Kargil Vijay Diwas 2023: ಮೈಸೂರಿನ ಈ ಸ್ಥಳದಲ್ಲಿ ನಿತ್ಯವೂ ದೇಶ ಕಾಯುವ ಯೋಧರ ಸ್ಮರಣೆ
ಮೈಸೂರು, ಜುಲೈ 26: ರಿಯಲ್ ಹೀರೋಗಳೆಂದರೆ ದೇಶವನ್ನು ಕಾಯುವ ಯೋಧರು. ಅವರ ಸೇವೆ ಮತ್ತು ಬಲಿದಾನಗಳಿಂದಾಗಿ ನಾವು ಇವತ್ತು ನೆಮ್ಮದಿಯಾಗಿದ್ದೇವೆ. ಹೀಗಾಗಿ ಅವರನ್ನು ನಾವು ನಿತ್ಯ ಸ್ಮರಿಸಲೇ ಬೇಕಾಗುತ್ತದೆ. ಮಳೆ, ಗಾಳಿ, ಚಳಿ, ಬಿಸಿಲು ಏನೇ ಇರಲಿ ಎಲ್ಲವನ್ನು ಸಹಿಸಿ, ಎದುರಿಸಿ ದೇಶದ ರಕ್ಷಣೆಗಾಗಿ ತಮ್ಮ ಜೀವವನ್ನೇ ಮುಡುಪಿಡುವ ಅವರ ಕಾರ್ಯಕ್ಕೆ ಸಲಾಮ್ ಎನ್ನಲೇ ಬೇಕಾಗುತ್ತದೆ.
ಇದರ ನಡುವೆ ದೇಶಕ್ಕಾಗಿ ಹೋರಾಡಿದ ಯೋಧರನ್ನು ನೆನೆಯುವ ಮತ್ತು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದವರನ್ನು ಸ್ಮರಿಸುವ ಕಾರ್ಯ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕುಂದನಹಳ್ಳಿ ಸರ್ಕಲ್ ಬಳಿಯ ಮೈಸೂರು ಬಂಟ್ವಾಳ ಹೆದ್ದಾರಿ ಸಮೀಪದ ಹಳೆ ಕೆರೆಯಲ್ಲಿ ವಾಟರ್ ಪಾರ್ಕ್ ಬಳಿ ನಡೆಯುತ್ತದೆ ಎಂದರೆ ಅಚ್ಚರಿಯಾಗಬಹುದು. ಆದರೆ ಇದು ನಿಜ. ಇಂತಹದೊಂದು ಕಾರ್ಯವನ್ನು ಕೊಡಗಿನ ನಿವಾಸಿ ಲಕ್ಷ್ಮಿನಾರಾಯಣ್ ಮಾಡುತ್ತಾ ಬಂದಿದ್ದಾರೆ.

ನಮ್ಮ ದೇಶದೊಳಗೆ ಅತಿಕ್ರಮಣ ಮಾಡಿದ್ದ ಪಾಕಿಸ್ತಾನದ ಸದ್ದಡಗಿಸಿದ ಜುಲೈ 26ನ್ನು ನಾವೆಲ್ಲರೂ ಕಾರ್ಗಿಲ್ ವಿಜಯೋತ್ಸವವಾಗಿ ಆಚರಿಸುತ್ತಿದ್ದೇವೆ. ಆ ಮೂಲಕ ನಮ್ಮ ದೇಶದ ರಕ್ಷಣೆಗಾಗಿ ಹುತಾತ್ಮರಾದ ಸುಮಾರು ಏಳುನೂರಕ್ಕೂ ಹೆಚ್ಚು ಯೋಧರನ್ನು ನೆನಪಿಸಿಕೊಳ್ಳುತ್ತಾ ಅವರ ತ್ಯಾಗ ಬಲಿದಾನಕ್ಕೊಂದು ನಮನ ಸಲ್ಲಿಸುತ್ತಿದ್ದೇವೆ. ಸ್ವಾತಂತ್ರ್ಯ ನಂತರ ದೇಶದ ರಕ್ಷಣೆಗಾಗಿ ಲಕ್ಷಾಂತರ ಸೈನಿಕರು ಪ್ರಾಣಬಿಟ್ಟಿದ್ದಾರೆ. ಬಹುಶಃ ನಾವೆಲ್ಲರೂ ಇಲ್ಲಿ ನೆಮ್ಮದಿಯಾಗಿದ್ದೇವೆ ಎಂದರೆ ಅದಕ್ಕೆ ಗಡಿಯಲ್ಲಿ ಹಗಲು ರಾತ್ರಿ ಎನ್ನದೆ ದೇಶವನ್ನು ಕಾಯುತ್ತಿರುವ ಸೈನಿಕರೇ ಕಾರಣರಾಗಿದ್ದಾರೆ.
ಪ್ರತಿಯೊಬ್ಬ ಯೋಧನಲ್ಲಿದ್ದ ಆ ಅಸ್ತ್ರ ಯಾವುದು ಗೊತ್ತಾ?
ಕಾರ್ಗಿಲ್ ಕದನ 1999ರಲ್ಲಿ ನಡೆದಾಗ ಇಡೀ ದೇಶ ಒಟ್ಟಾಗಿ ನಿಂತಿತು. ಸಂಘ ಸಂಸ್ಥೆಗಳು, ಮಾಧ್ಯಮಗಳು, ಮಕ್ಕಳು, ಗೃಹಿಣಿಯರು, ಸಿಬ್ಬಂದಿ, ಕಾರ್ಮಿಕರು, ವಿದ್ಯಾರ್ಥಿಗಳು, ರೈತರು ಹೀಗೆ ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡುವುದರ ಮೂಲಕ ಸೈನಿಕರ ನೆರವಿಗೆ ನಿಂತರು. ನಿಜ ಹೇಳಬೇಕೆಂದರೆ ಅವತ್ತಿನ ಪರಿಸ್ಥಿತಿಯಲ್ಲಿ ಭಾರತ ಮಾನಸಿಕವಾಗಿ ಯುದ್ಧಕ್ಕೆ ಖಂಡಿತ ತಯಾರಿರಲಿಲ್ಲ ಆದರೆ ಪಾಕಿಸ್ತಾನ ಸೇನೆ ಭಾರತದೊಳಗೆ ನುಗ್ಗಿಯಾಗಿತ್ತು. ಅವರು ಹಿಮಶಿಖರದ ತುತ್ತ ತುದಿಯಲ್ಲಿ ನಿಂತು ಭಾರತದ ಸೈನಿಕರ ಮೇಲೆ ದಾಳಿ ಮಾಡುವುದು ಸುಲಭವಾಗಿತ್ತು. ಆದರೆ ತಳಭಾಗದಿಂದ ಮೇಲಕ್ಕೇರಿ ಯುದ್ಧ ಮಾಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ.
ಆದರೆ ತಮ್ಮ ಎಲ್ಲ ಯುದ್ಧ ಸಾಮಗ್ರಿಗಳ ನಡುವೆ ದೇಶದ ಪ್ರತಿಯೊಬ್ಬ ಯೋಧನಲ್ಲಿಯೂ ಇದ್ದ ಒಂದೇ ಒಂದು ಅಸ್ತ್ರ ಎಂದರೆ ಅದು ಧೈರ್ಯ ಮತ್ತು ಮಾತೃಭೂಮಿಯ ರಕ್ಷಣೆ ಆಗಿತ್ತು. ಅದಕ್ಕಾಗಿ ಹಿಮಚ್ಛಾದಿತ ಪ್ರದೇಶಗಳಲ್ಲಿ ಧೈರ್ಯ ಗುಂದದೆ, ಸಾವು ಮಗ್ಗಲಲ್ಲೇ ಇದ್ದರೂ ಅದಕ್ಕೆ ಹೆದರದೆ ಒಂದೇ ಮಾತರಂ ಮಂತ್ರ ಜಪಿಸುತ್ತಲೇ ಮುಂದೆ ನುಗ್ಗಿದರು. ಹೀಗೆ ನುಗ್ಗಿದ ಸಾಹಸಿ ಯೋಧರ ಪೈಕಿ ಕೆಲವರು ಹುತಾತ್ಮರಾದರು. ಇನ್ನು ಕೆಲವರು ಅಂಗವಿಕಲರಾದರು. ಹೀಗಿದ್ದರೂ ತನ್ನ ಪಕ್ಕದಲ್ಲಿಯೇ ಹೆಣವಾಗುತ್ತಿದ್ದ ಸಹ ಯೋಧರ ನಡುವೆ ಬಹಳಷ್ಟು ಸೈನಿಕರು ಮುನ್ನುಗ್ಗಿ ಶತ್ರುಗಳನ್ನು ಎದುರಿಸಿದರು. ಅದರ ಪರಿಣಾಮವೇ ಇವತ್ತು ನಾವೆಲ್ಲರೂ ಹೆಮ್ಮೆಯಿಂದ ಕಾರ್ಗಿಲ್ ದಿವಸವನ್ನು ಆಚರಿಸುವಂತಾಗಿದೆ.

ಅಮರ್ ಜವಾನ್ ಸ್ಟ್ಯಾಚ್ಯು ನಿರ್ಮಾಣ
ನಮ್ಮ ದೇಶಕ್ಕಾಗಿ ಹುತಾತ್ಮರಾದ ಯೋಧರನ್ನು ನೆನೆಯುವ ಕೆಲಸವನ್ನು ನಾವೆಲ್ಲರೂ ನಿತ್ಯವೂ ಮಾಡಲೇ ಬೇಕಾಗಿದೆ. ಅದನ್ನು ಕೊಡಗಿನ ನಿವಾಸಿ ಲಕ್ಷ್ಮಿನಾರಾಯಣ್ ಯಶಸ್ವಿಯಾಗಿದ್ದಾರೆ ಎನ್ನುವುದೇ ವಿಶೇಷ. ಲಕ್ಷ್ಮಿನಾರಾಯಣ್ ಅವರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕುಂದನಹಳ್ಳಿ ಸರ್ಕಲ್ ಬಳಿಯ ಮೈಸೂರು ಬಂಟ್ವಾಳ ಹೆದ್ದಾರಿ ಸಮೀಪದ ಹಳೆ ಕೆರೆಯಲ್ಲಿ ವಾಟರ್ ಪಾರ್ಕ್ ನಿರ್ಮಿಸಿದ್ದಾರೆ. ಅಲ್ಲಿಯೇ ಯೋಧರನ್ನು ನೆನೆಯುವ ಮತ್ತು ಅವರ ಪರಿಚಯವನ್ನು ಮಾಡಿಕೊಡುವ ಕೆಲಸವನ್ನು ಮಾಡಿದ್ದಾರೆ.
ಮೇಲ್ನೋಟಕ್ಕೆ ಇದೊಂದು ಪ್ರವಾಸಿ ತಾಣವಾಗಿದ್ದರೂ ಇಲ್ಲಿಗೆ ಬರುವ ಪ್ರತಿಯೊಬ್ಬರಲ್ಲಿಯೂ ದೇಶಪ್ರೇಮ ಮೂಡಿಸಿ ಮತ್ತು ಆ ಮೂಲಕ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರಿಗೊಂದು ಸಲಾಮ್ ಹೇಳುವ ಕೆಲಸ ಯಶಸ್ವಿಯಾಗಿ ನಡೆಯುತ್ತಿದೆ. ಇದು ಸಾಧ್ಯವಾಗಿದ್ದು, ಲಕ್ಷ್ಮಿನಾರಾಯಣ್ ಅವರಿಗೆ ಇರುವ ದೇಶ ಪ್ರೇಮದಿಂದ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇಲ್ಲಿ ನಿರ್ಮಿಸಿರುವ ಅಮರ್ ಜವಾನ್ ಸ್ಟ್ಯಾಚ್ಯು ಪ್ರತಿಯೊಬ್ಬರಲ್ಲಿ ದೇಶಭಕ್ತಿ ಮೂಡಿಸುತ್ತದೆ.
ಗಡಿಭಾಗದ ಮಣ್ಣಿಗೂ ನಡೆಯುತ್ತೆ ಪೂಜೆ
ಅಮರ್ ಜವಾನ್ ಸ್ಟ್ಯಾಚ್ಯುನಲ್ಲಿ ಸ್ವಾತಂತ್ರ್ಯ ನಂತರ ನಡೆದ ಯುದ್ಧದಿಂದ ಆರಂಭವಾಗಿ ಕಾರ್ಗಿಲ್ ಸಮರದವರೆಗೆ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರಿಗೆ ಸರ್ಕಾರ ನೀಡಿದ ಪರಮವೀರ ಚಕ್ರ ಗೌರವದ ಮಾಹಿತಿಯನ್ನು ಯೋಧರ ಅಮರ್ ಜವಾನ್ ಹುತಾತ್ಮ ಸ್ಮಾರಕವನ್ನು ಚಿತ್ರ ಸಮೇತ ಅಮೃತ ಶಿಲೆಯಲ್ಲಿ ನಿರ್ಮಿಸಲಾಗಿದೆ. ಇನ್ನು ಇಲ್ಲಿ ಮತ್ತೊಂದು ವಿಶೇಷತೆಯೂ ಇದೆ.
ಭಾರತದ ವಿವಿಧೆಡೆಯ ಗಡಿಭಾಗದ ಮಣ್ಣನ್ನು ತಂದು ಇಲ್ಲಿ ನಿರ್ಮಿಸಲಾಗಿರುವ ಅಮರ್ ಜವಾನ್ ಹುತಾತ್ಮ ಸ್ಮಾರಕದ ಬಳಿಯಿಟ್ಟು ಪೂಜಿಸಲಾಗುತ್ತಿದೆ. ಈ ಮಣ್ಣನ್ನು ಮಾಲೀಕರಾದ ಲಕ್ಷ್ಮಿನಾರಾಯಣರವರು 2013ರಲ್ಲಿ ಸರಹದ್ ಕೊ ಪ್ರಣಾಮ್ ಎಂಬ ಕಾರ್ಯಕ್ರಮದಡಿ ಭಾರತದ ಗಡಿ ಭಾಗಗಳಿಗೆ ಭೇಟಿ ನೀಡಿದ ವೇಳೆ ತಂದಿದ್ದಾರೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಕಾರ್ಗಿಲ್ ವಿಜಯೋತ್ಸವ ಆಚರಿಸುತ್ತಿರುವ ಈ ವೇಳೆ ದೇಶದ ಸೈನಿಕರಿಗೆ ತಮ್ಮದೇ ಆದ ಗೌರವ ಸಲ್ಲಿಸುತ್ತಾ ಎಲ್ಲರೂ ಪ್ರತಿದಿನವೂ ಸೈನಿಕರನ್ನು ನೆನೆಯುವಂತೆ ಮಾಡುವ ಕಾರ್ಯ ಸುಲಭದಲ್ಲ. ಆದರೆ ಅದನ್ನು ದೇಶಪ್ರೇಮಿ ಲಕ್ಷ್ಮಿನಾರಾಯಣರವರು ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.












Click it and Unblock the Notifications