ಕರ್ನಾಟಕದಲ್ಲಿ ಕೇಬಲ್ ಕಾರ್ ಯೋಜನೆ: ಯಾವ ಪ್ರವಾಸಿ ತಾಣಗಳಲ್ಲಿ ಜಾರಿ?
ಬೆಂಗಳೂರು, ಅಕ್ಟೋಬರ್ 30: ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ರೋಪ್ ವೇ/ ಕೇಬಲ್ ಕಾರ್ ಯೋಜನೆಯನ್ನು ಪ್ರಮುಖ ಪ್ರವಾಸಿತಾಣಗಳಲ್ಲಿ ಆರಂಭಿಸಲಿದೆ. ಇದಕ್ಕಾಗಿ ಸರ್ಕಾರ 'ಕರ್ನಾಟಕ ಪ್ರವಾಸೋದ್ಯಮ ರೋಪ್ ವೇ ಮಸೂದೆ-2024' ಜಾರಿಗೊಳಿಸಲಿದೆ. ದಕ್ಷಿಣ ಭಾರತದಲ್ಲಿಯೇ ಇಂತಹ ಮಸೂದೆಯನ್ನು ಜಾರಿಗೊಳಿಸಲಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ.
ರಾಜ್ಯದ ಕೆಲವು ಪ್ರಮುಖ ಪ್ರವಾಸಿ ತಾಣಗಳಲ್ಲಿ ಕೇಬಲ್ ಕಾರ್ ಯೋಜನೆಯನ್ನು ಜಾರಿಗೊಳಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಟೆಂಡರ್ ಪಡೆಯುವ ಕಂಪನಿ ಈ ಯೋಜನೆಯನ್ನು ಕಾರ್ಯಗತಗೊಳಿಸಿ, ನಿರ್ವಹಣೆಯನ್ನು ಮಾಡಬೇಕಿದೆ. ಆದ್ದರಿಂದ ಸರ್ಕಾರ ಈ ಕುರಿತು ಕಾನೂನು ಜಾರಿಗೊಳಿಸಲು ಮುಂದಾಗಿದೆ.

ಎಲ್ಲೆಲ್ಲಿ ಜಾರಿಗೆ ಬರಲಿದೆ ಯೋಜನೆ: ಕೇಬಲ್ ಕಾರ್ ಯೋಜನೆಯನ್ನು ಕರ್ನಾಟಕದಲ್ಲಿ ನಂದಿ ಹಿಲ್ಸ್, ಅಂಜನಾದ್ರಿ ಹಿಲ್ಸ್, ಮಧುಗಿರಿ ಕೋಟೆ, ಕೊಡಗು ಮಲ್ಲಳ್ಳಿ ಫಾಲ್ಸ್, ಸವದತ್ತಿ ಯಲ್ಲಮ್ಮ ಗುಡ್ಡ ಬೆಳಗಾವಿ, ಬಳ್ಳಾರಿ ಕೋಟೆ, ಯಾದಗಿರಿ ಕೋಟೆ, ನೃಪತುಂಗ ಗುಡ್ಡ ಹುಬ್ಬಳ್ಳಿ, ಹಾವೇರಿಯ ದೇವದುರ್ಗ ಬೆಟ್ಟ, ಗದಗ ಕಾಲಕೇಶ್ವರ ದೇವಾಲಯ, ಮಹಾಲಿಂಗೇಶ್ವರ ದೇವಾಲಯ ಯಾದಗಿರಿಯಲ್ಲಿ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.
ಈ ಮಾದರಿಯ ಯೋಜನೆ ಜಾರಿಗೊಳಿಸಲು ಈಗಾಗಲೇ ದೇಶದ ಹಲವು ರಾಜ್ಯಗಳು ಕಾನೂನನ್ನು ಒಳಗೊಂಡಿವೆ. ಆದ್ದರಿಂದ ಕರ್ನಾಟಕ ಸರ್ಕಾರ ಈ ರೀತಿಯ ಯೋಜನೆಗಳಿಗೆ ಒಪ್ಪಿಗೆ ನೀಡುವ ಸಂಬಂಧ ಕಾನೂನನ್ನು ಜಾರಿಗೆ ತರಲಿದೆ. ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸಲು ಇದು ಅನುಕೂಲವಾಗಲಿದೆ.
ರೋಪ್ ವೇ/ ಕೇಬಲ್ ಕಾರ್ ಯೋಜನೆಗಳು ಪರಿಸರಕ್ಕೆ ಕಡಿಮೆ ಹಾನಿ ಮಾಡುತ್ತವೆ. ಈ ಮಾದರಿ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಈಗಾಗಲೇ ಬೇರೆ ರಾಜ್ಯಗಳಲ್ಲಿ ಈ ಮಾದರಿ ಯೋಜನೆ ಯಶಸ್ವಿಯಾಗಿದೆ. ಆದ್ದರಿಂದ ಕರ್ನಾಟಕ ಸರ್ಕಾರವೂ ಯೋಜನೆ ಜಾರಿಗೊಳಿಸಲು ಮುಂದಾಗಿದೆ.
ಕರ್ನಾಟಕ ಸರ್ಕಾರ ಕೆಲವು ದಿನಗಳ ಹಿಂದೆ ರೋಪ್ ವೇ/ ಕೇಬಲ್ ಕಾರ್ ಯೋಜನೆ ಜಾರಿಗಾಗಿ ಆಸಕ್ತಿಯ ಅಭಿವ್ಯಕ್ತಿ (ಇಒಐ) ಟೆಂಡರ್ ಅಧಿಸೂಚನೆ ಜಾರಿಗೊಳಿಸಿದೆ. ರಾಜ್ಯದ ಹಲವು ಸ್ಥಳಗಳಲ್ಲಿ ಯೋಜನೆ ಜಾರಿಗಾಗಿ ಕಂಪನಿಗಳನ್ನು ಆಹ್ವಾನಿಸಲು ಇದನ್ನು ಅಧಿಸೂಚಿಸಲಾಗಿದೆ. ಕಾರ್ಯ ಸಾಧ್ಯತಾ ವರದಿಯ ಬಳಿಕ ಮೂರು ತಿಂಗಳಿನಲ್ಲಿ ಸರ್ಕಾರ ಯಾವ ಯಾವ ಪ್ರದೇಶದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಅಂತಿಮಗೊಳಿಸಲಿದೆ.
ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ ಬಳಿಕ ಮಸೂದೆ ಜಾರಿಗೊಳಿಸುವ ಕುರಿತು ಅಂತಿಮ ಹೆಜ್ಜೆ ಇಡಲಿದೆ. ಮೊದಲು ಸ್ಥಳ ಮತ್ತು ಕಂಪನಿಗಳನ್ನು ತೀರ್ಮಾನ ಮಾಡಿಕೊಂಡು ಮಸೂದೆ ಜಾರಿಗೊಳಿಸುವ ಕುರಿತು ಸರ್ಕಾರ ತೀರ್ಮಾನ ಮಾಡಲಿದೆ.
ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ ಕರ್ನಾಟಕದ ಮೊದಲ ರೋಪ್ ವೇ ಯೋಜನೆ ಬೆಂಗಳೂರು ಸಮೀಪದ ನಂದಿ ಬೆಟ್ಟದಲ್ಲಿ ಜಾರಿಗೆ ಬರಲಿದೆ. 2024ರ ಜುಲೈನಲ್ಲಿ ಕರ್ನಾಟಕ ಸರ್ಕಾರ ಈ ಯೋಜನೆಗೆ ಒಪ್ಪಿಗೆ ನೀಡಿದೆ. ಇದಕ್ಕಾಗಿ 2.93 ಎಕರೆ ಜಮೀನು 30 ವರ್ಷಗಳ ಅವಧಿಗೆ ಮಂಜೂರು ಮಾಡಿದೆ. ಪಿಪಿಪಿ ಮಾದರಿಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
2023ರ ಮಾರ್ಚ್‌ನಲ್ಲಿ ಈ ಯೋಜನೆಗೆ ಶಂಕು ಸ್ಥಾಪನೆ ಮಾಡಲಾಗಿತ್ತು. ಆದರೆ ವಿವಿಧ ಇಲಾಖೆಗಳಿಂದ ಅನುಮತಿ ದೊರೆಯುವುದು ವಿಳಂಬವಾದ ಕಾರಣ ಯೋಜನೆಗೆ ತಡವಾಗಿ ಚಾಲನೆ ಸಿಕ್ಕಿದೆ. ಆದರೆ ಕರ್ನಾಟಕದಲ್ಲಿ ಜಾರಿಗೊಳ್ಳಲಿರುವ ಮೊದಲ ಕೇಬಲ್ ಕಾರ್ ಯೋಜನೆ ಇದಾಗಿದೆ.












Click it and Unblock the Notifications