿಗಳ ದೂರದೃಷ್ಠಿಯ ಹೇಳಿಕೆಯನ್ನು ಸಾಕಾರಗೊಳಿಸುವ ಮಹತ್ತರ ಜವಾಬ್ದಾರಿ ರೈಲು ಮತ್ತು ಮತ್ತು ಪ್ರವಾಸೋದ್ಯಮ ಇಲಾಖೆಗಳ ಮೇಲಿದೆ. ಆದುದರಿಮದ ವಿಶ್ವದ ಯುನೆಸ್ಕೋ ಪಾರಂಪರಿಕ ತಾಣವಾದ ಹಂಪಿಯಿಂದ ರಾಜ್ಯದ ಇತರ ಪ್ರವಾಸಿ ತಾಣಗಳಾದ ಹಾಸನ, ಹಳೆಬೀಡು, ಬೇಲೂರು, ಶ್ರವಣಬೆಳಗೊಳ, ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ ಹಾಗೂ ಶೈಕ್ಷಣಿಕ ಮತ್ತು ಬೃಹತ್ ಆಸ್ಪತ್ರೆ ಕೇಂದ್ರಗಳಾದ ಉಡುಪಿ-ಮಂಗಳೂರಿಗೆ ನೇರ ರೈಲು ಆರಂಭಿಸಬೇಕು.
ಇದರಿಂದ ನಮ್ಮ ರಾಜ್ಯದಲ್ಲಿ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತವೆ. ಅಲ್ಲದೇ ಕಲ್ಯಾಣ ಕರ್ನಾಟಕ ಹೆಬ್ಬಾಗಿಲಿನಂತಿರುವ ವಿಜಯನಗರ ಜಿಲ್ಲೆ ಮತ್ತು ಕಲ್ಯಾಣ ಕರ್ನಾಟಕದಿಂದ ಬಂದರು ನಗರ ಮಂಗಳೂರಿಗೆ ನೇರ ಸಂಪರ್ಕ ದೊರೆತು, ವ್ಯಾಪಾರ ವಹಿವಾಟುಗಳು ವೃದ್ಧಿಯಾಗುತ್ತವೆ ಎಂದು ಮನವಿ ಸಲ್ಲಿಸಿದ್ದಾರೆ.
ಅನಂತಶಯನಗುಡಿ ರೈಲ್ವೆ ಫ್ಲೈ ಓವರ್: ಹೊಸಪೇಟೆ ಹೊರ ವಲಯದಲ್ಲಿ ಹಂಪಿ, ರಾಯಚೂರು, ಮಂತ್ರಾಲಯಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ನಿರ್ಮಾಣ ವಾಗುತ್ತಿರುವ ಫ್ಲೈ ಓವರ್ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕೇಂದ್ರ ಪುರಾತತ್ವ ಇಲಾಖೆಯ ನಿಬಂಧನೆಗಳಿಂದ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಇದರಿಂದ ಪ್ರತಿ ನಿತ್ಯ ಈ ಮಾರ್ಗದಲ್ಲಿ ಸಂಚರಿಸುತ್ತಿರುವ ಸಾವಿರಾರು ವಾಹನಗಳು ಪ್ರವಾಸಿಗರು ಮತ್ತು ಜನರಿಗೆ ತೊಂದರೆಯಾಗುತ್ತಿದೆ. ಆದುದರಿಂದ ಕೂಡಲೇ ತಾವು ಮಧ್ಯಪ್ರವೇಶಿಸಿ ಪುರಾತತ್ವ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಕಾಮಗಾರಿ ಪುನರ್ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.
ಅದೇ ರೀತಿ ಹೊಸಪೇಟೆ ನಗರದ ಚಿತ್ತವಾಡಿಗೆ ಹೋಗುವ ಐ.ಎಸ್.ಆರ್ ಕಾರ್ಖಾನೆ ಪಕ್ಕದಲ್ಲಿ (ಎಲ್.ಸಿ.ಗೇಟ್ ನಂ.5) ಹಾಗೂ ಹೊಸಪೇಟೆ ರೈಲ್ವೇ ನಿಲ್ದಾಣದ ಪೂರ್ವ ಭಾಗದಲ್ಲಿ ಮುದ್ಲಾಪುರ (ಎಲ್.ಸಿ.ಗೇಟ್ ನಂ.83) ರಲ್ಲಿ ಮೇಲ್ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ಮನವಿ ಸಲ್ಲಿಕೆ ಮಾಡಲಾಗಿದೆ.
ಪ್ರಯಾಣಿಕರ ರೈಲುಗಳ ವಿಳಂಬರಹಿತ ಸುಗಮ ಸಂಚಾರಕ್ಕೆ ಅನುಕೂಲ ಆಗುವಂತೆ ಎರಡು ಹೆಚ್ಚುವರಿ ಪ್ಲಾಟ್ ಫಾರಂಗಳ ನಿರ್ಮಾಣ ಮಾಡುವುದು ಹಾಗೂ ರೈಲುಗಳ ದುರಸ್ಥಿ ಮತ್ತು ನಿರ್ವಹಣೆಗೆ ಅನುಕೂಲವಾಗುವಂತೆ ಪಿಟ್‌ಲೈನ್ ನಿರ್ಮಾಣ ಹಾಗೂ ಗೂಡ್ಸ್ ಮತ್ತು ಸರಕು ಸಾಗಾಣಿಕೆಯ ಗೂಡ್ಸ್ ಗಾಡಿಗಳ ಸಂಚಾರವನ್ನು ಕಾರಿಗನೂರಿಗೆ ಸ್ಥಳಾಂತರಿಸಬೇಕು ಎಂದು ಬೇಡಿಕೆ ಇಡಲಾಗಿದೆ.
ಯಶವಂತಪುರ-ವಿಜಯಪುರ-ಯಶವಂತಪುರ ರೈಲು ಸಂಖ್ಯೆ 06545/ 06546 ರೈಲ್ವೆ ಖಾತೆ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಅವರು ಚಾಲನೆ ನೀಡಿದ್ದ ರೈಲನ್ನು ನಿರಂತರವಾಗಿ ಸಂಚರಿಸುವಂತೆ ಖಾಯಂಗೊಳಿಸಿ ಪ್ರಯಾಣದರ ಇಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.












Click it and Unblock the Notifications