Cauvery: ತಲಕಾವೇರಿಯಲ್ಲಿ ಕಾವೇರಿ ಗುಪ್ತಗಾಮಿನಿಯಾಗಿದ್ದೇಕೆ? ಪುರಾಣದ ಕಥೆ ಹೇಳುವುದೇನು?
ಮಡಿಕೇರಿ, ಅಕ್ಟೋಬರ್ 16: ತಲಕಾವೇರಿಯಲ್ಲಿ ಉಗಮವಾಗಿ ಭಾಗಮಂಡಲ, ಬಲಮುರಿ, ಗುಹ್ಯ, ಕಣಿವೆ ಮೂಲಕ ಕೊಡಗಿನಿಂದ ಹೊರಹರಿದು ಬಳಿಕ ಕರ್ನಾಟಕದಲ್ಲಿ ಸುಮಾರು 381ಕಿ.ಮೀ. ಹರಿದು ಆ ನಂತರ ತಮಿಳುನಾಡು, ಪಾಂಡಿಚೇರಿ ಮೂಲಕ 802 ಕಿ.ಮೀ. ಕ್ರಮಿಸಿ ಕಾವೇರಿ ಪಟ್ಟಣಂನಲ್ಲಿ ಬಂಗಾಳಕೊಲ್ಲಿಯನ್ನು ಸೇರುವುದರೊಂದಿಗೆ ತಾನು ಹರಿದಲೆಲ್ಲಾ ಪವಿತ್ರಕ್ಷೇತ್ರಗಳನ್ನು ಸೃಷ್ಟಿಸಿ, ಲಕ್ಷಾಂತರ ಮಂದಿಯ ಪಾಲಿಗೆ ಅನ್ನದಾತೆಯಾಗಿರುವ ಕಾವೇರಿ ತಾನು ಹುಟ್ಟುವ ತಲಕಾವೇರಿಯಲ್ಲಿ ಮಾತ್ರ ಗುಪ್ತಗಾಮಿನಿಯಾಗಿ ಹರಿಯುತ್ತಿರುವುದು ವಿಶೇಷ.
ಕಾವೇರಿ ತಲಕಾವೇರಿಯಲ್ಲಿ ಉಗಮವಾದರೂ ಅದರ ಹರಿವು ಅಲ್ಲೆಲ್ಲೂ ಕಾಣಿಸುವುದೇ ಇಲ್ಲ. ಕಾರಣ ಆಕೆ ಗುಪ್ತಗಾಮಿನಿಯಾಗಿ ಹರಿಯುತ್ತಾಳೆ. ಹೀಗಾಗಿ ತಲಕಾವೇರಿಯಿಂದ ಒಂದಷ್ಟು ದೂರದಲ್ಲಿ ಕಾವೇರಿ ತನ್ನ ಇರುವನ್ನು ತೋರ್ಪಡಿಸಿ ಬಳಿಕ ಭಾಗಮಂಡಲ ತಲುಪುತ್ತಿದ್ದಂತೆಯೇ ಕನ್ನಿಕೆ, ಸುಜ್ಯೋತಿ ನದಿಗಳ ಜತೆ ಸಂಗಮವಾಗಿ ಬಳಿಕ ವಿಶಾಲವಾಗಿ ಹರಿಯುತ್ತಾಳೆ. ಇದೆಲ್ಲದರ ನಡುವೆ ವರ್ಷಕ್ಕೊಮ್ಮೆ ಸೂರ್ಯುನು ತುಲಾ ರಾಶಿಗೆ ಪ್ರವೇಶಿಸುವ ತುಲಾಸಂಕ್ರಮಣದ ದಿನದಂದು ಕಾವೇರಿ ಮಾತೆ ತಲಕಾವೇರಿಯ ಪವಿತ್ರ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡುವುದು ಹಿಂದಿನಿಂದಲೂ ನಡೆದು ಬಂದಿದೆ.

ಇದೊಂದು ಪವಿತ್ರ ಮತ್ತು ಅದ್ಭುತ ಕ್ಷಣವಾಗಿದ್ದು, ಇದಕ್ಕಾಗಿ ಭಕ್ತರು ಕಾತರದಿಂದ ಕಾಯುವುದು ಮಾಮೂಲಿಯಾಗಿದೆ. ಅಷ್ಟೇ ಅಲ್ಲದೆ ಆ ದಿನ ಕಾವೇರಿ ಕೊಳದಲ್ಲಿ ಸ್ನಾನ ಮಾಡಿ ತೀರ್ಥವನ್ನು ಪ್ರೋಕ್ಷಣೆ ಮಾಡಿಸಿಕೊಂಡರೆ ಜೀವನ ಪಾವನವೆಂದೂ, ಅದರಲ್ಲೂ ದಂಪತಿಗಳು ತೀರ್ಥಸ್ನಾನ ಮಾಡಿದರೆ ದಾಂಪತ್ಯ ಸುಖಮಯವಾಗಿರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಈ ಬಾರಿ ಕಾವೇರಿಯು ತಲಕಾವೇರಿಯಲ್ಲಿರುವ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಅ.17ರಂದು ಬೆಳಿಗ್ಗೆ 7.40ನಿಮಿಷಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ದರ್ಶನ ನೀಡಲಿದ್ದಾಳೆ.
ಇನ್ನು ಕಾವೇರಿ ಗುಪ್ತಗಾಮಿನಿಯಾಗಿ ಏಕೆ ಹರಿದಳು ಎಂಬುದರ ಬಗ್ಗೆ ನಮಗೆ ತಿಳಿಯಬೇಕಾದರೆ ಪುರಾಣದ ಕಥೆಯನ್ನು ತಿರುವಿ ಹಾಕಬೇಕಾಗುತ್ತದೆ. ಅದರಂತೆ ಹೇಳುವುದಾದರೆ ತಲಕಾವೇರಿ ಸಮೀಪದ ಬ್ರಹ್ಮಗಿರಿ ಬೆಟ್ಟದಲ್ಲಿ ಕವೇರನೆಂಬ ಮುನಿ ವಾಸವಾಗಿದ್ದನಂತೆ. ಆತನಿಗೆ ತನಗೊಬ್ಬಳು ಪುತ್ರಿ ಬೇಕೆಂಬ ಅಭಿಲಾಷೆವುಂಟಾಗಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡತೊಡಗಿದನಂತೆ. ಈತನ ತಪಸ್ಸಿಗೆ ಮೆಚ್ಚಿದ ಬ್ರಹ್ಮ ತನ್ನ ಮಾನಸ ಪುತ್ರಿ ಲೋಪಾಮುದ್ರೆಯನ್ನು ದತ್ತು ಮಗಳಾಗಿ ನೀಡಿದನು.

ಲೋಪಾಮುದ್ರೆ ಕಾವೇರಿಯಾಗಿದ್ದು ಹೇಗೆ..?
ಲೋಪಾಮುದ್ರೆ ಕವೇರ ಮುನಿಯ ಆಶ್ರಮದಲ್ಲಿ ಬೆಳೆಯತೊಡಗಿದಳು. ಹೀಗೆ ಕವೇರ ಮುನಿಯ ಆಶ್ರಮದಲ್ಲಿ ಬೆಳೆದಿದ್ದರಿಂದ ಆಕೆ ಕಾವೇರಿಯಾದಳು. ಹೀಗಿರಬೇಕಾದರೆ ಒಂದು ದಿನ ಅಗಸ್ತ್ಯ ಮುನಿಗಳು ಕವೇರನ ಆಶ್ರಮಕ್ಕೆ ಬರುತ್ತಾರೆ. ಅಲ್ಲಿ ಕಾವೇರಿಯನ್ನು ಕಂಡು ಮನಸೋತು ಆಕೆಯನ್ನು ವಿವಾಹವಾಗುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ಕವೇರ ಮುನಿಗಳು ಒಪ್ಪಿ ತನ್ನ ಮಾನಸ ಪುತ್ರಿ ಕಾವೇರಿಯನ್ನು ವಿವಾಹ ಮಾಡಿಕೊಡಲು ಮುಂದಾಗುತ್ತಾರೆ.
ಆದರೆ ವಿವಾಹವಾಗುವ ಬಯಕೆಯಿಲ್ಲದ ಕಾವೇರಿ ನನಗೆ ಜನಕಲ್ಯಾಣ ಮಾಡುವ ಅಭಿಲಾಷೆಯಿದ್ದು, ನೀವು ಸದಾ ನನ್ನೊಂದಿಗೆ ಇರಬೇಕು. ನನ್ನನ್ನು ಬಿಟ್ಟು ನೀವು ಎಲ್ಲಿಗೂ ಹೋಗಬಾರದು ಹಾಗೊಂದು ವೇಳೆ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದದ್ದೇ ಆದರೆ ನಾನು ನದಿಯಾಗಿ ಹರಿಯುವುದಾಗಿ ಹೇಳುತ್ತಾಳೆ. ಕಾವೇರಿಯ ಷರತ್ತಿಗೆ ಒಪ್ಪಿದ ಅಗಸ್ತ್ಯ ಮುನಿಗಳು ಆಕೆಯನ್ನು ವಿವಾಹವಾಗಿ ತನ್ನ ಆಶ್ರಮಕ್ಕೆ ಕರೆದೊಯ್ಯುತ್ತಾರೆ. ಕಾವೇರಿಗೆ ಕೊಟ್ಟ ಮಾತಿನಂತೆ ಅಗಸ್ತ್ಯ ಮುನಿಗಳು ತಮ್ಮ ಆಶ್ರಮದಲ್ಲಿ ಕಾವೇರಿಯೊಂದಿಗೆ ಆನಂದದಿಂದ ದಿನ ಕಳೆಯುತ್ತಿರುತ್ತಾರೆ.
ಗುಪ್ತಗಾಮಿನಿಯಾಗಿ ಹರಿದ ಕಾವೇರಿ
ಒಂದು ದಿನ ಅಗಸ್ತ್ಯ ಮುನಿಗಳು ತಾವಿದ್ದ ಆಶ್ರಮದಿಂದ ಬೆಟ್ಟದಾಚೆಗಿರುವ ಕನ್ನಿಕೆ ನದಿಯಲ್ಲಿ ಸ್ನಾನ ಮಾಡಲೆಂದು ಹೊರಡುತ್ತಾರೆ. ಕಾವೇರಿ ನಿದ್ದೆಯಲ್ಲಿರುವುದರಿಂದ ಅವಳು ಎಚ್ಚರವಾಗುವ ವೇಳೆಗೆ ಹಿಂತಿರುಗಿ ಬರಬಹುದೆಂದು ಕೊಳ್ಳುತ್ತಾರೆ. ಆದರೆ ಅಗಸ್ತ್ಯ ಮುನಿಗಳು ಅತ್ತ ಸ್ನಾನಕ್ಕೆ ತೆರಳುತ್ತಿದ್ದಂತೆಯೇ ಇತ್ತ ನಿದ್ದೆಯಲ್ಲಿದ್ದ ಕಾವೇರಿಗೆ ಎಚ್ಚರವಾಗುತ್ತದೆ. ಸನಿಹದಲ್ಲಿ ಅಗಸ್ತ್ಯಮುನಿಗಳು ಇಲ್ಲದನ್ನು ಕಂಡು ಆಕೆಗೆ ಪತಿಯ ಮೇಲೆ ಕೋಪಬರುತ್ತದೆ.
ಷರತ್ತು ಮೀರಿದ ಪತಿಯಿಂದ ದೂರವಾಗಿ ನದಿಯಾಗಿ ಹರಿದು ಲೋಕಕಲ್ಯಾಣ ಮಾಡಲು ಇದು ಸೂಕ್ತ ಸಮಯವೆಂದುಕೊಂಡು ಅಲ್ಲೇ ಇದ್ದ ಕೊಳಕ್ಕೆ ಇಳಿದು ಅಗಸ್ತ್ಯ ಮುನಿಗಳಿಗೆ ತಿಳಿಯದಂತೆ ಅಲ್ಲಿಂದ ಗುಪ್ತಗಾಮಿನಿಯಾಗಿ ಹರಿದು ಭಾಗಮಂಡಲವನ್ನು ಸೇರಿ ಅಲ್ಲಿ ಕನ್ನಿಕೆ, ಸುಜ್ಯೋತಿ ನದಿಗಳೊಂದಿಗೆ ಸಂಗಮವಾಗಿ ಮುಂದೆ ಹರಿದು ಹೋದಳೆಂಬುದು ಕಥೆಯಾಗಿದೆ.
ತಲಕಾವೇರಿಯಲ್ಲಿರುವ ವಿಶೇಷತೆಗಳೇನು?
ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ಬ್ರಹ್ಮಕುಂಡಿಕೆಯ ಪಕ್ಕದಲ್ಲಿಯೇ ಸ್ನಾನಕೊಳವಿದೆ. ಇಲ್ಲಿ ಗಣಪತಿ, ಅಗಸ್ತ್ಯೇಶ್ವರ ದೇವಾಲಯ ಹಾಗೂ ಜ್ಯೋತಿ ಮಂಟಪವಿದೆ. ಅಗಸ್ತ್ಯೇಶ್ವರ ದೇವಾಲಯದ ಎಡಭಾಗದಲ್ಲಿರುವ ಬ್ರಹ್ಮಗಿರಿ ಬೆಟ್ಟವನ್ನೇರಿದರೆ ಅಲ್ಲಿ ಹಿಂದೆ ಸಪ್ತಮಹರ್ಷಿಗಳು ಯಜ್ಞ ಮಾಡಿದ್ದರು ಎಂದು ಹೇಳಲಾಗುವ ಯಜ್ಞ ಕುಂಡಗಳು ಕಂಡು ಬರುತ್ತವೆ.
ಇಲ್ಲಿಂದ ನಿಂತು ನೋಡಿದರೆ ಕಂಡು ಬರುವ ನಿಸರ್ಗದ ಸುಂದರ ದೃಶ್ಯ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಕಾವೇರಿಯ ಉಗಮಸ್ಥಾನ ತಲಕಾವೇರಿಯು ಮಡಿಕೇರಿಯಿಂದ ನಲವತ್ತೆರಡು ಕಿ.ಮೀ. ದೂರದ ಬ್ರಹ್ಮಗಿರಿಯ ಬೆಟ್ಟಶ್ರೇಣಿಯಲ್ಲಿದ್ದು, ಸಮುದ್ರಮಟ್ಟದಿಂದ ಸುಮಾರು ಐದು ಸಾವಿರ ಅಡಿ ಎತ್ತರದಲ್ಲಿದೆ.












Click it and Unblock the Notifications