ಮಧ್ಯಪ್ರದೇಶದ ಯುವತಿಯಿಂದ ಸೈಕಲ್‌ನಲ್ಲಿಯೇ ದೇಶ ಪರ್ಯಟನೆ, ಕಾರವಾರದ ಮಹಿಳೆಯರಿಗೆ ಆತ್ಮವಿಶ್ವಾಸದ ಪಾಠ
ಕಾರವಾರ, ಡಿಸೆಂಬರ್, 12: ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆದಾಗ ಭಾರತದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲ ಎಂಬ ಆರೋಪಗಳು ಕೇಳಿಬರುತ್ತಲೇ ಇರುತ್ತದೆ. ಇಂತಹ ಹೇಳಿಕೆಗಳಿಂದ ಅದೇಷ್ಟೋ ಸ್ವಾವಲಂಬಿ ಮಹಿಳೆಯರ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುತ್ತಲೇ ಇದೆ. ಆದರೆ ಇಂತಹ ಆರೋಪಗಳನ್ನು ಅಲ್ಲಗಳೆದು ಭಾರತದಲ್ಲಿಯೂ ಹೆಣ್ಣುಮಕ್ಕಳು ಸುರಕ್ಷಿತವಾಗಿದ್ದಾರೆ ಎಂದೂ ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಯುವತಿಯೋರ್ವಳು ಏಕಾಂಗಿಯಾಗಿ ಸೈಕಲ್ ಮೂಲಕ ದೇಶ ಸುತ್ತುತ್ತಿದ್ದು, ಎಲ್ಲರ ಗಮನ ಸೆಳೆದಿದ್ದಾಳೆ.
ಮಧ್ಯಪ್ರದೇಶದ ರಾಜಘಡ ಜಿಲ್ಲೆಯ ಆಶಾ ಮಾಲ್ವಿ ಎನ್ನುವ ಯುವತಿ ನವೆಂಬರ್ 1ರಂದು ಸೈಕಲ್ ಯಾತ್ರೆಯೆ ಮೂಲಕ ದೇಶ ಸುತ್ತಲೂ ಹೊರಟಿದ್ದಳು. ಮಧ್ಯಪ್ರದೇಶದ ಭೋಪಾಲ್‌ನಿಂದ ಸೈಕಲ್ ಯಾತ್ರೆ ಆರಂಭಿಸಿರುವ ಅವರು ಬರೊಬ್ಬರಿ 20 ಸಾವಿರ ಕಿಲೋ ಮೀಟರ್ ದೂರ ಕ್ರಮಿಸುವ ಗುರಿ ಹೊಂದಿದ್ದಾರೆ. ಯಾತ್ರೆ ಮಾಡುವಲ್ಲಿ ಮಹಿಳೆಯರು ಏನು ಕಮ್ಮಿಯಿಲ್ಲ ಎನ್ನುವ ಸಂದೇಶವನ್ನು ವಿಶ್ವಕ್ಕೆ ಸಾರುವ ನಿಟ್ಟಿನಲ್ಲಿ ಭಾರತವನ್ನು ಸೈಕಲ್ ಯಾತ್ರೆಯ ಮೂಲಕ ಸುತ್ತಲು ಹೊರಟಿದ್ದಾಳೆ.
ಈಗಾಗಲೇ ಸುಮಾರು 3,700 ಕಿಲೋ ಮೀಟರ್ ಸೈಕಲ್ ತುಳಿದು, ಗೋವಾ ಮಾರ್ಗವಾಗಿ ಕರ್ನಾಟಕ ಪ್ರವೇಶಿಸಿದ್ದಾರೆ. ಕಾರವಾರವನ್ನು ತಲುಪಿರುವ ಅವರು ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿಂದಾಗಿ ಮಹಿಳೆಯರಿಗೆ ದೇಶದಲ್ಲಿ ಸುರಕ್ಷತೆಯಿಲ್ಲ ಎನ್ನುವ ಅಭಿಪ್ರಾಯ ಮೂಡಿದೆ. ಈ ನಿಟ್ಟಿನಲ್ಲಿ ಏಕಾಂಗಿಯಾಗಿ ಸೈಕಲ್ ಯಾತ್ರೆಯನ್ನು ಹಮ್ಮಿಕೊಳ್ಳುವ ಮೂಲಕ ಭಾರತದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎನ್ನುವ ಸಂದೇಶವನ್ನು ವಿಶ್ವಕ್ಕೆ ಸಾರಬೇಕು ಎನ್ನುವ ಗುರಿ ಹೊಂದಿದ್ದೇನೆ ಎಂದು ಯುವತಿ ಆಶಾ ತಿಳಿಸಿದ್ದಾರೆ.

ಸೈಕಲ್ ಯಾತ್ರೆಯ ಬಗ್ಗೆ ಯುವತಿ ಹೇಳಿದ್ದೇನು?
ಇನ್ನು ಆಶಾ ಈಗಾಗಲೇ ಮಧ್ಯಪ್ರದೇಶ, ಗುಜರಾತ್, ದಾದರ್ ಮತ್ತು ನಗರಹವೇಲಿ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ತಮ್ಮ ಸೈಕಲ್ ಯಾತ್ರೆಯನ್ನು ಪೂರ್ಣಗೊಳಿಸಿದ್ದು, ಇದೀಗ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಪ್ರತಿನಿತ್ಯ ಒಂದು ಸ್ಥಳಕ್ಕೆ ತೆರಳಬೇಕು ಎನ್ನುವ ಗುರಿಯನ್ನು ಹಾಕಿಕೊಂಡು ತೆರಳುವ ಆಶಾ ಸುಮಾರು 70ರಿಂದ 150 ಕಿಲೋ ಮೀಟರ್‌ವರೆಗೆ ಪ್ರತಿನಿತ್ಯ ಸೈಕಲ್ ತುಳಿಯುತ್ತಾರೆ. ಯಾತ್ರಿ ನಿವಾಸಗಳಲ್ಲಿ ವಸತಿ ಮಾಡಿ, ಬಳಿಕ ತಮ್ಮ ಪ್ರಯಾಣವನ್ನು ಮುಂದುವರೆಸುತ್ತಾರೆ.

ದಾರಿಯ ಮಧ್ಯದಲ್ಲೇ ಊಟ, ಉಪಚಾರ
ಅಲ್ಲದೇ ಊಟ, ತಿಂಡಿಯ ವೆಚ್ಛವನ್ನು ತಾವೇ ನೋಡಿಕೊಳ್ಳುತ್ತಿದ್ದು, ಇವರ ಯಾತ್ರೆಯನ್ನು ನೋಡಿ ಸಾಕಷ್ಟು ಜನ ಧನ ಸಹಾಯವನ್ನು ಸಹ ಮಾಡಿದ್ದಾರೆ. ತಾವು ತೆರಳುವ ಪ್ರದೇಶಗಳಲ್ಲಿ ಶಾಲೆ, ಕಾಲೇಜುಗಳಿಗೆ ಭೇಟಿ ನೀಡುವ ಆಶಾ ಮಾಲ್ವಿ ಭಾರತದಲ್ಲಿ ಮಹಿಳೆಯರಿಗೆ ಸುರಕ್ಷತೆಯಿಲ್ಲ ಎನ್ನುವುದು ಬೇರೆ ದೇಶಗಳ ಅಭಿಪ್ರಾಯವಾಗಿದೆ. ಆದರೆ ದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದು, ಮಹಿಳೆಯರ ರಕ್ಷಣೆಯ ಕಾಳಜಿಯನ್ನು ಭಾರತ ಹೊಂದಿದೆ ಎನ್ನುವ ಜಾಗೃತಿಯನ್ನ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಮಹಿಳೆಯರ ಸುರಕ್ಷತೆಯ ಬಗ್ಗೆ ಜಾಗೃತಿ
ಜೊತೆಗೆ ಮಾರ್ಗದ ಮಧ್ಯೆ ಸಿಗುವ ಜನಸಾಮಾನ್ಯರಿಗೂ ಮಹಿಳೆಯರ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುತ್ತಾ ಸೈಕಲ್ ಯಾತ್ರೆಯನ್ನು ಮುಂದುವರೆಸುತ್ತಿದ್ದಾರೆ. ಅದರಂತೆಯೇ ಇದೀಗ ಕಾರವಾರಕ್ಕೆ ಆಗಮಿಸಿದ ಅವರನ್ನು, ಇಲ್ಲಿನ ತಹಶೀಲ್ದಾರ್ ನಿಶ್ಚಲ ನರೋನಾ ಭೇಟಿಯಾಗಿ ಅಭಿನಂದಿಸಿದರು. ಯುವತಿಯೋರ್ವಳು ಏಕಾಂಗಿಯಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಾತ್ರೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಅವರ ಯಾತ್ರೆ ಯಶಸ್ವಿಯಾಗಲೀ ಎಂದು ಶುಭಹಾರೈಸಿದರು.

ರಾಷ್ಟ್ರಪತಿಯನ್ನು ಭೇಟಿ ಮಾಡುವ ಗುರಿ
ಬೇರೆ ಬೇರೆ ರಾಜ್ಯಗಳಿಗೆ ತೆರಳಿದ ಸಂದರ್ಭದಲ್ಲಿ ಅಲ್ಲಿನ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಸಹ ಇವರು ಭೇಟಿ ಆಗುವುದುದಾಗಿ ತಿಳಿಸಿದ್ದಾರೆ. ಅವರಿಗೆ ತನ್ನ ಉದ್ದೇಶವನ್ನು ತಿಳಿಸಿ, ನಂತರ ಅಧಿಕಾರಿಗಳ ಅಭಿಪ್ರಾಯವನ್ನು ಪಡೆದುಕೊಂಡು ಮುಂದೆ ಸಾಗುತ್ತಿದ್ದಾರೆ. ಹಾಗೆಯೇ ತನ್ನ ಯಾತ್ರೆಯನ್ನು ಕೊನೆಗೆ ದೆಹಲಿಯಲ್ಲಿ ಪೂರ್ಣಗೊಳಿಸುವುದಾಗಿ ಮಾಹಿತಿ ನೀಡಿದ್ದಾರೆ. ಯಾತ್ರೆ ಪೂರ್ಣಗೊಳ್ಳುವ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮೊಂದಿಗೆ ಭಾಗಿಯಾಗುವಂತೆ ಆಶಾ ಮಾಲ್ವಿ ಮನವಿ ಮಾಡಿದ್ದಾರೆ. ಸದ್ಯ ಕಾರವಾರದಿಂದ ಹೊರಟಿರುವ ಅವರು ಅಂಕೋಲಾ, ಮುರುಡೇಶ್ವರ ಮಾರ್ಗವಾಗಿ ಕರಾವಳಿಯಲ್ಲಿ ಸಂಚರಿಸಲಿದ್ದು, ಉಡುಪಿ, ಮಂಗಳೂರು ಮೂಲಕ ಕೇರಳಕ್ಕೆ ತೆರಳುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.












Click it and Unblock the Notifications