ಬಾಗಲಕೋಟೆ-ಬೆಳಗಾವಿ ನಡುವೆ ಹೊಸ ರೈಲು ಮಾರ್ಗ; ಯೋಜನೆ ವಿವರ
ಬಾಗಲಕೋಟೆ, ಫೆಬ್ರವರಿ 05: ಬಾಗಲಕೋಟೆ-ಕುಡಚಿ ರೈಲು ಮಾರ್ಗ ಯೋಜನೆಯ ಭಾಗವಾಗಿ ಬಾಗಲಕೋಟೆ ಮತ್ತು ಬೆಳಗಾವಿ ನಡುವಿನ ಹೊಸ ರೈಲು ಮಾರ್ಗ ನಿರ್ಮಾಣವಾಗಲಿದೆ. 28.5 ಕಿ. ಮೀ. ರೈಲು ಮಾರ್ಗ ನಿರ್ಮಾಣಕ್ಕೆ ಇ-ಟೆಂಡರ್ ಕರೆಯಲಾಗಿದೆ.
ನೈಋತ್ಯ ರೈಲ್ವೆಯ ಕಾಮಗಾರಿ ವಿಭಾಗದ ಆಡಳಿತಾಧಿಕಾರಿ ಬಾಗಲಕೋಟೆಯ ಜಗದಾಳ್, ಬೆಳಗಾವಿಯ ಸುಟ್ಟಟ್ಟಿ ನಡುವೆ ನೂತನ ರೈಲು ಮಾರ್ಗ ನಿರ್ಮಾಣ ಮಾಡಲು ಟೆಂಡರ್ ಕರೆದಿದ್ದಾರೆ. 142 ಕಿ. ಮೀ. ಬಾಗಲಕೋಟೆ-ಕುಡಚಿ ರೈಲು ಮಾರ್ಗ ಯೋಜನೆ ಭಾಗವಾಗಿ ಈ ಮಾರ್ಗ ನಿರ್ಮಾಣವಾಗಲಿದೆ.

ಜಗದಾಳ್-ಸುಟ್ಟಟ್ಟಿ ನಡುವೆ ಬ್ರಾಡ್ ಗೇಜ್ ರೈಲು ಮಾರ್ಗ ನಿರ್ಮಾಣವಾಗಲಿದೆ. ಸಿಗ್ನಲ್, ಟೆಲಿ ಕಮ್ಯುನಿಕೇಷನ್, ವಿದ್ಯುತ್ ಕಾಮಗಾರಿಗಳನ್ನು ಸಹ ಇ-ಟೆಂಡರ್ ಪ್ರಕ್ರಿಯೆ ಒಳಗೊಂಡಿದೆ. ಟೆಂಡರ್ ಪ್ರಕ್ರಿಯೆ ಅಂತಿಗೊಂಡ ಬಳಿಕ ಮುಂದಿನ ಕಾರ್ಯಗಳು ಆರಂಭವಾಗಲಿವೆ.
ಯೋಜನೆ ವಿವರ; ಜಗದಾಳ್-ಸುಟ್ಟಟ್ಟಿ ನಡುವೆ ಗಂಟೆಗೆ 160 ಕಿ. ಮೀ. ವೇಗದಲ್ಲಿ ರೈಲು ಸಾಗುವಂತೆ ನೂತನ ರೈಲು ಮಾರ್ಗ ನಿರ್ಮಾಣವಾಗಲಿದೆ. ಅಲ್ಲದೇ ಮಾರ್ಗ ನಿರ್ಮಾಣದ ಜೊತೆಗೆ ಸೇತುವೆ, ಮೇಲ್ಸೇತುವೆಗಳಂತಹ ಮೂಲ ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತದೆ.
ಯೋಜನೆ ಆರಂಭವಾದ 21 ತಿಂಗಳಿನಲ್ಲಿ ಪೂರ್ಣಗೊಳಿಸಬೇಕು ಎಂದು ಟೆಂಡರ್‌ನಲ್ಲಿ ಷರತ್ತು ವಿಧಿಸಲಾಗಿದೆ. 8 ಪ್ರಮುಖ ಸೇತುವೆ, 39 ಕಿರು ಸೇತುವೆ, ಒಂದು ಮೇಲ್ಸೇತುವೆ, ಎರಡು ಸಬ್ ವೇಗಳು ಈ ಮಾರ್ಗದಲ್ಲಿ ಬರಲಿವೆ. ಎರಡು ಕ್ರಾಸಿಂಗ್, ಒಂದು ಹಾಲ್ಟ್ ಸ್ಟೇಷನ್ ಸೇರಿ ಒಟ್ಟು ಮೂರು ನಿಲ್ದಾಣಗಳ 28 ಕಿ. ಮೀ. ಮಾರ್ಗದಲ್ಲಿ ಬರಲಿವೆ.
ಕರ್ನಾಟಕ ಸರ್ಕಾರ ಈಗಾಗಲೇ ಬಾಗಲಕೋಟೆ-ಕುಡಚಿ ನೂತನ ರೈಲು ಮಾರ್ಗವನ್ನು 2025ರ ಅಂತ್ಯದೊಳಗೆ ಪೂರ್ಣಗೊಳಿಸಲು ಗಡುವನ್ನು ನಿಗದಿ ಮಾಡಿದೆ. ಉತ್ತರ ಕರ್ನಾಟಕದ ವಿವಿಧ ಪಟ್ಟಣಗಳಿಗೆ ಸಂಪರ್ಕವನ್ನು ಒದಗಿಸುವ ಮಹತ್ವದ ಯೋಜನೆ ಇದು.
ಗದಗ-ವಾಡಿ ಮತ್ತು ಬಾಗಲಕೋಟೆ-ಕುಡಚಿ ಎರಡು ಪ್ರಮುಖ ರೈಲು ಮಾರ್ಗದ ವೆಚ್ಚವನ್ನು ಕರ್ನಾಟಕ ಸರ್ಕಾರ ಮತ್ತು ಭಾರತೀಯ ರೈಲ್ವೆ ಸಮಾವಾಗಿ ಹಂಚಿಕೊಂಡಿವೆ. 142 ಕಿ.ಮೀ ಉದ್ದದ ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಅಂದಾಜು ವೆಚ್ಚ 1,530 ಕೋಟಿ ರೂ.ಗಳು. ಯೋಜನೆಗೆ ಅಗತ್ಯವಿರುವ 2,496 ಎಕರೆ ಭೂಮಿಯಲ್ಲಿ ಇದುವರೆಗೆ 2,476 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಕೃಷ್ಣಾ ನದಿ ತೀರದ ಬಾಗಲಕೋಟೆಯಿಂದ ಬೆಳಗಾವಿ ಜಿಲ್ಲೆಯ ಕುಡಚಿ ಮಾರ್ಗವಾಗಿ ಗೋವಾ ಬಂದರು ಹಾಗೂ ಮುಂಬೈಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. 30 ವರ್ಷಗಳು ಕಳೆದರೂ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಬಾಗಲಕೋಟೆ-ಖಜ್ಜಿಡೋಣಿ ನಡುವೆ ಮಾತ್ರ ರೈಲು ಮಾರ್ಗ ನಿರ್ಮಾಣಗೊಂಡಿದೆ. ಇನ್ನೂ 112 ಕಿ. ಮೀ. ಮಾರ್ಗ ನಿರ್ಮಾಣವಾದರೆ ರೈಲು ಕುಡಚಿಗೆ ತಲುಪಲಿದೆ.
ಬಾಗಲಕೋಟೆ, ಮುಧೋಳ, ಜಮಖಂಡಿ, ಬೆಳಗಾವಿ ಜಿಲ್ಲೆಯ ರಾಮದುರ್ಗ, ರಾಯದುರ್ಗ ಮೂಲಕ ಈ ರೈಲು ಮಾರ್ಗ ಹಾದು ಹೋಗುತ್ತದೆ. ಭೂ ಸ್ವಾಧೀನ ವಿಚಾರದಲ್ಲಿ ಉಂಟಾದ ಗೊಂದಲಗಳು ಯೋಜನೆ ವಿಳಂವಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. 2013ರ ಬಳಿಕ ಕಾಮಗಾರಿಗೆ ಚುರುಕು ಮುಟ್ಟಿದೆ.
ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಪ್ರಸ್ತಾಪ ಮೊದಲು ಆಗಿದ್ದು 1894ರಲ್ಲಿ. ಬಳ್ಳಾರಿಯ ಸಂಡೂರಿನಿಂದ ಅದಿರನ್ನು ಗೋವಾಕ್ಕೆ ಸಾಗಣೆ ಮಾಡಲು ಈ ರೈಲು ಮಾರ್ಗದ ಪ್ರಸ್ತಾಪ ಮಾಡಲಾಗಿತ್ತು. 1912, 1920ರಲ್ಲಿ ಎರಡು ಬಾರಿ ಸಮೀಕ್ಷೆಗಳು ನಡೆದರೂ ಸಹ ಯೋಜನೆ ಕಾರ್ಯಗತಗೊಳ್ಳಲಿಲ್ಲ.
1993ರಲ್ಲಿ 3ನೇ ಬಾರಿಗೆ ಸಮೀಕ್ಷೆ ನಡೆಯಿತು. ಆದರೆ ನೂತನ ಮಾರ್ಗ ಆರ್ಥಿಕವಾಗಿ ಉಪಯೋಗವಿಲ್ಲ ಎಂಬ ವರದಿ ಬಂದಿತು. 2007ರಲ್ಲಿ ಮತ್ತೊಮ್ಮೆ ಸಮೀಕ್ಷೆ ನಡೆದು, 2010ರಲ್ಲಿ ಯೋಜನೆಗೆ ಒಪ್ಪಿಗೆ ಸಿಕ್ಕಿತ್ತು. ಕೇಂದ್ರ ಮತ್ತು ರಾಜ್ಯದ ತಲಾ 50:50 ವೆಚ್ಚ ಹಂಚಿಕೆಯಂತೆ ಯೋಜನೆ ಕೈಗೊಳ್ಳಲಾಗಿದೆ.












Click it and Unblock the Notifications