ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ ಸ್ವರ್ಗದಂತಹ ಅನುಭವ ನೀಡುವ ಜಲಪಾತ-ತಲುಪುವುದೇಗೆ?
ಇದೀಗ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬರೆಯುತ್ತಿದ್ದಾನೆ. ಅದರಲ್ಲೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆ ಜಲಪಾತಗಳನ್ನು ಧುಮ್ಮಿಕ್ಕುತ್ತಿವೆ. ಇದರ ನಡುವೆಯೇ ಜಿಲ್ಲೆಯಲ್ಲೊಂದು ಸುಂದರ ಜಲಪಾತ ಮೈದುಂಬಿ ಹರಿಯುತ್ತಿದ್ದು, ಈ ದೃಶ್ವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಎಲ್ಲೆಲ್ಲಿಂದಲೋ ಆಗಮಿಸುತ್ತಿದ್ದಾರೆ. ಹಾಗಾದರೆ ಇಷ್ಟರ ಮಟ್ಟಿಗೆ ಪ್ರವಾಸಿಗರನ್ನು ಆಯಸ್ಕಾಂತದಂತೆ ಸೆಳೆಯುವ ಆ ತಾಣ ಯಾವುದು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ
ಮಳೆಗಾಲದಲ್ಲಿ ಕಾಫಿನಾಡಿನ ಅಂದವನ್ನೇ ಕಣ್ತುಂಬಿಕೊಳ್ಳಲು ಬೇರೆ ಬೇರೆ ರಾಜ್ಯಗಳಿಂದಲೂ ಪ್ರವಾಸಿಗರು ಹರಿದುಬರುತ್ತಾರೆ. ಇಲ್ಲಿನ ಅಚ್ಚಹಸಿನಿಂದ ಕೂಡಿದ ಬೆಟ್ಟ-ಗುಡ್ಡಗಳು, ಧುಮ್ಮಿಕ್ಕುವ ಜಲಪಾತಗಳ ಸೊಬಗು ನೋಡಲು ಪ್ರವಾಸಿಗರ ದಂಡೇ ಜಿಲ್ಲೆಗೆ ಹರಿದುಬರುತ್ತದೆ. ಹಾಗೆಯೇ ಇದೀಗ ಭಾರೀ ಮಳೆ ಹಿನ್ನೆಲೆ ಜಿಲ್ಲೆಯಲ್ಲಿನ ಜಲಪಾತಗಳಿಗೆ ಜೀವಕಳೆ ಬಂದಿದ್ದು, ಇವುಗಳ ಧುಮ್ಮಿಕ್ಕುವ ದೃಶ್ಯವನ್ನು ನೋಡುವುದೇ ಏನೋ ಒಂಥರಾ ರೋಮಾಂಚನ.

ಕುದುರೆಮುಖ ರಾಷ್ಟ್ರೀಯ ಉದ್ಯಾಯನವನದ ತಪ್ಪಲಿನ ಅಬ್ಬುಗುಡಿಗೆ ಜಲಪಾತ ಭಾರೀ ಮಳೆಯಿಂದ ಧುಮ್ಮಿಕ್ಕುತ್ತಿದ್ದು, ಇದರ ಸೌಂದರ್ಯವನ್ನು ಸವಿಯಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಇನ್ನು ಸರ್ಕಾರ ಈ ಜಲಪಾತಕ್ಕೆ ಮೂಲಭೂತ ಸೌಕರ್ಯ ನೀಡಿದರೆ, ಕಾಡಂಚಿನ ಜಲಪಾತ ಪ್ರವಾಸಿಗರ ಹಾಟ್ ಸ್ಪಾಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಮಾರ್ಗದ ವಿವರ: ಕಳಸದ ರಾಜ್ಯ ಹೆದ್ದಾರಿಯಿಂದ ನಾಲ್ಕು ಕಿಲೋ ಮೀಟರ್ ಒಳಗಡೆ ಹೋದರೆ, ಆ ಕಾಡಿನ ಮಧ್ಯೆ 1 ಕಿಲೋ ಮೀಟರ್ ದೂರದಲ್ಲೇ ನೀರನ ಇಂಪಾದ ಸಪ್ಪಳ ಕಿವಿಗೆ ಬೀಳುತ್ತದೆ. ಹಾಗೆ ಸ್ವಲ್ಪ ಮುಂದೆ ಹೋದರೆ, ಈ ಅಬ್ಬಗುಡಿಗೆ ಪಾಲ್ಸ್ ಸಿಗುತ್ತದೆ. ಪ್ರವಾಸಿಗರು ದಾರಿ ತಪ್ಪಬಾರದು ಎನ್ನುವ ದೃಷ್ಟಿಯಿಂದ ಕಾಡಿನ ಮಾರ್ಗದಲ್ಲಿ ಅಲ್ಲಲ್ಲೇ ನಾಮಫಲಕಗಳನ್ನು ಅಳವಡಿಕೆ ಮಾಡಲಾಗಿದೆ. ಪ್ರವಾಸಿಗರು ಈ ಸೂಚನಾಫಲಕಗಳನ್ನು ನೋಡಿ ಜಲಪಾತವನ್ನು ತಲುಪಬಹುದಾಗಿದೆ.
ಸ್ವರ್ಗದಂತಹ ಅನುಭವ: ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಅಬ್ಬುಗುಡಿಗೆ ಜಲಪಾತ ಇದೀಗ ಮಳೆಯಿಂದ ಮೈದುಂಬಿ ಹರಿಯುತ್ತಿದೆ. 20-30 ಅಡಿ ಎತ್ತರದಿಂದ ನೀಡು ಧುಮ್ಮಿಕ್ಕುತ್ತಿದೆ. ಈ ಸ್ವರ್ಗದಂತಹ ದೃಶ್ಯವನ್ನು ಸವಿಯಲು ಇದೇ ಉತ್ತಮ ಸಮಯವಾಗಿದೆ.
ಮೂಲಭೂತ ಸೌಕರ್ಯಗಳ ಕೊರತೆ: ಅಬ್ಬುಗುಡಿ ಜಲಪಾತವಂತೂ ಮಳೆಗಾಲದಲ್ಲಿ ಪ್ರವಾಸಿಗರ ಪಾಲಿನ ಸ್ವರ್ಗವೇ ಆಗಿರುತ್ತದೆ. ಕಾಫಿನಾಡಲ್ಲಿರುವ ಪಾಲ್ಸ್ ಗಳಲ್ಲಿ ಅತೀ ಹೆಚ್ಚು ಪ್ರವಾಸಿಗರ ನೆಚ್ಚಿನ ಹಾಟ್‌ಸ್ಪಾಟ್‌ಗಳಲ್ಲಿ ಇದು ಒಂದಾಗಿದೆ. ಮಕ್ಕಳಿಗೆ ಆಟ ಆಡಿಸುವುದಕ್ಕೆ ಇದು ಮಾಡಿಸಿದ ತಾಣವಾಗಿದೆ. ಇನ್ನು ಮೂಲಭೂತ ಸೌಕರ್ಯ ದೊರೆತರೆ ಈ ಸುಂದರ ಪ್ರವಾಸಿ ತಾಣ ಪ್ರವಾಸಿಗರ ಹಾಟ್‌ಸ್ಪಾಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಅಂತಿದ್ದಾರೆ ಇಲ್ಲಿಗೆ ಭೇಟಿ ನೀಡಿದವರು.
ಒಟ್ಟಿನಲ್ಲಿ ಇದೀಗ ಮಳೆಗಾಲ ಆರಂಭವಾಗಿರುವ ಹಿನ್ನೆಲೆ ಈ ಜಲಪಾತಕ್ಕೆ ಮತ್ತಷ್ಟು ಸೊಬಗು ಹೆಚ್ಚಾಗಲಿದ್ದು, ಇಲ್ಲಿನ ಸ್ವರ್ಗದಂತಹ ಪ್ರಕೃತಿ ಸೌಂದರ್ಯ ಸವಿಯಲು ಇದೇ ಉತ್ತಮ ಸಮಯವಾಗಿದೆ. ಹಾಗಾದರೆ ನೀವು ಕಾಫಿನಾಡಿಗೆ ಹೋದರೆ ಈ ಸುಂದರ ತಾಣಕ್ಕೆ ಭೇಟಿ ಮಾಡುವುದನ್ನು ಮಿಸ್ ಮಾಡಿಕೊಳ್ಳಲೇ ಬೇಡಿ.












Click it and Unblock the Notifications