Kongalli Mallappa: ದೀಪಾವಳಿ ವೇಳೆ ಲಕ್ಷಾಂತರ ಭಕ್ತರನ್ನು ಸೆಳೆಯುವ ಕೊಂಗಳ್ಳಿ ಮಲ್ಲಪ್ಪನ ಬೆಟ್ಟದ ಬಗ್ಗೆ ನಿಮಗೆಷ್ಟು ಗೊತ್ತು?
ಚಾಮರಾಜನಗರ, ನವೆಂಬರ್, 11: ದೀಪಾವಳಿ ಬರುತ್ತಿದ್ದಂತೆಯೇ ಭಕ್ತರು ಚಾಮರಾಜನಗರ ಜಿಲ್ಲೆಯತ್ತ ಮುಖ ಮಾಡುವುದು ಹೆಚ್ಚಾಗಿ ಕಂಡುಬರುತ್ತದೆ. ಹೆಚ್ಚಿನವರು ಮಲೆಮಹದೇಶ್ವರ ಬೆಟ್ಟಕ್ಕೆ ಹರಕೆ ಕಟ್ಟಿಕೊಂಡು ಕಾಲ್ನಡಿಗೆಯಲ್ಲಿ ತೆರಳಿ ಮಾದಪ್ಪನ ಸೇವೆ ಮಾಡಿ ಬಂದರೆ ಮತ್ತೆ ಕೆಲವರು ಗುಂಡ್ಲುಪೇಟೆ ತಾಲೂಕಿನ ಗಡಿಭಾಗದ ತಾಳವಾಡಿ ಸಮೀಪದ ಇತಿಹಾಸ ಪ್ರಸಿದ್ಧ ಶ್ರೀ ಕೊಂಗಳ್ಳಿ ಮಲ್ಲಪ್ಪನ ಬೆಟ್ಟದತ್ತ ಮುಖ ಮಾಡುತ್ತಾರೆ.
ಮಲೆಮಹದೇಶ್ವರ ಬೆಟ್ಟದಲ್ಲಿ ಮಾದಪ್ಪ ನೆಲೆನಿಂತಿದ್ದರೆ, ಕೊಂಗಳ್ಳಿ ಬೆಟ್ಟದಲ್ಲಿ ಮಲ್ಲಪ್ಪ ಅರ್ಥಾತ್ ಮಲ್ಲಿಕಾರ್ಜುನ ಆದಿದೈವನಾಗಿ ಭಕ್ತರನ್ನು ಹರಸುತ್ತಿದ್ದಾನೆ. ಹೀಗಾಗಿ ಪ್ರತಿವರ್ಷವೂ ದೀಪಾವಳಿ ಅಮವಾಸ್ಯೆಯಂದು ಭಕ್ತರು ಕೊಂಗಳ್ಳಿ ಮಲ್ಲಪ್ಪನ ಬೆಟ್ಟಕ್ಕೆ ತೆರಳಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುವಂತೆ ಬೇಡಿಕೊಳ್ಳುತ್ತಾರೆ. ಇಷ್ಟಕ್ಕೂ ಕೊಂಗಳ್ಳಿ ಬೆಟ್ಟದ ವಿಶೇಷತೆಯೇ ವಿಭಿನ್ನ ಮತ್ತು ವಿಶಿಷ್ಟವಾಗಿದ್ದು, ಇಲ್ಲಿಗೆ ತೆರಳುವುದೇ ಒಂದು ಸಾಹಸ.

ಇಷ್ಟಕ್ಕೂ ಕೊಂಗಳ್ಳಿ ಬೆಟ್ಟ ತಮಿಳುನಾಡು ಅರಣ್ಯ ಸಂರಕ್ಷಣಾವಲಯಕ್ಕೆ ಸೇರಿರುವುದರಿಂದ ಅಲ್ಲಿಗೆ ಎಲ್ಲ ಸಮಯದಲ್ಲಿ ತೆರಳಲು ಅವಕಾಶವಿಲ್ಲ. ನಿಗದಿತ ಸಮಯದಲ್ಲಿ ತೆರಳಿ ಪೂಜಾ ಕೈಂಕರ್ಯಗಳನ್ನು ಮುಗಿಸಿಕೊಂಡು ಬರಬೇಕಾಗುತ್ತದೆ. ದೀಪಾವಳಿ ಸಮಯದಲ್ಲಿ ಕೆಲವೊಂದು ನಿಬಂಧನೆಗಳನ್ನು ವಿಧಿಸಲಾಗುತ್ತಿದ್ದು, ಅದರಂತೆ ಭಕ್ತರು ತೆರಳಿ ಪೂಜಾ ಕೈಂಕರ್ಯ ನೆರವೇರಿಸಬೇಕಾಗುತ್ತದೆ. ದೀಪಾವಳಿ ಸಂದರ್ಭ ಇಲ್ಲಿನ ಮಲ್ಲಪ್ಪನಿಗೆ ಹುಲಿವಾಹನ ಸೇವೆ ನಡೆಯುವುದು ವಿಶೇಷವಾಗಿದೆ.
ಗಡಿಭಾಗದಲ್ಲಿರುವ ಸುಂದರ ಕ್ಷೇತ್ರ
ಹಾಗೆನೋಡಿದರೆ ದೈವಕ್ಷೇತ್ರವಾಗಿರುವ ಕೊಂಗಳ್ಳಿ ಬೆಟ್ಟ ನಿಸರ್ಗ ಚೆಲುವನ್ನು ಹೊದ್ದು ಕುಳಿತ ಭವ್ಯ ತಾಣವೂ ಹೌದು. ಇದು ಕೇವಲ ಭಕ್ತರನ್ನು ಮಾತ್ರವಲ್ಲದೆ, ಪ್ರವಾಸಿಗರನ್ನು ಕೂಡ ತನ್ನತ್ತ ಸೆಳೆಯುತ್ತದೆ. ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಹೀಗಾಗಿ ಇಲ್ಲಿನ ಸುಂದರ ನಿಸರ್ಗವನ್ನು ಸವಿದು ಒಂದಷ್ಟು ಸಮಯವನ್ನು ಪ್ರಕೃತಿಯ ನಡುವೆ ಕಳೆಯಲೆಂದೇ ಬಹಳಷ್ಟು ಜನರು ಬರುತ್ತಾರೆ.
ಕೊಂಗಳ್ಳಿ ಬೆಟ್ಟವು ಮೈಸೂರಿನಿಂದ ಸುಮಾರು ನೂರು ಕಿಲೋ ಮೀಟರ್ ಚಾಮರಾಜನಗರದಿಂದ 40 ಕಿ.ಮೀ. ಹಾಗೂ ಗುಂಡ್ಲುಪೇಟೆಯಿಂದ ಸುಮಾರು ಮೂವತ್ತೆರಡು ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿಗೆ ತೆರಳಲು ಚಾಮರಾಜನಗರದಿಂದ ಬಸ್ ಸೌಕರ್ಯವಿದ್ದು, ತಾಳವಾಡಿ ಹಾಗೂ ಎತ್ತಗಟ್ಟಿ ಬೆಟ್ಟದ ಮಾರ್ಗದಲ್ಲಿ ತೆರಳಬಹುದಾಗಿದೆ. ಆದರೆ ಇಲ್ಲಿನ ಮಲ್ಲಿಕಾರ್ಜುನ ದೇಗುಲ ಬೆಟ್ಟದ ಮೇಲಿದ್ದು, ಕಾಡಿನಿಂದ ಸುತ್ತುವರೆದಿರುವುದರಿಂದ, ಅರಣ್ಯ ಸಂರಕ್ಷಣಾವಲಯಕ್ಕೆ ಸೇರಿರುವುದರಿಂದ ನಡೆದೇ ಹೋಗಬೇಕಾಗುತ್ತದೆ.
ನಿಗದಿತ ಸಮಯದಲ್ಲಷ್ಟೆ ಪ್ರವೇಶ
ಈ ತಾಣವು ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಂತಿದ್ದರೂ ತಮಿಳುನಾಡಿಗೆ ಸೇರಿದ್ದು, ತಾಳವಾಡಿ ಪಿರ್ಕಾಕ್ಕೆ ಒಳಪಟ್ಟಿದೆ. ಆದರೆ ಇಲ್ಲಿಗೆ ಕರ್ನಾಟಕದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುವುದು ವಿಶೇಷವಾಗಿದೆ. ಮೊದಲೆಲ್ಲ ದೇಗುಲಕ್ಕೆ ತೆರಳಿದರೆ ಅಲ್ಲಿ ತಂಗಿದ್ದು, ಮಾರನೆಯ ದಿನ ಹಿಂತಿರುಗುವ ಅವಕಾಶವಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಇಲ್ಲಿ ಹುಲಿ, ಕರಡಿ, ಕಾಡಾನೆ ಸೇರಿದಂತೆ ಹಲವು ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ರಾತ್ರಿ ತಂಗುವುದಕ್ಕೆ ಹಾಗೂ ರಾತ್ರಿ 6 ಗಂಟೆಯ ನಂತರದ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಸಾಮಾನ್ಯ ದಿನಗಳಲ್ಲಿ ಇಲ್ಲಿಗೆ ಭಕ್ತರು ಆಗಮಿಸಿ ಪೂಜಾ ಕೈಂಕರ್ಯ, ಸೇವೆಗಳನ್ನು ಮಾಡಿ ಹೋಗುತ್ತಾರೆಯಾದರೂ ದೀಪಾವಳಿ ಸಮಯದಲ್ಲಿ ಹೊರ ಊರುಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹರಕೆ ಸಲ್ಲಿಸಿ, ಹುಲಿವಾಹನ ಸೇವೆ ಮಾಡಿ, ಸಾಮೂಹಿಕ ಬೋಜನ ಮಾಡಿ ಹಿಂತಿರುಗುತ್ತಾರೆ. ಈ ಬಾರಿ ದೀಪಾವಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆಯಿದೆ.
ಕೊಂಗಳ್ಳಿ ಮಲ್ಲಪ್ಪನ ಬೆಟ್ಟದ ಬಗ್ಗೆ ಹೇಳಬೇಕೆಂದರೆ ಇದು ಮಲ್ಲಿಕಾರ್ಜುನ ನೆಲೆನಿಂತ ತಾಣವಾಗಿದೆ. ಆದರೆ ಇಲ್ಲಿಗೆ ಮಲ್ಲಿಕಾರ್ಜುನ ಬಂದಿದ್ದು ಹೇಗೆ ಎಂಬುದನ್ನು ನೋಡಿದ್ದೇ ಆದರೆ ಜನವಲಯದಲ್ಲಿರುವ ಕಥೆಯೊಂದು ತೆರೆದುಕೊಳ್ಳುತ್ತದೆ. ಈ ಸ್ಠಳವು ಅಂದು ದಟ್ಟ ಕಾಡಿನಿಂದ ಕೂಡಿದ ಪ್ರದೇಶವಾಗಿತ್ತು. 8ನೇ ಶತಮಾನದಲ್ಲಿ ಶ್ರೀಶೈಲದಿಂದ ಚನ್ನಮಲ್ಲಿಕಾರ್ಜುನ ಸ್ವಾಮಿ, ಬಸಪ್ಪ ಎತ್ತಗಟ್ಟಿ ಈ ಮಾರ್ಗವಾಗಿ ಬಂದ ಸಂದರ್ಭ ಇಲ್ಲಿನ ಪ್ರಕೃತಿ ಸೌಂದರ್ಯ ಮತ್ತು ಪ್ರಶಾಂತ ವಾತಾವರಣ ಕಂಡು ಮುಂದೆ ತೆರಳದೆ ಇಲ್ಲಿಯೇ ನೆಲೆನಿಂತರಂತೆ. ಹೀಗಾಗಿ ಪವಿತ್ರ ತಾಣವಾಗಿದೆ.
ಇನ್ನು ದೂರದಿಂದ ನಿಂತು ನೋಡಿದರೆ ಮಲ್ಲಿಕಾರ್ಜುನ ಸ್ವಾಮಿ ನೆಲೆನಿಂತ ಬೆಟ್ಟವು ರೈತರು ಒಕ್ಕಣೆ ಸಮಯದಲ್ಲಿ ಬಳಸುವ ಸಾಧನವಾದ ಕೊಂಗದ ಆಕಾರದಲ್ಲಿರುವುದರಿಂದ ಜನವಲಯದಲ್ಲಿ ಕೊಂಗಳ್ಳಿ ಬೆಟ್ಟವಾಗಿಯೇ ಉಳಿದುಕೊಂಡಿದೆ. ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ಪುರುಷರಷ್ಟೇ ಇಲ್ಲಿಗೆ ತೆರಳುತ್ತಾರೆ. ಸುಮಾರು 500 ವರ್ಷಕ್ಕೂ ಹಿಂದೆ ಇಲ್ಲಿಗೆ ಭೇಟಿ ನೀಡಿದ ಗಾಣಗಿತ್ತಿ ಮಹಿಳೆಯೊಬ್ಬರು ಕಲ್ಲಾದಳು ಎಂಬ ದಂತ ಕತೆ ಪ್ರಚಲಿತದಲ್ಲಿದೆ. ಹೀಗಾಗಿ ಮಹಿಳೆಯರು ಕೊಂಗಳ್ಳಿ ಮಲ್ಲಪ್ಪನ ಬೆಟ್ಟಕ್ಕೆ ತೆರಳದೆ ಎತ್ತಗಟ್ಟಿ ಬಸಪ್ಪ ಮತ್ತು ಹನುಮಂತರಾಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿಕೊಂಡು ಬರುತ್ತಾರೆ.
ಮೌಢ್ಯ ಮುರಿದಿದ್ದ ಚಿತ್ರದುರ್ಗದ ಮುರುಘಾಶ್ರೀ
ದೇವಸ್ಥಾನಕ್ಕೆ ಮಹಿಳೆಯರು ತೆರಳಬಾರದು ಎಂಬುದು ಮೌಢ್ಯವಾಗಿದ್ದು, ಅದನ್ನು ಹೋಗಲಾಡಿಸಬೇಕೆಂದು ದಶಕಗಳ ಹಿಂದೆ ಚಿತ್ರದುರ್ಗದ ಮುರುಘರಾಜೇಂದ್ರ ಮಠದ ಶಿವಮೂರ್ತಿ ಸ್ವಾಮಿಗಳು ಚಾಮರಾಜನಗರದಿಂದ ಸುಮಾರು ಇಪ್ಪತ್ತು ಮಂದಿ ಮಹಿಳೆಯರನ್ನು ಬೆಟ್ಟಕ್ಕೆ ಕರೆದೊಯ್ದು ಪೂಜೆ ಸಲ್ಲಿಸಿ ಬಂದಿದ್ದರು. ಆದರೆ ಅಲ್ಲಿಂದ ಇಲ್ಲಿಯವರಗೆ ಯಾರೂ ಅಲ್ಲಿಗೆ ತೆರಳುವ ಪ್ರಯತ್ನ ಮಾಡಿಲ್ಲ. ಅದು ಆಚೆಗಿರಲಿ. ಒಟ್ಟಾರೆಯಾಗಿ ಹೇಳಬೇಕೆಂದರೆ ಕೊಂಗಳ್ಳಿ ಮಲ್ಲಪ್ಪನ ಬೆಟ್ಟವು ಸುಂದರ ಪ್ರಾಕೃತಿಕ ಮತ್ತು ದೈವ ತಾಣವಾಗಿರುವುದರಿಂದ ಎಲ್ಲರನ್ನು ತನ್ನತ್ತ ಸೆಳೆದೇ ಬಿಡುತ್ತದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications