Vande Bharat Train: ಕಲ್ಯಾಣ ಕರ್ನಾಟಕಕ್ಕೆ ವಂದೇ ಭಾರತ್ ರೈಲು, ಸಂಸತ್‌ನಲ್ಲಿ ಬೇಡಿಕೆ
ಬೀದರ್, ಮಾರ್ಚ್ 18: ಕರ್ನಾಟಕದಲ್ಲಿ 6 ಕ್ಕೂ ಅಧಿಕ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲುಗಳನ್ನು ಇನ್ನಷ್ಟು ಮಾರ್ಗದಲ್ಲಿ ಓಡಿಸಬೇಕು ಎಂಬ ಬೇಡಿಕೆ ಇದೆ. ಅದರಲ್ಲೂ ರಾಜಧಾನಿ ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕ ಸಂಪರ್ಕಿಸಲು ವಂದೇ ಭಾರತ್ ರೈಲು ಅಗತ್ಯವಿದೆ ಎಂದು ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳು ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿವೆ. ಸದ್ಯ ಕರ್ನಾಟಕಕ್ಕೆ ಯಾವುದೇ ಹೊಸ ವಂದೇ ಭಾರತ್ ರೈಲು ಘೋಷಣೆಯಾಗಿಲ್ಲ.
ಬೀದರ್-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಬೇಕು ಎಂಬುದು ಬೇಡಿಕೆಯಾಗಿದೆ. ಬೀದರ್-ಬೆಂಗಳೂರು ನಡುವಿನ ವಿಮಾನ ಸೇವೆಯೂ ಸ್ಥಗಿತವಾಗಿರುವ ಹಿನ್ನಲೆಯಲ್ಲಿ ಗಡಿಜಿಲ್ಲೆ ಮತ್ತು ರಾಜಧಾನಿ ನಡುವೆ ವಂದೇ ಭಾರತ್ ರೈಲು ಓಡಿಸಿ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಈಗಾಗಲೇ ಮನವಿ ಸಲ್ಲಿಕೆ ಮಾಡಲಾಗಿದೆ.

ಬೀದರ್ ಸಂಸದ ಸಾಗರ್ ಖಂಡ್ರೆ ಬೀದರ್-ಬೆಂಗಳೂರು ವಂದೇ ಭಾರತ್ ರೈಲು ಕುರಿತು ಲೋಕಸಭೆ ಕಲಾಪದಲ್ಲಿಯೂ ಧ್ವನಿ ಎತ್ತಿದ್ದಾರೆ. ಲೋಕಸಭೆ ಬಜೆಟ್ ಅಧಿವೇಶನದಲ್ಲಿ ಈ ಕುರಿತು ಅವರು ಮಾತನಾಡಿದ್ದಾರೆ. ಈ ಹಿಂದೆ ರೈಲ್ವೆ ಸಚಿವರನ್ನು ಭೇಟಿ ಮಾಡಿ ಈ ಕುರಿತು ಅವರು ಬೇಡಿಕೆ ಇಟ್ಟಿದ್ದರು.
ಲೋಕಸಭೆಯಲ್ಲಿ ಸಾಗರ್ ಖಂಡ್ರೆ ಮಾತು: ಲೋಕಸಭೆ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಸಾಗರ್ ಖಂಡ್ರೆ, ತಮ್ಮ ಕ್ಷೇತ್ರದ ರೈಲ್ವೆ ಸಂಬಂಧಿತ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರು. ಆಗ ಬೀದರ್-ಬೆಂಗಳೂರು ವಂದೇ ಭಾರತ್ ರೈಲು ಕುರಿತು ಬೇಡಿಕೆ ಇಟ್ಟರು. ಸಂಸದರು ಪ್ರಸ್ತಾಪಿಸಿದ ವಿಷಯಗಳು ಇಲ್ಲಿವೆ.
* ಎನ್‌ಸಿಆರ್‌ಬಿ ವರದಿ ಪ್ರಕಾರ ಕಳೆದ ದಶಕದಲ್ಲಿ 2.6 ಲಕ್ಷಕ್ಕೂ ಹೆಚ್ಚು ಜನರು ರೈಲ್ವೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಮಸ್ಯೆಗೆ ತ್ವರಿತ ಪರಿಹಾರವಾಗಿ ಕವಚ್ ತಂತ್ರಜ್ಞಾನವನ್ನು ಎಲ್ಲೆಡೆ ಶೀಘ್ರವಾಗಿ ಜಾರಿಗೆ ತರಬೇಕು.
* ಅಮೃತ್ ಭಾರತ್ ನಿಲ್ದಾಣ ಯೋಜನೆ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಇದನ್ನು ಶೀಘ್ರಗತಿಯಲ್ಲಿ ಮುನ್ನಡೆಸಬೇಕು. ಭಾಲ್ಕಿ ಮತ್ತು ಕಮಲನಗರ ರೈಲ್ವೆ ನಿಲ್ದಾಣಗಳನ್ನು ಅಮೃತ್ ಭಾರತ್ ಯೋಜನೆಯಡಿ ಸೇರ್ಪಡೆಗೊಳಿಸಿ, ಅಭಿವೃದ್ಧಿಪಡಿಸಬೇಕು.
* ಬೀದರ್-ಬೆಂಗಳೂರು ರೈಲುಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದು, ಇನ್ನು ಹೆಚ್ಚುವರಿ 2 ಬೋಗಿಗಳನ್ನು ಸೇರಿಸಲು ಅವಕಾಶವಿದ್ದು ಬೋಗಿಗಳನ್ನು ಸೇರಿಸಭೇಕು. ಬೀದರ್-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರವನ್ನು ಸಹ ಆರಂಭಿಸಬೇಕು.
* ಬೀದರ್ ಕ್ಷೇತ್ರದವರನ್ನು ದೆಹಲಿಗೆ ಸಂಪರ್ಕ ಕಲ್ಪಿಸಲು ದಕ್ಷಿಣ ಎಕ್ಸ್‌ಪ್ರೆಸ್ ರೈಲನ್ನು ಹೈದರಾಬಾದ್‌ನಿಂದ ಬೀದರ್‌ಗೆ ವಿಸ್ತರಿಸಬೇಕು. ತಾಂಡೂರು-ಜಹೀರಾಬಾದ್ ಹೊಸ ರೈಲು ಮಾರ್ಗವನ್ನು ಕ್ಷೇತ್ರದ ಚಿಂಚೋಳಿ ಮೂಲಕ ಸಂಚಾರ ನಡೆಸುವಂತೆ ಬದಲಾವಣೆ ಮಾಡಬೇಕು.
* ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮ ಕ್ಷೇತ್ರಕ್ಕೆ ನೀಡಲಾಗುತ್ತಿದ್ದ ಶೇ 50 ರಿಯಾಯಿತಿಯನ್ನು ಮರುಪ್ರಾರಂಭಿಸಿ. ರೈಲ್ವೆ ಸುರಕ್ಷತೆ, ಮೂಲಸೌಕರ್ಯ ಹಾಗೂ ಪ್ರಯಾಣಿಕರ ಅನುಕೂಲತೆಗಳ ಸುಧಾರಣೆಗೆ ಕೇಂದ್ರ ಸರ್ಕಾರವು ತ್ವರಿತ ಕ್ರಮ ಕೈಗೊಳ್ಳುವಂತೆ ಒತ್ತಾಯ.
ಸದ್ಯ ಕರ್ನಾಟಕಕ್ಕೆ ಯಾವುದೇ ಹೊಸ ವಂದೇ ಭಾರತ್ ರೈಲು ಘೋಷಣೆಯಾಗಿಲ್ಲ. ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಲಾಗಿದೆ. ಆದರೆ ಈ ರೈಲು ಸಂಚಾರ ಯಾವಾಗ ಆರಂಭ? ಎಂಬ ಮಾಹಿತಿ ಸಿಕ್ಕಿಲ್ಲ.












Click it and Unblock the Notifications