ಚಿಕ್ಕಮಗಳೂರು ಮಳೆ, ಪ್ರವಾಸಿಗರ ದಂಡು: ಟ್ರಾಫಿಕ್ ಜಾಮ್
ಚಿಕ್ಕಮಗಳೂರು, ಜೂನ್ 09: ಕಾಫಿನಾಡು ಚಿಕ್ಕಮಗಳೂರಿನಲ್ಲಿ ನೈಋತ್ಯ ಮುಂಗಾರು ಮಳೆ ಆರಂಭವಾಗಿದೆ. ಪ್ರಕೃತಿ ಸೌಂದರ್ಯ ಸವಿಯಲು ವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರ ದಂಡು ಹರಿದು ಬಂದಿದೆ. ಇದರಿಂದಾಗಿ ಚಿಕ್ಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯಗಿರಿಯಲ್ಲಿ ಮಂಜುಕವಿದ ವಾತಾವರಣ, ಪ್ರಕೃತಿ ಸೌಂದರ್ಯ ಸವಿಯಲು ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆ ತಾಲೂಕಿನ ಮುಳ್ಳಯ್ಯನಗಿರಿ - ಕೈಮರ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡಿದರು.

ಭಾನುವಾರ ಮಧ್ಯಾಹ್ನ 2 ಗಂಟೆಗೆ ಮುಳ್ಳಯ್ಯನಗಿರಿ ಸುತ್ತಲೂ ಟ್ರಾಫಿಕ್ ಜಾಮ್ ಉಂಟಾಗಿದೆ, ಇದರಿಂದಾಗಿ ಕೆಲವು ಕಾಲ ವಾಹನ ಸವಾರರು ಹೈರಾಣಾದರು. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಟ್ರಾಫಿಕ್ ಜಾಮ್ ನಿಯಂತ್ರಿಸಲು ಹರಸಾಹಸ ಪಟ್ಟರು.
ಮೇ ತಿಂಗಳಿನಿಂದ ಮಳೆ: ಚಿಕ್ಕಮಗಳೂರಿನಲ್ಲಿ ಮೇ ತಿಂಗಳಿನಲ್ಲಿಯೂ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿದಿತ್ತು. ಕಳೆದ ವರ್ಷ ಮಳೆ ಕೊರತೆಯ ಕಾರಣ ಭೀಕರ ಬರ ನೋಡಿದ್ದ ಜನರು ಈಗ ಸುರಿಯುತ್ತಿರುವ ಮಳೆ ನೋಡಿ ಸಂತಸಗೊಂಡಿದ್ದಾರೆ.
ಮಳೆಗಾಲದ ಹಿನ್ನಲೆಯಲ್ಲಿ ಪ್ರವಾಸಿಗರ ದಂಡು ಪ್ರವಾಸಿ ತಾಣಗಳನ್ನು ನೋಡಲು ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸುತ್ತಿದೆ. ಇದರಿಂದಾಗಿ ಭಾನುವಾರ ಮುಳ್ಳಯ್ಯನಗಿರಿ-ಕೈಮರ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮುಳ್ಳಯ್ಯನಗಿರಿ, ದತ್ತಪೀಠ ರಸ್ತೆಯಲ್ಲಿ ಸಿಲುಕಿ ವಾಹನ ಸವಾರರು ಪರದಾಟ ನಡೆಸಿದರು.
ಜೂನ್ 8 2ನೇ ಶನಿವಾರ, ಜೂನ್ 9ರ ಭಾನುವಾರವಾದ ಕಾರಣ ಸರಣಿ ರಜೆ ಸಿಕ್ಕಿದ್ದು, ಪ್ರವಾಸಿಗರು ಕಾಫಿನಾಡಿನತ್ತ ಆಗಮಿಸಿದ್ದಾರೆ. ಇದರಿಂದಾಗಿ ಕಿರಿದಾದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್ ಜಾಮ್‌ನಿಂದ ಸ್ಥಳೀಯರು ಸಹ ಸಂಚಾರ ನಡೆಸಲು ಸಂಕಷ್ಟ ಎದುರಾಯಿತು.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು, ಬಯಲು ಸೀಮೆ ತಾಲೂಕುಗಳಲ್ಲಿ ಶುಕ್ರವಾರದಿಂದ ಮಳೆಯಾಗುತ್ತಲೇ ಇದೆ. ಚಿಕ್ಕಮಗಳೂರು, ಚಿತ್ರದುರ್ಗ ಗಡಿಭಾಗದಲ್ಲಿ ಶುಕ್ರವಾರ ಮಳೆ ಅಬ್ಬರಕ್ಕೆ ರಸ್ತೆ ಸಂಚಾರ ಬಂದ್ ಆಗಿ, ಹಳ್ಳಗಳು ಭರ್ತಿಯಾಗಿದ್ದವು.
ಅಜ್ಜಂಪುರ ಭಾಗದಲ್ಲಿ ಸುರಿದ ಮಳೆಯಿಂದಾಗಿ ಹರಳಹಳ್ಳಿ ಹೊಳಲ್ಕೆರೆ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.ಕಳೆದ ಎರಡು ಮೂರು ವರ್ಷದಿಂದ ಸರಿಯಾಗಿ ಮಳೆಯಾಗಿರಲಿಲ್ಲ. ಹನಿ ಹನಿ ನೀರಿಗೂ ಪರದಾಟವಿತ್ತು. ಈ ಬಾರಿ ಮಳೆಯಿಂದಾಗಿ ಕೆರೆಗಳು ತುಂಬುತ್ತಿವೆ ಎಂದು ಜನರು ಸಂತಸ ಪಟ್ಟರು.
ಮಳೆಗಾಲದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಮಳೆಗಾಲದಲ್ಲಿ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚು. ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಅವಲಂಬಿತರಾಗಿ ಎಷ್ಟೋ ಜನರು ಬದುಕು ಕಟ್ಟಿಕೊಂಡಿದ್ದಾರೆ. ಜಿಲ್ಲೆಯ ಪ್ರಕೃತಿ ಸೌಂದರರ್ಯ ಸವಿಯಲು, ಕಲ್ಲತ್ತಿಗಿರಿ ಜಲಪಾತ ನೋಡಲು, ಚಾರಣ ಮಾಡಲು ತಂಡ-ತಂಡಗಳಾಗಿ ಜನರು ಆಗಮಿಸುತ್ತಾರೆ.












Click it and Unblock the Notifications