ಮಯೂರ ಕ್ಯಾಂಟೀನ್; ನಂದಿಹಿಲ್ಸ್ ಪ್ರವಾಸಿಗರಿಗೆ ಸಿಹಿಸುದ್ದಿ
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 04; ಪ್ರತಿನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುವ ಪ್ರಸಿದ್ಧ ಪ್ರವಾಸಿ ತಾಣ ಬೆಂಗಳೂರು ನಗರಕ್ಕೆ ಹತ್ತಿರವಿರುವ ನಂದಿಹಿಲ್ಸ್. ಪ್ರವಾಸಿಗರಿಗೆ ಕೆಎಸ್‌ಟಿಡಿಸಿ ಕೊಡುಗೆಯೊಂದನ್ನು ನೀಡಿದೆ. ಕಡಿಮೆ ದರದಲ್ಲಿ ಊಟ, ಉಪಹಾರ ದೊರೆಯಲಿದೆ.
ಹೌದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಕರ್ನಾಟಕ ಸರ್ಕಾರದ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ನಂದಿಹಿಲ್ಸ್‌ನಲ್ಲಿ 'ಮಯೂರ ಕ್ಯಾಂಟೀನ್' ಆರಂಭಿಸಿದೆ. ಕಡಿಮೆ ಬೆಲೆಗೆ ಉಪಹಾರ, ಊಟ, ಟೀ, ಕಾಫಿ ಇಲ್ಲಿ ದೊರೆಯುತ್ತದೆ.

ನಂದಿಗಿರಿಧಾಮದ ನಿರ್ವಹಣೆ ತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರವಾಗಿದೆ. ಆದ್ದರಿಂದ ಸಾವಿರಾರು ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಕೆಎಸ್‌ಟಿಡಿಸಿ 'ಮಯೂರ ಕ್ಯಾಂಟೀನ್' ಆರಂಭಿಸಿದೆ. ಈ ಮೂಲಕ ಜನರನ್ನು ಸೆಳೆಯಲು ಮುಂದಾಗಿದೆ.
ಊಟ, ಉಪಹಾರದ ದರ ಪಟ್ಟಿ; ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ 'ಮಯೂರ ಕ್ಯಾಂಟೀನ್'ನಲ್ಲಿ 10 ರೂಪಾಯಿಗೆ ಕಾಫೀ/ ಟೀ ದೊರೆಯುತ್ತದೆ. 20 ರೂಪಾಯಿಗೆ ತಿಂಡಿ/ ಊಟ ದೊರೆಯುತ್ತದೆ. ಇದು ಪ್ರವಾಸಿಗರಿಗಾಗಿ ಕೆಎಸ್‌ಟಿಡಿಸಿಯ ಕೊಡುಗೆಯಾಗಿದೆ. ಪ್ರವಾಸಿಗರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
'ಮಯೂರ ಕ್ಯಾಂಟೀನ್'ನಲ್ಲಿ ಟೀ 10 ರೂ., ರೈಸ್ ಬಾತ್ 20 ರೂ., ಉಪ್ಪಿಟ್ಟು 20 ರೂ., ಕೇಸರಿ ಬಾತ್ 20 ರೂ., ಮೊಸರನ್ನ 15 ರೂ., ಅನ್ನ ಸಾಂಬಾರ್ 20 ರೂ. ಎಂದು ಫಲಕ ಹಾಕಲಾಗಿದೆ. ಇದರಿಂದಾಗಿ ಪ್ರವಾಸಿಗರು ಹೆಚ್ಚಿನ ಹಣವನ್ನು ನೀಡಿ ಊಟ, ಉಪಹಾರ ಮಾಡುವುದು ತಪ್ಪಿದಂತೆ ಆಗಿದೆ. ಕೆಎಸ್‌ಟಿಡಿಸಿಯ ವ್ಯವಸ್ಥಾಪಕ ನಿರ್ದೇಶಕ ಜಿ. ಜಗದೀಶ್ ಈ ಕುರಿತು ಫೇಸ್‌ಬುಕ್ ಪುಟದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಪ್ರವಾಸೋದ್ಯಮ ಖಾತೆ ಸಚಿವ ಎಚ್. ಕೆ. ಪಾಟೀಲ್ ನಂದಿ ಹಿಲ್ಸ್‌ಗೆ ಭೇಟಿ ನೀಡಿದ್ದರು. ಆಗ ಅವರು 'ಮಯೂರ ಕ್ಯಾಂಟೀನ್'ನಲ್ಲಿನ ಮೆನುಗಳ ದರಗಳನ್ನು ನೋಡಿ, ಇದು ದುಬಾರಿಯಾಗಿದೆ. ಸೂಕ್ತ ಕ್ರಮವನ್ನು ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಬಳಿಕ ವ್ಯವಸ್ಥಾಪಕ ನಿರ್ದೇಶಕ ಜಿ. ಜಗದೀಶ್ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ 'ಮಯೂರ ಕ್ಯಾಂಟೀನ್'ನಲ್ಲಿನ ಉಟ, ಉಪಹಾರದ ದರಗಳನ್ನು ಬದಲಾವಣೆ ಮಾಡಿದ್ದಾರೆ. ನಿತ್ಯ ಆಗಮಿಸುವ ನೂರಾರು ಪ್ರವಾಸಿಗರು ಇದಕ್ಕೆ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.
ಪ್ರತಿದಿನ ನೂರಾರು, ವಾರಾಂತ್ಯ ಮತ್ತು ರಜೆ ದಿನಗಳಲ್ಲಿ ಸಾವಿರಾರು ಪ್ರವಾಸಿಗರು ನಂದಿಗಿರಿಧಾಮಕ್ಕೆ ಆಗಮಿಸುತ್ತಾರೆ. ಪಾರ್ಕಿಂಗ್‌ನಿಂದ ಹಿಡಿದು ಊಟ, ತಿಂಡಿಯ ತನಕ ಎಲ್ಲಾ ದರಗಳು ಹೆಚ್ಚಾಗಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಈಗ ಕಡಿಮೆ ಬೆಲೆಗೆ ಊಟ, ಉಪಹಾರ ದೊರೆಯುತ್ತಿದೆ.












Click it and Unblock the Notifications