ನೇಪಾಳದಲ್ಲಿ ನೋಡಿದ್ದು, ಕೇಳಿದ್ದು, ಅನಿಸಿದ್ದು

ಕೆಲವು ದೇವಸ್ಥಾನಗಳಲ್ಲಿ ಪ್ರಾಣಿಗಳ ಬಲಿ ಕೊಡುತ್ತಿರುವುದು ದುಃಖ ತರುತ್ತದೆ. ಹಲವಾರು ಐತಿಹಾಸಿಕ ಸ್ಥಳಗಳು ಈಗ ಶಾಲೆ ಅಥವಾ ಉಪಾಹಾರ ಮಂದಿರಗಳಾಗಿ ಮಾರ್ಪಟ್ಟು ತಮ್ಮ ಸ್ವಂತಿಕೆಯನ್ನು ಕಳೆದುಕೊಂಡಿವೆ. ರುದ್ರಾಕ್ಷಿ ಹಾಗೂ ಸಾಲಿಗ್ರಾಮದ ಕಲ್ಲಿಗೆ ಪ್ರಖ್ಯಾತಿಯಿರುವ ನೇಪಾಳದಲ್ಲಿ 100ರಿಂದ 1000 ನೇಪಾಳೀ ರೂಪಾಯಿಗಳ ವ್ಯಾಪ್ತಿಯಲ್ಲಿ ರುದ್ರಾಕ್ಷಿ ಹಾಗೂ 100ರಿಂದ 12,000 ನೇಪಾಳೀ ರೂಪಾಯಿಗಳ ವ್ಯಾಪ್ತಿಯಲ್ಲಿ ಸಾಲಿಗ್ರಾಮದ ಶಿಲೆಗಳು ಸಿಗುತ್ತವೆ. ಅಲ್ಲದೇ ವಿವಿಧ ರೀತಿಯ ಕೃತಕ ಮತ್ತು ನಕಲಿ ಮಣಿ-ಆಭರಣಗಳು ಇಲ್ಲಿ ದೊರಕುತ್ತವೆ. ಬೆಟ್ಟಗುಡ್ಡಗಳಿಂದ ತುಂಬಿರುವ ಇಲ್ಲಿ ರಸ್ತೆಗಳು ಚಿಕ್ಕದಾಗಿದ್ದು, ಸುಸ್ಥಿತಿಯಲ್ಲಿಲ್ಲ.
ಕಾಠ್ಮಂಡುವಿನಲ್ಲಿ ವಿದ್ಯುತ್ ಕಡಿತ ಸಾಮಾನ್ಯ. ಆದ್ದರಿಂದಲೋ ಏನೋ - ಬೆಳಿಗ್ಗೆ 4 ಘಂಟೆಗೆ ಏಳುವುದು, ಸಂಜೆ 8 ಘಂಟೆಗೆ ಮಲಗುವುದು ಇಲ್ಲಿನವರಿಗೆ ಅಭ್ಯಾಸವಾಗಿದೆ. ಶಿವನ ದೇವಸ್ಥಾನವಾದ ಪಶುಪತಿನಾಥ ಮಂದಿರದಲ್ಲಿ ವೈಷ್ಣವ ಏಕಾದಶಿಯನ್ನು ವಿಜೃಂಭಣೆಯಿಂದ ಆಚರಿಸುವುದು ನಿಜಕ್ಕೂ ಉತ್ತಮ ಮಾದರಿ. ದೇವರ ಸನ್ನಿಧಿಯಲ್ಲಿ ತಮ್ಮ ಕೊನೆಗಾಲ ಕಳೆದು ಮುಕ್ತಿ ಕಾಣುವವರು ಹಲವಾರು. ಕೊಳಚೆಯಾಗಿರುವ ಬಾಗಮತಿ ನದಿಯ ತಟದಲ್ಲಿ ಸಮೂಹರೂಪದಲ್ಲಿ ಶವಸಂಸ್ಕಾರ ಅತೀಸಾಮಾನ್ಯ ದೃಶ್ಯ.
ಪರದೇಶದ ಸಂಸ್ಕೃತಿಯ ಧಾಳಿಗೆ ಸಿಕ್ಕಿದ ನೇಪಾಳದಲ್ಲಿ ಹದಿಹರೆಯದಲ್ಲಿ ಮನೆ ಬಿಟ್ಟು ಓಡಿಬಂದು ಹುಡುಗರ ಜೊತೆ ಸುತ್ತಾಡುವುದನ್ನು "ಭಾಗೇರಜಾನಿ" ಅನ್ನುತ್ತಾರೆ. ಹಿಂದೂ ರಾಷ್ಟ್ರವಾದ ನೇಪಾಳದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪರಧರ್ಮೀಯರು ಮತ್ತು ಧರ್ಮಪರಿವರ್ತನೆ ಹೆಚ್ಚುತ್ತಿದೆಯೆಂದು ಕೇಳಿದ್ದೇನೆ. ಏಪ್ರಿಲ್ 2006ರಲ್ಲಿ ಚಕ್ರಾಧಿಪತ್ಯದಿಂದ ಪ್ರಜಾಸತ್ತೆಗೆ ಮರಳಿದ ನೇಪಾಳದಲ್ಲಿ ರಾಜ್ಯಾಂಗ ವ್ಯವಸ್ಥೆ ಇನ್ನೂ ಪರಿಪಕ್ವವಾಗಿಲ್ಲದೇ ನ್ಯಾಯಾಧೀಶರಿಂದ ಆಳ್ವಿಕೆ ನಡೆಯುತ್ತಿದೆ. ಎಲ್ಲಾ ದೇಶಗಳಲ್ಲೂ ಅದರದೇ ಆದ ವಿಶಿಷ್ಟತೆ, ಕಪ್ಪುಚುಕ್ಕೆಗಳಿದ್ದೇ ಇರುತ್ತವೆ. ಸಮಯ ಸಿಕ್ಕಿದಾಗ ನೋಡುವ ದೇಶಗಳ ಪಟ್ಟಿಯಲ್ಲಿ ನೇಪಾಳವನ್ನು ಸೇರಿಸಲೇನೂ ಆಡ್ಡಿಯಿಲ್ಲ!












Click it and Unblock the Notifications