ಮುಳ್ಳಯ್ಯನಗಿರಿಗೆ ಶೀಘ್ರದಲ್ಲೇ ಖಾಸಗಿ ವಾಹನಗಳ ನಿರ್ಬಂಧ: KSRTC ಬಸ್ ಸೇವೆಗೆ ನಿರ್ಧಾರ
ಚಿಕ್ಕಮಗಳೂರು, ಚಿಕ್ಕಮಗಳೂರು, 17: ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮುಳ್ಳಯ್ಯನಗಿರಿ ಕರ್ನಾಟಕದ ಅತಿ ಎತ್ತರದ ಶಿಖರವಾಗಿದೆ. ಮುಳ್ಳಯ್ಯನಗಿರಿಯು ಅಚ್ಚಹಸಿರಿನಿಂದ ಕೂಡಿದ್ದು, ಈ ವಾತಾವರಣ ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತಲೇ ಇರುತ್ತದೆ. ಇದು ಪ್ರವಾಸಿಗರ ಸ್ವರ್ಗ ಎಂದೇ ಪ್ರಖ್ಯಾತಿ ಪಡೆದಿದೆ.
ಈ ಬೆಟ್ಟವನ್ನು ನೋಡಲು, ಟ್ರೆಕ್ಕಿಂಗ್‌ಗಾಗಿಯೇ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಲೇ ಇರುತ್ತಾರೆ. ಆದ್ದರಿಂದ ಇಲ್ಲಿ ಸಾಕಷ್ಟು ಟ್ರಾಫಿಕ್ ಸಮಸ್ಯೆಯೂ ಕೂಡ ಉಂಟಾಗುತ್ತಿದೆ. ಪ್ರವಾಸಿಗರು ಕಿಕ್ಕಿರಿದು ಬರುವ ಕಾರಣದಿಂದ ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಆದ್ದರಿಂದ ಜಿಲ್ಲಾಡಳಿತ ಬೆಟ್ಟದಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಖಾಸಗಿ ವಾಹನಗಳನ್ನು ನಿರ್ಬಂಧಿಸಲು ನಿರ್ಧಾರ ಮಾಡಿದ್ದು, ಇದಕ್ಕೆ ಪರ್ಯಾಯವಾಗಿ ಕೆಎಸ್‌ಆರ್‌ಟಿಸಿ (KSRTC) ಬಸ್ ಬಿಡಲು ಮುಂದಾಗಿದೆ.
ವಾರಾಂತ್ಯ ಬಂದರೆ ಸಾಕು ಪ್ರವಾಸಿಗರ ದಂಡೇ ಆಗಮಿಸುತ್ತದೆ. ಹೀಗಾಗಿ ಅಲ್ಲಿನ ರಸ್ತೆಗಳು ವಾಹನಗಳಿಂದ ಕಿಕ್ಕಿರಿದು ತುಂಬಿ ತುಳುಕುತ್ತಿರುತ್ತವೆ. ಬೆಟ್ಟಕ್ಕೆ ತಲುಪುವ ರಸ್ತೆಗಳು ಕಿರಿದಾಗಿದ್ದರಿಂದ ಕೆಲವರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ.

ಟ್ರಾಫಿಕ್ ನಿಯಂತ್ರಣಕ್ಕೆ ಕ್ರಮ
ಅಲ್ಲದೆ ಮಾರ್ಗದ ಮಧ್ಯೆ ಬರುವ ಪ್ರಾಣಿಗಳಿಗೂ ತೊಂದರೆ ಆಗುತ್ತಿದೆ. ಹೀಗಾಗಿ ಬೆಟ್ಟದ ರಸ್ತೆಗಳಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಖಾಸಗಿ ವಾಹನಗಳಿಗೆ ನಿರ್ಬಂಧ ಹಾಕಲು ಜಿಲ್ಲಾಡಳಿತ ನಿರ್ಧಾರ ಕೈಗೊಂಡಿದೆ. ಶೀಘ್ರದಲ್ಲೇ ಸ್ವಂತ ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗುವುದು. ಮತ್ತು ಪ್ರವಾಸಿಗರು ಸಾರ್ವಜನಿಕ ವಾಹನಗಳನ್ನು ಬಳಸಬೇಕಾಗುತ್ತದೆ ಎಂದು ತಿಳಿಸಿದೆ.

ಖಾಸಗಿ ವಾಹನಗಳ ನಿರ್ಬಂಧಕ್ಕೆ ನಿರ್ಧಾರ
ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಖಾಸಗಿ ವಾಹನ ಪ್ರವೇಶಕ್ಕೆ ತಡೆ ನೀಡಿ, ಕೆಎಸ್‌ಆರ್‌ಟಿಸಿ ಬಸ್ ಸೇವೆಯನ್ನು ನೀಡಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲಾಡಳಿತವು ಕೂಡ ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿದೆ. ಈಗಾಗಲೇ ಪ್ರವಾಸಿಗರು ಬೆಟ್ಟದಲ್ಲಿ ಮದ್ಯದ ಬಾಟಲಿ ಹಾಗೂ ಇನ್ನಿತರ ವಸ್ತುಗಳನ್ನು ಎಸಯುವ ಮೂಲಕ, ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಹಾಳು ಮಾಡಿದ್ದರು. ಆದ್ದರಿಂದ ಬೆಟ್ಟದ ಪ್ರಕೃತಿ ಸೌಂದರ್ಯವನ್ನು ಸಂರಕ್ಷಿಸುವ ಜೊತೆಗೆ ವನ್ಯಜೀವಿಗಳಿಗೂ ಮುಕ್ತ ವಾತಾವರಣ ಕಲ್ಪಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಖಾಸಗಿ ವಾಹನಗಳಿಗೆ ಸಂಪೂರ್ಣವಾಗಿ ನಿರ್ಬಂಧ ಹೇರಲು ಮುಂದಾಗಿದೆ.

KSRTC ಬಸ್‌ನಲ್ಲಿ ಬರಲು ಸೂಚನೆ
ಖಾಸಗಿ ವಾಹನಗಳಿಗ ನಿರ್ಬಂಧ ಹೇರಿದರೆ ಬೆಟ್ಟದ ಮೇಲಿನ ವಾಹನಗಳ ಒತ್ತಡವೂ ಕೂಡ ತಗ್ಗಲಿದೆ. ಹಾಗೂ ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎನ್ನುವ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಚಿಕ್ಕಮಗಳೂರು ಜಿಲ್ಲಾದಿಕಾರಿ ಕೆ.ಎನ್.ರಮೇಶ್ ಮಾತನಾಡಿ, ಈ ಪ್ರದೇಶದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಈಗಾಗಲೇ ಮೊಬೈಲ್ ಮತ್ತು ಪೊಲೀಸ್ ತುಕಡಿಗಳನ್ನು ನಿಯೋಜಿಸಿದ್ದೇವೆ. ಇದೀಗ ಮತ್ತಷ್ಟು ಮುಂಜಾಗ್ರತೆ ಕ್ರಮವಾಗಿ 17 ಕಿಲೋ ಮೀಟರ್ ದೂರದಲ್ಲಿರುವ ಅಲ್ಲಂಪುರ ಬಳಿ ಐದು ಹೆಕ್ಟೇರ್ ಭೂಮಿಯನ್ನು ಗುರುತಿಸಿದ್ದೇವೆ. ಅಲ್ಲಿಯೇ ಎಲ್ಲಾ ಪ್ರವಾಸಿಗರು ತಮ್ಮ ಸ್ವಂತ ವಾಹನಗಳನ್ನು ನಿಲ್ಲಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಜಿಲ್ಲಾಡಳಿತದಿಂದ ಪ್ರವಾಸಿಗರಿಗೆ ಸೂಚನೆ
ಅಲ್ಲಂಪುರದಿಂದ ಮುಳ್ಳಯ್ಯನಗಿರಿ ನಡುವೆ ಪ್ರವಾಸಿಗರನ್ನು ಕರೆದೊಯ್ಯಲು ಸಾರ್ವಜನಿಕ ವಾಹನಗಳಿಗೆ ಅವಕಾಶ ನೀಡಲಾಗುತ್ತದೆ. ಪಾರ್ಕಿಂಗ್ ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ಖಾಸಗಿ ವಾಹನಗಳ ಪ್ರವೇಶಕ್ಕೆ ತಡೆಹಿಡಿಯಲಾಗುವುದು ಎಂದರು. ಇನ್ನು ಸ್ವಂತ ವಾಹನಗಳನ್ನು ತೆಗೆದುಕೊಂಡು ಹೋಗುವುದರಿಂದ ಕಸವನ್ನು ಸಹ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಬೆಟ್ಟದಲ್ಲಿ ಹಾಕುತ್ತಿದ್ದಾರೆ. ಎಲ್ಲೆಂದರಲ್ಲೇ ಕಸ, ಬಾಟಲಿಗಳನ್ನು ಬೀಸಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಈ ಕ್ರಮ ಸೂಕ್ತವಾದುದಾದಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ದಿಟ್ಟ ನಿರ್ಧಾರ ತೆಗೆದುಕೊಂಡ ಜಿಲ್ಲಾಡಳಿತ
ಮುಳ್ಳಯ್ಯನಗಿರಿಯು ಪಶ್ಚಿಮ ಘಟ್ಟಗಳ ಭಾಗವಾಗಿದ್ದು, ಭಾರಿ ವಾಹನಗಳ ಸಂಚಾರಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳುವ ನಿಸರ್ಗ ಪ್ರೇಮಿಗಳು ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಈ ಬಾರಿ ಅಧಿಕಾರಿಗಳು ಗಂಭೀರವಾಗಿ ಚಿಂತಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ಪರಿಸರ ಪ್ರೇಮಿಗಳು ಹೆಳುತ್ತಿದ್ದಾರೆ. ಈ ಮಾರ್ಗ ತುಂಬಾ ಅಂಕುಡೊಂಕಾಗಿದ್ದು, ದೊಡ್ಡ ಪ್ರಪಾತಗಳು ಕೂಡ ಇವೆ. ಚಾಲಕ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದಲೂ ಈ ಕ್ರಮವನ್ನು ತೆಗದುಕೊಳ್ಳಲಾಗಿದೆ. ಬಹಳ ದಿನಗಳಿಂದ ಸಂಚಾರ ನಿಯಂತ್ರಣಕ್ಕೆ ಜಿಲ್ಲಾಡಳಿತ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಲೇ ಇದೆ. ಇದೀಗ ಶೀಘ್ರದಲ್ಲಿಯೇ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರುವುದಾಗಿ ಜಿಲ್ಲಾಡಳಿತ ಮಾಹಿತಿ ನೀಡಿದೆ.












Click it and Unblock the Notifications