IRCTC: ಕೈಗೆಟುಕುವ ದರದಲ್ಲಿ ಸಿಂಗಾಪುರ-ಮಲೇಷ್ಯಾ ಪ್ರವಾಸ ಕೈಗೊಳ್ಳಬೇಕೆ?, ಇಲ್ಲಿದೆ ವಿಶೇಷ ಪ್ಯಾಕೇಜ್‌ನ ವಿವರ
ಸಿಂಗಾಪುರ-ಮಲೇಷ್ಯಾದ ಪ್ರಕೃತಿ ಸಂದರ್ಯವನ್ನು ಸವಿಯಲು ಐಆರ್‌ಸಿಟಿಸಿಯು ವಿಶೇಷ ಟೂರ್ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಈ ಪ್ಯಾಕೇಜ್‌ನ ಸೌಲಭ್ಯವನ್ನು ಪಡೆಯುವುದು ಹೇಗೆ? ಎನ್ನುವ ವಿವರ ಇಲ್ಲಿದೆ ನೋಡಿ.
ನವದೆಹಲಿ, ಫೆಬ್ರವರಿ, 18: ಐಆರ್‌ಸಿಟಿಸಿಯು ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಕೈಗೆಟುಕುವ ದರದಲ್ಲಿ ಟೂರ್ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲೇ ಇದೆ. ಹಾಗೆಯೇ ಸಿಂಗಾಪುರ-ಮಲೇಷ್ಯಾದ ಪ್ರಕೃತಿ ಸಂದರ್ಯವನ್ನು ಸವಿಯಲು ವಿಶೇಷ ಟೂರ್ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಈ ಪ್ಯಾಕೇಜ್‌ನ ಸೌಲಭ್ಯವನ್ನು ಪಡೆಯುವುದು ಹೇಗೆ? ಮತ್ತು ಟಿಕೆಟ್ ದರ ಎಷ್ಟಿದೆ ಅನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.
ಸಿಂಗಾಪುರ ಮತ್ತು ಮಲೇಷ್ಯಾದ ಸೌಂದರ್ಯವನ್ನು ಸವಿಯಲು ಬಯಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ (IRCTC) ಕೈಗೆಟುಕುವ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. 8 ಹಗಲು ಮತ್ತ 7 ರಾತ್ರಿಯ ಪ್ರವಾಸ ಇದಾಗಿದ್ದು, ಇದು ಮಾರ್ಚ್ 23, 2023 ರಂದು ಪ್ರಾರಂಭವಾಗುತ್ತದೆ. ಹಾಗೆಯೇ ಮಾರ್ಚ್ 29 ರಂದು ಈ ಪ್ರವಾಸ ಕೊನೆಗೊಳ್ಳುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪ್ರವಾಸ ಆರಂಭವಾಗುವುದು ಎಲ್ಲಿಂದ?
ಪ್ರವಾಸವು ಬಿಹಾರದ ರಾಜಧಾನಿ ಪಾಟ್ನಾದಿಂದ ಪ್ರಾರಂಭವಾಗಲಿದ್ದು, ಕೋಲ್ಕತ್ತಾದಲ್ಲಿ ನಿಲುಗಡೆ ಆಗಲಿದೆ. ನಂತರ ಇಲ್ಲಿಂದ ನೇರವಾಗಿ ಮಲೇಷ್ಯಾದ ರಾಜಧಾನಿ ಕೌಲಾಲಂಪುರವನ್ನು ತಲುಪಬಹುದಾಗಿದೆ. ಕ್ಯಾಬ್ ಸೇವೆ, ಮಾರ್ಗದರ್ಶಿ ಮತ್ತು ಪ್ರಯಾಣ ದರವನ್ನು ಪ್ಯಾಕೇಜ್ ವೆಚ್ಚದಲ್ಲಿ ಸೇರಿಸಲಾಗಿದೆ. ಎರಡರಿಂದ ಮೂರು ಜನರಿಗೆ ಕನಿಷ್ಠ 1,09,358 ರೂಪಾಯಿ ವೆಚ್ಚವಾಗುತ್ತದೆ. 2 ಮತ್ತು 3 ಷೇರಿಂಗ್ ರೂಮ್‌ಗಳನ್ನು ಆಯ್ಕೆ ಮಾಡುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಒಬ್ಬರಿಗೆ ಪ್ಯಾಕೇಜ್ 1,27,575 ರೂಪಾಯಿ ಆಗಲಿದ್ದು, ಐಷಾರಾಮಿ 3-ಸ್ಟಾರ್ ಹೋಟೆಲ್‌ನಲ್ಲಿ ತಂಗುವ ವೆಚ್ಚ, ಉಪಹಾರ ಮತ್ತು ರಾತ್ರಿಯ ಊಟವು ಕೂಡ ಇದರಲ್ಲಿ ಒಳಗೊಂಡಿರುತ್ತದೆ.

ಯಾವೆಲ್ಲ ಸ್ಥಳಗಳಿಗೆ ಭೇಟಿ ನೀಡಬಹುದು?
ಪ್ರವಾಸದ ಸಮಯದಲ್ಲಿ ಪ್ರಯಾಣಿಕರು ಸಿಂಗಾಪುರ ಮತ್ತು ಮಲೇಷಿಯಾದ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ. ಮತ್ತು ಈಜು, ಬೈಕಿಂಗ್ ಮತ್ತು ಬೀಚ್ ಕ್ರೀಡೆಗಳಂತಹ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಜೊತೆಗೆ ರಾತ್ರಿ ಸಫಾರಿ ಮತ್ತು ಕೇಬಲ್ ಕಾರ್, ಡೇ ಟ್ರಿಪ್ ಅನ್ನು ಸಹ ಮಾಡಬಹುದಾಗಿದೆ.
ವಿಶೇಷ ಪ್ಯಾಕೇಜ್ ಪಡೆಯುವುದು ಹೇಗೆ?
ಈ ಪ್ಯಾಕೇಜ್ ಅನ್ನು ಪಡೆಯಲು, ಪ್ರಯಾಣಿಕರು ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕಾಗುತ್ತದೆ. ಮತ್ತು ಕನಿಷ್ಠ ಆರು ತಿಂಗಳ ಮಾನ್ಯತೆಯೊಂದಿಗೆ ಪಾಸ್‌ಪೋರ್ಟ್ ಹೊಂದಿರಬೇಕು. ಐಆರ್‌ಸಿಟಿಸಿಯ ಸಿಂಗಾಪುರ್ ಮತ್ತು ಮಲೇಷ್ಯಾ ಪ್ರವಾಸವು ಪ್ರಯಾಣಿಕರಿಗೆ ಎರಡು ದೇಶಗಳನ್ನು ಸುತ್ತಲೂ ಸಹಕಾರಿಯಾಗಲಿದೆ. ಮತ್ತು ವಿದೇಶಿಯರ ಜೊತೆ ಮರೆಯಲಾಗದ ನೆನಪುಗಳನ್ನು ಸಹ ಸೃಷ್ಟಿಸುತ್ತದೆ. ಹೀಗೆ ಈ ಎರಡು ದೇಶಗಳಲ್ಲಿ ಪ್ರಯಾಣ ಮಾಡುವ ಮೂಲಕ, ತಮ್ಮ ವಿದೇಶ ಪ್ರವಾಸದ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ.












Click it and Unblock the Notifications